ಕಾಮ–ಕ್ರೋಧಗಳೇ ಮನುಷ್ಯನ ನಾಶಕ್ಕೆ ಕಾರಣ: ಡಾ. ವಿನಾಯಕ ಭಟ್ ಗಾಳಿಮನೆ

Upayuktha
0


ಕಾರ್ಕಳ: ಬಂಡಿಮಠದ ಮೂಡುಗಣಪತಿ ದೇವಾಲಯದ ಸಭಾಂಗಣದಲ್ಲಿ ಭಗವದ್ಗೀತೆಯ ಮೂರನೇ ಅಧ್ಯಾಯವಾದ ಕರ್ಮಯೋಗದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನ, ಶಿರಸಿ; ಸಾರ್ವಜನಿಕ ಗಣೇಶೋತ್ಸವ ಸಮಿತಿ; ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನ, ಕಾರ್ಕಳ; ಹಾಗೂ ಅಮಿತ್ ಎಸ್. ಪೈ ಮೆಮೋರಿಯಲ್ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರ, ಪೆರ್ವಾಜೆ ಇವರ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಯುತ್ತಿರುವ ‘ಗೀತಾಂತರಂಗ’ ಕಾರ್ಯಕ್ರಮದ ಅಂಗವಾಗಿ ಈ ಉಪನ್ಯಾಸವನ್ನು ಆಯೋಜಿಸಲಾಗಿತ್ತು.


ಖ್ಯಾತ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆ ಅವರು ಭಗವದ್ಗೀತೆಯ ಕರ್ಮಯೋಗ ತತ್ವವನ್ನು ವಿಶ್ಲೇಷಿಸಿ ಮಾತನಾಡಿದರು.


ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದಾಗ ಮನುಷ್ಯನ ಮನಸ್ಸು ದೇವಮಂದಿರವಾಗುತ್ತದೆ. ಸಮಾಜದಲ್ಲಿ ಪ್ರತಿಯೊಬ್ಬರ ಮನಸ್ಸೂ ದೇವಮಂದಿರವಾಗುವಂತೆ ಗೀತೆಯ ಸಂದೇಶ ಹರಡಬೇಕು ಎಂದು ಅವರು ಹೇಳಿದರು. ಮಕ್ಕಳಿಗೆ ಬಾಲ್ಯದಲ್ಲಿಯೇ ಭಗವದ್ಗೀತೆಯ ತತ್ವಗಳನ್ನು ಪರಿಚಯಿಸುವುದು ಅತ್ಯಂತ ಅಗತ್ಯವಾಗಿದ್ದು, ಭಾವನಾತ್ಮಕ ಒತ್ತಡಗಳಿಗೆ ಒಳಗಾಗುವ ವಯಸ್ಸಿನಲ್ಲಿ ಅವರನ್ನು ಸದೃಢರನ್ನಾಗಿಸಲು ಗೀತೆಯ ಮಾರ್ಗದರ್ಶನ ಮಹತ್ವದ್ದು ಎಂದು ಅವರು ತಿಳಿಸಿದರು.

    


ಮಾನವನಿಗೆ ಒಳ್ಳೆಯದು-ಕೆಟ್ಟದ್ದು ತಿಳಿದಿದ್ದರೂ ಕೆಲವೊಮ್ಮೆ ಕೆಟ್ಟ ಮಾರ್ಗವನ್ನು ಆಯ್ಕೆಮಾಡುವ ಪ್ರವೃತ್ತಿ ಕಾಣಿಸುತ್ತದೆ. ಇದಕ್ಕೆ ಹೊರಗಿನ ಪ್ರೇರಣೆಗಳಿಗಿಂತಲೂ ವ್ಯಕ್ತಿಯ ಒಳಜಗತ್ತನ್ನು ಆಳುವ ಕಾಮ ಮತ್ತು ಕ್ರೋಧ ಎಂಬ ಎರಡು ವೈರಿಗಳೇ ಕಾರಣವಾಗುತ್ತವೆ ಎಂದು ಅವರು ವಿವರಿಸಿದರು.


