ಮಂಗಳೂರು: ನಗರದ ಉರ್ವಾ ರಿವರ್‌ಸೈಡ್ ಕ್ಯಾಂಪಸ್‌ನಲ್ಲಿರುವ ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ್ 28 ಬೆಳಿಗ್ಗೆ 9: 30 ಕ್ಕೆ ‘ಸಂಭ್ರಮ 2K26’ ವಾರ್ಷಿಕೋತ್ಸವ ಪ್ರಯುಕ್ತ ಪ್ರಭಾತ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಶರದ್ ವಿಹಾರಿ ದಾಸ ಅವರು ಸಂಸ್ಥೆಯ ಧ್ವಜಾರೋಹಣ ನೆರವೇರಿಸಿದರು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿ ಮುಖ್ಯ ಅತಿಥಿಗಳು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಶರದ್ ವಿಹಾರಿ ದಾಸ ಅವರು ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು ಮತ್ತು ಸಹನೆಯಿಂದ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಹೇಳಿದರು. ಸಂಸ್ಕೃತ ಶ್ಲೋಕದ ಮೂಲಕ ವಿದ್ಯಾರ್ಥಿಗಳಿಗೆ ‘ಪಂಚಲಕ್ಷಣ’ಗಳ ಮಹತ್ವವನ್ನು ವಿವರಿಸಿದರು. ಈ ಪಂಚಲಕ್ಷಣಗಳು ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು, ಪರಿಶ್ರಮ, ಸಹನೆ, ಏಕಾಗ್ರತೆ ಮತ್ತು ಸದುಪಚಾರಗಳನ್ನು ಬೆಳೆಸುವಲ್ಲಿ ಸಹಾಯಕವಾಗುತ್ತವೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ವ್ಯಕ್ತಿತ್ವ ವಿಕಾಸದಲ್ಲಿಯೂ ಯಶಸ್ಸನ್ನು ಸಾಧಿಸಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಅಭಿನಯ ಸೊರಕೆ, ಕಾರ್ಯದರ್ಶಿಗಳು, ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು, ಇವರು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಧನೆಗೆ ಸಂಸ್ಥೆ ಸದಾ ಬೆಂಬಲವಾಗಿ ನಿಂತಿದ್ದು, ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದು ತಿಳಿಸಿದರು. ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾನ್ ಅವರು ಬಂದಂತಹ ಅತಿಥಿಗಳನ್ನು ಮತ್ತು ಎಲ್ಲಾ ಗಣ್ಯ ವ್ಯಕ್ತಿಗಳನ್ನು ಆದರಪೂರ್ವಕವಾಗಿ ಸ್ವಾಗತಿಸಿದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಅಧ್ಯಕ್ಷ ಸುದೀಪ್ ರೈ ಅವರು ವಿದ್ಯಾರ್ಥಿ ಪರಿಷತ್ತಿನ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ವಿಭಾಗವಾರು ಪ್ರಾವೀಣ್ಯ, ಸಾಹಿತ್ಯ ಸ್ಪರ್ಧೆಗಳು, ಸಾಂಸ್ಕೃತಿಕ ಹಾಗೂ ಲಲಿತಕಲಾ ಸ್ಪರ್ಧೆಗಳು ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಯು ಕೆ ಖಾಲಿದ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರೊ ರಾಜಾರಾಮ್ ಸಹಾಯಕ ಆಡಳಿತಾಧಿಕಾರಿ ಶ್ರೀಯುತ ವಿವಿಸಾಗರ್, ಪ್ರವೇಶಾಧಿಕಾರಿ ಯಶ್ವಿನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶಾಂತಿ ಭಂಡಾರಿ, ವಿದ್ಯಾರ್ಥಿ ಕಲ್ಯಾಣದ ಮಾರ್ಗದರ್ಶಕರು ಆಗಿರುವ ಬಿಬಿಎ ವಿಭಾಗದ ಮುಖ್ಯಸ್ಥರಾದ ತಿಲಕ್ ಗೌಡ ಹಾಗೂ ಬಿ.ಎಸ್ಸಿ ಫ್ಯಾಷನ್ ಡಿಸೈನಿಂಗ್ ವಿಭಾಗದ ಮುಖ್ಯಸ್ಥರಾದ ಅಶ್ವಿನಿ ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಉಪಾಧ್ಯಕ್ಷೆ ಜಾಯ್ಲಿನ್ ರೋವೆನಾ ಪಿಂಟೊ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

