ಉಜಿರೆ: ಉಜಿರೆಯ ಬ್ರಹ್ಮಕಲಶೋತ್ಸವದ ಅಂಗವಾಗಿ ಆರಂಭವಾದ ಹೊರೆಕಾಣಿಕೆ ಸಂಗ್ರಹ ಕಾರ್ಯವು ಮೊದಲನೇ ದಿನವೇ ಸಮೃದ್ಧಿ ಹಸಿರುವಾಣಿ ಉಗ್ರಾಣವನ್ನು ಸಂಪೂರ್ಣವಾಗಿ ಭರ್ತಿಗೊಳಿಸುವಷ್ಟು ಸ್ಪಂದನೆ ಪಡೆದಿದೆ. ಬ್ರಹ್ಮಕಲಶೋತ್ಸವದ ಅವಧಿಯಲ್ಲಿ ನಡೆಯುವ ಅನ್ನಸಂತರ್ಪಣೆಗೆ ಬಳಸಲಾಗುವ ಹೊರೆಕಾಣಿಕೆ ವಸ್ತುಗಳನ್ನು ಸಂಗ್ರಹಿಸಲು ಸಜ್ಜಾಗಿರುವ ಉಗ್ರಾಣ ಇದೀಗ ವಿವಿಧ ಧಾನ್ಯಗಳು, ತರಕಾರಿ ಹಾಗೂ ಇತರಆಹಾರ ಸಾಮಗ್ರಿಗಳಿಂದ ತುಂಬಿಕೊಂಡಿದೆ.
ಮಾರ್ಚ್ 3ರಿಂದ 11ರವರೆಗೆ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ನಿಮಿತ್ತ ಹೊರೆಕಾಣಿಕೆ ಸಂಗ್ರಹ ಕಾರ್ಯವನ್ನು ಮಾರ್ಚ್ 2ರಿಂದ 10ರವರೆಗೆ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 3ರಂದು ಚಂದ್ರಗ್ರಹಣ ಇರುವ ಕಾರಣ ಆ ದಿನ ಹೊರೆಕಾಣಿಕೆ ಸ್ವೀಕಾರ ಇರುವುದಿಲ್ಲ ಎಂದು ಸಮಿತಿ ತಿಳಿಸಿದೆ.
ಮೊದಲ ದಿನವೇ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದದೊಡ್ಡ ಮಟ್ಟದಲ್ಲಿ ಹೊರೆಕಾಣಿಕೆ ಆಗಮಿಸಿತು. ಇದರೊಂದಿಗೆ ಉಜಿರೆ, ಲೈಲಾ, ಅಳದಂಗಡಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಹಳ್ಳಿಗಳಿಂದಲೂ ಹೊರೆಕಾಣಿಕೆ ಹರಿದು ಬಂತು. ಉಜಿರೆಯ ಸುತ್ತಮುತ್ತಲಿನ ಪ್ರತಿ ಮನೆಮನೆಯಿಂದ ಕಾಣಿಕೆಗಳು ಆಗಮಿಸಿದವು. ಕೇವಲ ಹಿಂದೂ ಬಾಂಧವರಷ್ಟೇ ಅಲ್ಲದೆ, ಕ್ರೈಸ್ತ ಮತ್ತು ಮುಸ್ಲಿಂ ಬಾಂಧವರು ಕೂಡ ಟ್ರ್ಯಾಕ್ಟರ್‍ಗಳಲ್ಲಿ ತರಕಾರಿ ಹಾಗೂ ತಾವೆ ಬೆಳೆದ ಆಹಾರ ಧಾನ್ಯಗಳನ್ನು ಹೊತ್ತುತಂದು ಸೌಹಾರ್ದತೆಯ ಮೆರುಗು ನೀಡಿದ್ದಾರೆ.
ವಿಶೇಷವಾಗಿ ರೈತರುತಮ್ಮ ಸ್ವಂತಜಮೀನಿನಲ್ಲಿ ಬೆಳೆದ ಭತ್ತ, ಇತರ ಧಾನ್ಯಗಳು ಹಾಗೂ ಅಡಿಕೆಗಳನ್ನು ಕಾಣಿಕೆಯಾಗಿಸಿದರು. ಕೃಷಿ ಭೂಮಿ ಇಲ್ಲದವರು ಅಥವಾ ಕೃಷಿ ಮಾಡದವರುತಮ್ಮ ಶಕ್ತಿಗೆ ಅನುಗುಣವಾಗಿ ವಸ್ತುಗಳನ್ನು ಖರೀದಿಸಿ ಸಮರ್ಪಿಸಿದರು. ಈ ಮೂಲಕ ಸಮಾಜದಎಲ್ಲ ವರ್ಗಗಳೂ ಉತ್ಸವದಲ್ಲಿ ಪಾಲ್ಗೊಂಡಿರುವುದುಗಮನಾರ್ಹವಾಗಿದೆ.
