ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿವಿಯ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಹ್ಯೂಮ್ಯಾನಿಟಿಸ್, ಸ್ಕೂಲ್ ಆಫ್ ಇಂಜಿನಿಯರಿಂಗ್, ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಹಾಗೂ ಕೇರಳದ ಕುತ್ತಿಕ್ಕಾಣಂನ ಮಾರ್ ಬಸೆಲಿಯೊಸ್ ಕ್ರಿಶ್ಚಿಯನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಸಹಯೋಗದಲ್ಲಿ “ವಲಯಾಕಾರದ ಆರ್ಥಿಕತೆ: ನವೀನತೆ, ನೀತಿ ಮತ್ತು ಕಾರ್ಯಯೋಜಿತ ಬಹುಪ್ರಾಂತ್ಯ ದೃಷ್ಟಿಕೋನಗಳು” ಎಂಬ ವಿಷಯದ ಮೇಲೆ ಎರಡು ದಿನಗಳ ಅಂತರ್ ವಿಭಾಗೀಯ ಅಂತರರಾಷ್ಟ್ರೀಯ ಸಮ್ಮೇಳನ (IDIC 2026) ಎಲ್‌ಸಿಆರ್‌ಐ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಯಾಗಿ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಡೆವಲಪ್ಮೆಂಟ್ (IHD), ನವದೆಹಲಿ ಸಂಸ್ಥೆಯ ಪ್ರೊ. ಡಾ.ಬಲ್ವಂತ್ ಸಿಂಗ್ ಮೆಹ್ತಾ ಅವರು ಸಮ್ಮೇಳನವನ್ನು ಸುಸ್ಥಿರತೆಯ 7 ‘ಆರ್’ಗಳ ಪ್ರತಿನಿಧಿಸುವ ಫಲಕಗಳ ಅನಾವರಣೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಜಾಗತಿಕ ಪರಿಸರ ಸವಾಲುಗಳನ್ನು ಎದುರಿಸುವಲ್ಲಿ ಅಂತರಶಿಸ್ತೀಯ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದರು.
ಪ್ರೊ. ಬಲ್ವಂತ್ ಸಿಂಗ್ ಮೆಹ್ತಾ ಅವರು ಮಾತನಾಡಿ, ಜಾಗತಿಕ ಪರಿಸರ ಸವಾಲುಗಳನ್ನು ಎದುರಿಸಲು ಅಂತರ್ ವಿಭಾಗದ ಸಹಕಾರವು ಬಹುಮುಖ್ಯವಾಗಿದೆ. ಅದಕ್ಕಾಗಿ ವಲಯಾಕಾರದ ಆರ್ಥಿಕತೆ ಮುಖ್ಯವಲ್ಲ, ಬದಲಾಗಿ ಸುಸ್ಥಿರ ನೀತಿಗಳು ಮತ್ತು ನವೀನತೆಯನ್ನು ಮಾರ್ಗದರ್ಶಿಸುವ ಪ್ರಮುಖ ವ್ಯವಸ್ಥೆಯಾಗಿದೆ ಎಂದರು. ಉದ್ಯೋಗದ ವಿಚಾರದಲ್ಲಿ, ಉನ್ನತ ಶಿಕ್ಷಣದಲ್ಲಿ ಭಾಗವಹಿಸುವಿಕೆ ಹೆಚ್ಚಾದರೂ, ಕೇವಲ 17–18% ಯುವಕರು ಮಾತ್ರ ಉದ್ಯೋಗದಲ್ಲಿದ್ದಾರೆ.
