ವನ್ಯಜೀವಿ ದಾಳಿಯಿಂದ ಬಲಿಯಾದ ಕುಟುಂಬಕ್ಕೆ ಸರಕಾರಿ ನೌಕರಿ ಇಲ್ಲ- ಅರಣ್ಯ ಸಚಿವರ ಹೇಳಿಕೆ.
ವನ್ಯಜೀವಿ ದಾಳಿಯಿಂದ ಬಲಿಯಾದ ಕುಟುಂಬಕ್ಕೆ ನೌಕರಿಯಂತಹ ಭದ್ರತೆ ಕೊಟ್ಟರೆ ಮಲೆನಾಡಿನಿಂದ ಒಕ್ಕಲೆಬ್ಬಿಸುವ ಹುನ್ನಾರಕ್ಕೆ ತಡೆ ಆಗುತ್ತದೆ!
ಮುಂದೆ ಮುಂದೆ ಹೋದ ಹಾಗೆ ವನ್ಯಜೀವಿ ದಾಳಿಯಿಂದ ಬಲಿಯಾಗುವವರ ಸಂಖ್ಯೆ ಮಲೆನಾಡಿನಲ್ಲಿ ಹೆಚ್ಚಾದರೆ, ಪರಿಹಾರದ ಚಕ್‌ನ ಮೊತ್ತವೂ ಕಡಿಮೆ ಆಗಬಹುದು!?
ಮಲೆನಾಡನ್ನು ಮೊದಲು ನಿರ್ಜನಗೊಳಿಸಬೇಕು ಎನ್ನುವುದೇ ಉದ್ದೇಶ ಆಗಿದ್ದರೆ, ಬಲಿಯಾದ ಕುಟುಂಬಕ್ಕೆ ಪರಿಹಾರ ಹೆಚ್ಚು ಮಾಡುವುದು, ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವಂತಹ ಇನ್ಷ್ಯೂರೆನ್ಸ್ ಭದ್ರತೆ, ರೈಲ್ವೇ ಕಂಬಿ ಫೆನ್ಸ್‌ನಂತಹ ದೀರ್ಘ ಬಾಳಿಕೆಯ ಬೇಲಿ ನಿರ್ಮಾಣ, ಶಾಶ್ವತ ಪರಿಹಾರಗಳನ್ನು ಮಾಡುವುದು ಮೂಲ ಉದ್ದೇಶಕ್ಕೆ ಹಿನ್ನಡೆ ಮಾಡುವಂತಹ ಕ್ರಮಗಳಾಗುತ್ತವೆ. ಹಾಗಾಗಿ ವನ್ಯಜೀವಿ ದಾಳಿಯಿಂದ ಬಲಿಯಾದ ಕುಟುಂಬಕ್ಕೆ ನೌಕರಿ ಕೊಡುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ.
ವನ್ಯಜೀವಿ ದಾಳಿಗೆ ಜನ ಬಲಿಯಾಗದಂತೆ ಎಲ್ಲ ಕ್ರಮಗಳನ್ನು ಸರಕಾರ ಕೈಗೊಂಡಿದ್ದಿದ್ದರೆ... ಸರಕಾರ ನೇರವಾಗಿ ಮತ್ತು ಧೈರ್ಯವಾಗಿ ಬಲಿಯಾದ ಕುಟುಂಬಕ್ಕೆ ನೌಕರಿ ಭರವಸೆಯನ್ನು ಘೋಷಣೆ ಮಾಡಬಹುದಿತ್ತು. ನೌಕರಿ ಭರವಸೆಯನ್ನು ಕೊಡಲು ಸರಕಾರ ಹಿಂಜರಿಯುತ್ತಿರುವುದರ ಹಿಂದೆ ವನ್ಯಜೀವಿ ದಾಳಿಗೆ ಜನ ಬಲಿಯಾಗದಂತೆ ತಡೆಯಲು ಸರಕಾರ ಸಾಮರ್ಥ್ಯ ಕಳದುಕೊಂಡಿದೆ ಎಂಬ ಸ್ಪಷ್ಟ ಧ್ವನಿ ಕಾಣಿಸುತ್ತದೆ. ಅಥವಾ ವನ್ಯಜೀವಿ ದಾಳಿಗೆ ಜನ ಬಲಿಯಾಗದಂತೆ ತಡೆಯುವ ಸ್ಪಷ್ಟ ಉದ್ದೇಶ ಸರಕಾರದ ಮುಂದೆ ಇಲ್ಲ ಎಂದು ಕಾಣಿಸುತ್ತದೆ.
