ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ : ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇಡೀ ಮಧ್ಯಪ್ರಾಚ್ಯ ತಲ್ಲಣ

Upayuktha
0


ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ಹತರಾಗಿದ್ದಾರೆ. ದಶಕಗಳ ಕಾಲ ಅಮೆರಿಕದ ವಿರೋಧಿಯಾಗಿದ್ದ ಖಮೇನಿ ಅವರ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಲ್ಲಿ ಅವರ ಕುಟುಂಬದ ಸದಸ್ಯರು ಮತ್ತು ಕನಿಷ್ಠ ಏಳು ಹಿರಿಯ ಮಿಲಿಟರಿ ಕಮಾಂಡರ್‌ಗಳು ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ. ಈ ಹತ್ಯೆಯ ಬೆನ್ನಲ್ಲೇ ಇಸ್ರೇಲ್ ಭಾನುವಾರ ಬೆಳಿಗ್ಗೆ ಇರಾನ್‌ನ ಕ್ಷಿಪಣಿ ಕೇಂದ್ರಗಳ ಮೇಲೆ ಮತ್ತೊಂದು ಸುತ್ತಿನ ದಾಳಿಯನ್ನು ಮುಂದುವರಿಸಿದೆ.


ಈ ಐತಿಹಾಸಿಕ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಖಮೇನಿ ಎಂಬ ರಕ್ತಪಿಪಾಸು ಭಯೋತ್ಪಾದಕನ ಅಂತ್ಯದಿಂದ ವಿಶ್ವಕ್ಕೆ ನ್ಯಾಯ ಸಿಕ್ಕಿದೆ ಮತ್ತು ಇರಾನ್ ಅಣುಬಾಂಬ್ ತಯಾರಿಸುವುದನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಇತ್ತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ (IRGC) ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಬೃಹತ್ ಯುದ್ಧದ ಘೋಷಣೆ ಮಾಡಿದ್ದು, ಪ್ರತಿಯಾಗಿ ನೂರಾರು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಉಡಾಯಿಸಿದೆ. ಇದರಿಂದಾಗಿ ಇಸ್ರೇಲ್‌ನಾದ್ಯಂತ ಏರ್-ರೈಡ್ ಸೈರನ್‌ಗಳು ಮೊಳಗುತ್ತಿದ್ದು, ಯುದ್ಧದ ಭೀತಿ ಆವರಿಸಿದೆ.


ಈ ಸಂಘರ್ಷದ ಪರಿಣಾಮವಾಗಿ ಜಾಗತಿಕ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಶ್ವದ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣವಾದ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳ ಹಲವು ಏರ್‌ಪೋರ್ಟ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಇರಾನ್ ತನ್ನ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಎಚ್ಚರಿಸಿದ್ದು, ಇದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಭಾರಿ ಏರಿಕೆಗೆ ಕಾರಣವಾಗುವ ಆತಂಕ ಮೂಡಿಸಿದೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ಮತ್ತು ಚೀನಾ ರಾಷ್ಟ್ರಗಳು ಅಮೆರಿಕದ ಈ ಕ್ರಮವನ್ನು "ಸಾರ್ವಭೌಮ ರಾಷ್ಟ್ರದ ಮೇಲಿನ ದೌರ್ಜನ್ಯ" ಎಂದು ಖಂಡಿಸಿವೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ನೆಲೆಸಿದ್ದು, ಇದು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗಲಿದೆಯೇ ಎಂಬ ಆತಂಕ ಜಾಗತಿಕವಾಗಿ ವ್ಯಕ್ತವಾಗುತ್ತಿದೆ.


