ಉಜಿರೆ: ಉಜಿರೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷಿ ಪ್ರಯೋಗದ ಆರಂಭಿಕ ಚಾಲಕ ಶಕ್ತಿಯಾಗಿ ಹೆಜ್ಜೆಯಿರಿಸಿ ಮೌಲಿಕ ಶೈಕ್ಷಣಿಕ ಕೊಡುಗೆಗಳನ್ನು ನೀಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ನಿಧನರಾಗಿದ್ದಾರೆ. ಅವರಿಗೆ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬುಧವಾರ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಅವರ ದೂರದರ್ಶಿತ್ವ, ಶೈಕ್ಷಣಿಕ ವಲಯವನ್ನು ಗಟ್ಟಿಗೊಳಿಸುವ ಚಿಂತನಾ ಕ್ರಮ, ಶೈಕ್ಷಣಿಕ ಸಂಸ್ಥೆಯ ಮುನ್ನಡೆಯ ಹಾದಿಯಲ್ಲಿ ನೀಡಿದ ಕೊಡುಗೆಗಳ ವಿಶೇಷತೆ ಮತ್ತು ಹೊಸ ಪೀಳಿಗೆಯ ಕುರಿತು ಅವರಿಗಿದ್ದ ವಿಶೇಷ ಕಾಳಜಿಯುವ ಗುಣಗಳನ್ನು ಪ್ರಾಧ್ಯಾಪಕರು ಈ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾರ ಪ್ರೊ.ವಿಶ್ವನಾಥ ಪಿ ಮಾತನಾಡಿ ಕಳೆದ 60 ವರ್ಷಗಳ ಅವಧಿಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ತನ್ನದೇ ಆದ ವಿಶೇಷ ಅಸ್ಮಿತೆಯನ್ನು ಕಂಡುಕೊಳ್ಳುವುದಕ್ಕೆ ಬೇಕಾದ ಭದ್ರಬುನಾದಿಯನ್ನು ಪ್ರೊ.ಎಸ್.ಪ್ರಭಾಕರ್ ಹಾಕಿಕೊಟ್ಟಿದ್ದಾರೆ ಎಂದು ಸ್ಮರಿಸಿದರು. ಆರು ದಶಕಗಳ ಹಿಂದೆ ಸಿದ್ದವನ ಗುರುಕುಲದಲ್ಲಿ ಉಜಿರೆಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುವ ಸಿದ್ಧತೆ ನಡೆದಾಗ ಪ್ರೊ.ಎಸ್.ಪ್ರಭಾಕರ್ ಸರ್ಕಾರಿ ಸೇವೆಯಲ್ಲಿದ್ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಭಾಕರ್ ಅವರನ್ನು ಇಲ್ಲಿಗೆ ಕರೆಸಿಕೊಂಡು ಕಾಲೇಜಿನ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿದ್ದರು. ಉಜಿರೆಯಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದು ದುಸ್ತರ ಎನ್ನುವ ಅವಧಿಯಲ್ಲಿ ಪ್ರಭಾಕರ್ ಅವರು ಶಿಕ್ಷಣ ಸಂಸ್ಥೆಯ ಆರಂಭಿಕ ಹೊಣೆಗಾರಿಕೆಯ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ತಿಳಿಸಿದರು.
ಆಗ ಮೈಸೂರು ವಿಶ್ವವಿದ್ಯಾಲಯದಿಂದ ಸಂಯೋಜಿತ ಮಾನ್ಯತೆಯನ್ನು ಪಡೆಯಬೇಕಾಗಿತ್ತು. ಇಲ್ಲಿ ಕಾಲೇಜು, ಶಿಕ್ಷಣ ಸಂಸ್ಥೆ ಆರಂಭಿಸಿದರೆ ಶಿಕ್ಷಕರೂ ಬರುವುದಿಲ್ಲ. ವಿದ್ಯಾರ್ಥಿಗಳೂ ಪ್ರವೇಶಾಕಾಂಕ್ಷಿಗಳಾಗುವುದಿಲ್ಲ ಎನ್ನುವ ಭಾವನೆ ಬೇರೂರಿತ್ತು. ಅಲ್ಲದೇ ಅಷ್ಟು ಸುಲಭವಾಗಿ ಮೈಸೂರು ವಿಶ್ವವಿದ್ಯಾಲಯದ ಅಫಿಲಿಯೇಷನ್ ಮನ್ನಣೆಯೂ ಸಿಗುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ಪ್ರೊ.ಎಸ್.ಪ್ರಭಾಕರ್ ಅವರು ವಿಶ್ವವಿದ್ಯಾಲಯದ ಅಫಿಲಿಯೇಷನ್ ಪಡೆದು ಎಸ್.ಡಿ.ಎಂ ಕಾಲೇಜನ್ನು ಆರಂಭಿಸಿ ಯಶಸ್ಸು ಗಳಿಸಿದ್ದರು ಎಂದು ನೆನಪಿಸಿಕೊಂಡರು.
