ಕೈಗಾರಿಕೆ–ಶೈಕ್ಷಣಿಕ ಸಹಭಾಗಿತ್ವವೇ ಭವಿಷ್ಯದ ಶಿಕ್ಷಣದ ದಾರಿ: ಪ್ರೊ. ರಾಜಾಸಾಬ್
ಬೆಂಗಳೂರು: ‘ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಪರಂಪರಾಗತ ಪಠ್ಯಕ್ರಮ ಮಾತ್ರ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರು ಮತ್ತು ಸಮಸ್ಯೆ ಪರಿಹಾರಕರನ್ನಾಗಿ ರೂಪಿಸಲು ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ನಿರ್ಣಾಯಕ ಚಿಂತನೆ ನಡೆಸುವಂತೆ ಹಾಗೂ ನವೀನ ತಾಂತ್ರಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶಿಕ್ಷಣ ಪದ್ಧತಿಯನ್ನು ಸಮಗ್ರವಾಗಿ ಪರಿವರ್ತಿಸಬೇಕಿದೆ. ಕೈಗಾರಿಕೆ ಮತ್ತು ಶೈಕ್ಷಣಿಕ ವಲಯಗಳ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಇದು ಸಾಧ್ಯ’ ಎಂದು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಎ.ಎಚ್. ರಾಜಾಸಾಬ್ ಹೇಳಿದರು.
ಅವರು, ಸ್ಯಾಮ್ಸಂಗ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ಥಾಪಿಸಿರುವ ‘ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್’ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಈ ಇನ್ನೋವೇಶನ್ ಕ್ಯಾಂಪಸ್ ವಿದ್ಯಾರ್ಥಿಗಳನ್ನು ಕೃತಕ ಬುದ್ಧಿಮತ್ತೆ ಸೇರಿದಂತೆ ಉನ್ನತ ತಂತ್ರಜ್ಞಾನ ಕ್ಷೇತ್ರಗಳ ನವೀನ ಆವಿಷ್ಕಾರಗಳತ್ತ ಕೇಂದ್ರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಸ್ಯಾಮ್‌ಸಂಗ್ 80 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಗತ್ಯವಾದ ವೃತ್ತಿಪರ ಪರಿಣತಿಯನ್ನು ಪಡೆಯಲಿದ್ದಾರೆ’ ಎಂದು ಪ್ರೊ. ರಾಜಾಸಾಬ್ ತಿಳಿಸಿದರು.
ಅವರು ಮುಂದುವರಿದು ಮಾತನಾಡಿ, ‘ಕೃಷಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಹಿಡಿಯುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊತ್ತುಕೊಳ್ಳಬೇಕು. ಕೃಷಿಯಲ್ಲಿ ಕಾರ್ಮಿಕರ ಕೊರತೆ ಇಂದು ದೊಡ್ಡ ಸವಾಲಾಗಿದೆ. ನವೀನ ತಂತ್ರಜ್ಞಾನಗಳು ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಅಭಿವೃದ್ಧಿಯಾಗಬೇಕು,’ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೋಹನ್ ರಾವ್ ಗೋಲಿ, ಸ್ಯಾಮ್‌ಸಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಮಾತನಾಡಿ, ‘ಈ ಇನ್ನೋವೇಶನ್ ಕ್ಯಾಂಪಸ್ ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಕಲಿಯಲು ಸಮೃದ್ಧ ಅವಕಾಶಗಳನ್ನು ಒದಗಿಸಲಿದೆ. ಜಾಗತಿಕ ಮಟ್ಟದಲ್ಲಿ ಅಗತ್ಯವಿರುವ ತಂತ್ರಜ್ಞರನ್ನು ಒದಗಿಸುವ ಹೊಣೆಗಾರಿಕೆ ಭಾರತಕ್ಕೆ ಇದೆ. ಏಕೆಂದರೆ, ನಮ್ಮ ದೇಶದಲ್ಲಿ 15 ರಿಂದ 29 ವರ್ಷ ವಯೋಮಾನದ ಯುವಜನಸಂಖ್ಯೆ ಸುಮಾರು 371 ಮಿಲಿಯನ್ ಇದೆ. ಇಂತಹ ಯುವಶಕ್ತಿ ಜಗತ್ತಿನ ಬೇರೆ ಯಾವ ದೇಶದಲ್ಲೂ ಕಾಣಸಿಗುವುದಿಲ್ಲ’ ಎಂದು ಹೇಳಿದರು.
ಸ್ಯಾಮ್‌ಸಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಸಾದ್ ಹಾಗೂ ಡಾ. ಲೋಕೇಶ್ ಬೋರೇಗೌಡ ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶಾಲ್ ಹೆಗ್ಡೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ‘ವಿದ್ಯಾರ್ಥಿಗಳ ಜೀವನದಲ್ಲಿ ಶ್ರದ್ಧೆ ಮತ್ತು ಆಸಕ್ತಿಗಳು ವ್ಯಕ್ತಿತ್ವ ರೂಪಿಸುವಲ್ಲಿ, ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಹಾಗೂ ಪ್ರಯತ್ನಗಳನ್ನು ಯಶಸ್ವಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ ಮತ್ತು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತಿ ಉಪಸ್ಥಿತರಿದ್ದರು. ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ ನಿಟ್ಟೆ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ. ಬಿ. ಕರುಣಾಕರ ರೈ ವಂದನಾರ್ಪಣೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

