ಭಾರತ ಸಂಸ್ಕೃತಿಯ ತವರು ಮನೆ. ಇಲ್ಲಿ ವಿಭಿನ್ನ ರೀತಿಯ ಆಚಾರ ವಿಚಾರಗಳು, ರೀತಿ ರಿವಾಜುಗಳು, ನೀತಿ ನಿಯಮಗಳು, ಸಂಪ್ರದಾಯ ಪದ್ಧತಿಗಳು ಆಚರಣೆಯಲ್ಲಿವೆ. ಸಂಸ್ಕೃತಿಯ ಹಿನ್ನೆಲೆಯಲ್ಲಿ ಹಬ್ಬಗಳನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಿದೆ. ಹಬ್ಬ ಎನ್ನುವುದು ಕೇವಲ ಒಂದು ಜನಾಂಗಕ್ಕಷ್ಟೇ ಸೀಮಿತವಾಗಿಲ್ಲ. ಭಾರತವು ವಿವಿಧ ಜನಾಂಗ, ಧರ್ಮ - ಜಾತಿ ಪದ್ಧತಿಗಳನ್ನು ಒಳಗೊಂಡಿದ್ದು ಎಲ್ಲಾ ಜನಾಂಗದವರು, ಧರ್ಮದವರು, ಜಾತಿಗಳವರು ತಮ್ಮ ತಮ್ಮ ಸ್ವಂತ ಆಚಾರ ವಿಚಾರ ಪದ್ಧತಿಗಳಂತೆ ಹಬ್ಬಗಳನ್ನು ಆಚರಿಸುತ್ತಾರೆ. ಅಂತೆಯೇ ಭಾರತ ಮುಖ್ಯವಾಗಿ ಹಿಂದೂಸ್ಥಾನವಾಗಿದ್ದು ಹಿಂದೂ ಧರ್ಮದವರಿಗೆಲ್ಲಾ ದೀಪಾವಳಿ, ಯುಗಾದಿ, ಸಂಕ್ರಾಂತಿ, ನವರಾತ್ರಿ ಮತ್ತು ಶಿವರಾತ್ರಿ ಹಬ್ಬಗಳು ಬಹಳ ಪ್ರಮುಖವಾಗಿವೆ. ಇಂದು ನಾವು ಹಿಂದೂಗಳ ಪವಿತ್ರ ಹಬ್ಬವಾದ ಮಹಾಶಿವರಾತ್ರಿಯನ್ನು ಆಚರಿಸುತ್ತಿದ್ದೇವೆ.
ಹಬ್ಬಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಮಹಾಶಿವರಾತ್ರಿ. ಮಹಾಶಿವರಾತ್ರಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಬ್ಬದ ದಿನ ಮನೆಗಳಲ್ಲಿ ಸಂತಸದ ವಾತಾವರಣ ಮನೆಮಾಡಿರುತ್ತದೆ. ಜನರು ಮುಂಜಾನೆಯಲ್ಲಿ ಸೂರ್ಯೋದಯಕ್ಕಿಂತ ಮೊದಲೇ ಎದ್ದು, ಮನೆಯ ಅಂಗಳವನ್ನು ಗುಡಿಸಿ, ಸಾರಿಸಿ ಬಣ್ಣ ಬಣ್ಣದ ರಂಗೋಲಿಯಿಟ್ಟು, ಹೂವುಗಳನ್ನಿಟ್ಟು ಸಿಂಗರಿಸುತ್ತಾರೆ. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ ಹೂಗಳಿಂದ ಅಲಂಕರಿಸಉುತ್ತದೆ. ಮುಂಜಾನೆಯ ಸ್ನಾನಾನ್ಹಿಕೆಗಳನ್ನು ಮುಗಿಸಿ ಶುಭ್ರವಸ್ತ್ರಗಳನ್ನು ಧರಿಸುತ್ತಾರೆ. ನಂತರ ಉಪವಾಸ ವ್ರತವನ್ನು ಕೈಗೊಳ್ಳುವುದು ರೂಢಿಯಾಗಿರುತ್ತದೆ. ಶಿವನ ದೇವಾಲಯಗಳಿಗೆ ಭೇಟಿ ನೀಡಿ ಶಿವದರ್ಶನ ಮಾಡುವುದು, ಭಕ್ತಿಯಿಂದ ಶಿವನನ್ನು ಪೂಜಿಸಿ, ಪ್ರಾರ್ಥಿಸುವುದು ಎಲ್ಲೆಡೆ ಕಂಡುಬರುತ್ತದೆ.
ಶಿವರಾತ್ರಿಯ ಅರ್ಥ ಮತ್ತು ಮಹತ್ವ :
ಮಹಾಶಿವರಾತ್ರಿ ಹಬ್ಬವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಇದು ಮನುಷ್ಯನ ಅಂತರಾತ್ಮವನ್ನು ಜಾಗೃತಗೊಳಿಸುವ ಪವಿತ್ರ ಕಾಲ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಒಂದು ಪರಿಸ್ಥಿತಿ.
