ಜೀವನವು ಒಂದು ಚದುರಂಗ: ದೇವಿಚರಣ್ ರೈ
ಪುತ್ತೂರು: ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬುದ್ದಿವಂತಿಕೆ, ಶಿಸ್ತು, ತಾಳ್ಮೆ ಮತ್ತು ತಂತ್ರಗಾರಿಕೆಯನ್ನು ಹೊಂದಿರಬೇಕು. ಆದರೆ ನಮ್ಮಲ್ಲಿ ಶಿಸ್ತು ಮತ್ತು ತಾಳ್ಮೆಯ ಕೊರತೆಯಿದೆ. ಜೀವನದಲ್ಲಿ ಗೆಲುವೇ ಗುರಿಯಾಗಿರಬಾರದು. ಸೋಲು-ಗೆಲುವು ಎರಡನ್ನು ಕೂಡ ಸ್ವೀಕರಿಸುವ ಗುಣವಿರಬೇಕು ಎಂದು ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ದೇವಿಚರಣ್ ರೈ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಇಲ್ಲಿನ ದೈಹಿಕ ಶಿಕ್ಷಣ ವಿಭಾಗ, ಐಕ್ಯೂಎಸಿ ಘಟಕ ಮತ್ತು ಸುಳ್ಯ ಕಲ್ಮಡ್ಕದ ಬಾಬ್ಬಿ ಫಿಷರ್ಸ್ ಚೆಸ್ ಅಸೋಸಿಯೇಷನ್ ಇದರ ನೇತೃತ್ವದಲ್ಲಿ ನಡೆದ ಎರಡನೇ ಜಿಲ್ಲಾ ಮಟ್ಟದ "ವಿವೇಕಾನಂದ ಜೂನಿಯರ್ ಚೆಸ್ ಟೂರ್ನಮೆಂಟ್" ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.
ಬದುಕಲು ಬೇಕಾದ ಸಂಸ್ಕಾರ ನೀಡುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಚದುರಂಗ ಎಂಬ ಆಟವು ಭಾರತದಲ್ಲಿ 5ನೇ ಶತಮಾನದಲ್ಲಿ ಪ್ರಾರಂಭವಾದ ಆಟವಾಗಿದ್ದು ಇದು ಭಾರತೀಯರು ನೀಡಿದ ಕೊಡುಗೆಯಾಗಿದೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಶುಭ ಹಾರೈಸಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್. ಹಾಗೂ ಮುಖ್ಯ ತೀರ್ಪುಗಾರರಾದ ಪ್ರಸನ್ನ ರಾವ್ ಮಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಯತೀಶ್ ವಂದಿಸಿ, ಗಣಿತ ವಿಭಾಗದ ಉಪನ್ಯಾಸಕಿ ಶ್ರೀಮತಿ ಸೌಮ್ಯ ಹಾಗೂ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಲಾವಣ್ಯ ಸ್ವಾಗತಿಸಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪ್ರಸಾದಿನಿ ಕೆ. ನಿರೂಪಿಸಿದರು.
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅಖಿಲ ಭಾರತ ಅಡಿಕೆ ಬೆಳೆಗಾರರ ಒಕ್ಕೂಟದ ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಮಹೇಶ್ ಪುಚ್ಚಪ್ಪಾಡಿ, ಇಂದು ಗ್ರಾಮೀಣ ವಿದ್ಯಾರ್ಥಿಗಳಲ್ಲೂ ಸಾಕಷ್ಟು ಪ್ರತಿಭೆಗಳಿವೆ. ಆ ಪ್ರತಿಭೆಗೆ ಸಂಸ್ಥೆಗಳು ಅವಕಾಶವನ್ನು ಮಾಡಿಕೊಡಬೇಕು.ಜೊತೆಗೆ ಹೆತ್ತವರು ಮಕ್ಕಳ ಭವಿಷ್ಯಕ್ಕಾಗಿ ಖರ್ಚು ಮಾಡುವುದರ ಜೊತೆಜೊತೆಗೆ ಅವರೊಂದಿಗೆ ಸಮಯ ಕಳೆಯುವುದು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ ಎಂದರು.
ಫಲಿತಾಂಶ:
ಒಂದರಿಂದ ನಾಲ್ಕನೇಯ ತರಗತಿವರೆಗಿನ ವಿಭಾಗದಲ್ಲಿ 6 ಸುತ್ತಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಭವಿತ್ ಪ್ರದೀಪ್ ಶೆಟ್ಟಿ-5.5 ಅಂಕ (ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ಮಂಗಳೂರು) ದ್ವಿತೀಯ ಸ್ಥಾನ ಅತ್ರೇಯರಾಮ್- 5.5 ಅಂಕ (ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್) ತೃತೀಯ ಸ್ಥಾನ ಓಂಕಾರ್ ಕಾಮತ್ ಕೆ- 5 ಅಂಕ (ಶಾರದ ವಿದ್ಯಾಲಯ, ಮಂಗಳೂರು) ಹಾಗೂ ಐದರಿಂದ ಎಂಟನೇಯ ತರಗತಿಯ ವಿಭಾಗದಲ್ಲಿ 7 ಸುತ್ತಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿಹಾನ್ ಶೆಟ್ಟಿ- 7 ಅಂಕ (ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ಮಂಗಳೂರು) ದ್ವಿತೀಯ ಸ್ಥಾನವನ್ನು ಶ್ರೀಶ ವಿ- 6 ಅಂಕ (ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ) ತೃತೀಯ ಸ್ಥಾನವನ್ನು ಕಶ್ಯಪ್ ಆಳ್ವಾ- 6 ಅಂಕ (ವಿವೇಕಾನಂದ ಸಿಬಿಎಸ್ ಸಿ ಸ್ಕೂಲ್ ಪುತ್ತೂರು) ಹಾಗೂ ಒಂಭತ್ತನೇಯ ತರಗತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಿಭಾಗದಲ್ಲಿ 5 ಸುತ್ತಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ರವೀಶ್ ಕೋಟೆ- 4.5 ಅಂಕ (ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಮಂಗಳೂರು) ದ್ವಿತೀಯ ಸ್ಥಾನವನ್ನು ಅಭಿನವ ಪಿ- 4 ಅಂಕ (ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ) ಹಾಗೂ ತೃತೀಯ ಸ್ಥಾನವನ್ನು ದೈವಿಕ್ ಶೆಟ್ಟಿ- 4 ಅಂಕ (ಅಂಬಿಕಾ ವಿದ್ಯಾಲಯ ಪುತ್ತೂರು) ಪಡೆದುಕೊಂಡಿದ್ದಾರೆ. ಇದರೊಂದಿಗೆ ಈ ಮೂರು ಕೆಟಗರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ರಮವಾಗಿ ಒಂದರಿಂದ ಹತ್ತು ಸ್ಥಾನವನ್ನು ಪಡೆದವರಿಗೂ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಗಿದೆ. ಈ ಸ್ಪರ್ದೆಯಲ್ಲಿ ಜಿಲ್ಲೆಯ ವಿವಿಧ ವಿದ್ಯಾ ಸಂಸ್ಥೆಗಳ ಒಟ್ಟು 151 ಸ್ಪರ್ಧಿಗಳು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


