ಮಿರ್ಚಿ-ಮಸಾಲೆ: ‘ಧಮಾಕ್ ಜಮಾಕ್… ಗಿಲ್ಲಿ… ಗಿಲ್ಲಿ…’

Upayuktha
0




‘ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ…’ ಅಂತ ಡಬಲ್ಯಾ ಚಂದಂಗೆ ಹಾಡಾಕ್ಕೋಂತಿದ್ದ. ಅದನ್ನ ನೋಡೀ ಕೇಳ್ದ ಕಾಳ್ಯಾ — ‘ಏನಪಾ… ಯಾರ ಕಣ್ಣಿನ ಕೆರ್ಯಾಗ ಯಾರ ಬೆಳಕ ಹರಸಬೇಕಂತ ಮಾಡಿದೇಪಾ?’ ಅಂತ.


‘ಏಸ್ಸ್… ನೀ ಒಂದು, ಅಂವಾ ಅವ್ನ ಪೂರ್ತೇಕ ಚಂದಂಗೆ ಹಾಡ್ಕೋಂತ ಕುಂತಾನ. ಅದ್ನೂ ಸಮಾಧಾನ ಇಲ್ಲಲಾ ನಿನ್ಗ?’ ಅಂದ ಗುಡಮ್ಯಾ.


‘ಏಸ್ಸ್… ಎಲ್ಲಾದ್ರೂ ಅಡ್ಡ ಬರತಾನ ಕಾಳ್ಯಾ,’ ಎಂದ ಡುಮ್ಯಾ.


‘ಏಸ್ಸ್… ಏನ ಹಚ್ಚಿರೆಲೇ? ನಮ್ದ ನಮಗ ಆಗೀತಿಲ್ಲಿ!’ ಎಂದ ಟಕಳ್ಯಾ.


‘ಅರೇ ಹೋ ಸಾಂಬಾ… ತೇರಾ ಕ್ಯಾ ಹುವಾ ರೇ ಟಕಳ್ಯಾ?’ ಅಂತ ಕೇಳ್ದ ಬಾಶಾ.


‘ಅವನಿಗಿ ಅಂವನ ತಲ್ಯಾಗ ಕೂದಲ ಬೆಳೆದಿಲ್ಲ ಅಂತ ಎಷ್ಟ ಕಡೆ ತೋರ್ಸಿ, ಎಷ್ಟ ಔಷಧ ಹಚ್ಚಿದ್ರೂನು, ಅದೇ ಚಿಂತ್ಯಾಗೇತಿ,’ ಅಂತ ನಕ್ಕ ಗುಡಮ್ಯಾ.


ಈ ಮಾತ ಕೇಳಿ ಟಕಳ್ಯಾ ಗುಡಮ್ಯಾನ ಕಡೆ ಕಣ್ಣು ಗುರಾಯಿಸಿ ನೋಡಿದ.


‘ಏಸ್ಸ್… ಈಗ ಎಲ್ಲ ಕಡೆ ಈ ಬೋಳ ತಲೆದೇ ಟ್ರೆಂಡ್ ಐತಿ,’ ಎಂದ ರಬಡ್ಯಾ.


‘ಹಾಂ ಹೌದು… ರಾಜ್ ಬಿ. ಶೆಟ್ಟಿ ಮಾಡಿದ “ಒಂದು ಮೊಟ್ಟೆಯ ಕಥೆ” ನೋಡಿರಿಲ್ಲ ನೀವೆಲ್ಲಾ?’ ಅಂದಳು ರಾಶಿ.


‘ಹೌದು, ಈಗ ಧ್ರುವಂತನ ಗತ್ಲೇ ಜಡೆ ಜುಟ್ಟಾ ಇಲ್ಲ. ಎಲ್ಲ “ಒನ್ಲಿ ರಘುನ ಸ್ಟೈಲ್!”’ ಅಂತ ನಕ್ಕ ಕಾಳ್ಯಾ.


