ಭಾರತದಲ್ಲಿ ಮೊದಲ ಬಾರಿಗೆ 'ಬ್ಯಾಕ್ ಡೋರ್' ಮೆದುಳಿನ ಶಸ್ತ್ರಚಿಕಿತ್ಸೆ

Upayuktha
0

ಮಾರಣಾಂತಿಕ ಪಾರ್ಶ್ವವಾಯು ಹೊಂದಿದ್ದ ವ್ಯಕ್ತಿಗೆ ಹೊಸ ಬದುಕು ನೀಡಿ ಸಾಧನೆ ಮಾಡಿದ ನಾರಾಯಣ ಹೆಲ್ತ್

 




ಬೆಂಗಳೂರು: ಅತ್ಯಂತ ಪ್ರತಿಷ್ಠಿತ ನಾರಾಯಣ ಹೆಲ್ತ್ ಆಸ್ಪತ್ರೆಯು ಭಾರತದಲ್ಲಿ ಇದೇ ಮೊದಲ ಬಾರಿಗೆ ಮೆದುಳಿಗೆ ರಕ್ತ ಪೂರೈಸುವ 'ವರ್ಟೆಬ್ರಲ್ ಆರ್ಟರಿ'ಯಲ್ಲಿನ ದೀರ್ಘಕಾಲದ ತೀವ್ರ ಅಡೆತಡೆಯನ್ನು (ಕ್ರೋನಿಕ್ ಟೋಟಲ್ ಆಕ್ಲಷನ್- ಸಿಟಿಓ) ಯಶಸ್ವಿಯಾಗಿ ತೆರವುಗೊಳಿಸುವ (ರೀಕ್ಯಾನಲೈಸೇಷನ್) ಬ್ಯಾಕ್ ಡೋರ್ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮಾರಣಾಂತಿಕ ಪಾರ್ಶ್ವವಾಯು ಹೊಂದಿದ್ದ 53 ವರ್ಷದ ರೋಗಿಗೆ ಹೊಸ ಬದುಕು ನೀಡಿ ಮಹತ್ವದ ಸಾಧನೆ ಮಾಡಿದೆ.


ಈ ಮೂಲಕ ನಾರಾಯಣ ಹೆಲ್ತ್ ಸಿಟಿಯ ನರರೋಗ ವಿಭಾಗದ ಮುಖ್ಯಸ್ಥರು ಹಾಗೂ ಇಂಟರ್ವೆನ್ಷನಲ್ ನ್ಯೂರಾಲಜಿ ವಿಭಾಗದ ನಿರ್ದೇಶಕರಾದ ಡಾ. ವಿಕ್ರಮ್ ಹುಡೇದ್ ಅವರ ನೇತೃತ್ವದ ತಜ್ಞರ ತಂಡವು ಇಂಟರ್ವೆನ್ಷನಲ್ ನ್ಯೂರಾಲಜಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. 


ಪ್ರಕರಣ: ಜೀವ ಉಳಿಸುವ ಕಠಿಣ ಹಾದಿ

ಮಧುರೈ ನಿವಾಸಿಯಾದ ಈ ರೋಗಿಯು ಈಗಾಗಲೇ ಮೂರು ಬಾರಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಮಧುರೈನಲ್ಲಿ ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ಅವರ ಬಲಬದಿಯ ವರ್ಟೆಬ್ರಲ್ ಅಪಧಮನಿಯು ಶೇ. 100 ರಷ್ಟು ಪಾರ್ಶ್ವವಾಯುವಿನಿಂದ ಮುಚ್ಚಿಹೋಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಇದೇ ಸಮಯದಲ್ಲಿ, ಎಡಭಾಗದ ಅಪಧಮನಿಯು ಹುಟ್ಟಿನಿಂದಲೇ ತೀರಾ ಚಿಕ್ಕದಾಗಿದ್ದರಿಂದ ಮೆದುಳಿನ ಹಿಂಭಾಗಕ್ಕೆ ಅಗತ್ಯವಿರುವ ರಕ್ತವನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ.


ಮೆದುಳಿಗೆ ರಕ್ತ ಪೂರೈಸುವ ಮುಖ್ಯ ದಾರಿಯೇ ಸಂಪೂರ್ಣವಾಗಿ ಬಂದ್ ಆಗಿದ್ದ ಈ ಸಂಕೀರ್ಣ ಪರಿಸ್ಥಿತಿಯನ್ನು ಮನಗಂಡ ಮಧುರೈನ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ಶಿಫಾರಸು ಮಾಡಿದರು.