ಈ ವಿಷಯ ವಿಧಾನ ಸಭೆಯಲ್ಲಿ ಚರ್ಚೆ ಆಗುವುದಿಲ್ಲ.
ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ಜನ ಅಮಾಯಕರು ಬಲಿಯಾದಾಗ ಸರಕಾರ ಸಾವಿರಾರು ಕೋಟಿ ಖರ್ಚು ಮಾಡಿ, ಪ್ರಪಂಚವೇ ತಿರುಗಿ ನೋಡುವಂತೆ ಸಮರೋಪಾದಿಯಲ್ಲಿ ದಿಟ್ಟ ಕ್ರಮವನ್ನು ಕೈಗೊಂಡಿತು. ಮತ್ತೆ ಅಂತಹ ದಾಳಿ ನೆಡೆಯದಂತೆ ಮಾಡುವ ಶಾಶ್ವತವಾದ ಕ್ರಮ ಅದಾಗಿತ್ತು. ಆದರೆ, ಕಳೆದ ವರ್ಷ ಮಲೆನಾಡಿನಲ್ಲಿ ಉಗ್ರ ವನ್ಯ ಜೀವಿಗಳಿಗೆ ಬಲಿಯಾದ ಅಮಾಯಕ ಜನರ ಸಂಖ್ಯೆ ಪೆಹಲ್ಗಾಮ್ ಸಾವಿನ ಸಂಖ್ಯೆಗಿಂತ ಹೆಚ್ಚಾಗಿದೆ. ಕೇವಲ ಶೃಂಗೇರಿ ಕ್ಷೇತ್ರದಲ್ಲಿ ವನ್ಯ ಜೀವಿ ದಾಳಿಗೆ 13 ಬಲಿಗಳಾಗಿವೆ ಎಂದು ಹೇಳಲಾಗಿತ್ತಿದೆ. ಇಪ್ಪತ್ತು ಲಕ್ಷದ ಪರಿಹಾರದ ಚಕ್ ವಿತರಣೆ, ನಿರ್ಧಿಷ್ಟ ಉಗ್ರ ನರ ಹಂತಕ ಆನೆ ಹಿಡಿಯುವ ಒಂದು ತಾತ್ಕಾಲಿಕ ಕ್ರಮ, ಸೂತಕದ ಅವಧಿಯಲ್ಲಿ ಉಗ್ರ ಆನೆ ಹಿಡಿದ ಸಾಧನೆಯ ಸಂಭ್ರಮಾಚರಣೆ... ಧಾರವಾಹಿಯ ಯಾವ ಕಂತೂ ಇಲ್ಲಿಂದ ಮುಂದಕ್ಕೆ ಹೋಗುವುದಿಲ್ಲ!!
ವಿಧಾನ ಸಭೆ, ವಿಧಾನ ಪರಿಷತ್‌ನ ಸಭೆಗಳ ರಿಯಾಲಿಟಿ ಷೋನಲ್ಲಿ ಇದೂ ಚರ್ಚೆ ಆಗುವುದಿಲ್ಲ.
140 ಕಿ ಮೀ ವ್ಯಾಪ್ತಿಯಲ್ಲಿ ಬೇಲಿ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಪೇಪರ್‌ನಲ್ಲಿ ಹೇಳಿಕೆ ಕೊಡಲಾಗುತ್ತದೆ. ಅದಕ್ಕೆ 12 ಕೋಟಿ ಬಿಡುಗಡೆ ಮಾಡಿ 7+ ಕಿ ಮೀ ಬೇಲಿಗೆ ಪ್ರಾರಂಭ ಮಾಡಿದ್ದೇ ಸರಕಾರದ ಮಹಾ ಸಾಧನೆ ಆಗುತ್ತದೆ. ಒಂದು ಕಿ.ಮೀ ರೈಲ್ವೇ ಕಂಬಿ ಶಾಶ್ವತ ಬೇಲಿಗೆ ₹.1.25 ಕೋಟಿ ಖರ್ಚಾಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಬೇಕಾಗುವುದು ₹.175 ಕೋಟಿ. 