ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಉಜಿರೆ: ಜಯ-ವಿಜಯರ ದ್ವಾರಪಾಲಕತ್ವ. ಜೊತೆಗೆ ಗರುಡ ಸಹಭಾಗಿತ್ವ. ಹನುಮಂತನ ಸೇವಾತತ್ಪರತೆಯ ತತ್ವ.
ಉಜಿರೆಯ ಶ್ರೀ ಜನಾರ್ರನಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿತ 'ವಿಜಯ ಗೋಪುರ'ದ ಮೂಲಕ ಸಾಂಕೇತಿಕವಾಗಿ ಪ್ರತಿಫಲಿತವಾಗುತ್ತಿರುವ ಮೂರು ದೈವಿಕ ಆಯಾಮಗಳು ಒಟ್ಟಾಗಿ ಧ್ವನಿಸುತ್ತಿರುವ ಪ್ರಭಾವೀ ವೈಶಿಷ್ಟ್ಯವಿದು. ಪೌರಾಣಿಕ ಕಥನದೊಳಗಿನ ಮೌಲಿಕ ಸದಾಶಯವನ್ನು ದಾಟಿಸುವ ಸಂಕೇತವಾಗಿ ಈ ಗೋಪುರ ಗಮನ ಸೆಳೆಯುತ್ತಿದೆ. ಜನರ ಭಕ್ತಿಯ ತೊಡಗಿಸಿಕೊಳ್ಳುವಿಕೆಯನ್ನು ಸಮೂಹದ ಸಕಾರಾತ್ಮಕ ಶಕ್ತಿಯನ್ನಾಗಿಸುವ ಸ್ಫೂರ್ತಿಯಾಗಿ ಆಪ್ತ ಎನ್ನಿಸುತ್ತಿದೆ.
ಈ ಭವ್ಯ ವಿಜಯ ಗೋಪುರವು ಕೇವಲ ವಾಸ್ತುಶಿಲ್ಪದ ಅದ್ಭುತವಲ್ಲ, ಅದು ಅಧ್ಯಾತ್ಮದ ಮಹಾನ್ ಸಂಕೇತಗಳನ್ನು ಒಳಗೊಂಡಿದೆ. ಗೋಪುರದ ಮಹಾದ್ವಾರದ ಇಕ್ಕೆಲಗಳಲ್ಲಿ ವೈಕುಂಠದ ದ್ವಾರಪಾಲಕರಾದ ಜಯ ಮತ್ತು ವಿಜಯರ ವಿಗ್ರಹಗಳು ರಾರಾಜಿಸುತ್ತಿವೆ. ಭಕ್ತರು ದೇವಸ್ಥಾನದ ಒಳಗೆ ಪ್ರವೇಶಿಸುವಾಗ ತಮ್ಮ ಅಹಂಕಾರ ಮತ್ತು ಲೌಕಿಕ ಆಲೋಚನೆಗಳನ್ನು ಹೊರಗೆ ಬಿಟ್ಟು, ಪವಿತ್ರ ಮನಸ್ಸಿನಿಂದ ಭಗವಂತನ ದರ್ಶನ ಪಡೆಯಬೇಕು ಎಂಬ ಶಿಸ್ತನ್ನು ಈ ದ್ವಾರಪಾಲಕರು ನೆನಪಿಸುತ್ತಾರೆ. ಇವರೊಂದಿಗೆ, ಗೋಪುರದ ಮುಂಭಾಗದಲ್ಲಿ ಭಕ್ತಿ ಮತ್ತು ಶಕ್ತಿಯ ಅದ್ಭುತ ಸಂಗಮವಾಗಿ ಗರುಡ ಹಾಗೂ ಹನುಮಂತನ ಪ್ರತಿಮೆಗಳನ್ನು ವಿನ್ಯಾಸಗೊಳಿಸಲಾಗಿದೆ. ವೇದಗಳ ಸ್ವರೂಪಿಯಾದ ಗರುಡನು ಜ್ಞಾನ ಮತ್ತು ವೇಗದ ಸಂಕೇತವಾಗಿ ಕ್ಷೇತ್ರದ ಜಾಗೃತ ಶಕ್ತಿಯನ್ನು ಹೆಚ್ಚಿಸಿದರೆ, ಅಪ್ರತಿಮ ಭಕ್ತಿಯ ಪ್ರತೀಕವಾದ ಹನುಮಂತನು ಭಕ್ತರಲ್ಲಿ ಶರಣಾಗತಿ ಭಾವವನ್ನು ಮೂಡಿಸಿ ಸಂಕಟಹರನಾಗಿ ರಕ್ಷಣೆ ನೀಡುತ್ತಾನೆ. ಹೀಗೆ, ಜಯ-ವಿಜಯರ ಶಿಸ್ತು ಹಾಗೂ ಗರುಡ-ಹನುಮಂತರ ಸೇವಾ ಮನೋಭಾವದ ಪರಿಕಲ್ಪನೆಯು ಈ ವಿಜಯ ಗೋಪುರಕ್ಕೆ ಒಂದು ದೈವಿಕ ಕಳೆಯನ್ನು ನೀಡಿದೆ.
