ತೆಂಕನಿಡಿಯೂರು ಕಾಲೇಜಿನಲ್ಲಿ ಏಯ್ಡ್ಸ್‌ ದಿನಾಚರಣೆ

Upayuktha
0

ಭಿನ್ನಸಾಮರ್ಥ್ಯರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ 




ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಐಕ್ಯುಎಸಿ ಹಾಗೂ “ಅಭ್ಯುದಯ” ಸಮಾಜಕಾರ್ಯ ವೇದಿಕೆ ಇವರ ಆಶ್ರಯದಲ್ಲಿ ವಿಶ್ವ ಏಯ್ಡ್ಸ್‌ ದಿನಾಚರಣೆ ಮತ್ತು ಭಿನ್ನಸಾಮರ್ಥ್ಯರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಏಯ್ಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಸಂಯೋಜಕರಾದ ಮಹಾಬಲೇಶ ವಿಶ್ವ ಏಯ್ಡ್ಸ್‌ ದಿನದ ಹಿನ್ನೆಲೆ ಯನ್ನು ವಿವರಿಸುತ್ತಾ “ಏಯ್ಡ್ಸ್‌ ಎಂಬುದು ಎಚ್‌ಐವಿ ಎಂಬ ವೈರಸ್‌ ನಿಂದ ಬರುವ ಸೋಂಕಾಗಿದ್ದು ಇದು ತುಂಬಾ ದೊಡ್ಡ ಇತಿಹಾಸವನ್ನು ಹೊಂದಿಲ್ಲ. 1981 ರಲ್ಲಿ ಮೊದಲಬಾರಿಗೆ ಏಯ್ಡ್ಸ್‌ ಪ್ರಕರಣವೊಂದು ವರದಿಯಾದ ಬಳಿಕ ನಂತರದ ವರ್ಷಗಳಲ್ಲಿ ಹಲವಾರು ಜನರು ಈ ಖಾಯಿಲೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು.


ಹಾಗಾಗಿ ಈ ಗಂಭೀರ ಖಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಮತ್ತು ತಪ್ಪು ಕಲ್ಪನೆಗಳನ್ನು ತೊಡೆದುಹಾಕುವ ಉದ್ಧೇಶದಿಂದ ಡಬ್ಲ್ಯು.ಎಚ್.ಒ. 1988ರಿಂದ ಪ್ರತಿ ಡಿಸೆಂಬರ್‌ 1 ರಂದು ವಿಶ್ವ ಏಯ್ಡ್ಸ್‌ ದಿನವನ್ನು ಆಚರಿಸಲು ಘೋಷಿಸಿತು. ಕೇವಲ ನಾಲ್ಕು ವಿಧಾನಗಳಿಂದ ಎಚ್.ಐ.ವಿ ಹರಡುತ್ತದೆ; ಸೋಂಕು ತಗುಲಿದ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ, ಸೋಕಿತ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿ ದಾನವಾಗಿ ಪಡೆದರೆ, ಸೋಂಕಿತ ವ್ಯಕ್ತಿ ಬಳಸಿದ ಸೂಜಿ ಸಿರಿಂಜ್‌ ಗಳನ್ನು ಇನ್ನೊಬ್ಬ ವ್ಯಕ್ತಿ ಬಳಸಿದಾಗ, ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಹಾಲುಣಿಸುವ ಸಮಯದಲ್ಲಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ.


ಇವುಗಳನ್ನು ಹೊರತುಪಡಿಸಿ ಸೋಂಕಿತ ವ್ಯಕ್ತಿಗಳೊಂದಿಗೆ ಮಾತನಾಡುವುದರಿಂದ, ಜೊತೆಗೆ ಕುಳಿತು ಊಟ ಮಾಡುವುದರಿಂದ, ಬಟ್ಟೆಗಳಿಂದ, ಮುಟ್ಟುವುದರಿಂದ ಇದು ಹರಡುವುದಿಲ್ಲ. ಇದರೊಂದಿಗೆ ಎಚ್.ಐ.ವಿ ಪಾಸಿಟಿವ್‌ ಮತ್ತು ಏಯ್ಡ್ಸ್‌ ರೋಗಿಗಳು ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೇ ಸುರಕ್ಷಿತ ಜೀವನ ಸಡೆಸುವಂತಾಗಬೇಕು. “ ಎಂದರು. ಮುಂದುವರಿಸುತ್ತಾ “ ಅಡ್ಡಿಗಳನ್ನು ನಿವಾರಿಸುವುದು ಮತ್ತು ಏಯ್ಡ್ಸ್‌ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು ಎಂಬ ಥೀಮ್‌ನೊಂದಿಗೆ 2025ರ ಏಯ್ಡ್ಸ್‌ ದಿನಾಚರಣೆ ನಡೆಸುತ್ತಿದ್ದು, ಎಚ್.ಐ.ವಿ ಮತ್ತು ಏಯ್ಡ್ಸ್‌ ಕುರಿತಾದ ಮಾಹಿತಿ ಹಾಗೂ ಆಪ್ತಸಮಾಲೋಚನೆಗಾಗಿ ಉಚಿತ 24 x 7 ಸಹಾಯವಾಣಿ ಸಂಖ್ಯೆ 1097ನ್ನು ಸಂಪರ್ಕಿಸಬಹುದು"ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.


ಉಡುಪಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಆಯೋಜನೆಯಲ್ಲಿ ವಿಕಲಚೇತನ ಸಪ್ತಾಹ ನಡೆಸುತ್ತಿದ್ದು ಇದರ ಅಂಗವಾಗಿ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ಮಾಹಿತಿ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದು, ನೋಡಲ್‌ ಅಧಿಕಾರಿ ಶ್ರೀಮತಿ ಜಯಶ್ರೀ ಮಾತನಾಡಿ ವಿಕಲಚೇತನರ ಸಪ್ತಾಹದ ಅಂಗವಾಗಿ ಸರ್ಕಾರದಿಂದ ಭಿನ್ನಸಾಮರ್ಥ್ಯ ರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಪುನರ್ವಸತಿ ಕೇಂದ್ರದ ಮನಶಾಸ್ತ್ರಜ್ಞ ಶ್ರೀ ವೈಶಾಖ್‌ ವಾರಂಬಳ್ಳಿ ಮಾತನಾಡಿ 21 ವಿಧದ ಅಂಗವೈಕಲ್ಯಗಳ ಬಗ್ಗೆ ಮಾಹಿತಿಯಿತ್ತರು. ಫಿಸಿಯೊಥೆರಪಿಸ್ಟ್‌ ಡಾ ಶ್ರೇಯ, ಪ್ರಾಸ್ಥೆಟಿಕ್‌ ಮತ್ತು ಅರ್ಥೊಟಿಸ್ಟ್‌ ಇಂಜಿನಿಯರ್‌ ಕು. ಜೆನಿಸ್‌ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಷ್ಮಾ ಟಿ. ಪ್ರಾಸ್ತಾವಿಕವಾಗಿ ಮಾತನಾಡಿ “ಏಯ್ಡ್ಸ್‌ ದಿನಾಚರಣೆಯನ್ನು ಸಮುದಾಯದಲ್ಲಿ ಸಾರ್ವಜನಿಕರಿಗೆ ಎಚ್.ಐ.ವಿ /ಏಯ್ಡ್ಸ್‌ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. ಹಾಗೂ ಭಿನ್ನ ಸಾಮರ್ಥ್ಯ ವ್ಯಕ್ತಿಗಳ ಕಲ್ಯಾಣಕ್ಕಾಗಿ ಸರ್ಕಾರ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿ ತಂದಿದ್ದು ವಿಕಲಚೇತನ ಸಪ್ತಾಹದ ಅಂಗವಾಗಿ ಈ ಬಗ್ಗೆ ಸಮಾಜಕಾರ್ಯ ವಿದ್ಯಾರ್ಥಿಗಳಾಗಿ ನಾವು ಮಾಹಿತಿಯನ್ನು ತಿಳಿದುಕೊಂಡು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು”ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಬಿಂದು ಟಿ. ಅಧ್ಯಕ್ಷತೆ ವಹಿಸಿದ್ದು, ಭಾರತೀಯ ರೆಡ್‌ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಡಾ. ವಿಷ್ಣುಮೂರ್ತಿ ಪ್ರಭು ಹಾಗೂ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ಪ್ರಭಾಕರ ಆಚಾರ್ಯ,  ಸಹನ, ಸುಮತಿ ಬಿಲ್ಲವ, ಅಮಿತ, ರಾಜೇಂದ್ರ ಎಂ, ರವಿ ಎಸ್.‌ ಉಪಸ್ಥಿತರಿದ್ದರು. ಪ್ರಥಮ ಎಂ.ಎಸ್‌.ಡಬ್ಲ್ಯು ವಿದ್ಯಾರ್ಥಿನಿ ಚಂದ್ರಕಲಾ ಸ್ವಾಗತಿಸಿ, ದ್ವಿತೀಯ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿ ಅಭಿಷೇಕ್‌ ವಂದಿಸಿದರು. ದ್ವಿತೀಯ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿ ಮಹಮ್ಮದ್‌ ಸಹದ್‌ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top