ಪ್ರೊ.ಎಸ್.ಪ್ರಭಾಕರ್ ಅವರ ದೂರದರ್ಶಿತ್ವದೊಂದಿಗಿನ ಪ್ರಯತ್ನಗಳು ಭದ್ರಬುನಾದಿ ಹಾಕಿಕೊಟ್ಟಿರುವುದರಿಂದಲೇ ಕಾಲೇಜಿಗೆ ಸತತ ನಾಲ್ಕು ಸಲ ನ್ಯಾಕ್‍ನ ಅತ್ಯುನ್ನತ ಶ್ರೇಣಿಯ ಮನ್ನಣೆ ಲಭಿಸಿತು. ಸಮರ್ಥ ಪ್ರತಿಭಾನ್ವಿತರಿಗೆ ಬೋಧನೆಯ ಅವಕಾಶ ಒದಗಿಸಿಕೊಟ್ಟು ಕಾಲೇಜಿನ ಶ್ರೇಯೋಭಿವೃದ್ಧಿಗೆ ಅವರು ಮೌಲಿಕ ಕೊಡುಗೆಗಳನ್ನು ನೀಡಿದರು ಎಂದು ಪ್ರೊ.ವಿಶ್ವನಾಥ ಪಿ ಹೇಳಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಮಾತನಾಡಿ ಆಳವಾದ ಓದು ಮತ್ತು ಚಿಂತನೆಯ ಮೂಲಕ ಪ್ರೊ.ಎಸ್.ಪ್ರಭಾಕರ್ ಹೊಸ ತಲೆಮಾರನ್ನು ಪ್ರಭಾವಿಸಿದ್ದರು ಎಂದರು. ಪ್ರೊ.ಎಸ್. ಪ್ರಭಾಕರ್ ಅವರು 'ಮಂಜುವಾಣಿ' ಮಾಸಿಕಕ್ಕೆ 'ವಿಶ್ವ ವಿದ್ಯಮಾನ' ಅಂಕಣ ಬರೆಯುತ್ತಿದ್ದರು. 1966ರಿಂದ 1993ರವರೆಗೆ ಈ ಅಂಕಣವನ್ನು ಅವರೇ ಬರೆಯುತ್ತಿದ್ದರು. ತದನಂತರ 'ವಿಶ್ವ ವಿದ್ಯಮಾನ' ಅಂಕಣ ಬರಹ ಬರೆಯುವ ಹೊಣೆಗಾರಿಕೆಯನ್ನು ನನಗೆ ನೀಡಿದರು. 1993ರಿಂದ ಈ ಅಂಕಣ ಬರಹ ಬರೆಯುವುದಕ್ಕೆ ಅವರು ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಎಸ್.ಡಿ.ಎಂ ಕಾಲೇಜಿನ ಅಕ್ಯಾಡೆಮಿಕ್ ಕೋಆರ್ಡಿನೇಟರ್ ಎಸ್.ಎನ್.ಕಾಕತ್ಕರ್ ಮಾತನಾಡಿ ಪ್ರೊ.ಎಸ್.ಪ್ರಭಾಕರ್ ಸಮಯಕ್ಕೆ ಆದ್ಯತೆ ನೀಡುತ್ತಿದ್ದ ಶಿಸ್ತುಬದ್ಧ ವ್ಯಕ್ತಿತ್ವ ಎಂದರು. 'ಬಿ ಬ್ರೀಫ್, ಐ ವ್ಯಾಲ್ಯೂ ಯುವರ್ ಟೈಮ್' ಎಂಬ ಸಾಲಿನೊಂದಿಗಿನ ಬೋರ್ಡ್ ಅವರ ಕೊಠಡಿಯಲ್ಲಿ ಸಮಯದ ಮಹತ್ವವನ್ನು ಸಾರುತ್ತಿತ್ತು. ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸುವ ಕೌಶಲ್ಯ ಅವರಲ್ಲಿತ್ತು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ವ್ಯಕ್ತಿತ್ವ ಗಟ್ಟಿಗೊಳ್ಳುತ್ತದೆ ಎಂದರು.
ಎಸ್.ಡಿ.ಎಂ ಕಾಲೇಜಿನ ಆಡಳಿತಾಂಗ ಕುಲಸಚಿವ ಪ್ರೊ. ಎನ್. ಶ್ರೀಧರ್ ಎನ್. ಭಟ್ ಮಾತನಾಡಿದರು. ಪ್ರೊ.ಎಸ್.ಪ್ರಭಾಕರ್ ಅವರು 1968ರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಕಾರ್ಯಕ್ರಮದ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದರು ಎಂದು ಸ್ಮರಿಸಿದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಎಂದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


