ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ:
"ನನ್ನ ಅಧ್ಯಕ್ಷತೆಯಲ್ಲಿ ಪ್ರಕೃತಿಯು ಚರಾಚರ (ಜೀವ ಮತ್ತು ನಿರ್ಜೀವ) ಜಗತ್ತು ಸೃಷ್ಟಿಸಲ್ಪಡುತ್ತದೆ. ಕುಂತೀಪುತ್ರನಾದ ಅರ್ಜುನನೇ, ಈ ಕಾರಣದಿಂದಲೇ ಜಗತ್ತು ಚಕ್ರದಂತೆ ಬದಲಾಗುತ್ತಿರುತ್ತದೆ. ಸೃಷ್ಟಿ ಮತ್ತು ನಾಶದೊಂದಿಗೆ ಕಾರ್ಯನಿರ್ವಹಿಸುತ್ತದೆ."
**
ಪ್ರಕೃತಿಯ ಎಲ್ಲ ಚಟುವಟಿಕೆಗಳಿಗೂ...
ಅಂದರೆ ಕೌರವ-ಪಾಂಡವರ ಪಗಡೆ (ಕ್ರಿಕೇಟ್) ಆಟಕ್ಕೂ, ಯುದ್ಧಕ್ಕೂ ಭಗವಂತನೇ ಕಾರಣ
ಅದ್ಯಾವುದೋ ದೇಶದಲ್ಲಿ ಕೋಮೈನಿಯನ್ನು ಸೃಷ್ಟಿಸಿ, ಬೆಳಸಿದ್ದು.....
ಎಂಟು ಹತ್ತು ಸಾವಿರ ಮೈಲಿ ದೂರದಲ್ಲಿ ನೆತನ್ಯಾಹೂ ಅಂತಹವರನ್ನು ಸೃಷ್ಟಿಸಿ ಪೋಷಿಸಿದ್ದು.....
ಅದೇ ನೆತನ್ಯಾಹು ಕೈಗೆ ಗಾಂಡೀವದಂತಹ ವಿಚಿತ್ರ ಶಸ್ತ್ರ ದೊರಕಿಸಿಕೊಟ್ಟಿದ್ದು....
ಅದರ ಮೂಲಕ ಕೌರವ ಪಡೆಯ ನಾಲ್ಕಾರು ವಿಕೆಟ್ ಬೀಳಿಸುವುದು......!!.
ಅವರ್ಯಾರೋ ಲಕ್ಷಾಂತರ ಮಹಿಳೆಯರು (ದ್ರೌಪದಿಯರು!!?) "ಸ್ವಾತಂತ್ರ್ಯ" ಸಿಕ್ತು ಅಂತ ಹೊದ್ದ ಕಪ್ಪು ಶಾಲು ಬಿಚ್ಚಿ, ಒಂದಿಷ್ಟು ಬಟ್ಟೆಗಳನ್ನೂ ಕಳಚಿ, ಗಂಟು ಹಾಕಿದ್ದ ತಲೆ ಕೂದಲನ್ನು ಬಿಚ್ಚಿ (ಅವತ್ತಿನ ಮಹಾಭಾರತದಲ್ಲಿ ಇದು ಉಲ್ಟಾ ಇತ್ತು!!) ಸಾರ್ವಜನಿಕವಾಗಿ ಸಂಭ್ರಮಿಸುತ್ತಿರುವುದು....
ಇದಕ್ಕೂ ಮೊದಲು ಇಸ್ರೇಲ್‌ನಲ್ಲಿ ಕೃಷ್ಣ ಸಂಧಾನವೋ, ಗೀತೋಪದೇಶವೋ ಅಥವಾ ಯುದ್ಧದ ಸಾರಥ್ಯವೋ ಎಂಬುದು ಗೊತ್ತಾಗದಂತೆ... ಇಸ್ರೇಲ್‌ಗೆ ಭಾರತದ ಪ್ರಧಾನಿ ಹೋಗಿ ಬಂದಿದ್ದು....!!!
ಕುರುಕ್ಷೇತ್ರ ಯುದ್ಧಕ್ಕೂ ಮುನ್ನ ಮತ್ತು ಯುದ್ಧದ ಸಮಯದಲ್ಲಿ ಸೂರ್ಯ ಮತ್ತು ಚಂದ್ರಗ್ರಹಣಗಳು ಸಂಭವಿಸಿದಂತೆ, ವರ್ತಮಾನದ ಯುದ್ಧದ ಸಂದರ್ಭದಲ್ಲಿ ಭೀಕರ ಯುದ್ಧದ ಸೂಚಕಗಳಾಗಿ ಕೆಟ್ಟ ಶಕುನವೆಂಬಂತೆ (ಕಾಕತಾಳಿಯವಾಗಿ ಅಲ್ವೇ ಅಲ್ಲ!!) ಹದಿನಾಲ್ಕು ದಿನಗಳ ಅಂತರದಲ್ಲಿ ಸೂರ್ಯ ಮತ್ತು ಚಂದ್ರಗ್ರಹಣಗಳು (ಅಪರೂಪದ ಜೋಡಿ ಗ್ರಹಣ) ಸಂಭವಿಸುತ್ತಿರುವುದು ...!!!!
