ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ 146ನೇ ವಾರ್ಷಿಕೋತ್ಸವವು ʼʼಶಾಲೋಂ: ಶಾಂತಿ, ಜ್ಯೋತಿಯ ಏಕತೆ" ಎಂಬ ಧ್ಯೇಯದೊಂದಿಗೆ ಮಂಗಳವಾರ 17ನೇ ಮಾರ್ಚ್ 2026 ರಂದು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಪಬ್ಲಿಕ್ ಲಿಸ್ಟೆಡ್ ಹೆಲ್ತ್‌ಕೇರ್ ಮ್ಯಾನೇಜ್ಮೆಂಟ್ ಲೀಡರ್ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿ ಜಾನ್ ಸುನಿಲ್ ಮಾತನಾಡಿ, ಈ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಸಮಯವು ನನ್ನ ಜೀವನದ ಅತ್ಯಂತ ನೆನಪಿನ ದಿನಗಳು. ನಮ್ಮ ಕಾಲದಲ್ಲಿ ಇಂದಿನಂತೆ ಅನೇಕ ಅವಕಾಶಗಳು ಹಾಗೂ ವಿಶೇಷತೆಗಳ ಅಧ್ಯಯನಕ್ಕೆ ಅವಕಾಶ ಇರಲಿಲ್ಲ. ಆದರೆ ಇಂದು ವಿದ್ಯಾರ್ಥಿಗಳಿಗೆ ತಮ್ಮ ಪದವಿಯಲ್ಲಿ ವಿಭಿನ್ನ ಸ್ಪೆಷಲೈಸೇಶನ್‌ಗಳನ್ನು ಆಯ್ಕೆಮಾಡುವ ಸೌಕರ್ಯಗಳಿವೆ. ನಮಗೆ ಶಿಕ್ಷಣ ಮತ್ತು ಅಂಕಗಳು ಮಾತ್ರ ಮುಖ್ಯವಲ್ಲ, ವಿದ್ಯಾರ್ಥಿಯ ಜೀವನದಲ್ಲಿ ಮೌಲ್ಯಗಳು ಮತ್ತು ಶಿಸ್ತು ಹೊಂದಿರಬೇಕು. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವಹಿಸಿ, ನಮ್ಮನ್ನು ಬೌದ್ಧಿಕ ವ್ಯಕ್ತಿಗಳಾಗಿ ರೂಪಿಸುತ್ತಾರೆ. ಕಾಲೇಜು ದಿನಗಳಲ್ಲಿ ನಿರ್ಮಾಣವಾಗುವ ಸ್ನೇಹಗಳು ಜೀವನಪರ್ಯಂತ ಉಳಿಯುತ್ತವೆ ಮತ್ತು ವ್ಯವಹಾರ ಜೀವನದಲ್ಲಿಯೂ ಹೊಸ ಸಂಪರ್ಕಗಳನ್ನು ನಿರ್ಮಿಸಲು ಸಹಾಯ ಮಾಡುತ್ತವೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯು ಜವಾಬ್ದಾರಿಯುತ ಜೀವನವನ್ನು ನಡೆಸಿ, ಒಂದು ಉತ್ತಮ ಪರಂಪರೆಯನ್ನು ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಮಧ್ಯಪ್ರಾಚ್ಯದಲ್ಲಿ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡ ಅವರು, “ಅಲ್ಲಿನ ವಿವಿಧ ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಜನರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿದ್ದು, ಮಂಗಳೂರಿನ ವೈವಿಧ್ಯತೆಯನ್ನು ನೆನಪಿಸುತ್ತದೆ,” ಎಂದು ಹೇಳಿದರು. ಮಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಸಂಪರ್ಕ ಹೊಂದಿದ ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿ ಬೆಳೆಯುತ್ತಿದ್ದು, ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಬದಲಾವಣೆಗೆ ತೆರೆದ ಮನಸ್ಸಿನಿಂದಿರಬೇಕು, ಆದರೆ ನಮ್ಮ ಹಿರಿಯರ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮರೆಯಬಾರದು. ಶಾಂತಿಯನ್ನು ನಿರ್ಮಿಸಲು ಇತರರನ್ನು ಪ್ರೇರೇಪಿಸಬೇಕು. ನಿಜವಾದ ಯಶಸ್ಸು ಎಂದರೆ ನಮ್ಮ ಮೂಲಕ ಇತರರ ಜೀವನದಲ್ಲಿ ಬದಲಾವಣೆ ತರುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ ವಂ. ಮೆಲ್ವಿನ್ ಜೋಸೆಫ್ ಪಿಂಟೋ ಎಸ್. ಜೆ. ಮಾತನಾಡಿ, ಮುಖ್ಯ ಅತಿಥಿಯವರನ್ನು ಪ್ರಶಂಸಿಸಿ, ಅವರ ಸಾಧನೆಗಳ ಬಗ್ಗೆ ಮಾತ್ರ ಮಾತನಾಡದೆ, ತಮ್ಮ ವೈಫಲ್ಯಗಳನ್ನೂ ನೇರವಾಗಿ ಹಂಚಿಕೊಂಡಿರುವುದನ್ನು ಉಲ್ಲೇಖಿಸಿದರು. ಇದು ವಿನಯ ಮತ್ತು ಜವಾಬ್ದಾರಿತನದ ಭಾವನೆಗನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ರೀತಿಯ ಪ್ರಾಮಾಣಿಕತೆ ವಿದ್ಯಾರ್ಥಿಗಳಿಗೆ ವೈಫಲ್ಯಗಳನ್ನು ಮೀರಿ ಬೆಳವಣಿಗೆ ಸಾಧ್ಯವೆಂಬ ಅರಿವು ನೀಡುತ್ತದೆ ಭಗ್ನ ಕ್ಷಣಗಳನ್ನು ಮತ್ತೆ ಒಟ್ಟುಗೂಡಿಸಿ, ಮರುಪ್ರಾರಂಭ ಮಾಡುವ ಶಕ್ತಿಯನ್ನು ನೀಡುತ್ತದೆ ಎಂದರು.
