ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ಮರು ದಿನ ನಡೆಯುವ ಹಗಲು ಉತ್ಸವವಾದ ಚೂರ್ಣೋತ್ಸವವು ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ನೇತೃತ್ವದಲ್ಲಿ ಅತ್ಯಂತ ವೈಭವದಿಂದ ನಡೆಯಿತು. ಬೆಳಿಗ್ಗೆ ಪರ್ಯಾಯ ಶ್ರೀಪಾದರು ಮಹಾಪೂಜೆಯನ್ನು ನಡೆಸಿದ ಬಳಿಕ ರಥಬೀದಿಯಲ್ಲಿ ಬ್ರಹ್ಮ ರಥದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸಿ ರಥೋತ್ಸವವನ್ನು ಮಾಡಲಾಯಿತು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ರಥೋತ್ಸವದ ನಂತರ ಅಷ್ಟಾವಧಾನ ಸೇವೆಯೊಂದಿಗೆ ಓಲಗ ಮಂಟಪ ಪೂಜೆಯು ನಡೆಯಿತು. ಮಧ್ವ ಸರೋವರದಲ್ಲಿ ಉತ್ಸವ ಮೂರ್ತಿ ಸಹಿತ ಅವಭೃತ ಸ್ನಾನ ಮಾಡಿದ ಪರ್ಯಾಯ ಶ್ರೀಪಾದರು ಸಪ್ತೋತ್ಸವವನ್ನು ಸಂಪನ್ನಗೊಳಿಸಿದರು. ಪಲ್ಲಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