ಜಯ-ವಿಜಯರು ದ್ವಾರವನ್ನು ರಕ್ಷಿಸಿದರೆ, ಗರುಡ ಮತ್ತು ಹನುಮಂತರು ಇಡೀ ಕ್ಷೇತ್ರದ ಸುತ್ತಲೂ ಒಂದು ದೈವೀ ಕವಚವನ್ನು ನಿರ್ಮಿಸುತ್ತಾರೆ. ಭಗವಂತನನ್ನು ತಲುಪಬೇಕಾದರೆ ಹನುಮಂತನಂತೆ ಭಕ್ತರಾಗಿ ಮತ್ತು ಗರುಡನಂತೆ ಜ್ಞಾನಿಗಳಾಗಿರಬೇಕು ಎಂಬ ಸಂದೇಶ ಈ ಗೋಪುರದಿಂದ ರವಾನೆಯಾಗುತ್ತಿದೆ. ಯಾವುದೇ ದುಷ್ಟ ಶಕ್ತಿಗಳು ಪ್ರವೇಶಿಸದಂತೆ ಈ ಶಕ್ತಿಶಾಲಿ ದೈವಿಕ ಪುರುಷರು ಕ್ಷೇತ್ರದ ಕಾವಲುಗಾರರಾಗಿ ನಿಂತಿದ್ದಾರೆ ಎಂಬುದನ್ನೂ ಗೋಪುರ ಮನವರಿಕೆ ಮಾಡಿಕೊಡುತ್ತಿದೆ.
ಈ ಕಾರಣಕ್ಕಾಗಿಯೇ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಇದೀಗ ಹಬ್ಬದ ಸಂಭ್ರಮ. ಒಂಭತ್ತು ವರ್ಷಗಳ ಹಿಂದೆ ಕೀರ್ತಿಶೇಷ ವಿಜಯ ರಾಘವ ಪಡ್ವೆಟ್ನಾಯರ ಸಪ್ತಮಿ ಕಾರ್ಯಕ್ರಮದ ಸಂದರ್ಭದಲ್ಲಿ ಭವ್ಯವಾದ ರಾಜಗೋಪುರವನ್ನು ನಿರ್ಮಿಸುವ ಬಗ್ಗೆ ರೂಪುಗೊಂಡಿದ್ದ ಸಂಕಲ್ಪದ ಸಾಕಾರರೂಪವಾಗಿ 'ವಿಜಯ ಗೋಪುರ' ಮೈದಳೆದು ನಿಂತಿದೆ. ವಿಜಯ ರಾಘವ ಪಡ್ವೆಟ್ನಾಯರು ರಾಜಗೋಪುರ ನಿರ್ಮಿಸುವ ಕನಸು ಕಂಡಿದ್ದರು. ಅವರ ಕನಸನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ ಗೋಪುರ ನಿರ್ಮಾಣದ ಕೆಲಸಗಳು ಆರಂಭಗೊಂಡವು. ಅಷ್ಟೇ ಅಲ್ಲ, ಅವರ ಆದರ್ಶದ ಸದಾಶಯಗಳು ಹೊಸ ಪೀಳಿಗೆಗೆ ನಿರಂತರವಾಗಿ ದಾಟಿಸುವ ಮುಂದಾಲೋಚನೆಯೊಂದಿಗೆ ರಾಜಗೋಪುರಕ್ಕೆ 'ವಿಜಯ ಗೋಪುರ' ಎಂದು ನಾಮಕರಣ ಮಾಡಲಾಯಿತು. ಅನುವಂಶಿಕ ಆಡಳಿತ ಮುಖ್ಯಸ್ಥರಾದ ಶರತ್ ಕೃಷ್ಣ ಪಡ್ವೆಟ್ನಾಯ ಹಾಗೂ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ನೇತೃತ್ವದಲ್ಲಿ ನಿರ್ಮಾಣ ಪ್ರಕ್ರಿಯೆ ಭರದಿಂದ ಸಾಗಿತು. ಇದೀಗ ಭವ್ಯವಾಗಿ ನಿರ್ಮಾಣಗೊಂಡ ಈ 'ವಿಜಯ ಗೋಪುರ'ಕ್ಕೆ ಒಟ್ಟು ನಾಲ್ಕು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.