ವಲಯಾಕಾರದ ಆರ್ಥಿಕತೆಯ ಉದ್ಯೋಗಗಳು ಮುಖ್ಯವಾಗಿ ದುರಸ್ತಿ ಮತ್ತು ನಿರ್ವಹಣೆ, ಮರುಬಳಕೆ ಮತ್ತು ತ್ಯಾಜ್ಯ ನಿರ್ವಹಣೆ, ಮತ್ತು ಸೆಕೆಂಡ್‌ಹ್ಯಾಂಡ್ ವ್ಯಾಪಾರ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ಹೇಳಿದರು. ವಲಯಾಕಾರದ ಆರ್ಥಿಕತೆ ಕಾರ್ಮಿಕರನ್ನು ಕಡಿಮೆ ಉತ್ಪಾದಕತೆಯ ಕ್ಷೇತ್ರಗಳಿಂದ ಹೆಚ್ಚಿನ ಉತ್ಪಾದಕತೆಯ ಕ್ಷೇತ್ರಗಳಿಗೆ ವರ್ಗಾಯಿಸುವ ಮೂಲಕ ರಚನಾತ್ಮಕ ಪರಿವರ್ತನೆಯನ್ನು ಉತ್ತೇಜಿಸುತ್ತದೆ ಎಂದು ವಿವರಿಸಿದರು. ಇತಿಹಾಸದಲ್ಲಿ ಈ ಬದಲಾವಣೆ ಕೃಷಿಯಿಂದ ಉತ್ಪಾದನಾ ಕ್ಷೇತ್ರಕ್ಕೆ, ನಂತರ ಆಧುನಿಕ ಸೇವೆಗಳ ಕ್ಷೇತ್ರಕ್ಕೆ ಸಂಭವಿಸಿದೆ. ಪ್ರಸ್ತುತ, ಮರುಬಳಕೆ, ದುರಸ್ತಿ ಸೇವೆಗಳು, ತ್ಯಾಜ್ಯ ಸಂಗ್ರಹಣೆ, ನವೀಕರಣ, ಸೆಕೆಂಡ್‌ಹ್ಯಾಂಡ್ ವ್ಯಾಪಾರ ಮತ್ತು ಉತ್ಪಾದನೆಗಳ ಮೂಲಕ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಅವರು ಹೇಳಿದರು. ಜಾಗತಿಕವಾಗಿ ಸುಮಾರು 121 ಮಿಲಿಯನ್ ಕಾರ್ಮಿಕರು ವಲಯಾಕಾರದ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದು, ಇದು ಕೃಷಿಯ ಹೊರಗಿನ ಉದ್ಯೋಗದ 5.8% ಆಗಿದೆ, ಇದರಲ್ಲಿ ಸುಮಾರು 52% ಅನೌಪಚಾರಿಕ ಕ್ಷೇತ್ರದಲ್ಲಿವೆ. ಮಹಿಳೆಯರ ಪಾಲ್ಗೊಳ್ಳುವಿಕೆ ಸುಮಾರು 26% ಇದೆ.
ಎರಡನೇ ಮುಖ್ಯ ಭಾಷಣದಲ್ಲಿ ಸ್ಟಾಕ್‌ಹೋಮ್ ಯುನಿವರ್ಸಿಟಿಯ ಸ್ಟಾಕ್‌ಹೋಮ್ ರೆಸಿಲಿಯನ್ಸ್ ಸೆಂಟರ್‌ನ ಡಾ.ಥಾಮಸ್ ಹಾನ್ “ಪ್ಯಾರಿಸ್ ಒಪ್ಪಂದವನ್ನು ಸಾಧಿಸಲು ಭಾರತದ ಸಂಪನ್ಮೂಲ ಕಾರ್ಯಕ್ಷಮತೆ ಮತ್ತು ಸಮರ್ಪಕತೆ” ಎಂಬ ವಿಷಯದ ಕುರಿತು ಮಾತನಾಡಿದರು. ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸಲು ದೇಶಗಳು ಪ್ರಯತ್ನಿಸುತ್ತಿರುವಾಗ, ಹಸಿರು ಬೆಳವಣಿಗೆಯನ್ನು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಮತ್ತು ಸ್ಥಿರ ಅಭ್ಯಾಸಗಳ ಮೂಲಕ ಸಾಧಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಟರು ಹಾಗೂ ವಿವಿಯ ಸಹ ಕುಲಾಧಿಪತಿ ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಎಸಸ್. ಜೆ. ಮಾತನಾಡಿ, ಜವಾಬ್ದಾರಿಯುತ ಬಳಕೆ ಮತ್ತು ಸುಸ್ಥಿರತೆಯ ಮಹತ್ವವನ್ನು ಹೇಳಿದರು. ಯೂಸ್ ಆಂಡ್ ತ್ರೋ ಸಂಸ್ಕೃತಿಯಿಂದ ಹೊರಬಂದು, ಮರುಬಳಕೆ ಮತ್ತು ಮರುಸಮೀಕ್ಷೆಯನ್ನು ಉತ್ತೇಜಿಸುವ ಸಂಸ್ಕೃತಿಯ ಬದಲಾವಣೆ ಅಗತ್ಯ. ಯುದ್ಧ ಮತ್ತು ಜೀವನ ವೆಚ್ಚಗಳ ಏರಿಕೆಯಿಂದ ಉಂಟಾದ ಜಾಗತಿಕ ಸಂಕಷ್ಟಗಳ ಬಗ್ಗೆ ಚಿಂತನೆ ವ್ಯಕ್ತಪಡಿಸಿದರು. ಇಂತಹ ಸವಾಲುಗಳನ್ನು ಎದುರಿಸಲು ವಲಯಾಕಾರದ ದೃಷ್ಟಿಕೋಣದ ಅಗತ್ಯವಿದೆ ಎಂದು ಹೇಳಿದರು.
