ಮಂಗಳೂರು: ಗಂಗಾ ಪ್ರತಿಷ್ಠಾನ ಕುಮಾರಪುರ ಅರ್ಪಿಸುವ 'ನಮ್ಮ ಕೊಂಬಾರು- ಸಂಸ್ಕೃತಿಯ ತೇರು' ವಾಹಿನಿಯಲ್ಲಿ ಕಾರಣೀಕದ ಕಲ್ಲುರ್ಟಿ ದೈವದ ಕುರಿತಾದ ಮತ್ತೊಂದು ಭಕ್ತಿಗೀತೆ 'ಸತ್ಯ ದೇವತೆ' ಫೆಬ್ರವರಿ 1ರಂದು ಬಿಡುಗಡೆಗೊಂಡಿದೆ. ಈಗಾಗಲೇ ಕಲ್ಲುರ್ಟಿ ಕಥನ ಮತ್ತು ಸಿಂಗಾರೊದ ಸಿರಿ ದೃಶ್ಯ ಕಾವ್ಯಗಳಿಗೆ ಸಾಹಿತ್ಯ ನೀಡಿರುವ ಲೇಖಕ ಹಾಗೂ ಚಿಂತಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರೇ ಈ ಗೀತೆಯನ್ನೂ ಬರೆದಿದ್ದಾರೆ.
'ಸತ್ಯದೇವತೆ' ಹಾಡಿನ ಹಿನ್ನೆಲೆ:
ಕರಾವಳಿಯಲ್ಲಿ ದೈವೋಪಾಸಕರು ಹೆಚ್ಚಾಗಿ ನಂಬುವ ಶಕ್ತಿ ದೇವತೆ ಶ್ರೀ ಕಲ್ಲುರ್ಟಿ ದೈವ. ಆ ದೈವದ ಆರಾಧನಾ ಸ್ಥಳಗಳಲ್ಲಿ, ಪ್ರಸ್ತುತ ಪ್ರವರ್ಧಮಾನಕ್ಕೆ ಬರುತ್ತಿರುವುದು ಶ್ರೀ ಕ್ಷೇತ್ರ ಚೆಂಡೆ. ಯಕ್ಷಗಾನದ ಮೇರು ಕಲಾವಿದ ದಿ| ಪುಳಿಂಚ ರಾಮಯ್ಯ ಶೆಟ್ಟರು ಕಲ್ಲಡ್ಕ ಸಮೀಪ ಬಾಳ್ತಿಲ ಗ್ರಾಮದ ತಮ್ಮೂರು 'ಚೆಂಡೆ'ಯಲ್ಲಿ ಕಾಡ ಕಲ್ಲಿನ ಮೂಲಕ ಶ್ರೀ ಕಲ್ಲುರ್ಟಿ ದೈವವನ್ನು ಆರಾಧಿಸುತ್ತಿದ್ದರು.
ರಾಮಯ್ಯ ಶೆಟ್ಟರ ಕಾಲಾ ನಂತರ ಅವರ ಪುತ್ರ ಮಂಗಳೂರಿನ ಯುವ ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟರು ಸುಸಜ್ಜಿತವಾದ ನೂತನ ದೈವಸ್ಥಾನವನ್ನು ನಿರ್ಮಿಸಿ ವಿಧ್ಯುಕ್ತವಾಗಿ ಅಗೆಲು ಸೇವೆ, ಕೋಲ - ಉತ್ಸವಗಳನ್ನು ನಡೆಸುತ್ತಾ ಬಂದಿದ್ದಾರೆ. ನಂಬಿದವರಿಗೆ ಇಂಬು ಕೊಡುವ, ಹಲವು ಬಗೆಯ ಪವಾಡಗಳಿಂದ ಅವರ ಕಷ್ಟ ಕೋಟಲೆಗಳನ್ನು ನೀಗಿ ತನ್ನ ಕಾರಣೀಕವನ್ನು ತೋರುತ್ತಿರುವ ಚೆಂಡೆ ಕಲ್ಲುರ್ಟಿ ಅಮ್ಮನನ್ನು ಕೇವಲ ಊರವರು ಮಾತ್ರವಲ್ಲ ಆಸುಪಾಸಿನ ಹತ್ತಾರು ಹಳ್ಳಿಯವರು 'ಚೆಂಡೆದಪ್ಪೆ' ಎಂದೇ ನಂಬಿ ಹರಕೆ ಸಲ್ಲಿಸುತ್ತಿದ್ದಾರೆ. ಅಗೆಲು, ಕೋಲಗಳ ಮೂಲಕ ಆಕೆಯನ್ನು ಪ್ರಸನ್ನೀಕರಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಅನೇಕ ಉದಾಹರಣೆಗಳಿವೆ. ಅಲ್ಲಿಯ ತ್ರೈ ವಾರ್ಷಿಕ ಉತ್ಸವ, ಹರಕೆ ಕೋಲ ಹಾಗೂ ಅಗೆಲು ಸೇವೆಗಳ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ಸೇರಿ ದೈವದ ದರ್ಶನ ಪಡೆಯುವುದು ಒಂದು ಅಪೂರ್ವ ದೃಶ್ಯ.
ವೀಕ್ಷಣೆಗೆ ಲಭ್ಯ:
ಸತ್ಯ ದೇವತೆ, ಸತ್ಯಮ್ಮ, ಕಲ್ಲುರ್ಟಿ, ಕಾಳಮ್ಮ, ಪಾಷಾಣಮೂರ್ತಿ ಎಂದು ನಾನಾ ಹೆಸರುಗಳಿಂದ ಕರೆಯಲ್ಪಡುವ ಕಲ್ಲುರ್ಟಿ ಅಮ್ಮನ ಮಹಿಮೆಯ ಕುರಿತಾಗಿ ಭಾಸ್ಕರ ರೈ ಕುಕ್ಕುವಳ್ಳಿ ರಚಿಸಿರುವ 'ಸತ್ಯ ದೇವತೆ' ಎಂಬ ಸುಂದರ ಭಕ್ತಿ ಗೀತೆಯನ್ನು ಖ್ಯಾತ ಗಾಯಕ ಎಂ. ರವೀಂದ್ರ ಪ್ರಭು ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಬೆಂಗಳೂರಿನ ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್ ಕಟ್ಟೆ ಅವರು ಆ ಹಾಡಿಗೆ ಸೂಕ್ತ ದೃಶ್ಯ ಸಂಯೋಜನೆ ಮಾಡಿಸಿ ತಮ್ಮ ನಮ್ಮ ಕೊಂಬಾರು- ಸಂಸ್ಕೃತಿಯ ತೇರು ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದೀಗ ಒಂದು ಅಪೂರ್ವ ದೃಶ್ಯ ಕಾವ್ಯ 'ಸತ್ಯ ದೇವತೆ' ನಮ್ಮ ಜಾಲತಾಣಗಳಲ್ಲಿ ಲಭ್ಯವಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಲು ಅವರು ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


