ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳು ಸಹಜವೂ ಸರ್ವೇಸಾಮಾನ್ಯವೂ ಆಗಿವೆ. ಈಗ ಹೊಸ ವರ್ಷದ ಆರಂಭವನ್ನು ಸೂಚಿಸುವ ಯುಗಾದಿಯ ಆಗಮನವಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಉಪಯೋಗಿಸುವ ಮಾವಿನ ತೋರಣದ ಮಹತ್ವವನ್ನು ತಿಳಿಯೋಣ.
ಊರ ಹಬ್ಬ, ಜಾತ್ರೆ, ಸಮಾರಂಭಗಳು, ಮನೆಗಳಲ್ಲಿ ನಡೆಯುವ ಮುಂಜಿ, ಮದುವೆ, ನಾಮಕರಣ, ಗೃಹಪ್ರವೇಶ ಇತ್ಯಾದಿ ಎಲ್ಲ ಶುಭಕಾರ್ಯಗಳಲ್ಲಿಯೂ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಚೈತ್ರ ಋತುವಿನಲ್ಲಿ ಚಿಗುರು ಹೊಡೆಯುವ ಮಾವಿನ ಎಲೆಗಳನ್ನು ಬೇವಿನ ಎಲೆಗಳೊಂದಿಗೆ ಸೇರಿಸಿ ಯುಗಾದಿಯಂದು ಬಾಗಿಲಿಗೆ ತೋರಣವಾಗಿ ಕಟ್ಟುತ್ತೇವೆ. ದೇವರ ಮನೆಯ ಬಾಗಿಲಿಗೂ ಅದನ್ನು ಅಲಂಕರಿಸುತ್ತೇವೆ.
ವಿಧಿವಿಧಾನಗಳು ಬೇರೆಬೇರೆ ಇದ್ದರೂ, ಎಲ್ಲ ಕಾರ್ಯಕ್ರಮಗಳಲ್ಲಿಯೂ ಸಾಮಾನ್ಯವಾಗಿ ಕಾಣಿಸುವುದು ಮಾವಿನ ತೋರಣವೇ. ಮನೆಯ ಹೆಬ್ಬಾಗಿಲು, ದೇವಸ್ಥಾನ, ದೇವರ ಕೋಣೆ, ಧಾರ್ಮಿಕ ಮಂಟಪಗಳು—ಎಲ್ಲೆಡೆ ಇದು ತನ್ನ ವಿಶೇಷತೆಯನ್ನು ತೋರಿಸುತ್ತದೆ. ಜೊತೆಗೆ, ಪೂಜಾ ಕಳಶಕ್ಕೂ ಮಾವಿನ ಎಲೆಗಳನ್ನು ಬಳಸುತ್ತಾರೆ.
ಮಹತ್ವ:
ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ಹೇಗೆ ಅಲಂಕಾರಿಕವಾಗಿದೆಯೋ, ಹಾಗೆಯೇ ಬಾಗಿಲಿನ ತೋರಣವೂ ಅಲಂಕಾರಿಕವಾಗಿದ್ದು, ಶುಭಕಾರ್ಯಗಳ ಸಂಕೇತವಾಗಿದೆ. ಇದಕ್ಕಿಂತ ಹೆಚ್ಚಾಗಿ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಅಡಗಿದೆ. ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಇಂಗಾಲದ ಡೈಆಕ್ಸೈಡ್‌ನ್ನು ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುಭ ಸಮಾರಂಭಗಳಲ್ಲಿ ಹೆಚ್ಚಿನ ಜನರು ಒಂದೆಡೆ ಸೇರಿಕೊಳ್ಳುವ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯನ್ನು ಕಡಿಮೆ ಮಾಡಲು ಇದು ಸಹಾಯಕವಾಗುತ್ತದೆ.
ಮಾವಿನ ಎಲೆಗಳು ಇತರೆ ಹಸಿರು ಎಲೆಗಳಿಗಿಂತ ಹೆಚ್ಚು ಕಾಲ ಹಸಿರಾಗಿಯೇ ಇರುತ್ತವೆ. ಮರದಿಂದ ಕಿತ್ತು ತಂದ ನಂತರವೂ ಕೆಲವು ಕಾಲ ದ್ಯುತಿಸಂಶ್ಲೇಷಣ ಕ್ರಿಯೆಯನ್ನು ಮುಂದುವರಿಸುವ ಸಾಮರ್ಥ್ಯ ಹೊಂದಿವೆ. ಆದ್ದರಿಂದಲೇ ಇತರ ಎಲೆಗಳಿಗಿಂತ ಮಾವಿನ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.
ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಹಬ್ಬದ ವಾತಾವರಣ ಮೂಡುತ್ತದೆ. ಇದು ಮನಸ್ಸಿಗೆ ಉತ್ಸಾಹ ಮತ್ತು ಉಲ್ಲಾಸವನ್ನು ನೀಡುತ್ತದೆ. ಹಸಿರಾಗಿರುವ ತೋರಣ ಕಣ್ಣಿಗೆ ಇಂಪನ್ನೂ ತಂಪನ್ನೂ ನೀಡುತ್ತದೆ. ಮನೆಯ ವಾತಾವರಣ ಶುಭ್ರವಾಗಿದ್ದು, ಮನಸ್ಸು ತಾಜಾಗಿಯೂ ಧನಾತ್ಮಕವಾಗಿಯೂ ಯೋಚಿಸಲು ಪ್ರೇರೇಪಿಸುತ್ತದೆ.
ಯುಗಾದಿಯಂದು ಮಾವಿನ ಮತ್ತು ಬೇವಿನ ಎಲೆಗಳನ್ನು ಬಳಸುವುದರಿಂದ ಅವುಗಳ ಔಷಧೀಯ ಗುಣಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗುತ್ತದೆ. ಮನೆಯ ದ್ವಾರದಿಂದ ಬೀಸುವ ಗಾಳಿಯ ಮೂಲಕ ಈ ಗುಣಗಳು ಮನೆಯೊಳಗೆ ಹರಡುತ್ತವೆ ಎಂದು ನಂಬಲಾಗಿದೆ. ಜೊತೆಗೆ, ಕೆಲವು ಕ್ರಿಮಿಕೀಟಗಳನ್ನು ತೋರಣವೇ ಆಕರ್ಷಿಸಿ ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.
ಪ್ರತಿ ಧಾರ್ಮಿಕ ಆಚರಣೆಯ ಹಿಂದೆ ಯಾವುದೋ ವೈಜ್ಞಾನಿಕ ಅರ್ಥ ಅಡಗಿದೆ ಎಂಬುದನ್ನು ನಾವು ಕಾಣಬಹುದು. ಆದ್ದರಿಂದ, ಉಪಯೋಗವಿಲ್ಲದ ಪ್ಲಾಸ್ಟಿಕ್ ತೋರಣಗಳನ್ನು ಬಳಸದಿರಿ. ಮಾವಿನ ತೋರಣ ಕಟ್ಟುವಾಗ ಸ್ಟೆಪ್ಲರ್ ಪಿನ್‌ಗಳ ಬದಲು ಹಂಚಿಕಡ್ಡಿ ಅಥವಾ ಊದಿನಕಡ್ಡಿಯಂತಹ ಸಹಜ ವಸ್ತುಗಳನ್ನು ಬಳಸುವುದು ಆರೋಗ್ಯಕರ.
- ಗಿರಿಜಾ.ಎಸ್.ದೇಶಪಾಂಡೆ ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