ವಾರ್ಷಿಕೋತ್ಸವದ ಧ್ಯೇಯ “ಶಾಲೋಮ್” ಎಂಬ ವಿಷಯದ ಕುರಿತು ಮಾತನಾಡುತ್ತಾ, ಶಾಂತಿ ಪ್ರತಿಯೊಬ್ಬರ ಹೃದಯದಿಂದಲೇ ಆರಂಭವಾಗಬೇಕು. ನಾವು ನಮ್ಮೊಳಗೆ ಶಾಂತಿಯನ್ನು ಬೆಳೆಸಿದರೆ, ಅದು ಹೊರಗೂ ಹರಡಿ ಸಮಾಜದಲ್ಲಿ ಸೌಹಾರ್ದತೆಯನ್ನು ನಿರ್ಮಿಸುತ್ತದೆ. ಕೇವಲ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶಾಂತಿ ಮತ್ತು ಏಕತೆಯನ್ನು ಪ್ರದರ್ಶಿಸುವುದಷ್ಟೇ ಸಾಕಾಗುವುದಿಲ್ಲ; ಬದಲಾಗಿ, ದೇವರಿಗೆ ಮತ್ತು ಇತರರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ಮೌಲ್ಯಗಳನ್ನು ದಿನನಿತ್ಯದ ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಹ ಕುಲಪತಿ ವಂ. ಡಾ. ಮೆಲ್ವಿನ್ ಡಿಕುನ್ಹಾ ಎಸ್. ಜೆ., ಕುಲಸಚಿವ ಡಾ. ರೊನಾಲ್ಡ್ ನಝರತ್, ಹಣಕಾಸು ಅಧಿಕಾರಿ, ವಂ. ಫಾ. ವಿಶ್ವಾಸ್ ಮಿಸ್ಕಿತ್ ಎಸ್.ಜೆ., ವಿವಿಧ ಬ್ಲಾಕಿನ ನಿರ್ದೇಶಕರುಗಳಾದ, ವಂ. ಡಾ. ಕಿರಣ್ ಕೋತ ಎಸ್.ಜೆ., ಡಾ. ಲೋವೀನಾ ಲೋಬೊ, ಡಾ. ಆಶಾ ಅಬ್ರಾಹಂ, ಡಾ. ಮಮತಾ ಚೇತನ್, ಕ್ಲ್ಯಾರೆಟ್ ಪಿರೇರಾ ಮತ್ತು ವಿದ್ಯಾರ್ಥಿ ಪರಿಷತ್ತಿನ ನಾಯಕ ಆನ್ಸನ್ ರೇಗೊ ಉಪಸ್ಥಿತರಿದ್ದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟೀಸ್ ಎಸ್. ಎಜೆ. ವಾರ್ಷಿಕ ವರದಿಯನ್ನು ಮಂಡಿಸಿ, ಕಳೆದ ವರ್ಷದ ವಿಶ್ವವಿದ್ಯಾಲಯದ ಸಾಧನೆಗಳು, ಪ್ರಮುಖ ಘಟ್ಟಗಳು ಮತ್ತು ಮುಂದಾಳುತ್ವಗಳನ್ನು ವಿವರಿಸಿದರು. ಈ ವರದಿ ವಿದ್ಯಾಭ್ಯಾಸ, ಸಂಶೋಧನೆ ಮತ್ತು ಸಹಪಾಠ್ಯ ಚಟುವಟಿಕೆಗಳಲ್ಲಿ ವಿಶ್ವವಿದ್ಯಾಲಯದ ನಿರಂತರ ಶ್ರೇಷ್ಠತೆಯನ್ನು ಪ್ರತಿಬಿಂಬಿಸಿತು.
ಕಾರ್ಯಕ್ರಮದಲ್ಲಿ ಶಾಂತಿ ಮತ್ತು ಏಕತೆಯ ವಿಷಯಕ್ಕೆ ಹೊಂದಿಕೊಂಡಂತೆ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸೃಜನಾತ್ಮಕತೆಯನ್ನು ಪ್ರದರ್ಶಿಸುವ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿದ್ಯಾಭ್ಯಾಸ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮ ಸಹಯೋಜಕರಾದ ಡಾ. ಚಾರ್ಲ್ಸ್ ವಿ ಫುಟಾರ್ಡೋ ಸ್ವಾಗತಿಸಿ , ಸಹ ಸಹಯೋಜಕರಾದ ಡಾ. ಮ್ಯಾನ್ಯುವಲ್ ತಾವ್ರೋ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನ್ಸನ್ ರೇಗೊ ವಂದಿಸಿದರು. ವಿದ್ಯಾರ್ಥಿಗಳಾದ ಲಾರಾ ಇಮಿಲಿಯಾನ ಕುಟಿನ್ಹಾ, ಸಾನ್ಸಿಯಾ ರೂತ್ ಡಿಕುನ್ಹಾ, ಜೀವನ್ ಡಿ ಮೆಲ್ಲೋ ಸಭಾ ಕಾರ್ಯಕ್ರಮ ಹಾಗೂ ಶೈನಾ ಡಿಸೋಜಾ, ರಿನಿಶ ಪಿಂಟೋ, ಚಿರಾಗ್ ಬಜಾಲ್, ಅಮಿತ್ ಶೆಣೈ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


