ಎಐ ವಿರಚಿತ ಸಾಂಕೇತಿಕ ಚಿತ್ರ
ಮಂಗಳೂರು, ಮಾರ್ಚ್ 14: ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸಲಾಗುತ್ತಿರುವ ಧಾರ್ಮಿಕ ವಸ್ತುಗಳ ಗೌರವಪೂರ್ವಕ ವಿಲೇವಾರಿ ಮತ್ತು ಪರಿಸರ ಸ್ನೇಹಿ ನಿರ್ವಹಣೆಯ ಉದ್ದೇಶದಿಂದ ರಾಮಕೃಷ್ಣ ಮಿಷನ್ ಮಂಗಳೂರು, ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ “ವಿಸರ್ಜನೆ” ಎಂಬ ವಿಶೇಷ ಅಭಿಯಾನವನ್ನು ಆಯೋಜಿಸಿದೆ.
ಈ ಅಭಿಯಾನವು ಮಾರ್ಚ್ 16ರಿಂದ 26ರವರೆಗೆ ಮಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಹಳೆಯ ದೇವರ ಚಿತ್ರಗಳು, ಮುರಿದ ಮೂರ್ತಿಗಳು ಹಾಗೂ ಇತರೆ ಧಾರ್ಮಿಕ ವಸ್ತುಗಳನ್ನು ಸಂಗ್ರಹಿಸಿ ಗೌರವಪೂರ್ವಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಲಾಗಿದೆ.
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನವು 2015ರಿಂದ ಮಂಗಳೂರು ನಗರವನ್ನು ಸ್ವಚ್ಛವಾಗಿಡಲು ಹಾಗೂ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ ಸ್ವಚ್ಛತಾ ಶ್ರಮದಾನ, ಮನೆಮನೆಗೆ ತೆರಳಿ ಕಸದ ವಿಂಗಡಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಶಾಲಾ ಮಕ್ಕಳಿಗೆ ‘ಸ್ವಚ್ಛ ಮನಸ್’ ತರಗತಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ‘ಸ್ವಚ್ಛ ಸೋಚ್’ ಸೆಮಿನಾರ್‌ಗಳು ಸೇರಿದಂತೆ ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಇತ್ತೀಚೆಗೆ ಕದ್ರಿ ದೇವಸ್ಥಾನ ಪ್ರದೇಶದಲ್ಲಿ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ಹಳೆಯ ದೇವರ ಚಿತ್ರಗಳು, ಮುರಿದ ಮೂರ್ತಿಗಳು ಮತ್ತು ಇತರೆ ಧಾರ್ಮಿಕ ವಸ್ತುಗಳು ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸಲ್ಪಟ್ಟಿರುವುದು ಗಮನಕ್ಕೆ ಬಂದಿತ್ತು. ಇದರಿಂದ ಇಂತಹ ಪವಿತ್ರ ವಸ್ತುಗಳ ಗೌರವಪೂರ್ವಕ ವಿಲೇವಾರಿಗೆ ಸಂಘಟಿತ ವ್ಯವಸ್ಥೆಯ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಈ ವಿಶೇಷ ಅಭಿಯಾನವನ್ನು ಆರಂಭಿಸಲಾಗಿದೆ.
ಅಭಿಯಾನದ ಭಾಗವಾಗಿ ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನ, ಬಿಜೈ ಭಾರತ್ ಮಾಲ್, ಪಾಂಡೇಶ್ವರ ಫೋರಂ ಮಾಲ್, ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಹಾಗೂ ಸುರತ್ಕಲ್ ಗೋವಿಂದ ದಾಸ ಕಾಲೇಜುಗಳಲ್ಲಿ ತಾತ್ಕಾಲಿಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಸಂಗ್ರಹಿಸಿದ ವಸ್ತುಗಳಿಗೆ ಕದ್ರಿ ದೇವಸ್ಥಾನದಲ್ಲಿ ಉದ್ವಾಸನ ಪೂಜೆ ನೆರವೇರಿಸಿ ನಂತರ ಮರುಬಳಕೆ ಮತ್ತು ಪರಿಸರ ಸ್ನೇಹಿ ವಿಧಾನದಲ್ಲಿ ವಿಲೇವಾರಿ ಮಾಡಲಾಗುತ್ತದೆ.
ಈ ಅಭಿಯಾನದ ಉದ್ಘಾಟನೆ ಮಾರ್ಚ್ 16ರಂದು ಮಧ್ಯಾಹ್ನ 12 ಗಂಟೆಗೆ ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ ಬಸವನಗುಡಿ (ಬೆಂಗಳೂರು) ಅಧ್ಯಕ್ಷರಾದ ಪೂಜ್ಯ ಸ್ವಾಮಿ ನಿತ್ಯಸ್ಥಾನಂದಜಿ, ರಾಮಕೃಷ್ಣ ಮಠ ಮಂಗಳೂರು ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಹಾಗೂ ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂಸೇವಕರು ಭಾಗವಹಿಸಲಿದ್ದಾರೆ.
ಸಹಾಯವಾಣಿ: 8105356290
(ಶ್ರೀ ರಂಜನ್ ಬೆಳ್ಳರ್ಪಾಡಿ, ಸಂಯೋಜಕರು
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