ಸಂಘರ್ಷದ ತಾಜಾ ಅಪ್‌ಡೇಟ್ಸ್‌

  • 'ಆಪರೇಷನ್ ಎಪಿಕ್ ಫ್ಯೂರಿ' ವಿವರ: ಅಮೆರಿಕ ಮತ್ತು ಇಸ್ರೇಲ್ ಈ ಜಂಟಿ ಸೇನಾ ಕಾರ್ಯಾಚರಣೆಗೆ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಎಂದು ಹೆಸರಿಸಿವೆ. ಟೆಹ್ರಾನ್‌ನಲ್ಲಿರುವ ಖಮೇನಿ ಅವರ ಕಚೇರಿಯ ಮೇಲೆ ಸುಮಾರು 30ಕ್ಕೂ ಹೆಚ್ಚು ಬಂಕರ್-ಬಸ್ಟರ್ ಬಾಂಬ್‌ಗಳನ್ನು ಬಳಸಿ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.
  • ಪ್ರಮುಖ ನಾಯಕರ ಹತ್ಯೆ: ಅಯತೊಲ್ಲಾ ಖಮೇನಿ ಅವರಲ್ಲದೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥ  ಮೊಹಮ್ಮದ್ ಪಕ್ಪೌರ್, ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಮತ್ತು ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಶಮ್ಖಾನಿ ಸೇರಿದಂತೆ ಸುಮಾರು 40 ಹಿರಿಯ ಅಧಿಕಾರಿಗಳು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ಪಟ್ಟಿ ಬಿಡುಗಡೆ ಮಾಡಿದೆ.
  • ಇರಾನ್‌ನ ಭೀಕರ ಪ್ರತಿಕ್ರಿಯೆ: ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ 'ಟ್ರೂತ್‌ಫುಲ್ ಪ್ರಾಮಿಸ್ 4' (Truthful Promise 4) ಕಾರ್ಯಾಚರಣೆ ಆರಂಭಿಸಿದೆ. ಇಸ್ರೇಲ್‌ನ ಟೆಲ್ ಅವಿವ್ ನಗರದ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದ್ದು, ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಅಲ್ಲದೆ, ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ ಪ್ರಧಾನ ಕಚೇರಿ ಹಾಗೂ ದುಬೈ, ದೋಹಾ, ಕುವೈತ್‌ನ ಅಮೆರಿಕನ್ ನೆಲೆಗಳ ಮೇಲೆಯೂ ಇರಾನ್ ಕ್ಷಿಪಣಿ ಮಳೆಗರೆದಿದೆ.
  • ನಾಗರಿಕರ ಸಾವು: ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಅಮೆರಿಕ-ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, ಸುಮಾರು 108 ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ ಎಂದು ಇರಾನ್‌ನ ರೆಡ್ ಕ್ರೆಸೆಂಟ್ ಸಂಸ್ಥೆ ತಿಳಿಸಿದೆ. ಒಟ್ಟಾರೆ ಇರಾನ್‌ನಲ್ಲಿ ಸಾವಿನ ಸಂಖ್ಯೆ 200 ದಾಟಿದೆ.
  • ಟ್ರಂಪ್ ಎಚ್ಚರಿಕೆ: "ಇರಾನ್ ಇಂದು ಅತಿ ದೊಡ್ಡ ದಾಳಿ ಮಾಡಲು ಸಜ್ಜಾಗಿದೆ ಎಂದು ತಿಳಿದುಬಂದಿದೆ. ಅವರು ಹಾಗೆ ಮಾಡಿದರೆ, ಇದುವರೆಗೆ ಜಗತ್ತು ಕಾಣದಂತಹ ಭೀಕರ ಶಕ್ತಿಯಿಂದ ನಾವು ತಿರುಗೇಟು ನೀಡುತ್ತೇವೆ" ಎಂದು ಅಧ್ಯಕ್ಷ  ಡೊನಾಲ್ಡ್ ಟ್ರಂಪ್  Truth Social ನಲ್ಲಿ ಎಚ್ಚರಿಕೆ ನೀಡಿದ್ದಾರೆ.
  • ಭಾರತೀಯರ ಸ್ಥಿತಿ: ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ 11 ರಾಷ್ಟ್ರಗಳ ವಾಯುಮಾರ್ಗವನ್ನು ಬಳಸದಂತೆ ಭಾರತದ ನಾಗರಿಕ ವಿಮಾನಯಾನ ಸಂಸ್ಥೆ (DGCA) ಸೂಚಿಸಿದೆ. ದುಬೈ ಏರ್‌ಪೋರ್ಟ್‌ನಲ್ಲಿ ಬಳ್ಳಾರಿಯ 35 ಮಂದಿ ಸೇರಿದಂತೆ ನೂರಾರು ಕನ್ನಡಿಗರು ಅತಂತ್ರರಾಗಿದ್ದಾರೆ. ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಿವೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top