ದೇಶದಲ್ಲಿನ್ನು ಐಪಿಎಲ್ ಹವಾ ಶುರು

Upayuktha
0




ಪಿಎಲ್ ಎಂದರೆ ಈಗ ಯಾರಿಗೆ ತಾನೆ ಗೊತ್ತಿಲ್ಲ.. ಜಗತ್ತಿನ ಪ್ರತಿ ಮೂಲೆ ಮೂಲೆಗೂ ಇದರ ಛಾಪು ಹರಡಿದೆ. 2008 ರಲ್ಲಿ ಆರಂಭವಾದ ಚಿನ್ನದಂತಹ ಈ ಟೂರ್ನಿ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಪುಷ್ಪದ ಸುಗಂಧದಂತೆ ಎಲ್ಲೆಡೆಗೂ ಪಸರಿಸುತ್ತಿದೆ. ಹಾಗೆಯೆ ಶ್ರೀಮಂತವಾಗುತ್ತಲೇ ಸಾಗಿದೆ.   ಇದು ಅನೇಕ ಕ್ರಿಕೆಟಿಗರ ಬದುಕಿನ ದಿಕ್ಕನ್ನೇ ಬದಲಿಸಿತು. ಅಲ್ಲದೆ ಭಾರತವನ್ನು ಕ್ರಿಕೆಟ್‌ನ  ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿದೆ.


ಟೂರ್ನಿ ಪ್ರಾರಂಭವಾದ ಸಂದರ್ಭದಲ್ಲಿ ಇದು ಈ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಬಹುಶಃ ಯಾರೂ ಭಾವಿಸಿರಲಿಲ್ಲ. ಆದರೆ ಇಂದು ಯಶಸ್ಸಿನ ಪರಾಕಾಷ್ಟೆಯನ್ನೇರಿದ್ದು ಇತಿಹಾಸ. ಇದಕ್ಕೆ ಸಾಕ್ಷಿ ಎಂದರೆ ಬ್ರ್ಯಾಂಡ್ ಮೌಲ್ಯ. 2025 ರಲ್ಲಿ ಐಪಿಎಲ್ ನ ಬ್ರ್ಯಾಂಡ್ ಮೌಲ್ಯ 76,100 ಕೋಟಿ ರೂಪಾಯಿಗಳಾಗಿತ್ತು. ಈ ವರ್ಷ ಇದು ಇನ್ನೂ ಅಧಿಕವಾಗುವ ಸಾಧ್ಯತೆ ಇದೆ. ಏಕೆಂದರೆ ಟೂರ್ನಿಯನ್ನು ಭಾರತದ ಜನರು ಮಾತ್ರವಲ್ಲದೆ ವಿಶ್ವದ ಹೆಚ್ಚಿನ ದೇಶದ ಜನರು ನೋಡಿ ಆನಂದಿಸುತ್ತಾರೆ. ಹಾಗಾಗಿ ನಮ್ಮ ದೇಶದ ಯುವ ಕ್ರಿಕೆಟಿಗರು ಮಾತ್ರವಲ್ಲದೆ ವಿದೇಶಿ ಆಟಗಾರರೂ ಟೂರ್ನಿಯಲ್ಲಿ ಆಡಲು ತುದಿಗಾಲಲ್ಲಿ  ಕಾಯುತ್ತಿರುತ್ತಾರೆ.  ಇದು ಟೂರ್ನಿಯ ಸ್ಪರ್ಧಾತ್ಮಕತೆಯನ್ನು ತೋರಿಸುತ್ತದೆ. ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ, ಖುಷಿಯ ವಿಷಯವೆಂದರೆ ಖಂಡಿತ ತಪ್ಪಲ್ಲ. 


ಈ ಬಾರಿಯ ಸೀಸನ್ ಆರ್ ಸಿಬಿ ಅಭಿಮಾನಿಗಳೆಲ್ಲರಿಗೂ ಬಹು ವಿಶೇಷವಾದದ್ದು. ಏಕೆಂದರೆ ನಮ್ಮ ತಂಡ ಈ ಸಾರಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ.


