ಹುಟ್ಟುವಾಗಲೇ ದೈವಾಂಶ ಸಂಭೂತವಾಗಿದ್ದ ಆ ಮಗುವು ಎಂಟು ವರ್ಷದವನಿರುವಾಗಲೇ ಚತುರ್ವೇದಗಳಲ್ಲಿ ಪರಿಣಿತನಾಗಿದ್ದ. 12ನೇ ವರ್ಷಕ್ಕೆ ಸರ್ವಶಾಸ್ತ್ರ ಪ್ರವೀಣನಾಗಿದ್ದ ಆ ಬಾಲಕ ತನ್ನ ಹದಿನಾರನೇ ವರ್ಷಕ್ಕೆ ಭಾಷ್ಯ ರಚನೆ ಮಾಡಿದ. ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ಭಾರತ ದೇಶದ ನಾಲ್ಕು ದಿಕ್ಕಿನಲ್ಲಿಯೂ (ಪುರಿ, ದ್ವಾರಕಾ, ಶೃಂಗೇರಿ ಮತ್ತು ಕಾಶ್ಮೀರ) ಚತುರ್ಮಠಗಳನ್ನು ಸ್ಥಾಪಿಸಿದರು. ಜಾತಿ ಕುಲಗಳ ನಡುವಿನ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸಿದ ಏಕೈಕ ಯತಿವರೇಣ್ಯ .... ಅವರೇ ನಮ್ಮ ಶಂಕರ ಭಗವತ್ಪಾದರು.
*ಕನಕಧಾರ ಸ್ತೋತ್ರವನ್ನು ರಚಿಸಿ ಚಿನ್ನದ ಮಳೆ ಸುರಿಸಿದ ಯತಿವರ್ಯ
*ಮಹಾಮಾತೆಯ ಸೌಂದರ್ಯವನ್ನು ವರ್ಣಿಸಿದ ಸೌಂದರ್ಯ ಲಹರಿ
*ಪ್ರಸ್ತಾನತ್ರಯಗಳಾದ ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ತುಗಳಿಗೆ ಭಾಷ್ಯ ಬರೆದವರು
*54 ಮಹಾ ಗ್ರಂಥಗಳನ್ನು ರಚಿಸಿದವರು
* ಚತುರಾಮ್ನಾಯ ಪೀಠ ಸ್ಥಾಪಕ
*ಕಾಲಭೈರವಾಷ್ಟಕ ಮನೀಷಾಷ್ಟಕ ಕಾಶಿ ಸ್ತೋತ್ರ ಮತ್ತು ಅನ್ನಪೂರ್ಣ ಸ್ತೋತ್ರವನ್ನು ರಚಿಸಿದವರು
*ಅದ್ವೈತ ಸಿದ್ದಾಂತದ ಪ್ರತಿಪಾದಕರು
*ಜಗತ್ ನಿತ್ಯಾಂ ಬ್ರಹ್ಮಮ್ ಸತ್ಯಂ ಎಂಬ ಸಂದೇಶವನ್ನು ಜಗಕ್ಕೆ ನೀಡಿದವರು.
ಹೀಗೆ ಹೇಳುತ್ತಾ ಹೋದರೆ ಶಂಕರ ಭಗವತ್ಪಾದರ ಕುರಿತು ಸೂರ್ಯನ ಕಿರಣದ ಕುರಿತು ದೀಪದ ಸೊಡರು ಮಾತನಾಡಿದಂತೆ.
ಹುಟ್ಟಿದ್ದು ವೈಶಾಖ ಶುದ್ಧ ಪಂಚಮಿಯಂದು ಕ್ರಿಸ್ತಶಕ 788ರಲ್ಲಿ ಕೇರಳದ ಕಾಲಟಿ ಎಂಬ ಊರಿನಲ್ಲಿ ಜನನ. ಮಲಯಾಳಂ ಮಾತೃಭಾಷೆಯ ಶಂಕರರ ತಂದೆ ಶಿವಗುರು ಮತ್ತು ತಾಯಿ ಆರ್ಯಾಂಬ. ಹುಟ್ಟುವಾಗಲೇ ಶಂಕ ಚಕ್ರಗಳ ಚಿಹ್ನೆಗಳನ್ನು ದೇಹದಲ್ಲಿ ಹೊಂದಿದ್ದ ದೈವಾಂಶ ಸಂಭೂತ ಮಗು ಶಂಕರ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಬೆಳೆದರು.
