ಇಂದಿನ ಯುದ್ಧಗಳು ಕೇವಲ ಬಂದೂಕುಗಳ ಮೂಲಕ ನಡೆಯುವ ಬದಲು ಇಡೀ ಮನುಕುಲವನ್ನೇ ಕ್ಷಣಾರ್ಧದಲ್ಲಿ ನಾಶಪಡಿಸುವಂಥ ಅಪಾಯಕಾರಿ ಅಣ್ವಸ್ತ್ರಗಳು ಮತ್ತು ಜೈವಿಕ ಅಸ್ತ್ರಗಳಂತಹ ಸಮೂಹನಾಶಕ ಅಸ್ತ್ರಗಳ ಮೂಲಕ ನಡೆಯುತ್ತವೆ. ಇಂತಹ ಅಸ್ತ್ರಗಳನ್ನು ಪ್ರತೀ ದೇಶಗಳು ಒಗ್ಗೂಡಿಸಿ ಇಟ್ಟುಕೊಂಡಿವೆ. ಎಲ್ಲಾದರೂ ವಿವೇಚನೆ ಇಲ್ಲದೇ ಅವುಗಳನ್ನು ಪ್ರಯೋಗಿಸಿದರೆ ಅದರಿಂದ ಶತಮಾನದ ಹಿಂದೆ ಜಪಾನಿನಲ್ಲಿ ಆಗಿರುವ ಯುದ್ಧದ ಭೀಕರತೆಗಿಂತಲೂ ಹಲವು ಪಟ್ಟು ಹೆಚ್ಚಿನ ಪ್ರಮಾಣದ ನಾಶವಾಗುವುದು ದಿಟ. ಇಂತಹ ದುರಂತಕ್ಕೆ ಕಾರಣವಾಗುವ ಯುದ್ಧಕ್ಕೆ ಕೈಹಾಕುವ ಮೊದಲು ಯುದ್ಧದಾಹಿ ದೇಶಗಳು ತಮ್ಮ ದೇಶದ ನಾಗರಿಕರ ಮೇಲೆ ಆಗಬಹುದಾದ ಹಾನಿ ಮತ್ತು ದೇಶದ ಭವಿಷ್ಯದ ಕುರಿತು ಚಿಂತಿಸಬೇಕು.
ಬರುವ ಸಮಸ್ಯೆಗಳಿಗೆ ಎಲ್ಲಕ್ಕೂ ಯುದ್ಧವೇ ಪರಿಹಾರ ಅಲ್ಲ ಎನ್ನುವುದನ್ನು ಗತಿಸಿರುವ ಯುದ್ಧ ಪರಿಣಾಮಗಳಿಂದ ಅರಿಯಬೇಕು. ಯುದ್ಧಗಳು ಯಥೇಚ್ಛ ಸಾವುನೋವು, ಆರ್ಥಿಕ ಕುಸಿತ, ಸಾಮಾಜಿಕ ಅಸ್ಥಿರತೆ ಮತ್ತು ಪರಿಸರ ವಿನಾಶವನ್ನು ಉಂಟುಮಾಡುವ ಮಾನವ ನಿರ್ಮಿತ ವಿಪತ್ತಾಗಿದೆ. ಇದು ತಲೆಮಾರುಗಳ ಕಾಲದವರೆಗೆ ಕಾಡುವ ಮಾನಸಿಕ ಆಘಾತ, ಮೂಲಸೌಕರ್ಯಗಳ ನಾಶ, ನಿರಾಶ್ರಿತರ ಸಮಸ್ಯೆ ಮತ್ತು ಜಾಗತಿಕ ರಾಜಕೀಯ ಅಸ್ಥಿರತೆಗೆ ಕಾರಣ ಆಗುತ್ತದೆ. ಇತಿಹಾಸದ ಉದ್ದಕ್ಕೂ ಯುದ್ಧಗಳು ಶಾಶ್ವತ ಶಾಂತಿಯನ್ನು ಭಂಗಗೊಳಿಸಿ ಅಭಿವೃದ್ಧಿಯನ್ನು ದಶಕಗಳಷ್ಟು ಹಿಂದಕ್ಕೆ ತಳ್ಳುತ್ತವೆ.
