ಸಾಮಾಜಿಕ ಭಕ್ತಿಚೇತನದ ಪುನರುತ್ಥಾನದ ಕಾರಣಪುರುಷ- ಶ್ರೀ ಕನಕದಾಸರು

Chandrashekhara Kulamarva
0


ರ್ನಾಟಕದ ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರದು ಒಂದು ವಿಶಿಷ್ಟ ಸ್ಥಾನವಿದೆ. ಬಾಡ ಗ್ರಾಮದ ಬಂಕಾಪುರವೆಂಬ ಪ್ರಾಂತದ ನಾಯಕನಾದ ಬೀರಪ್ಪ ಮತ್ತು ಲಚ್ಚಮ್ಮ ದಂಪತಿಗಳಿಗೆ ತಿರುಪತಿಯ ಶ್ರೀನಿವಾಸನ ಆಶೀರ್ವಾದದಿಂದ ಹುಟ್ಟಿದ ಮಗುವನ್ನು ತಿಮ್ಮಪ್ಪನೆಂದು ಕರೆಯುತ್ತಿದ್ದರು. ಮುಂದೆ ಧರ್ಮ ಸಂಸ್ಕಾರದೊಂದಿಗೆ ಶಾಸ್ತ್ರ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು 75 ಹಳ್ಳಿಗಳ ಒಡೆಯನಾಗಿ, ಸುವರ್ಣ ನಿಧಿ ಸಿಕ್ಕು ಕನಕನಾಯಕರೆಂದು ಹೆಸರಾಗಿದ್ದವರು. ಕಾಗಿನೆಲೆಯಲ್ಲಿ ಆದಿಕೇಶವನನ್ನು ನೆಲೆಗೊಳಿಸಿದ ನಾಯಕರು ಶತ್ರುಗಳ ದಾಳಿಯಿಂದ ನಲುಗಿ ವೈರಾಗ್ಯದ ದಾರಿಯನ್ನು ಹಿಡಿದರು. ತಮ್ಮ ಎಲ್ಲ ಅಧಿಕಾರ, ಸಿರಿ- ಸಂಪತ್ತಗಳಿಗೆ ತಿಲಾಂಜಲಿಯಿತ್ತು ಹರಿದಾಸರಾದರು. ಹೆಗಲಿಗೆ ಕಂಬಳಿ ಹೊದ್ದು ಏಕನಾದ ಹಿಡಿದು ಹೊರಟ ಕನಕದಾಸರಿಗೆ ವ್ಯಾಸರಾಜರಂಥ ಮಹಾತಪಸ್ವಿಗಳೇ ಮಾರ್ಗದರ್ಶಕರಾದರು. ಶ್ರೀ ವ್ಯಾಸರಾಜರ ಶಿಷ್ಯವೃಂದದಲ್ಲಿನ ಬಹುಮೂಲ್ಯ ಮಾಣಿಕ್ಯವಾಗಿ ಯಮಾಂಶ ಸಂಭೂತರಾದ ಕನಕದಾಸರು ಹೊರಹೊಮ್ಮಿದರು.


ಜಗದೊಡೆಯ ಉಡುಪಿಯ ಶ್ರೀಕೃಷ್ಣನನ್ನು ತಮ್ಮತ್ತ ತಿರುಗಿಸಿ 'ಕನಕನಕಿಂಡಿ'ಯನ್ನು ನಿರ್ಮಿಸಿ, ತಮ್ಮ ಭಕ್ತಿಯ ಪರಾಕಾಷ್ಟೆಯನ್ನು ಪ್ರದರ್ಶಿಸಿ ಇತಿಹಾಸ ಸೃಷ್ಟಿಸಿದ ವರಕವಿಗಳು ಕನಕದಾಸರು. ಅವರದು ಪರಿಪಕ್ವವಾದ, ಜೀವನಾನುಭವದ, ವಿವೇಕವುಳ್ಳ, ಸಮಚಿತ್ತತೆಯ ಭಕ್ತಿಯ ಮತ್ತು ವಿಶೇಷವಾಗಿ ಜಾನಪದೀಯ ಶೈಲಿಯ ರಚನೆಯಾಗಿದ್ದು, ಈ ಎಲ್ಲ ಗುಣಗಳಿಂದಾಗಿ ಅವರ ಸಾಹಿತ್ಯವು ಸರ್ವಕಾಲಕ್ಕೂ ಸಲ್ಲುವ ಕೃತಿಗಳಾಗಿವೆ.


