ಹೀಗೊಂದು ಕಾಲ್ಪನಿಕ ಸರ್ಕಾರ…

Chandrashekhara Kulamarva
0




- ಟಿ. ದೇವಿದಾಸ್ 




ಆರಂಭದಲ್ಲೇ ಒಂದು ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತೇನೆ. ಯಾಕೆಂದರೆ, ಆಮೇಲೆ ಯಾರೂ ಅಪಾರ್ಥವನ್ನೋ ಅನರ್ಥವನ್ನೋ ವಿಪರೀರ್ಥವನ್ನೋ ಅಥವಾ ಏನೇನೋ ಪೂರ್ವಗ್ರಹದ ಗ್ರಹಿಕೆ, ಚಿಂತನೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಇದು ನನ್ನ ಕಲ್ಪನೆಯ ಸರ್ಕಾರವಷ್ಟೆ. ಈ ಕಲ್ಪನೆಯ ಸರ್ಕಾರವನ್ನು ರಚಿಸುವಾಗ ಯಾವ ಸಂದರ್ಭದಲ್ಲೂ ಪಕ್ಷ, ಪ್ರದೇಶ, ಸಮುದಾಯ, ಜಾತಿ, ಒಳಜಾತಿ, ಉಪಜಾತಿ, ಅಹಿಂದ, ಅಲ್ಪಸಂಖ್ಯಾತ, ಆ ಮತ ಈ ಮತ, ಪಂಥಗಳನ್ನು ನಾನು ಪೂರ್ವಗ್ರಹವಾಗಿ ಇಟ್ಟುಕೊಳ್ಳಲಿಲ್ಲ ಎಂಬುದನ್ನು ಆತ್ಮಸಾಕ್ಷಿಯಾಗಿ ಹೇಳಿಕೊಳ್ಳುತ್ತಿದ್ದೇನೆ. ಅದು ನನ್ನ ಆದ್ಯತೆಯೂ ಅಲ್ಲ. ಅದರಗತ್ಯವೂ ನನಗಿಲ್ಲ. ಅದರಲ್ಲಿ ನಂಬಿಕೆಯೂ ನನಗಿಲ್ಲ. ಅವರವರಲ್ಲಿ ಕೇವಲ ವೈಯಕ್ತಿಕವಾದ ಮತ್ತು ಸಾರ್ವಜನಿಕವಾದ ಜೀವನದಲ್ಲಿ ನಾನು ಗ್ರಹಿಸಿದಂಥ ಅಥವಾ ಅವಲೋಕಿಸಿದಂಥ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನೈತಿಕತೆಯನ್ನು ಮಾತ್ರ ಅರ್ಹತೆಯ ಮಾನದಂಡವಾಗಿಯೂ ಆಧಾರವಾಗಿಯೂ ಇಟ್ಟುಕೊಂಡು ಈ ಸರ್ಕಾರದಲ್ಲಿ ನಾಡಿನ ಹಲವರನ್ನು ಆಯ್ದುಕೊಂಡೇ ರಚಿಸಿದ್ದೇನೆ. ಹಾಗಂತ ಈ ಸರ್ಕಾರದಲ್ಲಿರುವವರು ಮಾತ್ರ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ, ನಿಸ್ವಾರ್ಥ ಮನೋಭಾವ ಮತ್ತು ನೈತಿಕತೆಯಡಿಯಲ್ಲಿ ಅರ್ಹರು ಎಂಬುದು ನನ್ನ ಅಭಿಪ್ರಾಯವಲ್ಲ. ಅದನ್ನು ನಾನು ಒಪ್ಪುವುದೂ ಇಲ್ಲ. 


