ಕೃಷ್ಣಾಂಗಾರಕ ಚತುರ್ದಶೀ: ಸುವರ್ಣಾ ನದೀ ಸ್ನಾನಗೈದ ಶಾಸಕ ಯಶ್ಪಾಲ್ ಸುವರ್ಣ

Upayuktha
0

ಸೋದೆ ಶ್ರೀ, ಪಲಿಮಾರು ಉಭಯ ಶ್ರೀಗಳು, ಪೇಜಾವರ ಶ್ರೀ, ಕಾಣಿಯೂರು ಶ್ರೀಗಳಿಂದ ಪವಿತ್ರ ನದೀ ಸ್ನಾನ 





ಉಡುಪಿ: ಮಂಗಳವಾರದಂದು ಕೃಷ್ಣಾಂಗಾರಕ ಚತುರ್ದಶೀ ದಿನವಾಗಿದ್ದು ಉಡುಪಿಯ ಜೀವನದಿ ಸುವರ್ಣಾ ನದೀ ಸ್ನಾನದ ಪರ್ವ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣರು ಪೆರಂಪಳ್ಳಿಯ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಮೀಪ ಇರುವ ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಪವಿತ್ರ ಸ್ನಾನಗೈದರು.


ವಿಧಾನಸಭಾ ಬಜೆಟ್ ಅಧಿವೇಶನ ನಡೆಯುತ್ತಿದ್ದರೂ ನಿನ್ನೆ ರಾತ್ರಿಯೇ ಉಡುಪಿಗೆ ಬಂದು ನಸುಮುಂಜಾನೆ ನದೀತೀರಕ್ಕೆ ಬಂದು ಸ್ನಾನಗೈದು ನದೀ ದೇವತೆಗೆ ಪ್ರಾರ್ಥನೆ ಸಲ್ಲಿಸಿ ಸೂರ್ಯನಿಗೆ ಅರ್ಘ್ಯ ಹಾಗೂ ತಮ್ಮ ಮಾತಾಪಿತರನ್ನು ಸ್ಮರಿಸಿ ತರ್ಪಣನೀಡಿದರು. ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಯವರು ಶಾಸಕರಿಗೆ ಸಂಕಲ್ಪ ವಿಧಿಗಳನ್ನು ತಿಳಿಸಿದರು. ಬಳಿಕ ಸಿದ್ಧಿವಿನಾಯಕ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು‌. ಅರ್ಚಕ ನವೀನ್ ಶಿವತ್ತಾಯರು ಪ್ರಸಾದ ನೀಡಿ ಆಶೀರ್ವದಿಸಿದರು.


ಇತ್ತೀಚಿನ ದಶಕಗಳಲ್ಲೇ ಈ ಸ್ಥಳದಲ್ಲಿ ಶಾಸಕರೊಬ್ಬರು ನದೀ ಸ್ನಾನಗೈಯುತ್ತಿರುವುದು ಇದೇ ಮೊದಲು.