ಸಹ ಕುಲಪತಿ ವಂ. ಫಾ. ಮೆಲ್ವಿನ್ ಡಿಕುನ್ಹಾ, ಕಾರ್ಯಕ್ರಮದಲ್ಲಿ ಕುಲಸಚಿವ ಡಾ. ರೊನಾಲ್ಡ್ ನಜರತ್ ಉಪಸ್ಥಿತರಿದ್ದರು, ತಂತ್ರಯೋಜನೆ, ಸಂಶೋಧನೆ ಮತ್ತು ನವೀನತೆ ವಿಭಾಗದ ಪ್ರೊ. ಡಾ. ಜಾಲಿ ಜೋಸ್ ಪ್ರಸ್ವಾವಿಕ ಮಾತುಗಳನ್ನಾಡಿ, ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಡೀನ್ ಡಾ. ರಾಜನಿ ಸುರೇಶ್ ಅತಿಥಿಗಳನ್ನು ಪರಿಚಯಿಸಿದರು.
ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಹ್ಯೂಮಾನಿಟಿಸ್‌ನ ಡೀನ್ ಡಾ. ರೋಸ್ ವೀರಾ ಡಿ’ಸೋಜಾ ಸ್ವಾಗತಿಸಿ, ಸ್ಕೂಲ್ ಆಫ್ ಇಂಜಿನಿಯರಿಂಗ್ ಡೀನ್ ಡಾ. ರುಬನ್ ಎಸ್. ವಂದಿಸಿದರು. ಸ್ಕೂಲ್ ಆಫ್ ಇಂಜಿನಿಯರಿಂಗ್ ಸಹ ಡೀನ್ ಡಾ. ಕ್ಲೆನ್ಸನ್ ಟೋನಿ ನಿರೂಪಿಸಿದರು.
ಈ ಸಮ್ಮೇಳನವು ಮಾರ್ಚ್ 18, 2026ರಂದು ಕೇರಳದ ಪೀರ್ಮೇಡ್‌ನ ಮಾರ್ ಬಸೆಲಿಯೊಸ್ ಕ್ರಿಶ್ಚಿಯನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಮುಂದುವರಿಯಲಿದ್ದು, ತಾಂತ್ರಿಕ ಅಧಿವೇಶನಗಳು, ಪ್ಯಾನಲ್ ಚರ್ಚೆಗಳು ಮತ್ತು ಸಂಶೋಧನಾ ಮಂಡನೆಗಳ ಮೂಲಕ ಅಂತರ್ ವಿಭಾಗೀಯ ಸಂವಾದವನ್ನು ಉತ್ತೇಜಿಸುವುದರ ಜೊತೆಗೆ ಸುಸ್ಥಿರ ಮತ್ತು ವರ್ತುಲಾಕಾರದ ಆರ್ಥಿಕತೆಯ ಅಭ್ಯಾಸಗಳನ್ನು ಪ್ರೋತ್ಸಾಹಿಸಲಾಗುತ್ತದೆ.
ಈ ಸಂದರ್ಭ ಸಮ್ಮೇಳನದ ಸಾರಾಂಶ ಪುಸ್ತಕ ಬಿಡುಗಡೆ ಮಾಡಲಾಯಿತು. ಭಾರತ ಮತ್ತು ವಿದೇಶಗಳಿಂದ ಒಟ್ಟು 84 ಸಂಶೋಧನಾ ಪ್ರಬಂಧಗಳು ತಾಂತ್ರಿಕ ಅಧಿವೇಶನಗಳಲ್ಲಿ ಮಂಡನೆಯಾಗಲಿವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