ಈ ಕ್ಷಣಕ್ಕಾಗಿ 18 ವರ್ಷ ಚಾತಕ ಪಕ್ಷಿ ಯಂತೆ ಅಭಿಮಾನಿಗಳು ಕಾದಿದ್ದರಿಂದ ಇದು ಸಂತೋಷದ ಸಿಹಿ ಘಳಿಗೆಯಾಗಿದೆ. ಹೀಗಾಗಿ ಆರ್ ಸಿಬಿಯ ಜೆರ್ಸಿಯ ಎದೆಭಾಗದಲ್ಲಿ ತಂಡದ ಲಾಂಛನದ ಮೇಲೆ ಒಂದು ಸ್ಟಾರ್ ಇರಲಿದೆ. ಇದಲ್ಲದೆ ತೋಳಿನ ಭಾಗದಲ್ಲಿ 'ಗೋಲ್ಡನ್ ಬ್ಯಾಡ್ಜ್' ಇರುವ ವಿಶೇಷ ಜೆರ್ಸಿಯಲ್ಲಿ ಆಡಲಿದೆ. ಈ ಬಾರಿ ಟ್ರೋಫಿಯನ್ನು ಉಳಿಸಿಕೊಳ್ಳುವ ಹೊಸ ಸವಾಲು ಕೂಡ ತಂಡದ ಮೇಲಿದೆ.


ಎಲ್ಲಾ ತಂಡಗಳು ಹೊಸ ಜೆರ್ಸಿ, ಆಟಗಾರೊಂದಿಗೆ ಮಾತ್ರವಲ್ಲದೆ ಹೊಸ ಹುರುಪಿನಲ್ಲಿ ಈ ಬಾರಿ ಮೈದಾನಕ್ಕಿಳಿಯಲಿವೆ. ಕೆಲವು ಪ್ರಮುಖ ಆಟಗಾರರು ಆಡುವ ತಂಡಗಳು ನಾಯಕರು ಬದಲಾಗಿದೆ. ಎಲ್ಲಾ ತಂಡಗಳು ಬಲಿಷ್ಠವಾಗಿ, ಸಮತೋಲಿತವಾಗಿ ಕಾಣುತ್ತಿದೆ. ಅದಲ್ಲದೆ ಗಾಯದ ಸಮಸ್ಯೆಯಿಂದ ಕೆಲವು ಪ್ರಮುಖ ಆಟಗಾರರು ಆಡುತ್ತಿಲ್ಲ. ಪ್ರತಿ ತಂಡಗಳು ಹೊಸ ರಣನೀತಿಯನ್ನು ರೂಪಿಸಿ ಟ್ರೋಫಿಯನ್ನು ತಮ್ಮ ಮೂಡಿಗೇರಿಸಿಕೊಳ್ಳಲು ಕಾಯುತ್ತಿವೆ. ಹಾಗಾಗಿ ಸ್ಟೇಡಿಯಮ್ ಗಳು ಹೌಸ್ ಫುಲ್ ಆಗುವುದಂತೂ ಗ್ಯಾರಂಟಿ. ಟೂರ್ನಿಯು ಬಹಳ ರಣ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸುವುದರಲ್ಲಿ ಸಂಶಯವಿಲ್ಲ. 


ದೇಶದಲ್ಲಿ ಇನ್ನು ಎರಡು ತಿಂಗಳು ಪೂರ್ತಿ ಐಪಿಎಲ್ ಹವಾವೇ ಇರಲಿದೆ. ಪ್ರತಿ ಗಲ್ಲಿ ಗಲ್ಲಿಗಳಲ್ಲಿ, ಪಟ್ಟಣ, ಹಳ್ಳಿಗಳ ಮನೆ- ಮನಗಳಲ್ಲಿ ಕೇವಲ ಐಪಿಎಲ್ ಬಗ್ಗೆಯೇ ಚರ್ಚೆ. ಯಾವುದೇ ವಯೋಮಾನದ ಭೇದವಿಲ್ಲದೆ ಹೆಚ್ಚಿನ ಎಲ್ಲರೂ ಕ್ರಿಕೆಟನ್ನು ಆಸ್ವಾದಿಸುವವರೇ ಹಾಗೂ ಆರಾಧಿಸುವವರೇ.

ಈ ಬಾರಿಯ ಐಪಿಎಲ್ ಯಶಸ್ವಿಯಾಗಿ ಸಾಗಲಿ. 'ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು' ಎಂಬತೆ ಹಿರಿಯ ಆಟಗಾರರೊಂದಿಗೆ ಹೊಸ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬಂದು ಮಿಂಚಲಿ, ಮುಂದೆ ಭಾರತೀಯ ಕ್ರಿಕೆಟ್ ನ ಆಸ್ತಿಯಾಗಲಿ ಎಂದು ಆಶಿಸೋಣ. 


- ವರುಣ ಕೃಷ್ಣ. ಬಿ.

ಪತ್ರಿಕೋದ್ಯಮ ವಿದ್ಯಾರ್ಥಿ 

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top