ಕನಕದಾಸರು ಕೇಶವಾದಿ 24 ರೂಪಗಳನ್ನು ಸ್ತುತಿಸುವ "ಈಶ ನಿನ್ನ ಚರಣ" ಎಂಬ ಕೃತಿರತ್ನವಾದ 'ಕೇಶವನಾಮ'ವನ್ನು ಕೇಶವನ ಸನ್ನಿಧಾನದಲ್ಲಿ ರಚಿಸಿದ್ದು, ಇದು ಇಂದಿಗೂ ಸಾಧಕವೃಂದದಲ್ಲಿನಿತ್ಯ ನುಡಿಯುವ ಅತ್ಯದ್ಭುತ ರಚನೆಯಾಗಿದೆ.


ಕನಕದಾಸರ ರಚನೆಗಳನ್ನ ನೋಡುವುದಾದರೆ ಹರಿದಾಸಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅಂದರೆ ಕೀರ್ತನೆಗಳಾಗಿರಲಿ, ಪದ್ಯ, ಮುಂಡಿಗೆ, ಷಟ್ಪದಿ ಹೀಗೆ ಎಲ್ಲವುಗಳಲ್ಲೂ ಅನನ್ಯವಾದ ಸಿದ್ಧಿಯನ್ನು ಪಡೆದವರಾಗಿದ್ದರು. ಅವರ ಪ್ರತಿ ಕೃತಿಗಳಲ್ಲಿ ನಮಗೆ ವಿದ್ವಾಂಸರ ಪಾಂಡಿತ್ಯ, ರಸಿಕರ ನವರಸಗಳು, ಜಾನಪದದ ಮೊರೆತ ಮತ್ತು ಗ್ರಾಮ್ಯ ಭಾಷೆಯ ಗಮ್ಮತ್ತು ಎದ್ದು ಕಾಣುತ್ತವೆ. ಕನಕದಾಸರು ಬೇಲೂರಿನಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಮಹೋನ್ನತ ಕೃತಿ 'ಹರಿಭಕ್ತಿಸಾರ'ವು ಭಗದ್ಭಕ್ತಿಯ ಸಾರಾಸಾರ ವಿಶ್ಲೇಷಣೆಯಾಗಿದ್ದು, ಇಡೀ ಕಾವ್ಯವು ಭಕ್ತನ ಹೃದಯದಿಂದ ಉಕ್ಕಿ ಹರಿದ ಆರ್ತಭಾವದ ಮೊರೆತವಾಗಿದೆ. ಹಾಗೆಯೇ ಅವರು ಕದರಮಂಡಲಗಿಯಲ್ಲಿ ರಚಿಸಿದ ಇನ್ನೊಂದು ಕೃತಿ 'ಮೋಹನ ತರಂಗಿಣಿ'ಯು ಕನಕದಾಸರ ಕಲ್ಪನಾ ಲಹರಿ, ಕಾವ್ಯ ಕೌಶಲವು ವಿಜೃಂಭಸುವ ಮಹಾಕಾವ್ಯದ ಲಕ್ಷಣಗಳುಳ್ಳ ಮಹತ್ವದ ಕೃತಿಯಾಗಿದೆ. 'ನಳ ಚರಿತ್ರೆ' ಕಾವ್ಯವು ಕನಕದಾಸರ ಕುಶಲ ಕಥನ ಕಲೆಗಾರಿಕೆಯನ್ನು, ಕಾವ್ಯ ಮಾಧುರ್ಯವನ್ನು ಅರಳಿಸುವ ವಿಶಿಷ್ಟ ಕೃತಿಯಾಗಿದೆ. 'ರಾಮಧಾನ್ಯ ಚರಿತ್ರೆ'ಯೆಂಬ ಅವರ ರಚನೆಯು ಅಂದಿನ ದಿನಗಳಲ್ಲೇ ಕನಕದಾಸರಿಗಿದ್ದ ಸ್ವತಂತ್ರ ವಿಚಾರಧಾರೆಯನ್ನು, ಸಾಮಾಜಿಕ ಕಳಕಳಿಯನ್ನು ದಟ್ಟವಾಗಿ ಪ್ರತಿಬಿಂಬಿಸುತ್ತದೆ.


