ತುಳಸಿ ಎನ್ನುವದು ಒಂದು ಪುಟ್ಟ ಔಷಧೀಯ ಗುಣವನ್ನು ಹೊಂದಿದ ಸಸ್ಯ. ಇದಕ್ಕೆ ಧಾರ್ಮಿಕವಾಗಿ ಅತ್ಯಂತ ಪವಿತ್ರ ಸ್ಥಾನ ನೀಡಲಾಗಿದೆ. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಉತ್ಥಾನ ದ್ವಾದಶಿಯಂದು ತುಳಸೀ ವಿವಾಹ ಆಚರಿಸಲಾಗುವದು. ಈ ಹಬ್ಬಕ್ಕೆ ತುಳಸಿ ಅಯನ, ತುಳಸಿಹಬ್ಬ, ತುಳಸೀ ವಿವಾಹ, ತುಳಸೀ ಮದುವೆಯಂದು ಕರೆಯುವರು. ವಿಷ್ಣುವಿನ ಪತ್ನಿಯಾದ ತುಳಸಿ ಅತ್ಯಂತ ಶ್ರೇಷ್ಟ ಹಾಗೂ ಶಕ್ತಿಯನ್ನು ಹೊಂದಿದ ದೇವಿ ಎಂದು ಹೇಳಲಾಗಿದೆ. ಪವಿತ್ರ ಹಾಗೂ ಶ್ರೇಷ್ಟತೆಯಿಂದ ಕೂಡಿದ ತುಳಸಿದಳ ಬಳಸದೇ ದೇವತಾಕಾರ್ಯ ಸಂಪನ್ನವಾಗುವದಿಲ್ಲ. ವಿಷ್ಣುದೇವರ ಪತ್ನಿ ತುಳಸಿ ಲಕ್ಷ್ಮಿದೇವಿಯ ಸಂಕೇತ ಎಂಬ ನಂಬಿಕೆ ಇದೆ. ತುಳಸೀ ನೀರನ್ನು ಮನೆಯ ವಸ್ತುಗಳನ್ನು ವ್ಯಕ್ತಿಯನ್ನು ಪ್ರೋಕ್ಷಣೆ ಮಾಡಿ ಶುದ್ಧಗೊಳಿಸಲಾಗುವದು. ಇದು ಅತ್ಯಂತ ಪವಿತ್ರ ಶಕ್ತಿ ಹೊಂದಿದೆ. ಅನಾರೋಗ್ಯ ಹೋಗಲಾಡಿಸುವ ಶಕ್ತಿ ಕೂಡ ಇದು ಹೊಂದಿದೆ.
ಪುರಾಣಗಳ ಪ್ರಕಾರ ತುಳಸಿ- ತುಳಸಿ ಜಲಂಧರನ ಹೆಂಡತಿಯಾದ ವೃಂದಾ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾರದೇ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆಹೋದಾಗ ಪತೀವೃತೆಯಾದ ವೃಂದಳ ಪಾತೀವೃತ್ಯ ಭಂಗಮಾಡಿನಂತೆ. ಜಲಂಧರ ರಣರಂಗದಲ್ಲಿ ಮಡಿದಾಗ ವಿಷ್ಣುವಿಗೆ ಶಾಪನೀಡಿ ವೃಂದಾ ಜಲಂಧರನ ಶವದೊಂದಿಗೆ ಬೂದಿಯಾದಾಗ ಮುಂದೆ ಆ ವೃಂದಳೇ ತುಳಸಿಯಾಗಿ ಜನಿಸಿದಳಂತೆ. ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳು ಎಂಬ ಪ್ರತೀತಿ ಇದೆ. ಇನ್ನೊಂದು ಪುರಾಣದ ಕಥೆಯ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರ ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂದು ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಭಾಷ್ಪಗಳು ಆ ನೆಲದಲ್ಲಿ ಬಿದ್ದು ಅದರಿಂದ ಸಣ್ಣ ಗಿಡ ಹುಟ್ಟಲಾಗಿ ಅದಕ್ಕೆ ತುಲನೆ, ಹೋಲಿಕೆ ಇಲ್ಲದ್ದರಿಂದ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದರೆಂಬ ಕಥೆಯಿದೆ.