'ಶಿವ' ಎಂದರೆ ಮಂಗಳಕರವಾದುದು ಎಂದರ್ಥ. 'ರಾತ್ರಿ' ಎಂದರೆ ಕತ್ತಲೆ ಅಥವಾ ವಿಶ್ರಾಂತಿ ಎಂದರ್ಥ. ನಾವೆಲ್ಲರೂ ಹಗಲಿನಲ್ಲಿ ಈ ಲೋಕದ ವ್ಯವಹಾರಗಳಲ್ಲಿ ಮಗ್ನರಾಗಿರುತ್ತೇವೆ. ಆದರೆ ರಾತ್ರಿಯ ಹೊತ್ತಿನಲ್ಲಿ ಮನಸ್ಸು ಶಾಂತವಾಗುತ್ತದೆ. ಮಹಾಶಿವರಾತ್ರಿಯಂದು ಬ್ರಹ್ಮಾಂಡದ ಶಕ್ತಿಯು ಮನುಷ್ಯನ ಬೆನ್ನುಮೂಳೆಯ ಮೂಲಕ ಮೇಲ್ಮುಖವಾಗಿ ಚಲಿಸಲು ಪ್ರಕೃತಿಯೇ ಪೂರಕವಾಗಿರುತ್ತದೆ. ಇದರಿಂದ ಮನುಷ್ಯನ ಶರೀರದಲ್ಲಿ ನ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಆರೋಗ್ಯ ಉತ್ತಮತೆಯತ್ತ ಸಾಗುತ್ತದೆ. ಆದುದರಿಂದಲೇ ಈ ರಾತ್ರಿ 'ಜಾಗರಣೆ'ಗೆ ಅಷ್ಟು ಮಹತ್ವವಿದೆ. ಭಕ್ತಸೂಹವು ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿ ಪೂಜಿಸುತ್ತದೆ.
ಹಬ್ಬದ ಉದ್ದೇಶ :
ಮಹಾಶಿವರಾತ್ರಿ ಹಬ್ಬದ ಆಚರಣೆಯ ಹಿಂದಿನ ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳಬೇಕು. ಹಬ್ಬದ ದಿನದಂದು ಭಕ್ತರು ಉಪವಾಸ ವೃತವನ್ನು ಕೈಗೊಳ್ಳುತ್ತಾರೆ. ಉಪ + ವಾಸ ಎಂದರೆ 'ದೇವರ ಸಮೀಪ ಇರುವುದು' ಎಂದರ್ಥ. ಹೊಟ್ಟೆಯನ್ನು ಹಗುರವಾಗಿಟ್ಟು ಕೊಂಡು, ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಭಗವಂತನ ಧ್ಯಾನದಲ್ಲಿ ತೊಡಗುವುದೇ ನಿಜವಾದ ಉಪವಾಸ. ಮತ್ತೊಂದು ವಿಚಾರ ಜಾಗರಣೆ. ಜಾಗರಣೆ ಎಂದರೆ ಕೇವಲ ನಿದ್ರೆ ಬಿಡುವುದಷ್ಟೇ ಅಲ್ಲ. ಅಜ್ಞಾನವೆಂಬ ನಿದ್ರೆಯಿಂದ ಎಚ್ಚೆತ್ತು, ಜ್ಞಾನದ ಹಾದಿಯಲ್ಲಿ ಸಾಗುವುದೇ ಇದರ ಉದ್ದೇಶ. ಹಬ್ಬದ ದಿನದಂದು ಶಿವಲಿಂಗಕ್ಕೆ ಮತ್ತು ಶಿವನ ಮೂರ್ತಿಗೆ ಅಭಿಷೇಕ ಮಾಡಲಾಗತ್ತದೆ. ಏಕೆಂದರೆ ಶಿವನು 'ಅಭಿಷೇಕ ಪ್ರಿಯ'. ನೀರು, ಹಾಲು, ಜೇನುತುಪ್ಪದ ಮೂಲಕ ಲಿಂಗಕ್ಕೆ ಅಭಿಷೇಕ ಮಾಡುವಾಗ, ನಮ್ಮೊಳಗಿನ ಅಹಂಕಾರ ಮತ್ತು ಕೆಟ್ಟ ವಿಚಾರಗಳನ್ನು ತೊಳೆದು ಮನಸ್ಸನ್ನು ನಿರ್ಮಲಗೊಳಿಸಿ ಕೊಳ್ಳಬೇಕು ಎಂಬುದು ಇದರ ಸಂಕೇತವಾಗಿದೆ. ವಿಶೇಷ ಅಭಿಷೇಕವೆಂದರೆ ಬಿಲ್ವಾರ್ಚನೆ. ಬಿಲ್ವಪತ್ರೆಯು ಶಿವನ ಶಕ್ತಿಯ ದ್ಯೋತಕವಾಗಿದೆ.