ಇವರಂತೆ ಇನ್ನೂ ಹಲವರು ನಾಡಿನುದ್ದಕ್ಕೂ ಇದ್ದಿರಬಹುದು, ಆಫ್ ಕೋರ್ಸ್ ಇದ್ದಾರೆ. ಅವರನ್ನು ಈ ಸರ್ಕಾರದಲ್ಲಿ ಸೇರಿಸಿಕೊಳ್ಳುವ ಹೊಣೆಯನ್ನು ಮುಖ್ಯಮಂತ್ರಿಗಳ ಸುಪರ್ದಿಗೆ ವಹಿಸುತ್ತೇನೆ. ಹಾಗಂತ ಖಂಡಿತವಾಗಿ, ಯಾವುದೇ ರಾಜಕೀಯ ಪಕ್ಷದ, ಪರಿಷತ್ತಿನ, ಸಂಘ ಸಂಸ್ಥೆಗಳ ಸದಸ್ಯನೂ ನಾನಲ್ಲ, ವಕ್ತಾರನೂ ನಾನಲ್ಲ. ಅದು ನನ್ನಿಂದ ಸಾಧ್ಯವೂ ಇಲ್ಲ. ನನ್ನೀ ಸರ್ಕಾರದಲ್ಲಿರುವ ಯಾರೂ ನನ್ನ ಸಂಬಂಧಿಕರಲ್ಲ, ಪರಿಚಯದವರಲ್ಲ. ರಾಜಕೀಯವಾಗಿ ನನಗೆ ಯಾವ ಸಂದರ್ಭದಲ್ಲೂ ಸಹಾಯವನ್ನಾಗಲೀ ಫೇವರಿಸಮ್ಮನ್ನಾಗಲೀ ಮಾಡಿದವರಲ್ಲ. ಅಂಥ ಅನಿವಾರ್ಯತೆಯಾಗಲೀ, ಅಗತ್ಯವಾಗಲೀ ನನಗೆ ಇಲ್ಲವೇ ಇಲ್ಲ. ಶ್ರೀ ವಿಶ್ವೇಶ್ವರ ಭಟ್ ಅವರನ್ನು ಹೊರತುಪಡಿಸಿ ಯಾರೂ ನನಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿ ಇರುವವರಲ್ಲ. ಯಾವ ಸಂದರ್ಭದಲ್ಲೂ ಅವರುಗಳನ್ನು ನಾನು ಭೇಟಿಯಾಗಿಲ್ಲ, ಹತ್ತಿರದಿಂದ ನೋಡಿಯೂ ಇಲ್ಲ. ಮಾತುಕತೆಯಂಯೂ ದೂರದ ಮಾತು.


ಪಂಚಾಯತ್ ಮಟ್ಟದಿಂದ ಆರಂಭವಾಗುವ ಭ್ರಷ್ಟಾಚಾರವನ್ನು ಎಷ್ಟು ಸಾಧ್ಯವೋ ಅಷ್ಟೂ ಪ್ರಮಾಣದಲ್ಲಿ ನಿಗ್ರಹಿಸುವ, ನಿಯಂತ್ರಿಸುವ, ಬುಡಸಮೇತ ಉತ್ಪಾಟನೆ ಮಾಡುವರು ಅಥವಾ ಈ ಸರ್ಕಾರದಿಂದ ಮಾಡಲ್ಪಡುತ್ತದೆ ಎಂಬ ಭರವಸೆ ಮತ್ತು ವಿಶ್ವಾಸದಲ್ಲಿ ಇವರುಗಳನ್ನು ಒಳಗೊಳ್ಳಿಸಿ ಈ ಕಾಲ್ಪನಿಕ ಸರ್ಕಾರವನ್ನು ರಚಿಸಿದ್ದೇನೆ. ಕೇವಲ ಸರ್ಕಾರವನ್ನು ರಚಿಸುವುದು ಮಾತ್ರ ನನ್ನ ಉದ್ದೇಶವಲ್ಲ. ಸರಿಹೊತ್ತಿನ ಅಧಿಕಾರ ಮತ್ತು ಜಾತಿ ರಾಜಕೀಯದ ನೀಚ ಅವಸ್ಥೆ, ಅವ್ಯವಸ್ಥೆ, ಭ್ರಷ್ಟಾಚಾರವನ್ನು, ನಿತ್ಯದ ದುರಂತವನ್ನು ಕಂಡು ಕಂಡು ಹೇಸಿಗೆ ಹುಟ್ಟಿ ಅಂಥದ್ದೆಲ್ಲ ನನ್ನ ಈ ಕಾಲ್ಪನಿಕ ಸರ್ಕಾರದಲ್ಲಿ ಕಾಣುವಂತಾಗಬಾರದು ಎಂಬ ಎಚ್ಚರದಲ್ಲಿ ಮತ್ತು ಜತನದಲ್ಲಿ ಒಂದಿಷ್ಟು ಅನಿಸಿಕೆ ಮತ್ತು ಅಭಿಪ್ರಾಯವನ್ನು ಆಗ್ರಹಪೂರ್ವಕವಾಗಿ ನನ್ನಲ್ಲಿಯೂ ಸರ್ಕಾರಕ್ಕೂ ಹೇಳಿಕೊಳ್ಳುತ್ತಿದ್ದೇನೆ. ಯಾವ ಸಂದರ್ಭದಲ್ಲೂ ಈ ಸರ್ಕಾರದಲ್ಲಿರುವವರು ವೈಯಕ್ತಿಕವಾದ ಸೇಡು, ದ್ವೇಷವನ್ನು ಸಾಧಿಸುವುದಿಲ್ಲ ಎಂದು ಭಾವಿಸುತ್ತೇನೆ. ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ಇವರ ಪರಮಧ್ಯೇಯ ಮತ್ತು ಗುರಿಯಾಗಬೇಕು. ಜಾತಿ ಮತ ಪಂಥ ಧರ್ಮದ ಲೇಪವಿಲ್ಲದೆ ಸರ್ಕಾರದಲ್ಲಿರುವವರು ಕಾರ್ಯ ನಿರ್ವಹಿಸುತ್ತಾರೆ ಎಂಬಲ್ಲಿಗೆ ಯಾವುದೇ ಮತೀಯ ದ್ರೋಹವನ್ನು ಒಪ್ಪಬೇಕೆಂದಿಲ್ಲ. ಮತ-ಪಂಥ-ಧರ್ಮಗಳ ಸಂಘರ್ಷವನ್ನು ಈ ಸರ್ಕಾರ ಸಮರ್ಥವಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ.


