ಉಡುಪಿ: ಮಾನವಹಕ್ಕು ರಕ್ಷಣಾ ಪ್ರತಿಷ್ಠಾನ ವತಿಯಿಂದ “ಬಹುಜನ ಹಿತಾಯ – ಬಹುಜನ ಸುಖಾಯ” ಜನಜಾಗೃತಿ ಉಪನ್ಯಾಸಮಾಲಿಕೆ–2 ಕಾರ್ಯಕ್ರಮವು ಮಾರ್ಚ್ 5ರಂದು ಉಡುಪಿಯ ಕುಂಜಿಬೆಟ್ಟಿನ ವೈಕುಂಠಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು. “ಘನತೆಯಿಂದ ಸಾಯುವ ಹಕ್ಕು– ಒಂದು ಮೂಲಭೂತ ಹಕ್ಕು” (Right to Die with Dignity is a Fundamental Right) ಎಂಬ ವಿಷಯದ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ಉಪನ್ಯಾಸ ನೀಡಿದರು.
ತಾವು ಕಂಡ ನೈಜ ಘಟನೆಗಳನ್ನು ಉದಾಹರಿಸಿ ಇಂದಿನ ಸಮಾಜದಲ್ಲಿ ವೃದ್ಧರ ಪರಿಸ್ಥಿತಿ, ಅಂತಿಮ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಮಕ್ಕಳ ಹಾಗೂ ಬಂಧುಗಳ ಮನಸ್ಸಿನ ಗೊಂದಲಗಳು ಮತ್ತು ಅಂಥ ಸಂದರ್ಭಗಳಲ್ಲಿ ವಿವೇಕಪೂರ್ಣವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ವಿಷಯಗಳನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು. ಮೂರು ತಲೆಮಾರುಗಳ ಮನೋಭಾವದ ಬದಲಾವಣೆಗಳನ್ನೂ ಅವರು ಉದಾಹರಣೆಗಳೊಂದಿಗೆ ವಿವರಿಸಿದರು.
ಹಿಂದಿನ ಕಾಲದಲ್ಲಿ ವೃದ್ಧರು ಅಸ್ವಸ್ಥರಾದಾಗ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದರು. ಕುಟುಂಬದವರು ಮತ್ತು ಬಂಧುಗಳ ಸಮ್ಮುಖದಲ್ಲೇ ವೃದ್ಧರು ಗೌರವಯುತ ಅಂತ್ಯವನ್ನು ಕಾಣುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಅಸ್ವಸ್ಥರನ್ನು ನೇರವಾಗಿ ದೊಡ್ಡ ಆಸ್ಪತ್ರೆಗಳ ತುರ್ತುನಿಗಾ ಘಟಕಗಳಿಗೆ ಸೇರಿಸಲಾಗುತ್ತದೆ. ರೋಗಿ ಗುಣಮುಖವಾಗುವ ಸಾಧ್ಯತೆ ಕಡಿಮೆ ಇದ್ದರೂ ಅವರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡೇ ಹೆಚ್ಚಿನ ವೆಚ್ಚ ಮಾಡಲಾಗುತ್ತದೆ. ಕುಟುಂಬದವರು ರೋಗಿಯೊಂದಿಗೆ ಮಾತುಕತೆ ನಡೆಸಲು ಸಹ ಅವಕಾಶವಿರದೆ, ದಿನಕ್ಕೆ ಸಾವಿರಗಳಿಂದ ಲಕ್ಷಾಂತರದವರೆಗಿನ ವೆಚ್ಚಗಳು ಆಗುತ್ತಿವೆ ಎಂದು ಹೇಳಿದರು.