ಶಿವ ಸ್ವರೂಪದ ಸಂದೇಶ :
ದೇವನೊಬ್ಬ ನಾಮ ಹಲವು ಎಂಬಂತೆ ಶಿವನನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಶಿವ ಸ್ವರೂಪಿ ಈಶ್ವರನ ರೂಪವೇ ಒಂದು ಅದ್ಭುತ ಪಾಠವಾಗಿದೆ. ಶಿವನ ಹಣೆಯ ಮೇಲಿನ ಕಣ್ಣು ದೂರದೃಷ್ಟಿ ಮತ್ತು ವಿವೇಕದ ಸಂಕೇತವಾಗಿದೆ. ಪ್ರತೀ ವ್ಯಕ್ತಿಯೂ ದೂರದೃಷ್ಟಿತ್ವವನ್ನು ಹೊಂದಿರಬೇಕು. ಆಗ ಮಾತ್ರ ಪ್ರಗತಿಯ ನಿರೀಕ್ಷೆ ಮಾಡಬಹುದು. ಪ್ರತೀ ವ್ಯಕ್ತಿಯೂ ವಿವೇಕತ್ವವನ್ನು ಒಳಗೊಂಡಿರಬೇಕು. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅರಿವು ವ್ಯಕ್ತಿಗಿರಬೇಕು ಎಂಬುದನ್ನು ಸಾರುತ್ತದೆ.
ಶಿವನ ಕುತ್ತಿಗೆಯು ವಿಷ (ನೀಲಕಂಠ) ವನ್ನು ಒಳಗೊಂಡ ನೀಲಿ ಬಣ್ಣದಿಂದ ಕೂಡಿದೆ. ಇದು ಸಮಾಜದ ಕಷ್ಟ-ನೋವುಗಳನ್ನು ತಾನುಂಡು ಇತರರಿಗೆ ಅಮೃತವನ್ನು ನೀಡುವ ಪರೋಪಕಾರದ ಗುಣವನ್ನು ಸಾರುತ್ತದೆ. ಪರೋಪಕಾರವು ಅತ್ಯಂತ ಉತ್ತಮ ಗಣವಾಗಿದ್ದು, ವ್ಯಕ್ತಿಯ ವ್ಯಕ್ತಿತ್ವವನ್ನು ಸಕಾರಾತ್ಮಕತೆಯತ್ತ ಕರೆದೊಯ್ಯುತ್ತದೆ.
ಶಿವನ ಶಿರದ ಮೇಲಿನ ಗಂಗೆಯು ಜ್ಞಾನದ ನಿರಂತರ ಹರಿಯುವಿಕೆಯನ್ನು ಸೂಚಿಸುತ್ತದೆ. ಪ್ರತಿ ಮನುಷ್ಯನಿಗೂ ಜ್ಞಾನವು ಅಗತ್ಯವಾಗಿದ್ದು ಅದನ್ನು ಸ್ವೀಕರಿಸಬೇಕು. ವಿದ್ಯೆಯ ಮೂಲಕ ಗಳಿಸಬೇಕು. ಜ್ಞಾನಿಯು ಸಮತೂಲಿತ ವ್ಯಕ್ತಿಯಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ.
ಪ್ರಸ್ತುತ ಜಗತ್ತಿನಲ್ಲಿ ಮಹಾಶಿವರಾತ್ರಿ :
ಪ್ರಸ್ತುತ ಜಗತ್ತು ಒತ್ತಡಮಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ತೀವ್ರತರ ಬೆಳವಣಿಗೆಯಿಂದಾಗಿ ಇಂದಿನ ಒತ್ತಡದ ಬದುಕಿನಲ್ಲಿ ನಾವು ನಮ್ಮನ್ನೇ ಮರೆಯುತ್ತಿದ್ದೇವೆ. ಶಿವರಾತ್ರಿಯು ನಮಗೆ 'ಮೌನ' ಮತ್ತು 'ಧ್ಯಾನ'ದ ಅಗತ್ಯವನ್ನು ನೆನಪಿಸುತ್ತದೆ. ಹೊರಗಿನ ಗದ್ದಲವನ್ನು ಬಿಟ್ಟು, ನಮ್ಮೊಳಗಿನ ಶಿವನನ್ನು (ಆತ್ಮವನ್ನು) ಕಂಡುಕೊಳ್ಳಲು ಇದೊಂದು ಸುಸಂದರ್ಭವಾಗಿದೆ. "ಶಿವ ಎನ್ನುವುದು ಹೊರಗಿರುವ ವಿಗ್ರಹವಲ್ಲ, ಅದು ಪ್ರತಿಯೊಬ್ಬರ ಅಂತರಾತ್ಮದಲ್ಲಿರುವ ಶಾಂತಿ ಮತ್ತು ಚೈತನ್ಯವಾಗಿದೆ." ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು!
-ಕೆ.ಎನ್. ಚಿದಾನಂದ ಹಾಸನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