ಬಹುಮುಖ್ಯವಾಗಿ, ಈ ಸರ್ಕಾರಕ್ಕೆ ವಿರೋಧಪಕ್ಷವಿಲ್ಲ. ಆದ್ದರಿಂದ ಕರ್ನಾಟಕದ ಜನತೆ ತಮ್ಮ ಅಹವಾಲುಗಳನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸುವಂಥ ವ್ಯವಸ್ಥೆಯನ್ನೂ ಸರ್ಕಾರದ ಮೂಲಕವೇ ಸುಲಭಸಾಧ್ಯ ಆಗುವಂತೆ ಈ ಸರ್ಕಾರ ಮಾಡುತ್ತದೆ. ಈ ಸರ್ಕಾರವು, ವಶೀಲಿ, ಪ್ರಭಾವ, ಕಮಿಷನ್, ಲಂಚ, ಜಾತಿಮೋಹ, ರಾಜಕೀಯವಾದ ದಬ್ಬಾಳಿಕೆ, ಒತ್ತಡ ಮತ್ತು ಶೋಷಣೆ, ಸಂಪನ್ಮೂಲ ವಿತರಣೆಯಲ್ಲಿ ಅನ್ಯಾಯ, ಕರ್ತವ್ಯದಲ್ಲಿ ನಿರ್ಲಕ್ಷ್ಯ, ಗುಂಪುಗಾರಿಕೆ, - ಇತ್ಯಾದಿ ಎಲ್ಲ ಭ್ರಷ್ಟ ಪರಂಪರೆಯ ಜಾಡನ್ನು, ನೀಚತನವನ್ನು ಅಂತ್ಯಗೊಳಿಸುತ್ತದೆ. ಸರ್ಕಾರದಲ್ಲಿರುವವರು ಯಾವ ಸಿದ್ಧಾಂತವೂ, ಯಾರ ಪರವೂ ಯಾರ ವಿರೋಧವೂ ಅಲ್ಲದ ರೀತಿಯಲ್ಲಿ ಸಮನ್ವಯ ಮತ್ತು ಸೌಹಾರ್ದಯುತವಾಗಿ ಸಮಾಜೋದ್ಧಾರ, ಸಾಧ್ಯವಾದಷ್ಟು ಮಟ್ಟಿಗೆ ಬಡತನ ಮತ್ತು ನಿರುದ್ಯೋಗ ನಿವಾರಣೆ, ನೆಲ ಜಲ ಭಾಷೆಯನ್ನು ಕುರಿತಾದ ಕಾಳಜಿ, ಸಂರಕ್ಷಣೆಗೆ ಬದ್ಧವಾಗಿರುತ್ತದೆ. ರಾಷ್ಟ್ರೀಯತೆಯನ್ನು ಸದೃಢವಾಗಿ ಉದ್ದೀಪಿಸುವ ರೀತಿಯಲ್ಲಿ ಜನರಿಗೆ ಮಾದರಿ ಆಡಳಿತ ನೀಡುತ್ತದೆ. ಮುಖ್ಯಮಂತ್ರಿಯಾಗಿ ನ್ಯಾಯಮೂರ್ತಿಗಳನ್ನೇ ಆಯ್ದುಕೊಂಡಿರುವುದರಿಂದ ನ್ಯಾಯಯುತವಾದ ಮಾರ್ಗದಲ್ಲೇ ಸರ್ಕಾರ ನಡೆಯುತ್ತದೆಂಬ ಅಚಲ ಭರವಸೆ ಮತ್ತು ನಂಬಿಕೆಯನ್ನು ಹೊಂದಿಯೇ ಈ ಸರ್ಕಾರದಿಂದ ನಿರ್ದಿಷ್ಟವಾದ ಪ್ರತಿಫಲದ ಅಪೇಕ್ಷೆಯನ್ನು ನಿರೀಕ್ಷಿಸುತ್ತೇನೆ. ಜನತೆಯೂ ನಿರೀಕ್ಷೆ ಮಾಡುತ್ತದೆ ಎಂಬುದನ್ನು ನಂಬುತ್ತೇನೆ. ಇವೆಲ್ಲ ನನ್ನ ಹಂಬಲವಷ್ಟೆ.