‘ಯಾರಿವರು?’ ಕೇಳಿದ ರಬ್ಬರ್ ಸ್ಟ್ಯಾಂಪ್.


‘ಇವ್ರಾ? ಬಿಗ್ ಬಾಸ್ ಕ್ಯಾಂಡಿಡೇಟ್ಸ್,’ ಎಂದ ಡಬಲ್ಯಾ.


‘ಇಂವಾ ಯಾರಲೇ ತಮ್ಮಾ?’ ಕೇಳಿದ ಕಾಕಾ.


‘ಕಾಕಾ, ಇಂವಾ “ರಬ್ಬರ್ ಸ್ಟ್ಯಾಂಪ್” ಅಂತ. ಹೇಳಿದ್ರೇ ಅದನ್ನೇ ಮಾಡೋನು,’ ಎಂದ ರಬಡ್ಯಾ.


‘ಅಂದ್ರೆಸ್… ಇಂವಾ “ಜೀ ಹುಜೂರ” ಪೈಕಿ ಏನು?’ ಅಂತ ನಕ್ಕ ಕಾಳ್ಯಾ.


‘ಹೂಂ, ಹಂಗೇ ಅನ್ಕೋ. ಎಲ್ಲಿ ಸಹಿ ಮಾಡಂತಾರೋ ಅಲ್ಲಿ ಮಾಡಿ ಹೋಗೋ ಗಿರಾಕಿ,’ ಎಂದ ಡಬಲ್ಯಾ.


‘ಈ “ಟಕಳುಗಳ” ಕಥೆ ಅಲ್ಲೇ ಬಿಟ್ಟ್ರೇಲಾ? ಈಗ ಎಲ್ಲ ಕಡೆ ಇವರದೇ ಹವಾ!’ ಎಂದ ಪುಗ್ಸಟ್ಟೆ.


‘ಟಕಳ್ಯಾ ಅಂದ್ರೆಸ್ ಶ್ಯಾಣ್ಯಾರ ಲಕ್ಷಣ ಅಂತ!’ ಅಂತ ಹೇಳಿ ನಕ್ಕ ಕಾಕಾ.


‘ಅರೇ ಹೌದುಬೀ… ತಲಿ ಕೆ ಉಪ್ಪರ್ ಕೂದಲ ನಹೀ ತೋ, ಓ ಬಹುತ್ ಶಾಣಾ ಸಮಝತಾ ಲೋಗ,’ ಅಂದ ಬಾಶಾ.


‘ಅದಕ್ಕೆ ರಾಜ್ ಶೆಟ್ಟಿ ಕ್ಲಿಕ್ ಆಗ್ಲಿಲ್ಲಾ? “ಸು ಫ್ರಮ್ ಸೋ” ಸಿನ್ಮಾ ಮಾಡಿ?’ ಕೇಳಿದಳು ರಾಶಿ.


‘ದಾರಿ ಉಂಟು ಮಾರಾಯ್ರೆ… ನೀವು ಮನಸ್ಸು ಮಾಡ್ಬೇಕಷ್ಟೇ,’ ಅಂತ ಹೇಳಿಲ್ವಾ ರಾಜ್ ಶೆಟ್ಟಿ ಅವರಾಗ,’ ಎಂದ ಪುಗ್ಸಟ್ಟೆ.


‘ಅದು… ಮೈಯಾಗ ಅಂಟ್ಕೊಂಡ ದೆವ್ವ ಹೊರಗ ಹೋಗಾಕ ಅದಕ್ಕ ದಾರಿ,’ ಎಂದ ರಬಡ್ಯಾ.


‘ದಾರಿನೂ ಸಿಕ್ತು… “ಸು ಫ್ರಮ್ ಸೋ” ಬಂಬಾಟ ಶೋನೂ ಆಯ್ತು,’ ಎಂದ ಡಬಲ್ಯಾ.