ಕೃಷ್ಣಪ್ಪ ಚಾರ್ಮಾಡಿಯವರ ಬಮಾರ್ಗದರ್ಶನದಲ್ಲಿ ದ್ರಾವಿಡ ಶೈಲಿಯಲ್ಲಿ ರಾಜಗೋಪುರವನ್ನು ನಿರ್ಮಿಸಲಾಗಿದೆ. ಭೂಮಿಯಿಂದ ಸುಮಾರು 61 ಅಡಿ ಎತ್ತರ ಹೊಂದಿರುವ ಈ ಗೋಪುರದಲ್ಲಿ ಒಟ್ಟು 14 ಶಿಲಾಕೃತಿಗಳಿದ್ದು, ಅವುಗಳಲ್ಲಿ 2 ಗರುಡ, 2 ಹನುಮಂತ ಹಾಗೂ 5 ಜಯ ವಿಜಯರ ಶಿಲ್ಪಗಳು ವಿಶೇಷವಾಗಿ ಕಾಣಿಸಿಕೊಳ್ಳುತ್ತವೆ. ಗೋಪುರದ ಶಿಖರದಲ್ಲಿ ಮುಗುಳಿ ಕಲಶಗಳನ್ನು ಅಳವಡಿಸಲಾಗಿದೆ. ಹೊರಭಾಗದ ನಿರ್ಮಾಣಕ್ಕಾಗಿ ಸಿಮೆಂಟ್ ಸ್ತಂಭಗಳನ್ನು ಬಳಸಿ, ಮೇಲಿನ ಪದರಗಳಲ್ಲಿ ಇಟ್ಟಿಗೆಗಳನ್ನು ಉಪಯೋಗಿಸಲಾಗಿದೆ. ಸುಮಾರು 4000 ಸ್ಥಳೀಯ ಜನರ ಸಹಕಾರದಿಂದ ಈ ಗೋಪುರವನ್ನು ಕೇವಲ 7-8 ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ನಿರ್ಮಿಸಲಾಗಿದೆ.
ಕರ್ನಾಟಕದಲ್ಲಿ ಈತರಹದ ಗೊಪುರಗಳು ಮುರುಡೇಶ್ವರ, ಹಂಪಿ ವಿರೂಪಾಕ್ಷ ದೇವಾಲಯ, ನಂಜನಗೂಡು ನಂಜುಂಡೇಶ್ವರ ಹಲವಾರು ದೇವಸ್ಥಾನಗಳಲ್ಲಿ ಕಾಣಬಹುದು. ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆತ್ನಾಯರ ತಮ್ಮ ತಂದೆ ವಿಜಯ ರಾಘವ ಪಡ್ವೆಟ್ನಾಯರ ಸಂಕಲ್ಪವನ್ನು ಸಾಕಾರಗೊಳಿಸುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ರಾಜಗೋಪುರ ನಿರ್ಮಾಣ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸುರಭಿ ತಿಳಿಸಿದ್ದಾರೆ. ಈ 'ವಿಜಯ ಗೋಪುರ'ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಬುಧವಾರ ಲೋಕಾರ್ಪಣೆಗೊಳಿಸಲಿದ್ದಾರೆ.
ವರದಿ: ಸೌಮ್ಯ ಕಾಗಲ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