ಈ ಕಲ್ಪನೆಯ ಸರ್ಕಾರದಲ್ಲಿರುವ ಸಚಿವರು ತಮ್ಮ ತಮ್ಮ ಇಲಾಖೆಗೆ ಅಗತ್ಯವಿರುವ ಕಾರ್ಯದರ್ಶಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುವಾಗ ಪ್ರಾಮಾಣಿಕ ಮತ್ತು ಪಾರದರ್ಶಕವಾದ ನಡೆಯನ್ನು ಮತ್ತು ಯಾವುದೇ ಸಂದರ್ಭದಲ್ಲೂ ಅರ್ಹತೆಯನ್ನು ಬಿಟ್ಟು ಬೇರೆ ಯಾವುದೇ ಮಾನದಂಡವನ್ನು ಅನುಸರಿಸಬಾರದು. ಈ ನನ್ನ ಕಲ್ಪನೆಯ ಸರ್ಕಾರದಲ್ಲಿ ಇರುವ ಸಚಿವರು ತಮ್ಮ ಸಾರ್ವಜನಿಕ ಜೀವನದಲ್ಲಿ ಸಂಪಾದಿಸಿದ ಪ್ರಾಮಾಣಿಕತೆ, ಬದ್ಧತೆ ಮತ್ತು ನೈತಿಕತೆಯನ್ನು ಜತನವಾಗಿಟ್ಟುಕೊಂಡವರು ಎಂಬುದು ನನ್ನ ಬಲವಾದ ಸಾಮಾನ್ಯ ಗ್ರಹಿಕೆ. ಆದ್ದರಿಂದ ಇವರು ಮಾಡುವ ಜನಸೇವೆ (ರಾಜಕಾರಣವನ್ನು ಸೇವೆಯೆಂದು ಭಾವಿಸಿದ ಕಾಲದಲ್ಲಿ ನಾವು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಂಡಿದ್ದು ತೀರಾ ಕಡಿಮೆಯೇ. ಅದು ಹೋಗಲಿ, ನೈತಿಕ ರಾಜಕಾರಣವನ್ನು ಕಂಡಿದ್ದು ತೀರಾ ಕಡಿಮೆಯೇ ಸರಿ. ಹಾಗಂತ ರಾಜಕಾರಣವನ್ನು ಸೇವೆಯೆಂದು ಭಾವಿಸಿದರೆ ಬದುಕು ನಡೆಯುವುದಿಲ್ಲ. ಆದ್ದರಿಂದ ಸರ್ಕಾರದಿಂದ ಪಡೆಯಬೇಕಾದ ಸವಲತ್ತನ್ನು ಈ ಸರ್ಕಾರದ ಸಚಿವರು ಪಡೆಯಲೇಬೇಕು. ಸವಲತ್ತಿನೊಂದಿಗೆ ಸಂಬಳ, ಭತ್ಯೆಯನ್ನು ಪಡೆಯಲಿ) ಯೂ ಅಪಾರವಾದ ನಿರೀಕ್ಷೆಗಳನ್ನು ನನ್ನಲ್ಲಿ ಹುಟ್ಟಿಸಿಯೇ ಇಂಥದ್ದೊಂದು ಕಲ್ಪನೆಯನ್ನು ಸೃಷ್ಟಿಸುವಂತೆ ಮಾಡಿದೆ. ದಿನದಿನದ ರಾಜಕೀಯ ವ್ಯವಹಾರಗಳನ್ನು ಜನತೆಗೆ ತಲುಪಿಸುವ ಹೊಣೆಗಾರಿಕೆಯನ್ನು ಈ ನನ್ನ ಕಲ್ಪನೆಯ ಸರ್ಕಾರ ಎಂದೂ ಮರೆಯಲಾರದು ಎಂಬ ಬಹುದೊಡ್ದ ಭರವಸೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುತ್ತದೆ. ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಸ್ವಾರ್ಥ ಸಾಧನೆ, ಜಾತೀಯತೆಯಂಥ ಯಾವುದೇ ವಿಷವಿಲ್ಲದೆ ಕೇವಲ ಅಂದರೆ ಕೇವಲ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯೊಂದನ್ನೇ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತದೆ ಎಂಬ ಬಲವಾದ ಸದಾಗ್ರಹ ನನ್ನಲ್ಲಿ ಇದೆಯಾದ್ದರಿಂದ ಈ ಕಲ್ಪನೆಯ ಸರ್ಕಾರ ಹುಟ್ಟಿಕೊಂಡಿದೆ. ಆದ್ದರಿಂದ ಇವರುಗಳು ಈ ಸರ್ಕಾರದ ಭಾಗವಾಗಿದ್ದಾರೆ. ನನ್ನ ಕಲ್ಪನೆಯ ಸರ್ಕಾರ ಹೀಗಿದೆ:


