ಗುಂಪೆ ವಲಯದಲ್ಲಿ ಶಿಷ್ಯಹಿತಂ ಶ್ರೀಕಾರುಣ್ಯ ಸ್ವರ್ಣ ಸವಾರಿ ಭಕ್ತಿಭಾವದಿಂದ ಸಂಪನ್ನ

Upayuktha
0


ಕಾಸರಗೋಡು: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದಲ್ಲಿ ಶಿಷ್ಯರ ಹಿತಕ್ಕಾಗಿ ಶ್ರೀಗುರುಗಳಿಂದ ಕರುಣಿಸಲ್ಪಟ್ಟ ಶಿಷ್ಯಹಿತಂ ಶ್ರೀಕಾರುಣ್ಯ ಸ್ವರ್ಣ ಸವಾರಿ ಕಾರ್ಯಕ್ರಮವು 2026ರ ಮಾರ್ಚ್ 11ರಂದು ಭಕ್ತಿಭಾವ, ಸಂಭ್ರಮ ಹಾಗೂ ಶ್ರದ್ಧೆಯ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.


ಕಾರ್ಯಕ್ರಮದ ಅಂಗವಾಗಿ ಸ್ವರ್ಣ ಪಾದುಕೆಗಳನ್ನು ಹೊತ್ತ ಭವ್ಯ ಬೆಳ್ಳಿ ಪಲ್ಲಕ್ಕಿ ಸಂಜೆ ಸುಮಾರು 7 ಗಂಟೆಗೆ ಅಮ್ಮಂಕಲ್ಲು ರಾಜಗೋಪಾಲ ಭಟ್ ಅವರ ವಸತಿ ಮನೆಯನ್ನು ತಲುಪಿತು. ಈ ಸಂದರ್ಭದಲ್ಲಿ ಭಕ್ತರು ಭಕ್ತಿಪೂರ್ವಕವಾಗಿ ಸ್ವಾಗತ ಕೋರಿದರು. ಮಕ್ಕಳು ಮತ್ತು ಮಾತೆಯರು ಮಾಡಿದ ಸ್ವಚ್ಛತೆ, ತಳಿರು ತೋರಣ ಅಲಂಕಾರ, ರಂಗೋಲಿ, ತುಳಸೀಮಾಲೆ ಹಾಗೂ ಪೂರ್ಣಕುಂಭ ವ್ಯವಸ್ಥೆಗಳು ಕಾರ್ಯಕ್ರಮಕ್ಕೆ ವಿಶೇಷ ಸೊಬಗು ತಂದವು.


ವೈದಿಕ ಬಂಧುಗಳ ವೇದಘೋಷಗಳೊಂದಿಗೆ ಶಂಖ, ಜಾಗಟೆ, ಜಯಗಂಟೆ, ಚೆಂಡೆ ಹಾಗೂ ತಾಳಗಳ ನಾದಗಳು ಮೊಳಗಿದಾಗ, ಶಿಷ್ಯಸ್ತೋಮದ ಜಯಘೋಷಗಳು ಸ್ವಾಗತ ಸಮಾರಂಭಕ್ಕೆ ಇನ್ನಷ್ಟು ಭವ್ಯತೆ ನೀಡಿದವು. ಮುಳ್ಳೇರಿಯ ಮಂಡಲ ಹಾಗೂ ಇತರ ವಲಯಗಳ ಪದಾಧಿಕಾರಿಗಳು ಮತ್ತು ಘಟಕಗಳ ಗುರಿಕ್ಕಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾತೆಯರು ಗುರುಪಾದುಕಾ ಸ್ತೋತ್ರವನ್ನು ಸಮೂಹಿಕವಾಗಿ ಪಠಿಸಿದರು.


ಧೂಳೀಪೂಜೆ ನೆರವೇರಿಸಿ, ಗುರುಗಳ ಸಂದೇಶವನ್ನು ಕೇಳಿಸಲಾಯಿತು. ವಲಯದ ಅಧ್ಯಕ್ಷರಾದ ಕುಮಾರಸುಬ್ರಹ್ಮಣ್ಯ ಕೊಂದಲಕಾಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಆಗಮಿಸಿದ ಭಕ್ತರನ್ನು ಸ್ವಾಗತಿಸಿದರು.


