ಮಂಗಳೂರು: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಕಲಾಸ್ಪಂದನ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು. ಅಗರಿ ಸಂಸ್ಮರಣಾ ವೇದಿಕೆಯ ಅಧ್ಯಕ್ಷರು ಹಾಗೂ ಅಗರಿ ಎಂಟರ್ಪ್ರೈಸಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್. ಹೆಗಡೆ, ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಡಾ. ಜಯಶ್ರೀ ಬೋಳಾರ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ.ಎಂ., ರಾಜ್ಯೋತ್ಸವ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಕಲಾಸ್ಪಂದನ ಕಾರ್ಯಕ್ರಮದ ಸಂಯೋಜಕರಾದ ಡಾ. ಆಶಾ ಸರಸ್ವತಿ ಬಿ., ಸಹ ಸಂಯೋಜಕರಾದ ಪ್ರೊ. ವರ್ಷಾ ಎ., ವಿದ್ಯಾರ್ಥಿ ಸಮನ್ವಯಕಾರರಾದ ಹಿಮ್ಮತ್ ಕೇದಾರ್ ಕೆ.ಟಿ., ಭರತ್, ರಾಹುಲ್ ನಾಯ್ಕ್ ಮತ್ತು ಕುಮಾರಿ ಆರ್ಯಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭವನ್ನು "ಕರ್ನಾಟಕ ಸ್ವಾಭಿಮಾನದ ನಡಿಗೆ"ಯ ಮೂಲಕ ಪ್ರಾರಂಭಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯಿಂದ ಸಭಾ ವೇದಿಕೆಯವರೆಗೆ ಆಯೋಜಿಸಿದ್ದ ಕರ್ನಾಟಕದ ಸ್ವಾಭಿಮಾನದ ನಡಿಗೆಯಲ್ಲಿ ಟ್ರ್ಯಾಕ್ಟರ್, ಬೈಕುಗಳು, ಕಾರುಗಳು, ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿಗಳು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸಿ, ಕನ್ನಡ ಭಾಷಾಭಿಮಾನದ ಘೋಷಣೆಯನ್ನು ಮುಗಿಲೆತ್ತರಕ್ಕೆ ಮೊಳಗಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು, ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷಾ ಏಕೀಕರಣ ಮತ್ತು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಸ್ಮಿತೆಯ ಕುರಿತು ಮಾತನಾಡಿದರು. ಕನ್ನಡ ಭಾಷೆಯನ್ನು ಬೆಳೆಸಿಕೊಂಡು ಮುಂದುವರಿಯುವ ಜವಾಬ್ದಾರಿಯು ಭವಿಷ್ಯದ ರಾಯಭಾರಿಗಳಾದ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಚೀನಾ ಜಪಾನ್ ಜರ್ಮನಿ ದೇಶಗಳು ತಮ್ಮ ಭಾಷೆಯನ್ನು ಉದ್ಯಮಶೀಲತೆಯ ಭಾಷೆಯನ್ನಾಗಿ ರೂಪುಗೊಳಿಸಿದ ರೀತಿಯಲ್ಲಿ ನಮ್ಮ ನಾಡ ಭಾಷೆ ಕನ್ನಡವನ್ನು ಸಹ ಜಗತ್ತಿನ ಉದ್ಯಮಶೀಲತಾ ಭಾಷೆಯನ್ನಾಗಿ ರೂಪುಗೊಳಿಸಬೇಕು. ಈ ದಿಶೆಯಲ್ಲಿ, ಇಂಜಿನಿಯರಿಂಗ್ ಮತ್ತು ಸಂಬಂಧಿಸಿದ ತಾಂತ್ರಿಕ ವಿಷಯಗಳ ಪಠ್ಯ ಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಿ ಪ್ರಕಟಿಸುವ ಕಾರ್ಯವು ಮತ್ತಷ್ಟು