ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 39/2025ಕ್ಕೆ ಸಂಬಂಧಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಕಾಲತ್ತು ಸಲ್ಲಿಸಿರುವ ರಾಜ್ಯದ ಪ್ರಸಿದ್ಧ ಹಿರಿಯ ನ್ಯಾಯವಾದಿ ಶ್ರೀ ಸಿ.ವಿ. ನಾಗೇಶ್ ಅವರು ಇಂದು ಮಧ್ಯಾಹ್ನ 2.30ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ, ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ದೂರಿನ ಅರ್ಜಿಯಲ್ಲಿ ಸತ್ಯಾಂಶಗಳನ್ನು ಮುಚ್ಚುಮರೆ ಮಾಡಲಾಗಿದ್ದು, ಕ್ರೈಂ ನಂ. 39/2025ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಗಂಭೀರ ದೋಷಾರೋಪಗಳನ್ನು ಮಾಡಲಾಗಿತ್ತು ಎಂದು ಅವರು ಹೇಳಿದರು. ಈ ದೂರಿನ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಲಾಗಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆ ವರದಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿತ್ತು ಎಂಬುದು ಸ್ಪಷ್ಟವಾಗಿ ಬಹಿರಂಗವಾಗಿದೆ ಎಂದು ವಿವರಿಸಿದರು.
ತನಿಖಾ ವರದಿಯ ಪ್ರಕಾರ, ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನಹಾನಿ ನಡೆಸಲಾಗಿದೆ. ಇದೀಗ ಈ ಎಲ್ಲಾ ಹುನ್ನಾರಗಳು ಬಯಲಿಗೆ ಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳವೇ ಈ ಪ್ರಕರಣದಲ್ಲಿ ಬಲಿಪಶುವಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ, ಸುಳ್ಳು ಆರೋಪಗಳನ್ನು ಎದುರಿಸಿದ ಶ್ರೀ ಕ್ಷೇತ್ರದ ದೇವಾಲಯ ಹಾಗೂ ಅದರ ಸಿಬ್ಬಂದಿಗಳು ಸಂತ್ರಸ್ತ ಸ್ಥಾನದಲ್ಲಿದ್ದಾರೆ ಎಂದು ಪುತ್ತೂರಿನ ಹಿರಿಯ ವಕೀಲ ಶ್ರೀ ಮಹೇಶ್ ಕಜೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಹಿರಿಯ ವಕೀಲ ಶ್ರೀ ಸಿ.ವಿ. ನಾಗೇಶ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಈ ಸಂದರ್ಭ ಕ್ಷೇತ್ರದ ಪರ ವಕೀಲರಾದ ಶ್ರೀ ರಾಜಶೇಖರ್ ಹಿಲ್ಯಾರು ಅವರು ಕಲಾಪದಲ್ಲಿ ಹಾಜರಿದ್ದರು.
ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಜನವರಿ 3ರಂದು ಮುಂದೂಡಿದೆ.