13 ಜನ ನೆಲವಾಸಿಗಳು, ರೈತರು, ಕೃಷಿ ಕಾರ್ಮಿಕರು ಬಲಿ ಆಗಿದ್ದರ ಪರಿಣಾಮದಿಂದ ಯೋಚಿಸಿದರೂ ₹.175 ಕೋಟಿ ಸರಕಾರಕ್ಕೆ ದೊಡ್ಡ ಮೊತ್ತ ಅಲ್ಲ. ಒಂದೇ ಬಾರಿ ಹಣ ಬಿಡುಗಡೆ ಮಾಡಿ, ಪಹಲ್ಗಾಮ್ ದುರಂತದ ನಂತರ ಕೈಗೊಂಡ ಕ್ರಮದಂತೆ, ಸಮರೋಪಾದಿಯಲ್ಲಿ, ಟೈಮ್‌ಲೈನ್‌ನೊಂದಿಗೆ ರೈಲ್ವೇ ಕಂಬಿ ಬೇಲಿ ಮಾಡಿ, ಮಲೆನಾಡಿನಲ್ಲಿ ಒಂದು ಶಾಶ್ವತ ಪರಿಹಾರದೊಂದಿಗೆ ವಿಜಯೋತ್ಸವ ಮಾಡಿ, ಆನೆ ದಾಳಿಯಿಂದ ಮೃತರಾದವರಿಗೆ ನ್ಯಾಯವನ್ನೂ, ಮತ್ತೆ ಆನೆ ದಾಳಿಗೆ ಯಾರೂ ಬಲಿ ಆಗದಂತೆ ದಿಟ್ಟ ಕ್ರಮ ಕೈಗೊಳ್ಳಬಹುದು. ಯೋಜಿತ ಆಗುಂಬೆಯ ಸುರಂಗ ಮಾರ್ಗ ನಿರ್ಮಾಣಕ್ಕೆ ತಗಲುವ ಖರ್ಚು ₹.5,000 ಕೋಟಿ. ಸರಕಾರದ ಪ್ರತಿನಿಧಿಗಳೇ ಹೇಳುವ 140 ಕಿ.ಮೀ ರೈಲ್ವೇ ಕಂಬಿಯ ಸುಭದ್ರ, ಶಾಶ್ವತ ಬೇಲಿಗೆ ಬೇಕಾಗುವುದು 175 ಕೋಟಿ. ಆಗುಂಬೆಯ ಹೃದಯದ ಗುಹೆ ಕೊರೆಯುವುದಕ್ಕೆ ₹.5,000 ಕೋಟಿ ಭರಿಸಲು ತುದಿಗಾಲಿನಲ್ಲಿ ನಿಂತ ಸರಕಾರಕ್ಕೆ ₹.175 ಕೋಟಿ ಹಣ ಭರಿಸುವುದಕ್ಕೆ ಸಾಧ್ಯವಾಗುವಿದಿಲ್ಲವೆ? ಕೇವಲ 12 ಕೋಟಿ ಅನುದಾನ ಬಿಡುಗಡೆಯ ಸುದ್ದಿ ಪ್ರಕಟವಾಗುತ್ತದೆ, ಆಕಡೆ ಆರಡಿ, ಈ ಕಡೆ ಆರಡಿ ಗಿಡಮರಗಳನ್ನು ಕಡಿದು, ಪರಿಸರ ಹಾಳುಗೈದು, ಬಾಳಿಕೆ ಬಾರದ ಟೆಂಟಿಕಲ್ ಬೇಲಿಗೆ ಸರಕಾರ ಹಣ ಸುರಿಯುವುದಕ್ಕೆ ಹೊರಟಿದೆ. ಅದರಲ್ಲೂ ಕಳಪೆ ಕಾಮಗಾರಿಯ ವರದಿ ಸುದ್ಧಿಯಾಗುತ್ತಿದೆ.
ವಿಧಾನ ಸಭೆ, ಪರಿಷತ್ ಸದನಗಳಲ್ಲಿ ಇಂತಹ ಗಂಭೀರ ವಿಚಾರಗಳ ಚರ್ಚೆ ನೆಡೆಯಬೇಕು. ಆದರೆ, ಆಗುತ್ತಿರುವುದೇನು? ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಜೀವ ಹಾರಿ ಹೋದಷ್ಟೇ, ಉಗ್ರ ವನ್ಯಜೀವಿಗಳ ದಾಳಿಗೆ ಜೀವ ಹಾರಿ ಹೋಗುತ್ತಿರುವುದು ಸಮಾನ ಅಲ್ವಾ? ನಿಯಂತ್ರಣಕ್ಕೆ ಅಷ್ಟೇ ಗಂಭೀರ ಕ್ರಮ ಆಗಬೇಕಲ್ವಾ?