ತುಳಸಿ ಪೂಜಾವಿಧಾನ- ತುಳಸಿ ಪೂಜಾವಿಧಾನವನ್ನು ಮನೆಯಲ್ಲಿರುವ ತುಳಸಿಕಟ್ಟೆಗೆ ಅಥವಾ ದೇವಾಲಯದಲ್ಲಿ ಆಚರಿಸಬಹುದು. ತುಳಸೀಗಿಡಕ್ಕೆ, ವಿಷ್ಣು ಅಥವಾ ಕೃಷ್ಣನ ವಿಗ್ರಹದೊಂದಿಗೆ ಪೂಜೆ ಮಾಡುತ್ತಾರೆ. ತುಳಸಿ ಕಟ್ಟೆಗೆ ಸುಣ್ಣ, ಬಣ್ಣ, ಕೆಮ್ಮಣಿನಿಂದ ಅಲಂಕರಿಸಿ, ರಂಗೋಲೆ ಹಾಕಿ, ಬಾಳೇ ಕಂದು, ಮಾವಿನಸೊಪ್ಪು, ಸಾಧ್ಯವಾದರೆ ತೆಂಗಿನ ಗರಿಗಳಿಂದ ಚಪ್ಪರ ತಯಾರಿಸಿ ಮದುವೆ ಮಾಡಲಾಗುವದು. ಗಿಡದಲ್ಲಿ ನೆಲ್ಲಿಯ, ಹಣಸೇ ಟೊಂಗೆಗಳನ್ನು ಇಟ್ಟು, ಹೂವು, ಗೆಜ್ಜೆವಸ್ತ್ರದಿಂದ ಪೂಜಿಸಿ. ತಾಳಿಯನ್ನು ಹಾಕಿ ಮದುವೆ ರೀತಿಯಲ್ಲಿ ಸಂಭ್ರಮದಿಂದ ಆಚರಿಸಿ ಹಣ್ಣು ಕಾಯಿ ನೇವ್ಯದ್ಯ ಮಾಡಿ ನೆಲ್ಲಿಕಾಯಿಯ ಆರತಿ ಮಾಡುವರು. ಇದು ಸಂಜೆಯೇ ಪೂಜಿಸುವ ಪದ್ಧತಿ ಇದೆ.
ವಾಸ್ತುಶಾಸ್ತ್ರದಲ್ಲಿ ತುಳಸಿಯ ಮಹತ್ವ- ವಾಸ್ತು ಶಾಸ್ತ್ರದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ತುಳಸೀ ಗಿಡವನ್ನು ಮನೆಯಮುಂದೆ, ದೇವಮೂಲೆಯಲ್ಲಿ ಇಡಬೇಕು. ಮನೆಯ ಆವರಣದ ಸೂಕ್ತಸ್ಥಳದಲ್ಲಿ ತುಳಸಿಯನ್ನು ಇಡಬೇಕು. ಕೆಲವರ ಮನೆಯಲ್ಲಿ ಮನೆಯ ಮುಂದೆ ಅಥವಾ ಹಿಂದುಗಡೆ ತುಳಸಿಕಟ್ಟೆಯನ್ನು ಕಟ್ಟಿ ಅದರಲ್ಲಿ ತುಳಸಿ ಬೆಳಸಿರುತ್ತಾರೆ. ಇದನ್ನು ವಾಸ್ತುಪ್ರಕಾರವೇ ನಿರ್ಮಾಣ ಮಾಡಿರುತ್ತಾರೆ. ವಾಸ್ತು ಪ್ರಕಾರ ಇಟ್ಟು ಪೂಜಿಸಿದಾಗ ಮನೆಯಲ್ಲಿ ನೆಮ್ಮದಿ, ಸಂತೋಷ ನೆಲೆಸುವದು. ತುಳಸಿಯ ಗಾಳಿಯು ಮನೆಗೆ ಶುದ್ಧ ಹಾಗೂ ಸಕಾರಾತ್ಮಕ ಶಕ್ತಿ ಆವರಿಸುವಂತೆ ಪ್ರೇರೇಪಣೆ ನೀಡುತ್ತದೆ. ತುಳಸಿಯು ಪೂಜಿಸುವ ಆರಾಧಿಸುವ ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ.
- ಗಿರಿಜಾ. ಎಸ್ ದೇಶಪಾಂಡೆ, ಬೆಂಗಳೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



