ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಕರ್ನಾಟಕದ ಕಾರವಾರ ನೌಕಾ ತಾಣದಲ್ಲಿ ಭಾರತೀಯ ನೌಕಾಪಡೆಯ ಸ್ವದೇಶಿ ಕಲ್ವರಿ ವರ್ಗದ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವಾಗ್ಶೀರ್‌ನಲ್ಲಿ ಸಮುದ್ರ ಯಾನ (ಸಾರ್ಟಿ) ಕೈಗೊಂಡರು. ಪಶ್ಚಿಮ ಕರಾವಳಿಯಲ್ಲಿ ನಡೆದ ಈ ಸಮುದ್ರ ಯಾನದ ವೇಳೆ ಸೇನಾಪಡೆಯ ಪರಮಾಧ್ಯಕ್ಷೆಯಾದ ರಾಷ್ಟ್ರಪತಿಯನ್ನು ನೌಕಾ ಸಿಬ್ಬಂದಿ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ಜೊತೆಯಾಗಿ ಕರೆದೊಯ್ದರು.
ಕಲ್ವರಿ ವರ್ಗದ ಜಲಾಂತರ್ಗಾಮಿ ನೌಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೈಗೊಂಡ ಈ ಮೊದಲ ಸಮುದ್ರ ಯಾನವು ಐತಿಹಾಸಿಕವಾಗಿದ್ದು, 2006ರಲ್ಲಿ ವಿಶಾಖಪಟ್ಟಣದಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣಿಸಿದ್ದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಂತರ ಈ ಗೌರವ ಪಡೆದ ಎರಡನೇ ರಾಷ್ಟ್ರಪತಿಯಾಗಿದ್ದಾರೆ.
ಇಂದು ಕಾರವಾರ ಕರಾವಳಿಯ ಸಮೀಪ ನಡೆದ ಸುಮಾರು ಎರಡು ಗಂಟೆಗಳ ಸಮುದ್ರ ಯಾನದಲ್ಲಿ, ನೌಕಾ ವಸ್ತ್ರ ಹಾಗೂ ಟೋಪಿಯನ್ನು ಧರಿಸಿದ ರಾಷ್ಟ್ರಪತಿ ಮುರ್ಮು ಅವರು ಸ್ವದೇಶಿ ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ದೃಶ್ಯವು ಗಮನಸೆಳೆಯಿತು. ಮಜಗಾಂ ಡಾಕ್ ಮೂಲಕ ನಿರ್ಮಿಸಲಾದ ಈ ಕಲ್ವರಿ ವರ್ಗದ ಜಲಾಂತರ್ಗಾಮಿ ನೌಕೆ ಅತ್ಯಾಧುನಿಕ ಗುಪ್ತಚರ ತಂತ್ರಜ್ಞಾನ, ಯುದ್ಧ ವ್ಯವಸ್ಥೆಗಳು ಹಾಗೂ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿದೆ.
ಸ್ವದೇಶಿ ಜಲಾಂತರ್ಗಾಮಿ ನೌಕೆಯಲ್ಲಿ ರಾಷ್ಟ್ರಪತಿ ಕೈಗೊಂಡ ಈ ಮೊದಲ ಸಮುದ್ರ ಯಾನವು, ಕಾರ್ಯಾಚರಣಾತ್ಮಕ ಪರಿಸ್ಥಿತಿಗಳಲ್ಲಿ ಸಶಸ್ತ್ರ ಪಡೆಗಳೊಂದಿಗೆ ಅವರ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ರಾಷ್ಟ್ರಪತಿ ಅವರು ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಕಾರ್ಯಾಚರಣಾ ಪ್ರದರ್ಶನವನ್ನು ವೀಕ್ಷಿಸಿದ್ದರು.
ಸಮುದ್ರ ಯಾನದ ನಂತರ ತಮ್ಮ ಅಭಿಪ್ರಾಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜಲಾಂತರ್ಗಾಮಿ ನೌಕೆಯಲ್ಲಿ ಸಾಗರದಲ್ಲಿ ಸಂಚರಿಸುವುದು, ಮುಳುಗುವುದು ಹಾಗೂ ನಾವಿಕರು ಮತ್ತು ಅಧಿಕಾರಿಗಳೊಂದಿಗೆ ಸಮಯ ಕಳೆಯುವುದು ಅತ್ಯಂತ ವಿಶೇಷ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ. ಐಎನ್‌ಎಸ್ ವಾಗ್ಶೀರ್‌ನ ಪ್ರದರ್ಶನವು ಸಿಬ್ಬಂದಿಯ ಅಪೂರ್ವ ಸಿದ್ಧತೆ ಮತ್ತು ಸಮರ್ಪಣೆಯನ್ನು ಸ್ಪಷ್ಟವಾಗಿ ತೋರಿಸಿದೆ ಎಂದು ಅವರು ಪ್ರಶಂಸಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