೧. ಮುಖ್ಯಮಂತ್ರಿ- ಎನ್. ಸಂತೋಷ ಹೆಗ್ಡೆ 

೨. ಉಪ‌ ಮುಖ್ಯಮಂತ್ರಿ- ನಂದನ ನೀಲೇಕಣಿ

೩. ಹಣಕಾಸು- ಇನ್ಫೋಸಿಸ್ ಸುಧಾಮೂರ್ತಿ

೪. ಗೃಹ- ಬಸನಗೌಡ ಪಾಟೀಲ‌ ಯತ್ನಾಳ

೫. ಕಂದಾಯ- ಅಜಿಮ್ ಪ್ರೇಮಜಿ 

೬. ಇಂಧನ- ನಿಖಿಲ್ ಕಾಮತ್ (ಜೆರೋಧಾ ಸಿಇಓ) 

೭. ಸಮಾಜ ಕಲ್ಯಾಣ- ಕೃಷ್ಣಭೈರೇಗೌಡ

೮. ಗ್ರಾಮೀಣ ಮತ್ತು ಪಂಚಾಯತ್ ರಾಜ್-  ಉಪೇಂದ್ರ (ಚಿತ್ರನಟ)

೯. ಸಾರಿಗೆ- ವಿಜಯ ಸಂಕೇಶ್ವರ

೧೦. ತೋಟಗಾರಿಕೆ- ಬಿ.ಆರ್.ಪಾಟೀಲ್ (ಕಾಂಗ್ರೆಸ್)

೧೧. ಆಹಾರ ಮತ್ತು ನಾಗರಿಕ ಸರಬರಾಜು- ಕೋಟ ಶ್ರೀನಿವಾಸ ಪೂಜಾರಿ 

೧೨. ಲೋಕೋಪಯೋಗಿ- ವಿ.ಆರ್.ಸುದರ್ಶನ (ಕಾಂಗ್ರೆಸ್)

೧೩. ನೀರಾವರಿ (ಸಣ್ಣ ಮತ್ತು ದೊಡ್ಡ)- ಕ್ಯಾಪ್ಟನ್ ಎಸ್.ರಾಜಾರಾವ್

೧೪. ಕಾರ್ಮಿಕ- ಎಸ್.ಆರ್.ವಿಶ್ವನಾಥ 

೧೫. ಕನ್ನಡ ಮತ್ತು ಸಂಸ್ಕೃತಿ- ರಮೇಶ ಕುಮಾರ್ (ಕಾಂಗ್ರೆಸ್)