‘ಈಗ ಅದಿರ್ಲಿ… ಈ “ಕುರ್ಚಿ ಕಾಳಗ” ಅಂತ ಪ್ರಸಂಗ ನಡೆದಿತ್ತು ಉಂಟಲ್ಲ? ಅದು ಎಲ್ಲಿಗೆ ಬಂತು ಮಾರಾಯ್ರೆ?’ ಅಂತ ಕೇಳ್ತು ಮಾಣಿ.


‘ಏಸ್ಸ್ ಯಪ್ಪಾ… ಮೊನ್ನೆ ಅಂವಾ ಇವ್ರ ಬಾಸ್ ಮೈಸೂರ ಮ್ಯಾಗಿಂದ ಮುಂದಕ್ ಹೊಂಟಿದ್ನಾ. ಅಲ್ಲೇ ಹೋಗಿ ಇಬ್ರೂ ಭೆಟ್ಯಾದ್ರು. ಒಬ್ಬೊಬ್ಬನ್ನ ಕರಕೊಂಡು ಹೋಗಿ, ಮಾರಿ ಮ್ಯಾಗ ಕೈ ಎಳದು ಹ್ವಾದಾ!’ ಅಂತ ನಕ್ಕ ಕಾಕಾ.


‘ಟಗರ ಅಷ್ಟ ಸರಳ ಬಂಡೆಕ್ಕ ತನ್ನ ಕುರ್ಚಿ ಬಿಟ್ಟುಕೊಡ್ತೈತಿ ಅಂತ ತಿಳಿದೇನು?’ ಅಂತ ಗಹಗಹಿಸಿ ನಕ್ಕ ಪುಗ್ಸಟ್ಟೆ.


‘ಏಸ್ಸ್… ಅದೇನ “ಪುಗ್ಗ್ಸಟ್ಟೆ” ಸಿಗತೈತೇನಲೇ?’ ಎಂದ ಕಾಳ್ಯಾ.


‘ಅರೇ, ಬಂಡೆ ಬಹುತ್ ದಿಯಾ ಪಾರ್ಟಿ ಕೋ,’ ಅಂದ ಬಾಶಾ.


‘ಅದೆಲ್ಲ ನಮ್ಮ ಟಗರಿನ ಮುಂದ ನಡೆಂಗಿಲ್ಲ. ಅದು ಯಾರ ಮಾತನೂ ಕೇಳಂಗಿಲ್ಲ!’ ಎಂದ ಧಡಂಧುಡ್ಕಿ.


‘ನಮ್ಮ ಬಂಡೆನೂ ಏನ ಹಗರ ತಿಳಿಬ್ಯಾಡ್ರಿ. ಯಾರ ಮೇಲ್ರೇ ಬಿತ್ತಂದ್ರೆ ಅಲ್ಲೇ ಗೊಟಕ್!’ ಅಂದ ಹುರಗಡ್ಲಿ.


‘ಇಂವಾ ಯಾರಪಾ?’ ಕೇಳಿದ ಕಾಕಾ.


‘ಕಾಕಾ, ಇಂವಾ ಹುರಗಡ್ಲಿ ಅಂತ. ಮಂಡ್ಯದ ಕಡೆ ಎಲ್ಲ ಅಡ್ಡಾಡಿ ಬಂದಾನ,’ ಎಂದ ಕಾಳ್ಯಾ.


‘ರಾಗಾ ಈಗ ಕೈ ಎಳದಿರಬೇಕು. ಆದ್ರೆಸ್ ಇದು ಒಂದಿಲ್ಲ ಒಂದ ದಿನ ಇತ್ಯರ್ಥ ಆಗೇಬೇಕು,’ ಎಂದ ಕಾಕಾ.


‘ಈಗ ನೋಡ್ರಿ… ಇನ್ನ ಎರಡ್ಮೂರು ಸ್ಟೇಟ್ನಾಗ ಇದು ಇಂಪಾರ್ಟೆಂಟ್ ಸ್ಟೇಟು. ಇದನ್ನ ಕಳ್ಕೊಂಡು ಏನು ಮಾಡ್ತಾರೋ,’ ಅಂದಳು ರಾಶಿ.