ಶಸ್ತ್ರಚಿಕಿತ್ಸೆ: "ಅಸಾಧ್ಯವಾದುದನ್ನು" ಸಾಧಿಸಿದ ಕ್ಷಣ

ನಾರಾಯಣ ಹೆಲ್ತ್ ಸಿಟಿಗೆ ಬಂದ ನಂತರ ನಡೆಸಿದ ಸೆರೆಬ್ರಲ್ ಆಂಜಿಯೋಗ್ರಾಮ್ (ಡಿಎಸ್ಎ) ವಿಧಾನವು ರಕ್ತನಾಳದಲ್ಲಿ ದೀರ್ಘಕಾಲದಿಂದ ಇರುವ ಸಂಪೂರ್ಣ ಅಡೆತಡೆಯನ್ನು ಖಚಿತಪಡಿಸಿತು. ಡಾ. ಹುಡೇದ್ ಮತ್ತು ಅವರ ತಂಡವು ಅಂತರಾಷ್ಟ್ರೀಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ, ಇಷ್ಟು ದೀರ್ಘಕಾಲದವರೆಗೆ ಸಂಪೂರ್ಣವಾಗಿ ಮುಚ್ಚಿಹೋಗಿದ್ದ ವರ್ಟೆಬ್ರಲ್ ಅಪಧಮನಿಯನ್ನು ಯಶಸ್ವಿಯಾಗಿ ಪುನಃ ತೆರೆದ ನಿದರ್ಶನ ಭಾರತದಲ್ಲಿ ಇದುವರೆಗೆ ವರದಿಯಾಗಿಲ್ಲ ಎಂಬುದು ತಿಳಿದುಬಂದಿತು.


ಈ ಕುರಿತು ಮಾತನಾಡುವ ಡಾ. ವಿಕ್ರಮ್ ಹುಡೇದ್ ಅವರು, "ಬಲಬದಿಯ ರಕ್ತನಾಳ ಶೇ. 100 ರಷ್ಟು ಬ್ಲಾಕ್ ಆಗಿದ್ದರಿಂದ, ಎಡಭಾಗದ ಸಣ್ಣ ರಕ್ತನಾಳಕ್ಕೆ ರಕ್ತ ಪೂರೈಕೆಯನ್ನು ಸರಿದೂಗಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ರೋಗಿಗೆ ಪದೇ ಪದೇ ಸ್ಟ್ರೋಕ್ ಆಗುತ್ತಿತ್ತು. ಗಟ್ಟಿಯಾಗಿ ಹೋಗಿದ್ದ ರಕ್ತನಾಳವನ್ನು ಪುನಃ ತೆರೆಯುವಲ್ಲಿ ಇರುವ ಅಪಾಯಗಳ ಕುರಿತು ನಾವು ರೋಗಿ ಮತ್ತು ಅವರ ಕುಟುಂಬದೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೆವು. ಸಮರ್ಪಕ ಚಿಕಿತ್ಸೆಯ ಬಳಿಕ ಈಗ ನಾವು ಯಶಸ್ವಿಯಾಗಿ ರಕ್ತ ಸಂಚಾರವನ್ನು ಪುನಃಸ್ಥಾಪಿಸಿದ್ದೇವೆ ಮತ್ತು ಮೆದುಳಿಗೆ ಅಗತ್ಯವಿದ್ದ ರಕ್ತ ಪೂರೈಕೆಯಾಗುವಂತೆ ಮಾಡಿದ್ದೇವೆ ಎಂದು ಹೇಳಲು ನಮಗೆ ಹೆಮ್ಮೆಯೆನಿಸುತ್ತದೆ" ಎಂದು ಹೇಳಿದರು.


ಎಚ್ಚರಿಕೆ: ಸೂಕ್ಷ್ಮ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಈ ವೈದ್ಯಕೀಯ ಸಾಧನೆಯು ಸಾರ್ವಜನಿಕರಿಗೆ ಒಂದು ಪ್ರಮುಖ ಎಚ್ಚರಿಕೆಯಾಗಿದೆ. ಯಾಕೆಂದರೆ ಪಾರ್ಶ್ವವಾಯುವಿನ ಮುನ್ಸೂಚನೆಗಳನ್ನು ಅನೇಕ ರೋಗಿಗಳು ನಿರ್ಲಕ್ಷಿಸುತ್ತಾರೆ ಎಂದು ಡಾ. ಹುಡೇದ್ ಹೇಳುತ್ತಾರೆ.