ಯುದ್ಧದ ಮೋಡ ಎಲ್ಲ ಕಡೆ ಆವರಿಸಿದೆ. ಅದರ ಪರಿಣಾಮ ಭೀಕರತೆಯನ್ನು ಪಡೆದುಕೊಳ್ತಾ ಇದೆ. ಗ್ಯಾಸ್ ಬೆಲೆ ಏರಿದೆ, ರೈತರ ರಸ ಗೊಬ್ಬರದ ಬೆಲೆ ಏರಲಿದೆ ಮತ್ತು ಪೂರೈಕೆ ಕೊರತೆ ಆಗುವ ಸಾಧ್ಯತೆಯೂ ಇದೆ. ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಅನೇಕ ರೈತರ ಬೆಳೆ ನೆಲ ಕಚ್ಚಿದೆ, ಅಡಿಕೆ ಕೊಳೆ ರೋಗದ ರಾಮಬಾಣ ಮೈಲುತುತ್ತದ ಬೆಲೆ ಗಗನಕ್ಕೆ ಏರ್ತಾ ಇದೆ. ಅಡಿಕೆ ಎಲೆ ಚುಕ್ಕಿ ರೋಗದಿಂದ ಮಲೆನಾಡು ಕರಾವಳಿಯ ತೋಟ ಮಧ್ಯಪ್ರಾಚ್ಯದ ಯುದ್ಧ ಭೂಮಿಯಂತಾಗಿದೆ!!
ಉಹೂಂ, ವಿಧಾನಸೌಧದ ಕಾರಿಡಾರ್‌ನಲ್ಲೂ ಈ ವಿಚಾರಗಳ ಚರ್ಚೆಯಾದ ಸುದ್ಧಿಗಳಿಲ್ಲ!!
ಇಷ್ಟೆಲ್ಲಾ ಆದ್ರೂ... "ರೋಮ್ ಹತ್ತಿ ಉರಿಯುತ್ತಿರುವಾಗ ದೊರೆ ನೀರೋ ಪಿಟೀಲ್ ಬಾರಿಸ್ತಿದ್ದ" ಎಂಬಂತೆ... ಇವತ್ತು ಹಳ್ಳಿಯಿಂದ ವಿಶ್ವದ ಏಳು ಸಮುದ್ರದಾಚೆಯವರೆಗೂ ಎಲ್ಲ ಕಡೆ ಸಮಸ್ಯೆಗಳ ಬೆಂಕಿ ಹತ್ತಿ ಉರಿಯುತ್ತಿರುವಾಗ ಕರ್ನಾಟಕದ ಘನತೆವೆತ್ತ ಜನಪ್ರತಿನಿಧಿಗಳು "ಖಾಸಗೀ IPL ಕ್ರಿಕೆಟ್ ಆಟ ನೋಡಲು ಕುಟುಂಬದ ಸದಸ್ಯರಿಗೆ ಉಚಿತ ಟಿಕೇಟ್ ಕೊಡಿಸಬೇಕು" ಅಂತ ಬಾಯ್ ಬಡ್ಕೋತಿದಾರೆ! ಗಂಭೀರ ಚರ್ಚೆ ಆಗುತ್ತದೆ!
"ಒಂದು IPL ಟಿಕೇಟ್‌ಗೂ ಅಂಗಲಾಚಬೇಕು, ಸ್ಟೇಡಿಯಂನಲ್ಲಿ ಕುಂದ್ರಕೆ ಒಂದು ಅವಕಾಶ ಕೊಡಿಸಿ ಸಭಾಪತಿಗಳೆ. ನಮಗೆ ಅಲ್ಲಿ ಟಿಕೇಟ್ ತಗೊಳಾಕೆ ಹೋದ್ರೆ ಮರ್ಯಾದೆ ಕೊಡ್ತಾ ಇಲ್ಲ, ನಾವು ಕ್ರಿಕೇಟ್ ಆಡಕೆ ಜಾಗ ಕೊಡ್ತೇವೆ, ಆದರೆ IPL ಟಿಕೇಟಿಗೆ ಬೆಳಗ್ಗೆ ಎಂಟಕ್ಕೆ ಬನ್ನಿ, ಏಳ್ ಗಂಟೆಗೆ ಬನ್ನಿ ಅಂತಾರೆ. ಒಂದು ಟಿಕೇಟ್‌ಗೆ ಅಂಗಲಾಚಬೇಕಾಗಿದೆ. ಶಾಸಕರಿಗೂ ಒಂದೇ ಟಿಕೇಟ್ ಕೊಡ್ತಾರೆ, ಅಲ್ಲಿ ಕೂತ್ಕಳಕೆ ಸಪರೇಟ್ ಲಾನ್ ಸಹ ಇರಲ್ಲ. ಶಾಸಕರಿಗೆ ಗೌರವವೇ ಇಲ್ವಾ?" ಅಂತ ವಿಧಾನ ಸಭೆಯಲ್ಲಿ ಶಾಸಕರುಗಳು ಪಕ್ಷಾತೀತವಾಗಿ ಕಿರಿಚಾಡುತ್ತಾರೆ! IPL ಟಿಕೇಟ್ ಬಗ್ಗೆ ಸಭೆಯಲ್ಲಿ ದೀರ್ಘಕಾಲ ಚರ್ಚೆ ನೆಡೆಯುತ್ತೆ! ಇದನ್ನು ಗಂಭೀರವಾಗಿ ಪರಿಗಣಿಸುವ ಸ್ಪೀಕರ್ ಪ್ರತೀ ಶಾಸಕರಿಗೆ ನಾಲ್ಕು ಟಿಕೇಟ್‌ಗೆ ಶಿಫಾರಸ್ ಮಾಡುತ್ತಾ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತಾರೆ. ಅದೂ ಉಚಿತ 'ಗೌರವ' ಪ್ರವೇಶದ ಟಿಕೇಟ್‌ಗಾಗಿ!
