ಸುರಪುರ: 'ಗಮಕ ಕಲೆಯು ಕನ್ನಡ ಸಾಹಿತ್ಯ ಕಾವ್ಯಗಳನ್ನು ರಾಗ, ಭಾವ ಮತ್ತು ಅರ್ಥಪೂರ್ಣವಾಗಿ ವಾಚಿಸುವ ತುಂಬಾ ಪ್ರಾಚೀನವಾದ ಗಮಕ ಕಲೆಯು ತುಂಬಾ ವಿಶಿಷ್ಟವಾದ ಸಾಂಪ್ರದಾಯಿಕ ಕಲೆಯಾಗಿದೆ. ಇದು ಈಗ ಉತ್ತರ ಕರ್ನಾಟಕ ಭಾಗದಲ್ಲಿ ತುಂಬಾ ಕಡಿಮೆಯಾಗುತ್ತಿದೆ. ಇದನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಬೇಕು' ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು ವಿಭಾಗೀಯ ಪ್ರತಿನಿಧಿ ಡಾ.ಲಕ್ಷ್ಮಿಕಾಂತ ಮೊಹರೀರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಸುರಪುರ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಯುಗಾದಿ ನವ ಸಂವತ್ಸರದ ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಋಗ್ವೇದದಲ್ಲಿ ಗಮಕದ ಬಗ್ಗೆ ಉಲ್ಲೇಖವನ್ನು ಕಾಣುತ್ತೇವೆ. ಹಿಂದಿನ ಕಾಲದಲ್ಲಿ ಗಮಕ ಕಲೆಗೆ ತುಂಬಾ ಪ್ರಾಮುಖ್ಯತೆ ಇತ್ತು. ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರು ಲವ-ಕುಶರಿಂದ ಗಮಕ ಕಲೆಯಲ್ಲಿ ರಾಮಾಯಣವನ್ನು ಹಾಡಿಸಿದರು' ಎಂದು ಅವರು ವಿವರಿಸಿದರು.
ದೇವಾಪುರದ ಲಕ್ಷ್ಮೀಶ ಕವಿಯ ಜೈಮಿನಿ ಭಾರತ, ಮಳಖೇಡದ ರಾಷ್ಟ್ರಕೂಟರ ಶ್ರೀಹರ್ಷ ರಚಿಸಿದ ಕವಿರಾಜ ಮಾರ್ಗದಲ್ಲಿ ಗಮಕದ ಉಲ್ಲೇಖವಿದೆ. ಇತ್ತೀಚೆಗೆ ಕನ್ನಡ ಭಾಷೆಯನ್ನು ಬಾಲಿಷತನ ಭಾಷೆಯನ್ನಾಗಿ ಬಳಸಿ ಎರಡನೇ ದರ್ಜೆ ಆಗಿ ಮಾಡುತ್ತಿದ್ದೇವೆ. ಇದರಿಂದ ಕನ್ನಡ ಭಾಷೆಯ ಸೌಂದರ್ಯ ಮತ್ತು ಸೊಗಡು ಹೊರಟು ಹೋಗುತ್ತಿದೆ. ಕನ್ನಡ ಭಾಷೆಯನ್ನು ಅರ್ಥಪೂರ್ಣವಾಗಿ ಬಳಸಬೇಕು. ಹಿಂದೆ ಸುರಪುರದಲ್ಲಿ ಕೂಡಾ ಗಮಕ ಕಲೆಯನ್ನು ಉಚ್ಭ್ರಾಯ ಸ್ಥಿತಿಯಲ್ಲಿತ್ತು. ಅಷ್ಟಾವಧಾನಿ ನರಸಿಂಹಶಾಸ್ತ್ರಿಗಳು ಹಾಗೂ ಇತರ ಅನೇಕ ಗಮಕಿಗಳು ಈ ಭಾಗದಲ್ಲಿ ಇದ್ದರೆಂದು ಅವರು ಹೇಳಿದರು. ಸುರಪುರ ತಾಲೂಕ ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಸುರಪುರದಲ್ಲಿ ಕಲೆ ಸಾಹಿತ್ಯವನ್ನು ಉಳಿಸಿ ಬೆಳೆಸಲು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾಗಿದ್ದ ಮಾಜಿ ಸಚಿವ ದಿ. ರಾಜಾ ಮದನಗೋಪಾಲ ನಾಯಕರ ಕೊಡುಗೆಯನ್ನು ಸ್ಮರಿಸಿದರು.
ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿ,'ಗಮಕ ಕಲೆ ಒಂದು ಭಾರತೀಯ ಪರಂಪರೆಯ ಶ್ರೇಷ್ಠತೆಯ ಔನ್ನತ್ಯವಾಗಿದೆ. ಅದನ್ನು ಉಳಿಸಿ ಬೆಳೆಸುವುದು ಹಾಗೂ ನಮ್ಮ ಮಕ್ಕಳಿಗೂ ಕಲಿಸುವುದು ಬಹಳ ಮುಖ್ಯವಾಗಿದೆ. ಆ ದಿಸೆಯಲ್ಲಿ ನಾವೆಲ್ಲಾ ಸೇರಿ ಪ್ರಯತ್ನಿಸೋಣ. ಮುಂದಿನ ದಿನಗಳಲ್ಲಿ ರುಕ್ಮಾಪುರದಲ್ಲಿ ಗಮಕದ ಒಂದು ದಿನದ ಜಿಲ್ಲಾ ಸಮ್ಮೇಳನ ಮಾಡಲು ನಿವೃತ್ತ ಎಸ್ಪಿ ಸಿ ಎನ್ ಭಂಡಾರೆ ಅವರೊಂದಿಗೆ ಸಮಾಲೋಚಿಸಲಾಗುತ್ತಿದೆ. ಜೈಮಿನಿ ಭಾರತದ ಕರ್ತೃ ಮಹಾಕವಿ ಲಕ್ಷ್ಮೀಶ ಸುರಪುರ ತಾಲೂಕಿನ ದೇವಪುರದವನೇ ಹೊರತು ಚಿಕ್ಕಮಗಳೂರಿನ ದೇವನೂರಿನವನಲ್ಲ. ಈ ಬಗ್ಗೆ ಖ್ಯಾತ ಸಂಶೋಧಕ ಸೀತಾರಾಮ ಜಾಗೀರದಾರರು ಸಾಕ್ಷಿ ಸಮೇತ ಹೇಳಿದ್ದಾರೆ. ಅದನ್ನು ಪುಸ್ತಕ ರೂಪದಲ್ಲಿಯೂ ಪ್ರಕಟಿಸಿದ್ದಾರೆ. ಈ ಬಗ್ಗೆ ನನಗೂ ಹಾಗೂ ಹಿರೇಮಗಳೂರ ಕಣ್ಣನ್ ಅವರಿಗೂ ಗಂಭೀರವಾದ ಚರ್ಚೆಗಳಾಗಿವೆ' ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಸಗರ ಹೈಸ್ಕೂಲ ಮುಖ್ಯ ಶಿಕ್ಷಕ ಶ್ರೀಕಾಂತ ಮಾರ್ಗೆಲ್ ಮಾತನಾಡಿದರು. ಗಮಕ ಕಲಾ ಪರಿಷತ್ತಿನ ಸುರಪುರ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಉದ್ಧಾರ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ,'ನಾವು ಈ ಸಂದರ್ಭದಲ್ಲಿ ವಿಶಿಷ್ಠ ಸಾಧನೆಗೈದ ಐವರು ಸಾಧಕರನ್ನು ಸನ್ಮಾನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಗಮಕ ಕಲೆಯನ್ನು ಪರಿಚಯಿಸುತ್ತೇವೆ' ಎಂದು ಹೇಳಿದರು.