ಸರಿಯಾದ ತಜ್ಞರ ಮಾರ್ಗದರ್ಶನವಿದ್ದರೆ 'ಸಂಪೂರ್ಣ' ಅಡೆತಡೆಗಳನ್ನೂ ಸಹ ಗುಣಪಡಿಸಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಪದೇ ಪದೇ ತಲೆತಿರುಗುವುದು ಅಥವಾ ಸಮತೋಲನ ಕಳೆದುಕೊಳ್ಳುವಂತಹ ಸಮಸ್ಯೆಗಳು ಪಾರ್ಶ್ವವಾಯು ಅಥವಾ ಟಿಐಎ (ಟ್ರಾನ್ಸಿಯೆಂಟ್ ಇಶೆಮಿಕ್ ಅಟ್ಯಾಕ್) ಲಕ್ಷಣಗಳಾಗಿರಬಹುದು, ಹಾಗಾಗಿ ಈ ಸಮಸ್ಯೆಗಳಿದ್ದಲ್ಲಿ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ದೊಡ್ಡ ಅನಾಹುತವನ್ನು ತಪ್ಪಿಸಲು ಸಕಾಲಿಕ ರೋಗನಿರ್ಣಯ ಅತ್ಯಗತ್ಯವಾಗಿದೆ.


ರಾಷ್ಟ್ರೀಯ ಮೈಲಿಗಲ್ಲು ಸಾಧನೆ

ಭಾರತದಲ್ಲಿ ಸಂಭವಿಸುವ ಒಟ್ಟು ಪಾರ್ಶ್ವವಾಯು ಪ್ರಕರಣಗಳಲ್ಲಿ ಸುಮಾರು ಕಾಲು ಭಾಗದಷ್ಟು ಮೆದುಳಿನ ಹಿಂಭಾಗದ ರಕ್ತಪರಿಚಲನೆಗೆ ಸಂಬಂಧಿಸಿರುತ್ತವೆ. ಆದರೆ ಇವುಗಳನ್ನು ಗುರುತಿಸುವಲ್ಲಿ ಅಚಾತುರ್ಯಗಳು ನಡೆಯುವುದೇ ಹೆಚ್ಚು. ಆದರೆ ಇದೀಗ ನಾರಾಯಣ ಹೆಲ್ತ್ ವೈದ್ಯರು ತಂಡವು ದೀರ್ಘಕಾಲದ ಅಡೆತಡೆಯನ್ನು ಯಶಸ್ವಿಯಾಗಿ ತೆರವುಗೊಳಿಸುವ ಮೂಲಕ ದೇಶದ ಪಾರ್ಶ್ವವಾಯು ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧನೆ ಮಾಡಿದೆ. ರೋಗಿಯು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ.


ನಾರಾಯಣ ಹೆಲ್ತ್ ಕುರಿತು:

ಡಾ. ದೇವಿ ಶೆಟ್ಟಿ ಸ್ಥಾಪಿಸಿರುವ ನಾರಾಯಣ ಹೆಲ್ತ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ಮತ್ತು ಈ ಸಂಸ್ಥೆಯು ಜಾಗತಿಕ ಮಟ್ಟದ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್ತ್ ಸಂಸ್ಥೆಯು ಭಾರತ ಮತ್ತು ಕೆರಿಬಿಯನ್‌ ಪ್ರದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಬಹಳ ಪ್ರಸಿದ್ಧವಾಗಿದೆ. ಸಂಸ್ಥೆಯು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಗುಣಮಟ್ಟದ ಕೇಂದ್ರಗಳು ಮತ್ತು 18,822ರಷ್ಟು ವೃತ್ತಿಪರರ ತಂಡವನ್ನು ಹೊಂದಿದೆ. ಇದರಲ್ಲಿ 3,868 ನುರಿತ ವೈದ್ಯರು ಮತ್ತು ತಜ್ಞರು ಇದ್ದಾರೆ. ಅತ್ಯುತ್ತಮ ಸೌಲಭ್ಯ ಮತ್ತು ತಂಡಗಳ ಮೂಲಕ ಉತ್ಕೃಷ್ಟ ಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿದೆ.


ನಾರಾಯಣ ಒನ್ ಹೆಲ್ತ್ (ಎನ್‌ಎಚ್ ಇಂಟಿಗ್ರೇಟೆಡ್ ಕೇರ್) ಮತ್ತು ನಾರಾಯಣ ಹೆಲ್ತ್ ಇನ್ಶೂರೆನ್ಸ್ ಇವು ನಾರಾಯಣ ಹೆಲ್ತ್‌ ನ ಅಂಗಸಂಸ್ಥೆಗಳಾಗಿವೆ.

ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.narayanahealth.org/


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top