ಕನಕದಾಸರು ಅನೇಕ ದೃಷ್ಟಿಗಳಿಂದ ಕ್ರಾಂತದರ್ಶಿಗಳಾಗಿದ್ದರು ಎಂಬುದಾಗಿ ತಿಳಿದುಬರುತ್ತದೆ. ಶತಮಾನಗಳಿಂದ ಬಂದ ಸಂಪ್ರದಾಯಬದ್ಧ ನಿಲುವನ್ನೇ ಪ್ರಶ್ನಿಸುವ ಕೆಚ್ಚಿದ್ದ ಅವರು ತಮ್ಮ ಹಲವಾರು ಕೃತಿಗಳಿಂದ ಮೌಢ್ಯತೆಯನ್ನು ಅಲ್ಲಗಳೆಯುವುದನ್ನು ಕಾಣಬಹುದು.ಇನ್ನು ಕನಕದಾಸರ ಮುಂಡಿಗೆಗಳಂತೂ ಜಗತ್ಪ್ರಸಿದ್ಧಿಯನ್ನು ಹೊಂದಿವೆ, ಅವು ಮಹಾ ಮಹಾ ಮೇಧಾವಿಗಳಿಗೂ ಸವಾಲು ಒಡ್ಡುತ್ತಿದ್ದ ಕಾರಣ "ಕನಕನನ್ನು ಕೆಣಕಬೇಡ, ಕೆಣಕಿ ತಿಣಕಬೇಡ" ಎಂಬ ಗಾದೆ ಅಂದು ಜನಜನಿತವಾಗಿತ್ತು.


ಕನಕದಾಸರು ತಮ್ಮ ಕೀರ್ತನೆಗಳಿಂದಾಗಿ ಕರ್ನಾಟಕದ ಮೂಲೆ ಮೂಲೆಯನ್ನು ತಲುಪಿದರು, ಜನಮನವನ್ನು ತಟ್ಟಿದರು.ಜನರ ಹೃದಯದಾಳವನ್ನು ಮುಟ್ಟಿ ಭಕ್ತಿಯ ಬೀಜವನ್ನು ನೆಟ್ಟರು. ಕುಲದಿಂದ ಕುರುಬನಾದರೂ ಗುಣದಿಂದ ಘನಜ್ಞಾನಿಗಳಾದ ಕನಕದಾಸರು 'ಆತ ಒಲಿದ ಮೇಲೆ ಯಾತರ ಕುಲವಯ್ಯಾ', 'ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ನೆಲೆಯನೇನಾದರೂ ಬಲ್ಲಿರಾ' ಎಂದು ಪ್ರಶ್ನಿಸಿ, ಈ ಕಾಲದ ಸಾಮಾಜಿಕ ಸಮಸ್ಯೆಗಳನ್ನು ಕುರಿತೇ ಆಡಿರುವಂತೆ ಸಮಾಜವನ್ನು ಉನ್ನತಿಗೇರಿಸಲು ಶ್ರಮಿಸಿದವರು. 'ದಾಸ ದಾಸರ ಮನೆಯ ದಾಸಿಯರ ಮಗ ನಾನು' ಎಂದು ಹೇಳಿದ ದಾಸರು ಪ್ರತಿಯೊಬ್ಬರ ಆಟಗಳನ್ನು, ಹೋರಾಟವನ್ನು 'ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 'ಎಂದು ಹೇಳಿ ಬೂಟಾಟಿಕೆ, ಒಣವೇದಾಂತಗಳನ್ನು ಮತ್ತು ಡಂಭಾಚಾರಗಳನ್ನು ಖಂಡಿಸಿದವರು.