ಸೋಮರೆಡ್ಡಿ ಮಂಗಿಹಾಳ, ಜಾಗೃತಿ ಸಮಾಜ ಸೇವಾ ಸಂಘದ ಚಂದ್ರಕಾಂತ ಮಾರ್ಗೆಲ್, ಸಜ್ಜನ್ ಕುಮಾರ ಕಲ್ಯಾಣಶೆಟ್ಟಿ, ವೆಂಕಟೇಶ್ವರ ಸುರಪುರಕರ, ಪ್ರಕಾಶ ಬಣಗಾರ, ಮಹ್ಮದ ಇಸಾಕ್, ದತ್ತು ಜಾಗೀರದಾರ, ರಾಘವೇಂದ್ರ ಭಕ್ರಿ, ಮೆಹೇಂದ್ರ ಅಂಗಡಿ, ಶಕುಂತಲಾ ಜಾಲವಾದಿ, ದ್ರಾಕ್ಷಾಯಣಿ, ರಾಜು ಪುಲ್ಸೆ, ಶ್ರೀಶೈಲ ಯಂಕಂಚಿ, ಚನ್ನಬಸಪ್ಪ ಹೂಗಾರ, ಮಲ್ಲಣ್ಣ ಕಮತಗಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಹರಿ ಆದೋನಿ ಅವರು ಸುಶ್ರಾವ್ಯವಾಗಿ ಮಹಾಕವಿ ಲಕ್ಷ್ಮೀಶ ಹಾಗೂ ಕುಮಾರವ್ಯಾಸನ ಪದ್ಯಗಳನ್ನು ಗಮಕ ಶೈಲಿಯಲ್ಲಿ ವಾಚಿಸಿ, ವ್ಯಾಖ್ಯಾನಿಸಿದರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿರುವ ದೇವಿಂದ್ರಪ್ಪ ಬೋವಿ ಕಕ್ಕೇರಾ (ಕೃಷಿ), ರಸ್ತಾಪುರದ ಮುಖ್ಯ ಶಿಕ್ಷಕಿ ವಾಣಿಶ್ರೀ, ಗಾಯತ್ರಿ ಕೊಂಗಿ, ಭೀಮರಾಯ ಗೋನಾಲ (ಶಿಕ್ಷಣ) ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಕವಿಗೋಷ್ಠಿ
'ಕಾವ್ಯ ಎನ್ನುವುದು ಒಂದು ಸುಂದರ ಅಭಿವ್ಯಕ್ತಿಯಾಗಿದೆ. ಪ್ರಾಚೀನ ಕಾಲದಿಂದಲೂ ಕಾವ್ಯಕ್ಕೆ ಒಂದು ವಿಶಿಷ್ಠ ಸ್ಥಾನವಿದೆ. ಹಳೆಗನ್ನಡ ಹೊಸಗನ್ನಡದ ಕಲಿಗಳು ಕವಿತೆ ರಚಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ' ಎಂದು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕವಯಿತ್ರಿ ಪಾರ್ವತಿ ದೇಸಾಯಿ ಹೇಳಿದರು.
'ಕಾವ್ಯದಂಥ ಸಂಪದ್ಭರಿತ ವಸ್ತು ಜಗತ್ತಿನಲ್ಲಿ ಬೇರಾವುದೂ ಇಲ್ಲ. ಪಂಪ ರನ್ನರಿಂದ ಹಿಡಿದು ಕುವೆಂಪು ಬೇಂದ್ರೆ ಲಂಕೇಶರವರೆಗೂ ನಾವು ಇದನ್ನು ನೋಡಬಹುದು. ಕಾವ್ಯ ಬೆಳಕು ಇದ್ದ ಹಾಗೆ' ಎಂದು ಆಶಯ ನುಡಿಯಲ್ಲಿ ಲೇಖಕಿ ಕು.ವಿಶ್ವಪೂರ್ವ ಸತ್ಯಂಪೇಟೆ ಹೇಳಿದರು.
ಕವಿಗಳಾದ ನಬೀಲಾಲ ಮಕಾನದಾರ, ಎಚ್ ರಾಠೋಡ, ವಿದ್ಯಾಕುಮಾರ ಬಡಿಗೇರ, ಸಾಹೇಬರೆಡ್ಡಿ, ಶರಣಪ್ಪ ಬಾದ್ಯಾಪುರ, ವೆಂಕಣ್ಣ ಯಾದವ, ಹಣಮಂತ ಕನ್ನಳ್ಳಿ, ಸುರೇಶ ಶಿರೋಳಮಠ, ಈಶ್ವರ ಶಹಪುರಕರ, ರೇವಣಸಿದ್ಧ ಕಾಮನಟಗಿ ಮೊದಲಾದವರು ಕವನ ವಾಚನ ಮಾಡಿದರು.
ಕು. ಶಿವಲೀಲಾ ಉದ್ಧಾರ ಪ್ರಾರ್ಥಿಸಿದರು, ನಿಂಗಣ್ಣ ಗೋನಾಲ ಸ್ವಾಗತಿಸಿದರು, ದೇವು ಹೆಬ್ಬಾಳ ನಿರೂಪಿಸಿದರು, ಶಿವಕುಮಾರ ಕಮತಗಿ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