‘ಅಂದ್ರೆಸ್?’


‘ಜಗ್ಗಸ್ಟ್ ದಿವಸ ಜಗ್ತಾರೆ. ಮುಂದಿನ ಮಾತು ಮುಂದ!’ ಅಂದಳು ರಾಶಿ.


‘ಮೇಲಿನವರು ಹೇಳ್ದಂಗ ಕೇಳ್ತೀನಿ ಅಂತ ಟಗರು ಹೇಳೇತಲಾ?’ ಕೇಳ್ದ ರಬಡ್ಯಾ.


‘ಸುಮ್ನ ಅನ್ಲಿಕ್ಕೆ ಏನು ಹೋಗ್ತತಿ ಗಂಟೆ? ಸಮೀಪ ಬಂದ್ರೆ ಗುದ್ದಿಬಿಡೋದು!’ ಎಂದ ಹುರಗಡ್ಲಿ.


‘ಅಂದ್ರೆಸ್ “ಈ ಟಗರನ್ನ ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ” ಅಂತ ಹಾಡ್ತತಿ ಏನು?’ ಅಂತ ವ್ಯಂಗವಾಗಿ ಧಡಂಧುಡ್ಕಿ.


‘ಹೌದು… ಇದು ಬಿಸಿ ತುಪ್ಪ ಇದ್ದಂಗ. ನುಂಗುವಂಗಿಲ್ಲ, ಉಗುಳುವಂಗಿಲ್ಲ,’ ಎಂದ ಕಾಕಾ.


‘ಅಂದ್ರೆಸ್ ಅವರು “ದುಡ್ಡು ಹಾಕಿ, ಇವರು ಸುಖ ಅನುಭವಿಸೋದು” ಏನು?’ ಕೇಳಿದ ಗುಡಮ್ಯಾ.


‘ಹಂಗೇ ಆಗೇತಿ ನಮ್ಮ ಬಾಳೇ ಅಂತಾನೂ ಬಂಡೆ. ಇವರದೇ ನಡೆಂಗಿಲ್ಲ ಅಂದ್ರೆ ಇನ್ನ ರಬ್ಬರ್ ಸ್ಟ್ಯಾಂಪಿನೇ ನಡೀತೈತಿ,’ ಅಂದಳು ರಾಶಿ.


‘ಮತ್ತ ಮೊದಲ ಟಗರು “ನೀವು ಏನು ಹೇಳ್ತಿರಿ ಹೇಳ್ರಿ, ಅದಕ್ಕ ನಾ ಎಸ್ ಅಂತೀನಿ” ಅಂತ ಅಂದಿತ್ತಂತಲಾ?’ ಎಂದ ಗುಡಮ್ಯಾ.


‘ಆವಾಗ “ಬೀಸೋ ದೊಣ್ಣೆ ತಪ್ಪಿಸಿಕೊಂಡ್ರೆ ಸಾವಿರ ವರ್ಷ ಆಯಸ್ಸು” ಅಂತ ಅನ್ಕೊಂಡು ಹೊಂಟಿದ್ರಪಾ,’ ಅಂದಳು ರಾಣಿ.


‘ಈಗ ಎಲ್ಲ ಅನುಭವಿಸೋದು ಆಗೇತಿ. ಬಂಡೆಕ್ಕ ಯಾಕ ಬಿಡಬೇಕು ಅನ್ನೋ ಹಟ!’ ಅಂತ ನಕ್ಕ ಯಬಡೇಶಿ.


‘ಇದನ್ನ ನೋಡಿ ಬಂಡೆ ಬ್ಯಾರೆ ಹಾದಿ ಹಿಡದ್ರೆಸ್?’ ಕೇಳಿದ ಕಾಳ್ಯಾ.