ಮರುದಿನ ಬೆಳಿಗ್ಗೆ 7 ಗಂಟೆಗೆ ಮನೆ–ಮನೆ ಸ್ವರ್ಣ ಸವಾರಿ ಆರಂಭವಾಗಿ ಬೆಳಿಗ್ಗೆ 10.45ರವರೆಗೆ ನಡೆಯಿತು. ಮರುವಳ ಘಟಕದ ಗುರಿಕಾರರಾದ ಮರುವಳ ಚಿದಾನಂದ ಭಟ್, ಮಾಣಿ ಘಟಕದ ಗುರಿಕಾರರಾದ ಉರ್ಮಿ ಗೋಪಾಲಕೃಷ್ಣ ಭಟ್, ಮಾಣಿ ಮಹಾಲಿಂಗ ಭಟ್, ಮಾಣಿ ವೆಂಕಟ್ರಮಣ ಭಟ್, ಬಾಯಾಡಿ ರಾಮಪ್ರಸಾದ್ ಹಾಗೂ ಬಾಯಾಡಿ ಪರಮೇಶ್ವರ ಭಟ್ ಅವರ ಮನೆಗಳಲ್ಲಿ ಸ್ವರ್ಣ ಪಾದುಕಾ ಪೂಜೆಗಳು ನೆರವೇರಿದವು. ನಂತರ ವಸತಿ ಮನೆಯಲ್ಲಿ ಭಿಕ್ಷಾ ಸೇವೆ ಹಾಗೂ ಸ್ವರ್ಣ ಪಾದುಕಾ ಪೂಜೆಗಳು ನಡೆದವು.


ಮಧ್ಯಾಹ್ನ ಭೋಜನದ ನಂತರ ಮಧ್ಯಾಹ್ನ 2.45ಕ್ಕೆ ಮನೆ–ಮನೆ ಸವಾರಿಯ ಮುಂದಿನ ಹಂತದಲ್ಲಿ ಬಾಯಾಡಿ ಶಂಕರನಾರಾಯಣ ಭಟ್, ಮಾಣಿ ಕರುವಜೆ ಕೇಶವ ಭಟ್, ಸತ್ಯಪ್ರಕಾಶ್ ಆನೇಕಲ್ಲು ನೆಕ್ಕರೆಕಾಡು ಹಾಗೂ ಶಂಕರನಾರಾಯಣ ಭಟ್ ಕೊಯಂಗಾನ ಅವರ ಮನೆಗಳಿಗೆ ಭೇಟಿ ನೀಡಿ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ ಸ್ವರ್ಣ ಪಾದುಕೆಗಳನ್ನು ಮುಂದಿನ ಪೆರಡಾಲ ವಲಯಕ್ಕೆ ಭಕ್ತಿಪೂರ್ವಕವಾಗಿ ಬೀಳ್ಕೊಡಲಾಯಿತು.


ಸ್ವರ್ಣ ಪಾದುಕೆಗಳು ಹಾಗೂ ಶ್ರೀಪರಿವಾರವನ್ನು ಬೀಳ್ಕೊಡುವ ವೇಳೆ ಭಕ್ತರಲ್ಲಿ ಭಾವನಾತ್ಮಕ ಕ್ಷಣಗಳು ಮೂಡಿದವು. ಮನೆಮಂದಿಯ ಕಣ್ಣುಗಳಲ್ಲಿ ಕಣ್ಣೀರಿನ ತುಂತುರುಗಳು, ಕೈಮುಗಿದ ಮುಖಭಾವಗಳು ಕಾರ್ಯಕ್ರಮದ ಭಕ್ತಿಭಾವವನ್ನು ವ್ಯಕ್ತಪಡಿಸಿದವು.


ಈ ಸಂದರ್ಭದಲ್ಲಿ ಮಂಡಲ ಪದಾಧಿಕಾರಿಗಳು, ವಲಯದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರಮುಖ ಪದಾಧಿಕಾರಿಗಳು ಸವಾರಿಯೊಂದಿಗೆ ಸಂಚರಿಸಿ ವ್ಯವಸ್ಥೆಗಳನ್ನು ನೋಡಿಕೊಂಡರು. ಪೂರ್ವ ತಯಾರಿಗಳಲ್ಲಿ ಘಟಕದ ಗುರಿಕ್ಕಾರರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಮನೆಗಳಿಗೆ ಮುಂಚಿತ ಮಾಹಿತಿ ನೀಡುವುದು, ಸಮಯ ಸಾರಿಣಿ ರೂಪಿಸುವುದು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಯಿತು.


ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅಮ್ಮಂಕಲ್ಲು ರಾಜಗೋಪಾಲ ಭಟ್ ಅವರ ಕುಟುಂಬದವರು, ತಮ್ಮ ಮನೆಗಳಲ್ಲಿ ಪಾದುಕಾ ಪೂಜೆಗಳನ್ನು ನೆರವೇರಿಸಿದ ಗುರುಬಂಧುಗಳು, ಮಾತೃವಿಭಾಗದ ಸದಸ್ಯರು ಹಾಗೂ ಮಠದ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಸಹಕರಿಸಿದ ಎಲ್ಲಾ ಭಕ್ತರಿಗೆ ವಲಯದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು.


ಶ್ರೀಚರಣಗಳಿಗೆ ಈ ಸೇವೆ ಪ್ರೀತಿಯಾಗಲೆಂದು ಪ್ರಾರ್ಥಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಗುಂಪೆ ಹವ್ಯಕ ವಲಯದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಧನ್ಯವಾದಗಳನ್ನು ಅರ್ಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top