ನಾನೂ ಕಾಫಿರ ಕೃತಿ ಲೋಕಾರ್ಪಣೆ
ಬೆಂಗಳೂರು: ಭಾರತದಲ್ಲಿ ಭಾರತವನ್ನು ವಿರೋಧಿಸುವುದು ತಪ್ಪೇ ವಿನಃ ಸೆಕ್ಯುಲರಿಸಂ ಅನ್ನು ವಿರೋಧಿಸುವುದು ಅಪರಾಧವಲ್ಲ ಎಂದು ಕವಿ, ಕಾದಂಬರಿಕಾರ ಡಾ. ಜಿ.ಬಿ. ಹರೀಶ್ ಹೇಳಿದರು.
ಸ್ವರಾಷ್ಟ್ರ ಪ್ರಕಾಶನದ ವತಿಯಿಂದ ಬನಶಂಕರಿಯ ಸುಚಿತ್ರ ಸಿನಿಮಾ ಅಕಾಡೆಮಿಯಲ್ಲಿ ಬುಧವಾರ ಆಯೋಜಿಸಿದ್ದ 'ನಾನೂ ಕಾಫಿರ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯನೊಬ್ಬ ಸೆಕ್ಯಲರಿಸಂನ್ನು ವಿರೋಧಿಸಬಹುದು, ಆದರೆ ರಾಷ್ಟ್ರವನ್ನು ವಿರೋಧಿಸುವವ ಭಾರತದ ಪ್ರಜೆಯಾಗಲಾರ. ಆ ಹಕ್ಕು ಯಾರಿಗೂ ಇಲ್ಲ. ಅಂಬೇಡ್ಕರರು RSS ಶಾಖೆಗೆ ಬಂದಾಗ “ನನ್ನ ಕನಸಿನ ಭಾರತವು ಇಲ್ಲಿ ಸಾಕಾರವಾಗುತ್ತಿದೆ ಎಂದು ಡಾ. ಹೆಗಡೆವಾರರನ್ನು ಅಭಿನಂದಿಸಿದ್ದರು. ಇಸ್ಲಾಂ, ಜಗತ್ತಿನ ಶತ್ರು ಎಂದು ಅಂಬೇಡ್ಕರರು ಹೇಳಿದ್ದರು.
“ನಾನೂ ಕಾಫಿರ” ಇದು ಡಾ. ಅಂಬೇಡ್ಕರ್ ಕುರಿತಾದ ಸಂಶೋಧನಾ ಗ್ರಂಥ, ಅವರ ಅಸಲಿ ಚಿಂತನೆಗಳನ್ನು ಅನಾವರಣ ಮಾಡುತ್ತದೆ. ಹಿಂದೂಗಳಿಗೆ ಶತ್ರುಬೋಧೆಯನ್ನು ಮಾಡುತ್ತದೆ. ಅಂಬೇಡ್ಕರರ ಬಗ್ಗೆ ಸೃಷ್ಟಿಯಾಗಿರುವ ಭ್ರಮೆಯ ಕವಚವನ್ನು ಸರಿಸುತ್ತದೆ. ಅಂಬೇಡ್ಕರರು ಇಸ್ಲಾಂನ್ನು ಯಾಕೆ ವಿರೋಧಿಸಿದರು? ಹೇಗೆ ವಿರೋಧಿಸಿದರು? ಎಂಬ ದಾಖಲೆ ಒದಗಿಸುತ್ತದೆ ಎಂದರು.