‘ಅಗಾ ನೋಡ್ರಿ… ಅನ್ನ ಹಾಕಿದವ್ರಿಗಿ ಕನ್ನ ಹಾಕ್ಕಾರು ಇವರು ಅಂತ ಪ್ರಚಾರ ಮಾಡಿ, ಅವುಕ್ಕ ಮೂಲಿಗಿ ಒತ್ತತಾರೆ,’ ಎಂದ ಕಾಕಾ.


‘ಹಂ… ಅದಿರ್ಲಿ… ಈ ಬಿಗ್ ಬಾಸ್ ಎಲ್ಲಿಗೆ ಬಂತು?’ ಗಡಬಡಿಸಿ ಕೇಳಿದ ಡುಮ್ಯಾ.


‘ಆಂ… ಅದಾ… ಎಲ್ಲ ಕಡೆ ಬರೇ ಗಿಲ್ಲಿಯದೇ ಹವಾ ಐತಿ,’ ಎಂದ ಪುಗ್ಸಟ್ಟೆ.


‘ಮತ್ತ ಎಲ್ಲಾರಿಗೂ “ಕಚಡಾ… ಏನಲೇ… ಎಂತಲೇ…” ಅಂತ ಬೈದಿದ್ಲಲಾ? ಆ ರಾಜಮಾತೆದು ಏನಾತು?’ ಕೇಳಿದಳು ರಾಶಿ.


‘ಅದಾ? ಒಂದ್ ಸಂಘದವರು ಮುಂದ ಬಂದಾರು ಆಕಿನ್ನ ಗೆಲ್ಲಸ್ಲಿಕ್ಕೆ,’ ಎಂದ ರಬಡ್ಯಾ.


‘ಆದ್ರೆಸ್ ಉಳಕಾದವ್ರು “ನೋ ನೋ… ಆ ದುರಹಂಕಾರಿ ಬೇಡ. ನಮ್ಗ ಎರಡು ಕೆಜಿ ಮೂಳೆ ಒಬ್ನೇ ತಿಂದ ಸಕಲಕಲಾ ವಲ್ಲಭನೇ ಬೇಕು” ಅಂತ ಶುರು ಹಚ್ಚ್ಕೊಂಡಾರು,’ ಎಂದ ಧಡಂಧುಡ್ಕಿ.


‘ನಮ್ಮ ಕೂಡ್ಲ ಪಟಾಕಿ ರಕ್ಷಿತಾ ಉಂಟಲ್ಲ? ಇಡೀ ಮನೆಗೆ ಅವಳೇ ಬೆಳಕು,’ ಅಂದ ಮಾಣಿ.


‘ಹೌದು… ರಘುಗೆ ಮುದ್ದಿನ ತಂಗಿ. ಗಿಲ್ಲಿಗೆ ವಂಶದ ಕುಡಿ,’ ಅಂದಳು ರಾಶಿ.


‘ಜೈ ಮಹಾ ಕಾಲ್?’ ಅಂತ ನಗ್ತ ಕೇಳಿದ ಘಟಮ್ಯಾ.


‘ಇವಳು ಜೈ ಮಹಾ ಕಾಳಿ!’ ಅಂದಳು ರಾಣಿ.


‘ಕಾವು ಕಾವು?’ ಕೇಳಿದ ಪುಗ್ಸಟ್ಟೆ.


‘ರಾಜಮಾತೆಗೆ ಕೆಂಡದ ಗುಲಾಬಿ,’ ಅಂತ ನಕ್ಕಳು ರಾಶಿ.


‘ಅದೇ ಅದೇ… ಸೀಜನ್ ಕಿಚನ್ ಚಪ್ಪಾಳೆ ತಗೊಂಡಿದ್ನಲಾ? ಓ ಕಹಾ ಗಯಾ?’ ಕೇಳಿದ ಬಾಶಾ.


‘ಅಂವಾ… ಜೈ ಮಹಾ ಕಾಲ ಅಂತ ಸೀದಾ ಮನೆಗೆ “ರೈಟ್ ರೈಟ್” ಹೇಳಿದ,’ ಅಂದಳು ರಾಶಿ.