ಬೆಳಿಗ್ಗೆ 10 ಗಂಟೆಗೆ ಭಕ್ತಾದಿಗಳು ಒಂದೇ ಸ್ಥಳದಲ್ಲಿ ಸೇರಿ, ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲ್ಪಟ್ಟು, ಮೊದಲು ದೇವರಿಗೆ ಸಮರ್ಪಣೆ ಸಲ್ಲಿಸಿ ಬಳಿಕ ಸಮೃದ್ಧಿ ಹಸಿರುವಾಣಿ ಉಗ್ರಾಣಕ್ಕೆ ಸಾಗಿಸಲಾಯಿತು. ಭಜನಾ ತಂಡಗಳು, ಚಂಡೆ ವಾದನ ಹಾಗೂ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ನಡೆದ ಹೊರೆಕಾಣಿಕೆ ಮೆರವಣಿಗೆಯು ಹಬ್ಬದ ವಾತಾವರಣವನ್ನು ಮೂಡಿಸಿತು.
ಈ ಬಾರಿ ಬ್ರಹ್ಮಕಲಶೋತ್ಸವದ ವಿಶೇಷವಾಗಿ ಕೊಪ್ಪರಿಗೆ ಸೇವೆ ವ್ಯವಸ್ಥೆಕೂಡ ಹಮ್ಮಿಕೊಳ್ಳಲಾಗಿದೆ. ಅನ್ನ ಸಂತರ್ಪಣೆಗೆ ದೇಣಿಗೆ ನೀಡುವ ಭಕ್ತರಿಗೆ ಸಮಿತಿಯಿಂದ ರಸೀದಿ ನೀಡಲಾಗುತ್ತದೆ. ಬಳಿಕ ಪೂಜಾರಿ ಸಂಕಲ್ಪ ಮಾಡಿ, ಹರಿವಾಣದಲ್ಲಿನ ಅಕ್ಕಿಯನ್ನು ಭಕ್ತರ ಹೆಸರಿನಲ್ಲಿ ಕೊಪ್ಪರಿಗೆಯಲ್ಲಿ ಅರ್ಪಿಸುತ್ತಾರೆ. ಇದರಿಂದ ಭಕ್ತರು ಅನ್ನಸೇವೆಯಲ್ಲಿ ಭಾಗಿಯಾದ ತೃಪ್ತಿಯನ್ನು ಅನುಭವಿಸುತ್ತಾರೆ.
ಈ ಕಾರ್ಯದ ಪ್ರಧಾನ ಸಂಚಾಲಕರಾಗಿ ರವಿಕುಮಾರ್ ಬರೆಮೇಲು ಕಾರ್ಯನಿರ್ವಹಿಸುತ್ತಿದ್ದಾರೆ. "ಹೊರೆಕಾಣಿಕೆ ಸಮರ್ಪಣೆ ಭಕ್ತಾದಿಗಳಿಗೆ ಆತ್ಮತೃಪ್ತಿಯನ್ನು ನೀಡುತ್ತದೆ. ಕೆಲವರಿಗೆ ದೇವರಿಗೆ ಏನಾದರೂ ಅರ್ಪಿಸಬೇಕೆಂಬ ಆಸೆ ಇರುತ್ತದೆ. ಈ ರೀತಿಯಾಗಿ ಸಮರ್ಪಿಸುವುದರಿಂದ ನಾವು ಸಮಾಜಕ್ಕೂ ಏನೋ ಒಳ್ಳೆಯದು ಮಾಡಿದ್ದೇವೆ ಹಾಗೂ ದೇವರ ನಂಬಿಕೆಯಿಂದ ಸತ್ಕಾರ್ಯ ನಿರ್ವಹಿಸಿದ್ದೇವೆ ಎಂಬ ಸಂತೃಪ್ತಿ ಅವರಿಗೆ ದೊರೆಯುತ್ತದೆ" ಎಂದರು.
ಮಾರ್ಚ್ 10ರವರೆಗೆ ಹೊರೆಕಾಣಿಕೆ ನಿರಂತರವಾಗಿ ಆಗಮಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಭಕ್ತಿಭಾವ, ಸೌಹಾರ್ದತೆ ಹಾಗೂ ಸ್ಥಳೀಯ ಜನರ ಸಮೂಹ ಸಹಭಾಗಿತ್ವವನ್ನು ಪ್ರತಿಬಿಂಬಿಸುವ ಈ ಹೊರೆಕಾಣಿಕೆ ಸಂಪ್ರದಾಯವುಉಜಿರೆ ಬ್ರಹ್ಮಕಲಶೋತ್ಸವದ ಸಿದ್ಧತೆಯನ್ನು ಮತ್ತಷ್ಟು ವೈಭವಮಯಗೊಳಿಸಿದೆ.
ವಿಶೇಷ ವರದಿ: ಮೇಘಾ ಗಲಗಲಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