ನಾಟಕಕಾರ ಪ್ರಕಾಶ ಬೆಳವಾಡಿ ಮಾತನಾಡಿ: ಅಂಬೇಡ್ಕರರನ್ನು ಬೇರೆ ಆಯಾಮದಲ್ಲಿ ನೋಡುವ ಕೆಲಸವಾಗಬೇಕು. ಆ ಕಾಲಘಟ್ಟದಲ್ಲಿ ಜಾಗತಿಕವಾಗಿ ಚಿಂತಿಸಬಲ್ಲ ಏಕೈಕ ವ್ಯಕ್ತಿ ಅಂಬೇಡ್ಕರ್ ಆಗಿದ್ದರು. ಈಗ ಅಂಬೇಡ್ಕರರನ್ನು ಜಾತಿ ರಾಜಕೀಯ “identity politics ನಿಂದ ಬಿಡುಗಡೆಗೊಳಿಸಬೇಕು. ಅಂಬೇಡ್ಕರ್ ಅವರ ಚಿಂತನೆಗಳನ್ನು ಅವರ ಅನುಯಾಯಿಗಳೇ ಸೋಲಿಸಿದ್ದಾರೆ, ಅವರಿಗೆ ನಿಜವಾದ ಅಂಬೇಡ್ಕರ್ ಚಿಂತನೆಗಳ ಬಗ್ಗೆ ಗೊತ್ತೇ ಇಲ್ಲ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ, ಭಾರತದಲ್ಲಿ ವೈಚಾರಿಕ ತುರ್ತು ಪರಿಸ್ಥಿತಿ ಈಗಲೂ ಇದೆ! ಅದರ ವಿರುದ್ಧ ಈ ಕೃತಿಯ ಹೋರಾಟ. ಸತ್ಯ ಹೇಳಿದರೆ ಅಪಾಯ ಎನ್ನುವ ಪರಿಸ್ಥಿತಿ ಬದಲಾಗಬೇಕು ಅಂಬೇಡ್ಕರರ ಯಾವ ವಿಚಾರ ಹೇಳಬೇಕು, ಯಾವುದನ್ನು ಮುಚ್ಚಿಡಬೇಕು ಎಂಬ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಈ ಪುಸ್ತಕ ಷಡ್ಯಂತ್ರವನ್ನು, ಅದನ್ನು ಮಾಡಿದವರನ್ನೂ ಅನಾವರಣಗೊಳಿಸುತ್ತದೆ. ಇಂತಹ ಪುಸ್ತಕವನ್ನು ರಾಜಾರೋಷವಾಗಿ ಓದುವ, ಅದರ ಬಗ್ಗೆ ಬರೆಯುವ ಧೈರ್ಯ ಸಮಾಜದಲ್ಲಿ ಹೆಚ್ಚಬೇಕು ಎಂದರು.
ಕೃತಿಯ ಲೇಖಕ ಡಾ. ಸುಧಾಕರ ಹೊಸಳ್ಳಿ ಮಾತನಾಡಿ, ಈ ಕೃತಿಯು ಅಕ್ಷರ ಮಾರುವ ದಲ್ಲಾಳಿಗಳ ವಿರುದ್ಧ ಹೋರಾಟ. ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಸೃಷ್ಟಿಸಿರುವ ‘ನರೆಟಿವ್’ ಬದಲಾಗಾಬೇಕು. ಅವರ ಸಮಗ್ರ ಚಿಂತನೆಗಳು ಸಮಾಜದ ವಿವಿಧ ಸ್ಥರದ ಜನರಿಗೆ ತಲುಪಬೇಕು. ಭಾರತದ ಅಭ್ಯುದಯಕ್ಕಾಗಿ ಸಂವಿಧಾನವಿದೆ. ಅಂಬೇಡ್ಕರರು ಸಮ್ಮತಿಸಿದ ಸಂವಿಧಾನದಲ್ಲಿ “ಸೆಕ್ಯುಲರ್ ಹಾಗೂ ಸೋಶಿಯಲಿಸ್ಟ್” ಪದಗಳು ಇರಲೇ ಇಲ್ಲ ಎಂದರು. ಇಂದು ಸಂವಿಧಾನವನ್ನೇ ಸೋಲಿಸುವ ಯತ್ನವಾಗುತ್ತಿದ್ದು, ಸಂವಿಧಾನಕ್ಕಿಂತ ಶರೀಯತ್ ಮೇಲು ಎಂದು ಸಾರ್ವಜನಿಕವಾಗಿ ಘೋಷಿಸುವ ದಾರ್ಷ್ಟ್ಯ ಬೆಳೆದಿದೆ. ಇದು ಬದಲಾಗಬೇಕು ಎಂದರು.
ವರದಿ: ವಾಣಿ ಭಟ್ ಹಂಡ್ರಮನೆ