ಯುದ್ಧದಲ್ಲಿ ದಿವ್ಯಾಸ್ತ್ರಗಳ (ಡ್ರೋಣ್, ಕ್ಷಿಪಣಿ, ಯುದ್ಧ ವಿಮಾನ...) ಪ್ರಯೋಗ, ಆರ್ಭಟ, ಚೀತ್ಕಾರ, ಹೋರಾಟ, ಸಾವು, ನೋವು, ಬಲಿ..... ಟ್ವಂಟಿ ಫೋರ್ ಇನ್ಟು ಸೆವೆನ್ 'ಸಂಜಯ' ನ್ಯೂಸ್ ಟೀವಿಯಲ್ಲಿ ವೀಕ್ಷಕ ವಿವರಣೆ.....!!
ಅದ್ಯಾವುದೋ ಚಕ್ರವ್ಯೂಹದ ಶಾಲೆಯ ಮೇಲೆ ಬಿದ್ದ ಕ್ಷಿಪಣಿ, ಎಂಬತೈದು ಮುಗ್ದ ಅಭಿಮನ್ಯುವಿನಂತಹ ಮಕ್ಕಳನ್ನು ಫಿನಿಷ್ ಮಾಡಿದ ಸುದ್ಧಿಯನ್ನು 'ಸಂಜಯ' ಟಿವಿ ವಿವರಿಸುತ್ತಿರುವಾಗ...... "ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್" ಎಂಬ ದೈವದ ಮಾತಿಗೆ, 'ಹಿಂದಿನ ಜನ್ಮದ ಕರ್ಮ ಫಲ' ಅಂತ ಭಾವಿಸಿ, "ಆಲ್ ರೈಟ್ ಮುಂದುಕ್ ಹೋಗಣ" ಅಂತ ಮುಂದೆ ಹೋಗುವುದು!!! ಅದು ಬಿಟ್ಟು ಅಲ್ಲೇ ನಿಂತರೆ.... ಸಮಯ ಮತ್ತು ವೀಕ್ಷಕ ವಿವರಣೆ ಮುಂದಕ್ಕೆ ಹೋಗುತ್ತಿರುತ್ತದೆ!!!
"ಆದರೂ.... ಅಭಿಮನ್ಯುಗಳು ಸತ್ತಿದ್ದು ಯಾಕೆ!!?" ಎಂಬ ಪ್ರಶ್ನೆ ಉಳಿದರೆ... ಯುದ್ಧದ ಕ್ಲೈಮ್ಯಾಕ್ಸ್ ಮುಗಿದ ಮೇಲೆ, ಅವಕಾಶ ಇದ್ದರೆ... ಸಮಯ ಕೂಡಿ ಬಂದರೆ... ಮನಸ್ಸಿನ ಸಮಾಧಾನಕ್ಕೆ, ಭಗವದ್ಗೀತೆ ಹಿಡ್ಕೊಂಡು ಓದುತ್ತ ಕೃಷ್ಣನನ್ನೇ ಕೇಳುವಾ!! "ವೈ ವರ್ ಚಿಲ್ಡ್ರನ್ ಲೈಕ್ ಅಭಿಮನ್ಯು ಕಿಲ್ಡ್ ಇನ್ ಗಲ್ಫ್ ಕಂಟ್ರಿ?" ಅಂತ.
ಗ್ರಹಣದ ಫಲ, ಯುದ್ಧದ ಪರಿಣಾಮ ಎರಡೂ ಭೀಕರ ಆದರೂ... 'ಕದನ ಕುತೂಹಲ' ಇದ್ದೇ ಇರುತ್ತದೆ.
ಶುರುವಾಗಿರುವ ಕುರುಕ್ಷೇತ್ರ ಯುದ್ಧಕ್ಕೆ ಆಗಿರುವುದು ಕೇವಲ ಮೂರು ದಿನ!!
ಇನ್ನೂ ಹದಿನೈದು ಪರ್ವಗಳು ಮುಂದಿವೆಯಾ!!?
ಗೊತ್ತಿಲ್ಲ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