ಆಧ್ಯಾತ್ಮದ ಕುರಿತು ಅತೀವ ಒಲವಿದ್ದ ಶಂಕರರನ್ನು ಮೊಸಳೆಯೊಂದರ ಬಾಯಿಂದ ತಪ್ಪಿಸಲು ಹೋಗಿ ತಾಯಿ ಆರ್ಯಾಂಬ ಶಂಕರನಿಗೆ ಸನ್ಯಾಸ ಸ್ವೀಕರಿಸಲು ಅನುಮತಿ ನೀಡಿದರು. ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರ ಬಳಿ ವಿದ್ಯಾರ್ಥಿಯಾಗಿ ಸೇರಿದ ಬಾಲಕ ಶಂಕರ ಎಂಟನೇ ವಯಸ್ಸಿಗೆ ಚತುರ್ವೇದಗಳನ್ನು ಕರಗತ ಮಾಡಿಕೊಂಡು 12ನೇ ವಯಸ್ಸಿಗೆ ಸರ್ವಶಾಸ್ತ್ರ ಪರಿಣಿತನಾಗಿ 16ನೇ ವಯಸ್ಸಿಗೆ ಪ್ರಸ್ತಾನತ್ರಯಗಳಿಗೆ ಭಾಷ್ಯವನ್ನು ಬರೆಯುವ ಮೂಲಕ ಇತಿಹಾಸ ರಚಿಸಿದರು.
ನ ಜಾಯತೇ ಮ್ರಿ ಯತೇವ
ಕದಾ ಚಿನ್ನಾಹಂ ಭೂತ್ವಾ
ಭವಿತಾವಾನ ಭೂಯಃ
ಅಜೋ ನಿತ್ಯಃ ಶಾಶ್ವತೋ ಯಂ ಪುರಾಣೋ ನಹನ್ಯತೇ ಹನ್ಯಮಾನೆ ಶರೀರೇ
ಆತ್ಮವು ಹುಟ್ಟುವುದೂ ಇಲ್ಲ ಸಾಯುವುದೂ ಇಲ್ಲ, ಶರೀರಕ್ಕೆ ಸಾವಿದೆ ಆದರೆ ಆತ್ಮಕ್ಕೆ ಇಲ್ಲ. ಆತ್ಮಾವಲೋಕನದ ಮೂಲಕ ನಿಮ್ಮನ್ನು ನೀವು ಅರಿಯಿರಿ. ಅದುವೇ ಪರಮಾತ್ಮ. ಜಗತ್ತಿಗೆ ನಿಮ್ಮನ್ನು ತಂದ ಶಕ್ತಿ, ಆತನೇ ಈಶ್ವರ. ಆತನ ಅನುಗ್ರಹ ನಮಗೆ ಬೇಕೇ ಬೇಕು. ಎಲ್ಲಿ ಆತ್ಮಜ್ಞಾನ ಇದೆಯೋ ಅಲ್ಲಿ ಮೋಕ್ಷ,ಮುಕ್ತಿ ಖಂಡಿತ ಎಂದು ಸಾರಿ ಹೇಳಿದರು ಶಂಕರ ಭಗವತ್ಪಾದರು.
ಕುಮಾರಿಲ ಭಟ್ಟರು, ಮಂಡನ ಮಿಶ್ರರು ಭಾರತೀ ದೇವಿಯಂತಹವರ ಜೊತೆಯಲ್ಲಿ ಶಾಸ್ತ್ರಾರ್ಥದಲ್ಲಿ ಗೆದ್ದು ಸರ್ವಜ್ಞ ಪೀಠವನ್ನೇರಿದ ಮಹನೀಯರು ಶಂಕರ ಭಗವತ್ಪಾದರು.