ವನ್ಯಜೀವ ಮಾನವ ಸಂಘರ್ಷದ ಬಗ್ಗೆ, ಅಡಿಕೆ ಎಲೆಚುಕ್ಕಿ ರೋಗದ ಬಗ್ಗೆ ಅಕಸ್ಮಾತ್ ಸದನದಲ್ಲಿ ಪ್ರಶ್ನೆ ಕೇಳಿದರೆ, ಸಂಬಂಧಿಸಿದ ಸಚಿವರು ಅಕಸ್ಮಾತ್ ಸದನದಲ್ಲಿದ್ದು ಉತ್ತರ ಹೇಳಲು ಎದ್ದು ನಿಂತರೆ...., ಎದ್ದು ನಿಂತು ಎರಡೂವರೆ ವಾಕ್ಯ ಹೇಳುವ ಮೊದಲೇ ಸಭಾಪತಿಗಳು "ಹಾಂ, ಆಯ್ತು ಆಯ್ತು ಕುತುಕ್ಕೊಳಿ, ಸರಿ ಸರಿ ಆಯ್ತು ಆಯ್ತು...." ಅಂತ ಮಾತಿಗೂ, ಚರ್ಚೆಗೂ ಅವಕಾಶ ಇಲ್ಲದಂತೆ, ವಿಷಯವನ್ನು ಕೇಳಿಸಿಯೂ ಕೊಳ್ಳದೆ, ವಿಷಯಾಂತರ ಮಾಡಿ, ಸದಸ್ಯರ ಬಾಯಿ ಮುಚ್ಚಿಸುವ ಕ್ರಮ ಮಾಡಲಾಗುತ್ತದೆ! ಖಾಸಗೀ ಜೂಜಾಟದಂತಹ, ಬಹುಕೋಟಿ ವ್ಯವಹಾರದ IPL ಕ್ರಿಕೇಟ್ ಟಿಕೇಟ್ ಬಗ್ಗೆ ಚರ್ಚೆ ಆಗುತ್ತದೆ! ಶಾಸಕರ ಹೆಂಡತಿ, ಮೊಮ್ಮಕ್ಕಳ ಕ್ರಿಕೇಟ್ ಹುಚ್ಚಿಗೆ ಉಚಿತ ಟಿಕೇಟ್ ಕೊಡಿಸಲು ಆಧ್ಯತೆಯ ಚರ್ಚೆ ಆಗುತ್ತದೆ.
ಮಹಾಭಾರತದಲ್ಲಿ ದುರ್ಯೋಧನ, ದುಶ್ಯಾಶನರಂತಹ ಪರಮ ನೀಚ ರಾಜಕಾರಣಿಗಳು ಅರಮನೆಯಲ್ಲಿ ಜೂಜಾಟ, ಮೋಜು ಮಸ್ತಿ ಮಾಡುವಾಗಿನ ಅಧಿಕಾರ ವ್ಯವಸ್ಥೆಯಲ್ಲೂ ಸಾಮಾನ್ಯ ಪ್ರಜೆಗಳ ದೈನಂದಿನ ಬದುಕು ಉತ್ಕೃಷ್ಟವಾಗಿತ್ತಂತೆ. ಸಹನೀಯವಾಗಿತ್ತಂತೆ. ಅಧಿಕಾರಿಗಳು ಜನಾನುರಾಗಿ ಆಗಿದ್ದರಂತೆ. ಹಸ್ಥಿನಾವತಿ ಕಲ್ಯಾಣ ರಾಜ್ಯ ಆಗಿತ್ತಂತೆ.
ಆದರೆ ಇವತ್ತು!!?
ಇದೆಂತಹ ದರಿದ್ರ ಪರಿಸ್ಥಿತಿ ಕರ್ನಾಟದಲ್ಲಿ!?
-ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