ಸೋದೆ ಶ್ರೀಗಳ ಆಶೀರ್ವಾದದಿಂದ ಶಾಸಕ‌ ಯಶ್ಪಾಲ್ ಸುವರ್ಣರ ವಿಶೇಷ ಪ್ರಯತ್ನದಿಂದ ಕರ್ನಾಟಕ‌ ಸರ್ಕಾರದ ಸಣ್ಣ ನೀರಾವರಿ ಇಲಾಖೆಯ 2.25 ಕೋಟಿ ಅನುದಾನದಿಂದ ನೂತನ ಕೃಷ್ಣಾಂಗಾರಕ ಸ್ನಾನಘಟ್ಟ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತ ತಲುಪಿದ್ದು ಎಪ್ರಿಲ್ ಅಂತ್ಯಕ್ಕೆ ಪೂರ್ಣಗೊಂಡು ಸರ್ಕಾರದ ವತಿಯಿಂದ ಕಾರ್ಯಕ್ರಮ ನಡೆದು ಉದ್ಘಾಟನೆಗೊಳ್ಳಲಿದೆ. ಆದರೆ ಈ ನಡುವೆ ತೀರಾ ಅಪರೂಪಕ್ಕೊಮ್ಮೆ ಎಂಬಂತೆ ಬರುವ ಕೃಷ್ಣಾಂಗಾರಕ ಚತುರ್ದಶೀ ತಿಥಿಯಿದ್ದ ಪ್ರಯುಕ್ತ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಸಂಕಲ್ಪದಂತೆ ಪಲಿಮಾರು ಉಭಯಶ್ರೀಗಳು, ಪೇಜಾವರ, ಕಾಣಿಯೂರು ಶ್ರೀಗಳು, ಅದಮಾರು ಕಿರಿಯ ಶ್ರೀಗಳೂ ಭಕ್ತರ ಜೊತೆ ಆಗಮಿಸಿ ನದೀ ಸ್ನಾನಗೈದು ಮಠದ ವತಿಯಿಂದ ಧಾರ್ಮಿಕ ವಿಧಿಯನುಸಾರ ಸ್ನಾನಘಟ್ಟವನ್ನು ಭಕ್ತರಿಗೆ ತೆರೆದಿಡುತ್ತಿದ್ದಾರೆ.


ಈ ಸಂದರ್ಭ ಇವತ್ತು ಬೆಳಿಗ್ಗೆಯಿಂದಲೇ ನೂರಾರು ಭಕ್ತರೂ ಇವತ್ತು ನದೀ ಸ್ನಾನಗೈಯುತ್ತಿರುವುದು ಕಂಡು ಬಂತು. ಸಂಜೆ ಸುವರ್ಣಾರತಿಯೂ ನಡೆಯಲಿದೆ.


ಸ್ನಾನಘಟ್ಟ ನಿರ್ಮಾಣದ ವಿಷಯದಲ್ಲಿ ಉಡುಪಿಯ ಧೀಮಂತ ರಾಜಕಾರಣಿ ಡಾ ವಿ ಎಸ್ ಆಚಾರ್ಯರು ತಾವು ಮೊದಲಬಾರಿಗೆ ಮಂತ್ರಿಗಳಾಗಿದ್ದಾಗ ಸ್ಥಳೀಯರ ಅಪೇಕ್ಷೆಯಂತೆ ಜಿಲ್ಲೆಯ ಜನತೆಯ ಪರವಾಗಿ ಪ್ರಥಮತಃ ಜೀವನದಿಗೆ ಬಾಗಿನ ಅರ್ಪಿಸಿದ್ದರು. ಉಡುಪಿ ನಗರಸಭೆಯ ಸಹಯೋಗದಲ್ಲಿ ಸ್ಮರಣೀಯ ಕಾರ್ಯಕ್ರಮ‌ ನಡೆದಿತ್ತು. ಆಗಲೇ ನೂತನ  ಸ್ನಾನಘಟ್ಟ ನಿರ್ಮಾಣದ (ಆತನಕ ವಿಸ್ತೃತವಾದ ಸ್ನಾನಘಟ್ಟವಿರಲಿಲ್ಲ) ಕಲ್ಪನೆ ಚಿಗುರೊಡೆಯಿತು. ಆಚಾರ್ಯರು ಅದಕ್ಕೆ ಜೀವ ತುಂಬಿದರಾದರೂ ತಾವು ಹಠಾತ್ತನೇ ಇಹಲೋಕ ತ್ಯಜಿಸಿದರು.