ಈ ಸಂದರ್ಭಗಳಲ್ಲಿ ರೋಗಿಗೆ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇದೆ. ಆಸ್ಪತ್ರೆಗೆ ಸೇರಬೇಕೇ, ಮನೆಗೆ ಹೋಗಬೇಕೇ, ಚಿಕಿತ್ಸೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ರೋಗಿಯೇ ನಿರ್ಧರಿಸಬಹುದು. ಇದುವೇ “ಘನತೆಯಿಂದ ಸಾಯುವ ಹಕ್ಕು” ಎಂದು ಅವರು ವಿವರಿಸಿದರು. ರೋಗಿಗೆ ತನ್ನ ಕಾಯಿಲೆ, ಅದರ ಚಿಕಿತ್ಸೆ ವಿಧಾನಗಳು ಹಾಗೂ ಪರಿಣಾಮಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯುವ ಹಕ್ಕು ಇದೆ. ಈ ಮಾಹಿತಿಯ ಆಧಾರದ ಮೇಲೆ ರೋಗಿಯೇ ತನ್ನ ಜೀವನದ ಅಂತಿಮ ಹಂತದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು.
ಭಾರತದಲ್ಲಿ ಹಿಂದೆ ಇಂತಹ ನಿರ್ಧಾರಗಳಿಗೆ ಅವಕಾಶ ಇರಲಿಲ್ಲ. ಆದರೆ ವಿವಿಧ ನ್ಯಾಯಾಲಯಗಳ ತೀರ್ಪುಗಳ ಆಧಾರದ ಮೇಲೆ ಈಗ ಕೆಲವು ಮಟ್ಟಿಗೆ ಇದು ಸಾಧ್ಯವಾಗಿದೆ. ರೋಗಿ ಚಿಕಿತ್ಸೆ ನಿರಾಕರಿಸಿದರೆ ಯಾವುದೇ ಆಸ್ಪತ್ರೆಯೂ ಬಲವಂತವಾಗಿ ಅವರನ್ನು ದಾಖಲಿಸಿಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. 2016ರಿಂದ ಈ ಹಕ್ಕನ್ನು ಕಾನೂನಿನ ರೂಪದಲ್ಲಿ ತರಲು ಪ್ರಯತ್ನಗಳು ನಡೆಯುತ್ತಿದ್ದರೂ ಸಂಸತ್ತಿನಲ್ಲಿ ಅದು ಇನ್ನೂ ಅಂಗೀಕಾರವಾಗಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ “ಲಿವಿಂಗ್ ವಿಲ್” ರೂಪದಲ್ಲಿ ವ್ಯಕ್ತಿಯ ಇಚ್ಛೆಯನ್ನು ದಾಖಲಿಸಬಹುದು ಎಂದು ತಿಳಿಸಿದರು.
ಅಂತಿಮ ದಿನಗಳಲ್ಲಿ ನೋವಿಲ್ಲದೆ ಬದುಕಲು ಉಡುಪಿಯ ಹಾವಂಜೆಯಲ್ಲಿ ಒಂದು ವಿಶೇಷ ಆಸ್ಪತ್ರೆಯ ವ್ಯವಸ್ಥೆ ಇದೆ. ದೇಶದಲ್ಲಿ ಇಂತಹ ಕೇವಲ ಮೂರು ಕೇಂದ್ರಗಳಿದ್ದು, ರೋಗಿಗಳು ನೋವಿನ ನರಳಾಟವಿಲ್ಲದೆ ತಮ್ಮ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಲು ಅಲ್ಲಿ ಅವಕಾಶವಿದೆ ಎಂದು ಹೇಳಿದರು.
ಸ್ವಯಂ ವೈದ್ಯದ ಅಪಾಯಗಳ ಕುರಿತೂ ಅವರು ಎಚ್ಚರಿಕೆ ನೀಡಿದರು. ಗೂಗಲ್ ಅಥವಾ ಹಿಂದಿನ ವೈದ್ಯಕೀಯ ಅನುಭವದ ಆಧಾರದ ಮೇಲೆ ತಾವೇ ಔಷಧ ಸೇವಿಸುವುದು ಅಪಾಯಕಾರಿ ಎಂದು ಹೇಳಿದರು. ಉಡುಪಿಯಲ್ಲಿ ಒಬ್ಬ ಮಹಿಳೆ ವೈದ್ಯರು ನೀಡಿದ ಔಷಧವನ್ನು ಸೂಚನೆಯಂತೆ ನಿಲ್ಲಿಸದೆ ಮುಂದುವರಿಸಿ ಸೇವಿಸಿದ ಪರಿಣಾಮ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿದ ಘಟನೆನ್ನೂ ಅವರು ಉದಾಹರಿಸಿದರು.