ಚುರುಕುಗೊಳ್ಳಬೇಕಿದೆ. ಇದರಿಂದ ಗ್ರಾಮೀಣ ಭಾಗಗಳ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು. ಕಳೆದ ಸಹಸ್ರಾರು ವರ್ಷಗಳಿಂದ ಕರುನಾಡನ್ನು ಆಳಿದ ಚಾಳುಕ್ಯರು, ಕದಂಬರು, ಹೊಯ್ಸಳರು ಮತ್ತು ಒಡೆಯರ್ ರಾಜವಂಶದವರು ಕರುನಾಡಿಗೆ ನೀಡಿದ ಕೊಡುಗೆ ಅಪಾರ. ಶತಮಾನಗಳಷ್ಟು ಹಳೆಯದಾದ ಶ್ರೀಮಂತ ವಾಸ್ತುಶಿಲ್ಪ, ಜಲಾಶಯನ ವ್ಯವಸ್ಥೆ, ಜಲ ಸಂರಕ್ಷಣ, ಹಾಗೂ ಕಟ್ಟಡ ರಚನೆಗಳು ಇಂದಿಗೂ ಸಹ ನಮ್ಮ ಪುರಾತನ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಮೈಸೂರಿನ ದಿವಾನರಾಗಿದ್ದ ಶ್ರೀ ಶೇಷಾದ್ರಿ ಐಯ್ಯರ್ ರವರು ನಾಡಿಗೆ ನೀಡಿದ ಕೊಡುಗೆಯನ್ನು ಎಳೆಎಳೆಯಾಗಿ ವಿವರಿಸಿದ ಅವರು, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಭಾಷೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು, ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಹೇಳಿದರು. ಇಂದಿನ ಯುವಜನತೆಯು ಸಮಾಜಮುಖಿಯಾಗಿ ದುಡಿದು, ಪ್ತಸ್ತುತ ಸಮಸ್ಯೆಗಳಿಗೆ ಕೈಗೆಟಕುವ ಬೆಲೆಯಲ್ಲಿ ಪರಿಹಾರವನ್ನು ನೀಡಿ, ಕನ್ನಡ ಭಾಷೆಯನ್ನು ಜಾಗತೀಕರಣದ ಹಿನ್ನಲೆಯಲ್ಲಿ ಉದ್ಯಮಶೀಲತಾ ಭಾಷೆಯಾಗಿ ಬೆಳೆಸೋಣ, ಇದರ ಜೊತೆಗೆ ಕನ್ನಡ ಸಂಸ್ಕೃತಿಯನ್ನು ಕೂಡಾ ಮತ್ತಷ್ಟು ಶ್ರೀಮಂತಗೊಳಿಸೋಣ ಎಂದು ಆಶಿಸಿದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿ ಅಗರಿ ರಾಘವೇಂದ್ರ ರಾವ್ ರವರು ಮಾತನಾಡಿ, ಅದ್ದೂರಿಯಾಗಿ ಆಯೋಜಿಸಿದ ಸ್ವಾಭಿಮಾನದ ನಡಿಗೆ ಮತ್ತು 70 ನೇ ಕರ್ನಾಟಕ ರಾಜ್ಯೋತ್ಸವ, ಹಾಗೂ ಕಲಾಸ್ಪಂದನ ಕಾರ್ಯಕ್ರಮದ ಸಂಯೋಜಕರನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಆಂಗ್ಲ ಭಾಷಾ ಮಾಧ್ಯಮದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಇಷ್ಟು ಅದ್ದೂರಿಯಾಗಿ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ, ಇಂದು ಮುಕ್ಕದಲ್ಲಿ, ಶ್ರೀನಿವಾಸ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡದ ಕ್ರಾಂತಿಯನ್ನೇ ಮಾಡಿದೆ. ಕನ್ನಡ ಭಾಷೆಯನ್ನು ಮತ್ತಷ್ಟು ಸಧೃಡಗೊಳಿಸುವ ಕೆಲಸವನ್ನು ಇಂದಿನ ಯುವಪೀಳಿಗೆಯು ಮಾಡಬೇಕಿದೆ ಎಂದು ಹೇಳಿದರು. ನಾಡಿನ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ, ಕನ್ನಡ ಭಾಷೆಗೆ ಮತ್ತು ಕನ್ನಡಿಗರಿಗೆ ಗೌರವ ನೀಡಬೇಕು, ಕನ್ನಡವನ್ನು ಮತ್ತು ಕನ್ನಡಿಗರನ್ನು ಬೆಳೆಸಬೇಕು, ಕನ್ನಡದ ಸಾಹಿತಿ ಮತ್ತು ಕವಿಗಳನ್ನು ಪ್ರೋತ್ಸಾಹಿಸಬೇಕು, ಉದ್ಯೋಗದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು, ಆ ಮೂಲಕ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಮತ್ತಷ್ಟು ಶ್ರೀಮಂತಗೊಳಿಸಬೇಕು ಎಂದು ಕಿವಿಮಾತು ಹೇಳಿದರು. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಶ್ರೀಮಂತ ಕಲೆಯಾದ ಯಕ್ಷಗಾನದ ತವರೂರು. ತಮ್ಮ ಅಜ್ಜ, ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು ಕನ್ನಡ ಭಾಷೆಯಲ್ಲಿ ರಚಿಸಿದ 318 ಪದ್ಯಗಳನ್ನೊಳಗೊಂಡ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಪ್ರಸಂಗವು ಶೇಕ್ಸ್ ಪಿಯರ್ ರಚಿಸಿದ ನಾಟಕಗಳಿಗಿಂತಲೂ ಅಧಿಕ ಸಂಖ್ಯೆಯ ಪ್ರದರ್ಶನಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸುವ ಮೂಲಕ ಗಿನ್ನೆಸ್ ದಾಖಲೆಯನ್ನು ಹೊಂದಿದೆ. ಕನ್ನಡದ ಕವಿಗಳು, ಸಾಹಿತಿಗಳು, ಅಭಿಮಾನಿಗಳು ಮತ್ತು ತಂತ್ರಜ್ಞರು ಮನಸ್ಸು ಮಾಡಿದರೆ ಯಾವುದೇ ಕಾರ್ಯವನ್ನು ಸಹ ಸಾಧಿಸಬಹುದು, ಆದ್ದರಿಂದ ಕನ್ನಡ ಮತ್ತು ಕನ್ನಡಿಗರ ರಕ್ಷಣೆಗಾಗಿ, ಉಳಿವಿಗಾಗಿ ಮತ್ತು ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಡಾ. ಜಯಶ್ರೀ ಬೋಳಾರ್ ರವರು ಮಾತನಾಡಿ, ಸುಂದರ, ಸುಲಲಿತ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಕನ್ನಡ ಭಾಷೆಯ ಸೌಂದರ್ಯ ಮತ್ತು ಪ್ರಾಮುಖ್ಯತೆಯನ್ನು ಪ್ರತಿಯೋರ್ವ ಕನ್ನಡಿಗರು ಅರಿತು, ಅನುಭವಿಸಿ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಮಂತ್ರವನ್ನು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಡಾ. ಪ್ರವೀಣ್ ಬಿ.ಎಂ. ರವರು ಮಾತನಾಡಿ, ಕರ್ನಾಟಕ ರಾಜ್ಯೋತ್ಸವವು ಕೇವಲ ಒಂದು ದಿನಕ್ಕೆ ಸ್ಥಿಮಿತವಾಗಿರದೆ, ಕನ್ನಡದ ಸೊಗಡು ಮತ್ತು ಕಂಪನವು ವರ್ಷವಿಡೀ ಮುಕ್ಕ ಕ್ಯಾಂಪಸ್ಸಿನಲ್ಲಿ ವಿಜೃಂಭಿಸಲಿ ಎಂದು ಆಶಿಸಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಮಾತನಾಡಿ, ನಾಡು–ನುಡಿ–ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಹೆಮ್ಮೆಯಿಂದ ಧರಿಸಿದ ನಮ್ಮ ಕನ್ನಡ ನಾಡು, ಏಕತೆ, ಸಹಜೀವನ ಮತ್ತು ಮಾನವೀಯ ಮೌಲ್ಯಗಳ ದೀಪವಾಗಿ ಸದಾ ಬೆಳಗಲಿ ಎಂದು ಹೇಳಿದರು. ಕನ್ನಡ ಭಾಷೆಯ ಸೌಂದರ್ಯ, ಸಾಹಿತ್ಯದ ವೈಭವ ಮತ್ತು ಜನರ ಶ್ರಮಶೀಲತೆ ನಮ್ಮ ಗುರುತಾಗಿರಲಿ. ಕನ್ನಡವನ್ನು ಉಳಿಸಿ–ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾಯಕವನ್ನು ನಾವೆಲ್ಲರೂ ಮಾಡೋಣ ಎಂದು ಹೇಳಿ, ಶುಭವನ್ನು ಕೋರಿದರು.
ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಸ್ವಾಗತ ಭಾಷಣವನ್ನು ಮಾಡಿದರು ಮತ್ತು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಮುಖ್ಯ ಅತಿಥಿಗಳು ಪ್ರದಾನ ಮಾಡಿದರು. ಪ್ರೊ ವರ್ಷಾ ಎ. ಶೆಟ್ಟಿ ಯವರು ವಿಜೇತರ ಮಾಹಿತಿಯನ್ನು ಸಭೆಗೆ ನೀಡಿದರು. ಕಲಾಸ್ಪಂದನ ಪ್ರಯುಕ್ತ ಕಳೆದ ಒಂದು ವಾರದಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಮುಖ್ಯ ಅತಿಥಿಗಳು ಪ್ರದಾನ ಮಾಡಿದರು. ಪ್ರೊ ರಮೀಸಾ ರವರು ವಿಜೇತರ ಮಾಹಿತಿಯನ್ನು ಸಭೆಗೆ ನೀಡಿದರು.
ಕುಮಾರಿ ಮೋನಿಕಾ ಗೌಡ ಮತ್ತು ಶ್ರೀ ಕರಿಸಿದ್ದೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಆಶಾ ಸರಸ್ವತಿ ಯವರು ವಂದನಾರ್ಪಣೆ ಸಲ್ಲಿಸಿದರು. ಕುಮಾರಿ ಧನ್ಯಶ್ರೀ ರಾವ್ ಪ್ರಾರ್ಥನೆಯನ್ನು ಮಾಡಿದರು. ಕುಮಾರಿ ಐಶ್ವರ್ಯ ರಮೇಶ್ ನಾಯ್ಕ್, ಅಭಿಜ್ಞಾ, ಅಮೂಲ್ಯ ಎಸ್.ಡಿ., ಶಾಂಭವಿ ನಾಯ್ಕ್, ದಿಯಾ, ಅನನ್ಯ ವಿ. ನಾಯ್ಕ್, ದೀಕ್ಷಾ ಎಂ. ನಾಯ್ಕ್, ಪೂಜಾ, ಮೇಘಾ ನಾಯ್ಕ್, ರಕ್ಷಿತಾ, ತೇಜಸ್ವಿನಿ ಮಳಗಿ, ಮಾನಸ ಮತ್ತು ನಾಗಶ್ರೀ ನಾಡಗೀತೆಯನ್ನು ಹಾಡಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ, ಕನ್ನಡ ಭಾಷೆ ಮತ್ತು ಗೀತೆಗಳನ್ನು ಆಧರಿಸಿದ ಮನೋರಂಜನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಬಳಿಕ, ಸುಮಾರು ಮೂರು ಗಂಟೆಗಳ ಕಾಲ, "ಭಾರತ ವೈಭವ" ಹಿನ್ನಲೆಯನ್ನು ಆಧರಿಸಿ ಆಯೋಜಿಸಿದ್ದ ಮನೋರಂಜನಾ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಟ್ರೋಫಿಯನ್ನು ವಿತರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