ಎಲ್ಲರ ಹೃದಯಕ್ಕೆ ಮುಟ್ಟುವ ಮಾರ್ಮಿಕವಾದ ದೃಷ್ಟಾಂತಗಳ ಮೂಲಕ, ತಮ್ಮ ಅದ್ಭುತ ಮಿಂಚಿನ ಪ್ರತಿಭೆಯ ಕಾವ್ಯಶಕ್ತಿಯಿಂದಾಗಿ, ಜಾನ್ನುಡಿ, ನಾಣ್ಣುಡಿಗಳ ತತ್ವ- ಸತ್ವ ಸಾರ್ ಮಹತ್ವದಿಂದ, ಜಗದ ಜನತೆಯನ್ನು ನಿದ್ರೆಯಿಂದ ಎಚ್ಚರಗೊಳಿಸುವ ಚೈತನ್ಯದ ಜಾಗೃತಿಯಿಂದಾಗಿ ಕನಕದಾಸರ ಕೀರ್ತನೆಗಳು ಎಂದಿಗೂ ಸುಪ್ರಸಿದ್ಧವಾಗಿವೆ. ಸಮಾಜದಲ್ಲಿಮುಚ್ಚಿಹೋಗಿದ್ದ ಭಕ್ತಿಯ ಕೋಟೆಯಲ್ಲಿ ತಮ್ಮದೇ ಆದ ವಿಶಿಷ್ಟ ಕನಕನ ಕಿಂಡಿಯನ್ನು ತೆರೆದು ತೋರಿಸಿ, ಸಾಮಾಜಿಕ ಭಕ್ತಿಚೇತನದ ಪುನರುತ್ಥಾನದ ಕಾರಣಪುರುಷರಾದವರು ಕನಕದಾಸರು.


ತೊಂಬತ್ತೆಂಟು ವರ್ಷಗಳ ಕಾಲ ಬದುಕಿದ್ದ ಕನಕದಾಸರು ಕಾಗಿನೆಲೆಯಲ್ಲಿ ತಾವೇ ಕಟ್ಟಿಸಿದ್ದ ಅವರ ಆರಾಧ್ಯ ದೈವನಾದ ಕೇಶವನ ಸನ್ನಿಧಾನದಲ್ಲಿ ತಮ್ಮ ಅಂತಿಮ ದಿನಗಳನ್ನು ಕರೆದರು. ಹೀಗೆ ಸದಾ ಯುಕ್ತಿ, ಸಂಸಾರ ಬಂಧನದಿಂದ ಮುಕ್ತರಾಗಿ, ವೈರಾಗ್ಯಭಾವದ ವಿರಕ್ತರಾಗಿ, ತಮ್ಮ ಗುರುಗಳಾದ ವ್ಯಾಸರಾಜರ, ಸಮಕಾಲೀನ ಪುರಂದರದಾಸರ ಪ್ರೀಯಪಾತ್ರರಾಗಿ, ಕಾಗಿನೆಲೆಯ ದೈವದ ನೇತ್ರರಾಗಿ, ದೀನದುರ್ಬಲ ವರ್ಗಗಳ ಜನತೆಯಲ್ಲಿ ಬದುಕಿನ ನೈತಿಕ ಮೌಲ್ಯಗಳ ಪುನಃಪ್ರತಿಷ್ಠಾಪಕರಾಗಿ ತಾರೆಯಂತೆ ಕಂಗೊಳಿಸಿದ ಶ್ರೇಷ್ಠ ಚೇತನರು ಕನಕದಾಸರು.



- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ

( ದಾಸ ಸಾಹಿತ್ಯ ಪ್ರಾಕಾರದ ಪ್ರಮುಖರು,  "ಅಭಾಸಾಪ" ಧಾರವಾಡ ಘಟಕ)

 99805 45433



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top