ಯುದ್ಧಗಳಿಂದ ಲಕ್ಷಾಂತರ ಸೈನಿಕರು ಮತ್ತು ನಾಗರಿಕರ ಸಾವಾಗುತ್ತದೆ. ಶಾಶ್ವತ ಅಂಗವಿಕಲತೆ, ಕುಟುಂಬ ನಾಶದಿಂದ ಮಕ್ಕಳು ಅನಾಥರಾಗುತ್ತಾರೆ. ಕಾರ್ಖಾನೆಗಳು, ಮನೆಗಳು, ಮೂಲಸೌಕರ್ಯ ನಾಶದಿಂದ ಯುದ್ಧದ ವೆಚ್ಚವು ರಾಷ್ಟ್ರಗಳು ಆರ್ಥಿಕ ದಿವಾಳಿಗೆ ಒಳಗಾಗುತ್ತವೆ. ಸಾಮೂಹಿಕ ವಲಸೆಯಿಂದ ನಿರಾಶ್ರಿತರ ಸಮಸ್ಯೆ, ಬಡತನ ಹಚ್ಚಳ, ಹಸಿವು, ಮತ್ತು ಮಾನಸಿಕ ಆಘಾತ ಸಂಭವಿಸಿ ವಿಷಕಾರಿ ಅನಿಲಗಳು, ಆಯುಧಗಳ ಬಳಕೆ, ವಿಕಿರಣಶೀಲ ವಸ್ತುಗಳಿಂದ ಪರಿಸರಕ್ಕೆ ಶಾಶ್ವತ ಹಾನಿಯಾಗುತ್ತದೆ. ಗಡಿಗಳ ಮರುರಚನೆ, ಸರ್ಕಾರಗಳ ಪತನ, ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ದೇಶಗಳ ನಡುವೆ ಪರಿಸ್ಥಿತಿ ಬಿಗಡಾಯಿಸುವ ಸನ್ನಿವೇಶ ಬಂದಾಗ ಅಂತಹ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆಗಳಿಂದ ಪರಿಹರಿಸಿಕೊಂಡು ದೇಶಗಳ ಸೌಹಾರ್ದಕ್ಕೆ ಮುನ್ನುಡಿ ಬರೆಯಬೇಕು.
ಇದರೊಂದಿಗೆ ಯುದ್ಧದ ಭೀಕರತೆ ಎಂದಿಗೂ ಕಾಡದಿರಲಿ ಎನ್ನುವ ಘೋಷವಾಕ್ಯವನ್ನು ಪ್ರತೀ ದೇಶಗಳೂ ತಮ್ಮ ಧ್ಯೇಯವಾಕ್ಯವನ್ನಾಗಿ ಆರಿಸಿಕೊಳ್ಳಬೇಕು. ಯುದ್ಧದ ಕಾರ್ಮೋಡ ಕವಿದ ಸಂದರ್ಭಗಳಲ್ಲಿ ಉಭಯ ದೇಶಗಳ ಮತ್ತು ಅಂತರಾಷ್ಟ್ರೀಯ ರಾಜತಂತ್ರಜ್ಞರು, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳು ಯುದ್ಧೋನ್ಮಾದವನ್ನು ತಣಿಸುವ ಕೆಲಸವನ್ನು ಮಾಡಬೇಕು. ಎರಡು ದೇಶಗಳ ನಡುವೆ ಯುದ್ಧವಾದಾಗ ಅವುಗಳ ಮಿತ್ರದೇಶಗಳು ತಾವೂ ಯುದ್ಧಕ್ಕಿಳಿಯುವ ಬದಲು ಭಾರತ ದೇಶವು ಅನುಸರಿಸಿಕೊಂಡು ಬಂದಿರುವ ಅಲಿಪ್ತ ನೀತಿಯನ್ನು ಪ್ರತೀ ದೇಶಗಳೂ ಅನುಸರಿಸಿ ಯುದ್ಧಕ್ಕೆ ಮತ್ತಷ್ಟು ಉತ್ತೇಜನ ನೀಡುವುದನ್ನು ನಿಲ್ಲಿಸಬೇಕು.
- ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