‘ಗಿಲ್ಲಿ ಫುಲ್ ಕಾಮಿಡಿ ಮಾಡಿ ಈ ಸೀಜನ್ ಎತ್ತಿ ಹಿಡಿದಾನ,’ ಅಂದ ಪುಗ್ಸಟ್ಟೆ.


‘ಅಲ್ಲ… ಈ ಹನ್ನೊಂದನೇ ಸೀಜನ್‌ನಲ್ಲಿ ಇಷ್ಟ ಹವಾ ಎಂದೂ ಕ್ರಿಯೇಟ್ ಆಗಿದ್ದಿಲ್ಲ ಬಿಡು,’ ಎಂದ ಕಾಳ್ಯಾ.


‘ರಾಜಮಾತೆ ಬಗ್ಗೆ ಏನಾದ್ರೂ ಬರದ್ರೆ ಗುಡುಮತೇವಿ ಅಂದಾರು ಈ ಕನ್ನಡದ ವರಪುತ್ರರು?’ ಕೇಳಿದ ಕಾಕಾ.


‘ಅವ್ರು ಹಿಂದಕ್ಕೆ… ರಾಜಣ್ಣ ರೂಪೇಶ್ ಬಂದಿದ್ನಲಾ? ಅವ್ನಿಗಿ ಒಂದ್ಸಲಾನೂ ಸಪೋರ್ಟ್ ಮಾಡ್ಲಿಲ್ಲಲಾ?’ ಕೇಳ್ದ ಕನ್ನಡದ ಕಂದ ಮಕರಂದ.


‘ಏಸ್ಸ್… ಅದು ಬ್ಯಾರೇ ಇದು ಬ್ಯಾರೇ,’ ಅಂದಳು ರಾಶಿ.


‘ಏ ಅಲಗ್ ಅಲಗ್ ಕೈಸಾ ಹೋತಾ ಹೈ?’ ಕೇಳಿದ ಬಾಶಾ.


‘ಇದು ಹಿಂದ್ಕ ರಾಜಕುಮಾರನ “ಸಂಪತ್ತಿಗೆ ಸವಾಲ್” ಇದ್ದಂಗ. ಹಾಂಗ ಇದುನೂ,’ ಎಂದ ಪುಗ್ಸಟ್ಟೆ.


‘ಅಂತೂ ಇದು ಯಾವ ಸವಾಲ್ ಅಂತ ಇನ್ನೆರಡು ದಿನ್ದಾಗ ಗೊತ್ತಾಗ್ತೈತಿ ಬಿಡು,’ ಅಂದಳು ರಾಣಿ.


‘ಇದು “ಪುಟಗೋಸಿ” ಅಂತ ಒಬ್ಬ ಕರದಾನ!’ ಎಂದ ಧಡಂಧುಡ್ಕಿ.


‘ಪುಟಗೋಸಿ ಅಂತ ನೆಟ್ಟಗ ಕನ್ನಡ ಬರ್ಯಾಕ ಹೇಳು ಆ ಪುಟಗೋಸಿಗೆ!’ ಎಂದ ರಬಡ್ಯಾ.


‘ಮನಿ ಖಲಾಸ ಆಕೈತಿ, ಪ್ರೀತಿ ಕಡಿತನ್ಕ ಉಳಿತೈತಿ,’ ಎಂದ ಟುಮ್ಯಾ.


‘ಇದು ಖರೋ ಖರ್ ಹವಾ ನೋಡು,’ ಅಂದ ಡುಮ್ಯಾ.


‘ಢಮಾರ ಢಮಾರ ಢಕ್ಕಾ, ಕನ್ನಡದ ಉಸಿರು ಇದು ಪಕ್ಕಾ!’ ಅಂತ ಎಲ್ಲರೂ ಜೈಕಾರ ಹಾಕಿ ಮಂಡ್ಯದ ಕಡೆಗೆ ಹೊಂಟ್ರು.


-  ಶ್ರೀನಿವಾಸ ಜಾಲವಾದಿ, ಸುರಪುರ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top