ಸತ್ವಗುಣದಿಂದ ಜ್ಞಾನ, ರಜೋಗುಣದಿಂದ ಆಸೆ ಹಾಗೂ ತಮೋಗುಣದಿಂದ ಅಜ್ಞಾನ ಉಂಟಾಗುತ್ತದೆ. ಮಾರುಕಟ್ಟೆಯಲ್ಲಿ ಕಂಡ ವಸ್ತುಗಳ ಮೇಲೆ ಆಸೆ ಮೂಡುವುದು ಅಥವಾ ನಮ್ಮ ಮಾತು ನಡೆಯದಿದ್ದರೆ ಕ್ರೋಧ ಹುಟ್ಟುವುದು ರಜೋಗುಣ ಮತ್ತು ತಮೋಗುಣಗಳ ಪ್ರಭಾವದಿಂದಾಗುತ್ತದೆ ಎಂದು ಅವರು ತಿಳಿಸಿದರು.


ಕಾಮಕ್ಕಿಂತ ದೊಡ್ಡ ಹಸಿವು ಇಲ್ಲ ಮತ್ತು ಕ್ರೋಧಕ್ಕಿಂತ ದೊಡ್ಡ ಪಾಪವೂ ಇಲ್ಲ ಎಂದು ಹೇಳಿದ ಅವರು, ಮನುಷ್ಯ ತನ್ನ ಒಳಜಗತ್ತನ್ನು ನಿಯಂತ್ರಿಸಿಕೊಂಡಾಗ ಮಾತ್ರ ಜೀವನದ ಸಾರ್ಥಕತೆ ಸಾಧ್ಯವೆಂದು ಹೇಳಿದರು.


ತ್ರೇತಾಯುಗದಲ್ಲಿ ರಾಮನ ಆಗಮನದವರೆಗೆ ಕಾಮದಿಂದ ಆವೃತವಾಗಿದ್ದ ಕಾಲ, ರಾಮನ ಅವತಾರದ ನಂತರ ಧರ್ಮದ ಮಾರ್ಗದಲ್ಲಿ ಸಾಗಿದ ರಾಮಾಯಣವಾಗಿ ರೂಪುಗೊಂಡಿತು ಎಂಬ ಉದಾಹರಣೆಯ ಮೂಲಕ ಧರ್ಮ ಮತ್ತು ಸಂಯಮದ ಮಹತ್ವವನ್ನು ಅವರು ವಿವರಿಸಿದರು.


ಕಾರ್ಯಕ್ರಮದಲ್ಲಿ ಭಕ್ತರು, ಗೀತಾಭಿಮಾನಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಶ್ರೀ ಸ್ವರ್ಣವಲ್ಲಿ ಸೋಂದಾ ಸಂಸ್ಥಾನದ ವಿಶೇಷ ಕಾರ್ಯಗಳಲ್ಲಿ ಗೀತಾ ಅಭಿಯಾನ ಅನ್ಯತಮ. ಈ ಅಭಿಯಾನದ ಅಡಿಯಲ್ಲಿ ಹಲವು ಸಂಘಗಳ ಸಹಯೋಗದೊಂದಿಗೆ ಕಾರ್ಕಳ ವಕಯದ ಸಮಾನ ಆಸಕ್ತ ಬಂಧುಗಳು ಸೇರಿ ವರ್ಷವಿಡೀ ಭಗವದ್ಗೀತೆ ಪಠನ, ರಸಪ್ರಶ್ನೆ, ಸ್ಪರ್ಧೆ, ಸತ್ಸಂಗ, ಉಪನ್ಯಾಸ ಹೀಗೆ ಗೀತಾಕೇಂದ್ರಿತ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿತಿಂಗಳ ಕೊನೆಯ ಭಾನುವಾರ ಉಪನ್ಯಾಸ ನಡೆಯುತ್ತದೆ. ಈ ಮಾಸದ ಉಪನ್ಯಾಸ ಕರ್ಮಯೋಗವಾಗಿತ್ತು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top