ಬೆಂಗಳೂರು, ಮಾರ್ಚ್ 6: ಕರ್ನಾಟಕ ಬಜೆಟ್ 2026–27ರಲ್ಲಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳನ್ನು ಬಲಪಡಿಸಲು ಸರ್ಕಾರ ತೋರಿಸಿರುವ ಬದ್ಧತೆಯನ್ನು ಎಸ್‌ಡಿಎಂಇ ಸೊಸೈಟಿ (ಆರ್), ಬೆಂಗಳೂರಿನ ನಿರ್ದೇಶಕರಾದ ಶ್ರೇಯಸ್ ಕುಮಾರ್ ಡಿ ಸ್ವಾಗತಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕ ಶಾಲಾ ಶಿಕ್ಷಣವನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ನೀಡಿರುವ ಒತ್ತಡವು ಸಮಗ್ರ ಹಾಗೂ ಸಮಾನತೆಯ ಬೆಳವಣಿಗೆಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಬೆಂಬಲವು ಯುವಜನತೆ ಜಾಗತಿಕ ಸವಾಲುಗಳನ್ನು ಎದುರಿಸಲು ಅಗತ್ಯವಾದ ಕೌಶಲ್ಯ ಹಾಗೂ ಸಾಮರ್ಥ್ಯಗಳನ್ನು ಹೊಂದಲು ಸಹಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಅಧ್ಯಯನ ವಾತಾವರಣವನ್ನು ರೂಪಿಸುವುದು ಹಾಗೂ ಅವರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದಕ್ಕಾಗಿ ಕೈಗೊಳ್ಳಲಾಗಿರುವ ಹೂಡಿಕೆಗಳು ಜ್ಞಾನಾಧಾರಿತ ಸಮಾಜ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಸಂಪ್ರದಾಯ ಮತ್ತು ನವೀನತೆಯ ನಡುವೆ ಸಮತೋಲನ ಸಾಧಿಸುವ ದೃಷ್ಟಿಕೋನ ಈ ಬಜೆಟ್‌ನಲ್ಲಿ ಪ್ರತಿಬಿಂಬಿತವಾಗಿದೆ ಎಂದು ಶ್ರೇಯಸ್ ಕುಮಾರ್ ಡಿ ತಿಳಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿಯ ಪಯಣದಲ್ಲಿ ಶಿಕ್ಷಣವನ್ನು ಕೇಂದ್ರಬಿಂದುವಾಗಿ ಪರಿಗಣಿಸಿರುವ ಸರ್ಕಾರದ ಪ್ರಯತ್ನವನ್ನು ಅವರು ಪ್ರಶಂಸಿಸಿದರು.