ಆ ನಂತರ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಮಂತ್ರಿಗಳಾಗಿದ್ದಾಗ ಬಂದು ಬಾಗಿನ ಅರ್ಪಿಸಿದ್ದರು. ಶಾಸಕರಾಗಿದ್ದ ರಘುಪತಿ ಭಟ್ಟರೂ ಸ್ನಾನಘಟ್ಟ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದರು. ಇದೀಗ ಶಾಸಕ ಯಶ್ಪಾಲ್ ಪ್ರಯತ್ನ ಮುಂದುವರೆಸಿ ಸಾಕಾರಗೊಳಿಸಿದ್ದಾರೆ. ಒಂದು ಹಂತದಲ್ಲಿ ನಿರ್ಮಾಣ ಕಾರ್ಯ ವಿಳಂಬವಾಗಿ ವಿಪರೀತ ಮಳೆಯಿಂದ ಭೂಕುಸಿತದಿಂದ ಸನಿಹದಲ್ಲಿರುವ ದೇವಸ್ಥಾನಕ್ಕೂ ಅಪಾಯ ಸ್ಥಿತಿ ಎದುರಾದಾಗ ಸೋದೆ ಶ್ರೀಗಳು ಭಕ್ತರ ನೆರವಿನಿಂದ ಸ್ವಲ್ಪ ಭಾಗ ತಡೆಗೋಡೆ ನಿರ್ಮಿಸಿದ್ದರು.‌


ಅಂತೂ ಪೆರಂಪಳ್ಳಿ ಯ ಜನತೆಗೆ ಉಡುಪಿಗೆ, ಹಾಗೂ ಆಸ್ತಿಕ‌ ಜನತೆಗೆ ಇದೊಂದು ಒಳ್ಳೆಯ ಕೊಡುಗೆ. ಶ್ರೀ ವಾದಿರಾಜ ತೀರ್ಥ ಸ್ವಾಮಿಗಳು ತಮ್ಮ ತಪೋಬಲದಿಂದ ಈ ಸ್ಥಳದಲ್ಲೂ ಕಂಡುಕೊಂಡ ದಿವ್ಯತೆಯ ಕಾರಣದಿಂದ ಈ ಸ್ಥಳಕ್ಕೊಂದು ಚಾರಿತ್ರಿಕ ಮಹತ್ವ ಬಂದಿತ್ತು. ಇದೀಗ ಸುಸಜ್ಜಿತ ಸ್ನಾನಘಟ್ಟ ನಿರ್ಮಾಣ ಮುಕ್ತಾಯ ಹಂತ ತಲುಪುತ್ತಿರುವುದರಿಂದ ಮುಂದಿನ‌ ದಿನಗಳಲ್ಲಿ ಈ ಸ್ಥಳಕ್ಕೆ ಮತ್ತಷ್ಟು ಜನ ಬರುವ ನಿರೀಕ್ಷೆ ಇದೆ.


ಈ ಸಂದರ್ಭ ಅನದಾನ ನೀಡಿದ ಕರ್ನಾಟಕ ಸರ್ಕಾರ, ಅದನ್ನು ಮಂಜೂರು ಮಾಡಲು ವಿಶೇಷ ಶ್ರಮವಹಿಸಿದ ಶಾಸಕ ಯಶ್ಪಾಲ್ ಸುವರ್ಣರು ಅಭಿನಂದನೀಯರು.


ಆಶೀರ್ವದಿಸಿದ ಸೋದೆ ಶ್ರೀಗಳು ಅಭಿವಂದನೀಯರು. ಕೀರ್ತಿಶೇಷ ಡಾ ವಿಎಸ್ ಆಚಾರ್ಯ, ಮಾಜಿ ಶಾಸಕ ಕೆ ರಘುಪತಿ ಭಟ್ ಹಾಗೂ ದೇವಸ್ಥಾನವು ಸೋದೆ ಮಠಕ್ಕೆ ಹಸ್ತಾಂತರಗೊಳ್ಳುವ ಮೊದಲು ದೇವಳದ ಆಡಳಿತ ಮಂಡಳಿ ಹಾಗೂ ಉಸ್ತುವಾರಿಯಾಗಿ ವಿಶೇಷ ಸೇವೆಗೈದಿದ್ದ ದಿವಂಗತ ಕೃಷ್ಣಮೂರ್ತಿ ಶಿವತ್ತಾಯರೂ ಸ್ಮರಣೀಯರು.‌


- ಜಿ ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top