ಶಿಷ್ಯರೆಂದರೆ ಕೇವಲ ಸೇವಾ ತತ್ಪರರು ಮಾತ್ರವಲ್ಲ, ಸಾಧಕರಾಗಿರಬೇಕು ನಿಷ್ಠರಾಗಿರಬೇಕು ಭಕ್ತಿಯಿಂದ ಸೇವೆ ಮಾಡುವವರಾಗಿರಬೇಕು. ಲೋಕದ ವ್ಯವಹಾರಗಳಿಂದ ದೂರವಾಗಿದ್ದು ಆತ್ಮಜ್ಞಾನವನ್ನು ಕಂಡುಕೊಳ್ಳುವಂತವರಾಗಿರಬೇಕು ಎಂದು ಶಂಕರ ಭಗವತ್ಪಾದರು ಹೇಳಿದ್ದಾರೆ. ಮಠಾಧಿಪತಿಗಳು ಧರ್ಮದ ಚೌಕಟ್ಟಿನಲ್ಲಿ ಸಮಾನತೆ ಸದ್ಗುಣಗಳನ್ನು ಸಾರಬೇಕು. ಧರ್ಮದ ಪ್ರತಿನಿಧಿಗಳಾಗಿ ಧಾರ್ಮಿಕ ತತ್ವಗಳನ್ನು ಲೋಕಕ್ಕೆ ಸಾರಬೇಕು ಎಂದು ಅವರು ಹೇಳಿದರು.
ಪರಮಾತ್ಮ ಮತ್ತು ಜೀವಾತ್ಮಗಳು ಬೇರೆಯಲ್ಲ ಅವೆರಡು ಒಂದೇ ಎಂಬ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು ಶಂಕರರು. "ಅಹಂ ಬ್ರಹ್ಮಾಸ್ಮಿ" ಅಂದರೆ ನಾನೇ ಬ್ರಹ್ಮ ಬ್ರಹ್ಮವೇ ನಾನು ಎಂದು. ಶೈವ, ವೈಷ್ಣವ, ಶಾಸ್ತ್ರ, ಗಾಣಪತ್ಯ ಸ್ಕಂದ, ಮತ್ತು ಸೌರ ಮತಗಳನ್ನು ಒಗ್ಗೂಡಿಸಿ ಷಣ್ಮತ ಪ್ರತಿಷ್ಠಾಪನಾಚಾರ್ಯ ಎಂದಿನಿಸಿಕೊಂಡರು.
ವಿವೇಕ ಚೂಡಾಮಣಿ, ಆತ್ಮಾನಂದಲಹರಿ, ಸೌಂದರ್ಯ ಲಹರಿ, ಶಿವಾನಂದ ಲಹರಿ, ಆತ್ಮಬೋಧ, ಭಜಗೋವಿಂದಂ ಮುಂತಾದ ಕೃತಿಗಳನ್ನು ರಚಿಸಿದ ಇವರು ದೇವಿ ಕ್ಷಮಾಪಣ ಮಂತ್ರದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಂದಿರಲ್ಲ ಎಂದು ತಾಯಿಯ ಮಹಿಮೆಯನ್ನು ವರ್ಣಿಸಿದ್ದಾರೆ.
ಕೇವಲ 32 ವರ್ಷಗಳ ಕಾಲ ಬದುಕಿದ್ದ ಶಂಕರ ಭಗವತ್ಪಾದರು ಹಿಂದೂ ಧರ್ಮದ ಮೊತ್ತಮೊದಲ ಪ್ರವರ್ತಕರಾಗಿ ಕಾರ್ಯನಿರ್ವಹಿಸಿದರು. ಅಂತಹ ಪುಣ್ಯ ಪುರುಷರು ಮತ್ತೆ ಮತ್ತೆ ಭಾರತದಲ್ಲಿ ಹುಟ್ಟಿ ಬರಲಿ ಎಂದು ಆಶಿಸುವ
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