ಕೆಲವು ಆಸ್ಪತ್ರೆಗಳು ಹಾಗೂ ಮಧ್ಯವರ್ತಿಗಳ ಮೂಲಕ ನಡೆಯುವ ಅನೈತಿಕ ಪದ್ಧತಿಗಳನ್ನೂ ಅವರು ವಿವರಿಸಿದರು. ಕೆಲವೊಮ್ಮೆ ಆಟೋ ಚಾಲಕರು ಅಥವಾ ಮಧ್ಯವರ್ತಿಗಳು ನಿರ್ದಿಷ್ಟ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯುವುದಕ್ಕೆ ಹಣ ಪಡೆಯುವ ಘಟನೆಗಳೂ ನಡೆಯುತ್ತಿವೆ ಎಂದು ಹೇಳಿದರು. ಆರೋಗ್ಯ ಸೇವೆಯಲ್ಲಿ ಶುಲ್ಕದ ಏಕರೂಪತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಒಂದೇ ರೀತಿಯ ಚಿಕಿತ್ಸೆಗೆ ಸಾವಿರಗಳಿಂದ ಲಕ್ಷಾಂತರ ರೂಪಾಯಿವರೆಗೆ ಶುಲ್ಕ ವಿಧಿಸುವುದು ನಮ್ಮ ದೇಶದಲ್ಲಿ ಕಂಡುಬರುವ ಅನ್ಯಾಯಕರ ಸ್ಥಿತಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಜನರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡರೆ ಇಂತಹ ಅನ್ಯಾಯಗಳನ್ನು ತಡೆಯಬಹುದು. ಸಮಾಜದಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ನಿರಾಶೆಯಲ್ಲಿ ನೊಂದವರಿಗೆ ಆಸರೆಯಾಗುವ ಕೆಲಸವನ್ನು ಮಾನವಹಕ್ಕು ರಕ್ಷಣಾ ಪ್ರತಿಷ್ಠಾನ ಮಾಡುತ್ತಿದೆ. ಈ ಕಾರ್ಯವನ್ನು ಒಂದು ಜನಆಂದೋಲನದ ರೂಪದಲ್ಲಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಮುಂದಿನ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಕಲುಷಿತವಾಗುತ್ತಿರುವ ಅಂತರ್ಜಲ, ಹೊಲಸಿನಿಂದ ಹಾಳಾಗುತ್ತಿರುವ ಬಾವಿಗಳು ಮತ್ತು ಕುಡಿಯುವ ನೀರಿನ ಮೂಲಗಳ ಸಮಸ್ಯೆ ಹಾಗೂ ಅದರ ಪರಿಹಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಲಾಯಿತು. ಹೆಚ್ಚಿನ ಮಾಹಿತಿಗಾಗಿ “ಜನಧ್ವನಿ” ಎಂಬ ವಾಟ್ಸಪ್ ಗುಂಪಿನಲ್ಲಿ ಸೇರಿಕೊಳ್ಳಲು ಹಾಗೂ ಸಂಸ್ಥೆಯ ಜಾಲತಾಣ https://udupihrpf.org ಗೆ ಭೇಟಿ ನೀಡುವಂತೆ ಮನವಿ ಮಾಡಲಾಯಿತು.
ಬಳಕೆದಾರರ ವೇದಿಕೆಯ ಚಟುವಟಿಕೆಗಳ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಟೇಶ್ ಉಡುಪಿ (6362835435) ಅವರನ್ನು ಸಂಪರ್ಕಿಸಬಹುದು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

