ಇನ್‌ಸ್ಪೈರ್-ಮಾನಕ್‌ ಪ್ರಶಸ್ತಿ ಯೋಜನೆಗೆ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

Upayuktha
0


ಉಡುಪಿ: ಉಡುಪಿಯ ಕುಂಜಿಬೆಟ್ಟಿನ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು 2025–26ನೇ ಸಾಲಿನ ಪ್ರತಿಷ್ಠಿತ ಇನ್‌ಸ್ಪೈರ್-ಮಾನಕ್‌ ಪ್ರಶಸ್ತಿ ಯೋಜನೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.


ಈ ಯೋಜನೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮಹತ್ವದ ಕಾರ್ಯಕ್ರಮವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಶನ್ ಫೌಂಡೇಶನ್–ಇಂಡಿಯಾ (NIF) ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ.


ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ 9ನೇ ತರಗತಿಯ ಅವನೀಶ್ ಕೆ.ಎಸ್ ಹಾಗೂ 10ನೇ ತರಗತಿಯ ದೀಪೇಶ್ ದೀಪಕ್ ಶೆಣೈ ಅವರು ವಿಜ್ಞಾನಾಧಾರಿತ ಮತ್ತು ಸಮಾಜಮುಖಿ ನವೀನ ಕಲ್ಪನೆಗಳನ್ನು ಮಂಡಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಆಯ್ಕೆಯಾಗಿದ್ದಾರೆ. ದೀಪೇಶ್ ದೀಪಕ್ ಶೆಣೈ ಅವರು ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಹೊಯ್ಸಳ ಶೌರ್ಯ ಪ್ರಶಸ್ತಿ 2025ಯ ಪುರಸ್ಕೃತರೂ ಆಗಿದ್ದಾರೆ.


ಶಾಲೆಯ ಮುಖ್ಯ ಶಿಕ್ಷಕಿ ವಿನೋದಾ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಮತ್ತು ನವೀನ ಚಿಂತನೆಗೆ ತೋರಿದ ಬದ್ಧತೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಹಾಗೂ ಸೃಜನಾತ್ಮಕ ಚಿಂತನೆ ಬೆಳೆಸುವಲ್ಲಿ ಶಾಲೆ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಫಲವೇ ಈ ಸಾಧನೆ ಎಂದು ಅವರು ಅಭಿಪ್ರಾಯಪಟ್ಟರು.


ಶಿಕ್ಷಣ ಇಲಾಖೆಯಿಂದ ಆಯೋಜಿಸಲಿರುವ ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನ ಮತ್ತು ಯೋಜನಾ ಸ್ಪರ್ಧೆ (DLEPC) ಯಲ್ಲಿ ಭಾಗವಹಿಸಲು ಈ ಇಬ್ಬರು ವಿದ್ಯಾರ್ಥಿಗಳು ಅರ್ಹತೆ ಪಡೆದಿರುವುದಾಗಿ ತಿಳಿಸಿ, ಮುಂದಿನ ಹಂತಗಳಲ್ಲಿಯೂ ಅವರು ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.


ಇದೇ ವೇಳೆ 2026–27ನೇ ಶೈಕ್ಷಣಿಕ ಸಾಲಿನ 8ನೇ ತರಗತಿಯ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಆಸಕ್ತ ಪೋಷಕರು ಶೀಘ್ರದಲ್ಲೇ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದರು. ಗುಣಮಟ್ಟದ ಶಿಕ್ಷಣ ಮತ್ತು ಸಮಗ್ರ ವ್ಯಕ್ತಿತ್ವ ವಿಕಾಸಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಅನ್ನು ಮೊದಲ ಆದ್ಯತೆಯಾಗಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.


ಈ ಸಾಧನೆಗೆ ಅಭಿನಂದನೆ ಸಲ್ಲಿಸಿರುವ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (AGE), ಮಣಿಪಾಲದ ಆಡಳಿತಾಧಿಕಾರಿ ಡಾ. ಶ್ರೀಧರ್ ರಂಗನಾಥ ಪೈ, ಸಂಸ್ಥೆ ಸುವರ್ಣ ಮಹೋತ್ಸವದ ಸಂಭ್ರಮದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಾಧನೆ ಶಾಲೆಗೆ ಮತ್ತೊಂದು ಮಹತ್ವದ ಮೈಲುಗಲ್ಲು ಎಂದರು.


ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಶಿಕ್ಷಕ–ರಕ್ಷಕ ಸಂಘ ಮತ್ತು ಹಳೆವಿದ್ಯಾರ್ಥಿಗಳ ಸಂಘವೂ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ.


Post a Comment

0 Comments
Post a Comment (0)
To Top