೧೬. ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ- ಶಂಕರ ಬಿದರಿ

೧೭. ಜವಳಿ ಮತ್ತು ಸಕ್ಕರೆ- ದರ್ಶನ ಪುಟ್ಟಣ್ಣಯ್ಯ 

೧೮. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ- ಬಸವರಾಜ ಹೊರಟ್ಟಿ

೧೯. ಮೀನುಗಾರಿಕೆ ಮತ್ತು ಬಂದರು- ಯು.ಟಿ.ಖಾದರ್

೨೦. ಅಬಕಾರಿ- ಪ್ರತಾಪ ಸಿಂಹ

೨೧. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ-  ಚಕ್ರವರ್ತಿ ಸೂಲಿಬೆಲೆ

೨೨. ಕಾನೂನು ಮತ್ತು ಸಂಸದೀಯ- ಜಯಪ್ರಕಾಶ ಹೆಗ್ಡೆ

೨೩. ಉನ್ನತ ಶಿಕ್ಷಣ- ಮೋಹನದಾಸ್ ಪೈ

೨೪. ವೈದ್ಯಕೀಯ– ಸಿ.ಎಸ್.ಮಂಜುನಾಥ

೨೫. ವಾರ್ತಾ ಮತ್ತು ಮಾಧ್ಯಮ- ಎಚ್.ಆರ್.ರಂಗನಾಥ (ಪಬ್ಲಿಕ್ ಟಿವಿ)

೨೬. ತಂತ್ರಜ್ಞಾನ-  ನಾರಾಯಣ ಮೂರ್ತಿ (ಇನ್ಫೋಸಿಸ್) 

೨೭. ಯುವಜನ ಸೇವೆ ಮತ್ತು ಕ್ರೀಡೆ- ಅನಿಲ‌ ಕುಂಬ್ಳೆ

೨೮. ಸಹಕಾರ- ಎಚ್.ಕೆ.ಪಾಟೀಲ್

೨೯. ಬೆಂಗಳೂರು ನಗರಾಭಿವೃದ್ಧಿ- ದಕ್ಷಿಣ- ಆರ್.ಅಶೋಕ್

೩೦. ಮಧ್ಯಮ ಕೈಗಾರಿಕೆ– ಎ.ಎಚ್.ವಿಶ್ವನಾಥ (ಹಳ್ಳಿಹಕ್ಕಿ)

೩೪. ಗಣಿ ಮತ್ತು ಭೂವಿಜ್ಞಾನ- ವಿಕ್ರಮ್ ಸಂಪತ್

೩೫. ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ- ತೇಜಸ್ವಿನಿ ಅನಂತಕುಮಾರ್

೩೬. ಹಿಂದುಳಿದ ವರ್ಗಗಳ ಕಲ್ಯಾಣ- ಛಲವಾದಿ ನಾರಾಯಣ ಸ್ವಾಮಿ

೩೭. ಸ್ಪೀಕರ್- ಡಿ.ಎಚ್.ಶಂಕರಮೂರ್ತಿ(ವಿಧಾನ ಸಭೆ) 

೩೮. ವಿಜ್ಞಾನ- ಪ್ರಹ್ಲಾದ ರಾಮರಾವ್ 

೩೯. ಆರ್ಯುವೇದ- ಬಿ.ಎಂ.ಹೆಗ್ಡೆ

೪೦. ಪ್ರವಾಸೋದ್ಯಮ- ವಿಶ್ವೇಶ್ವರ ಭಟ್

೪೧. ಚಲನಚಿತ್ರ ಅಕಾಡೆಮಿ- ಚಿತ್ರನಟ ಸುದೀಪ್

೪೨. ಸಂಸ್ಕೃತ ಭಾಷಾ ಪ್ರಾಧಿಕಾರ- ಆರ್.ಗಣೇಶ್ (ಶತಾವಧಾನಿ)

೪೩. ಕನ್ನಡ ಭಾಷಾ ಪ್ರಾಧಿಕಾರ- ಎಸ್.ಆರ್.ಲೀಲಾ, 

೪೪. ಕನ್ನಡ ಸಾಹಿತ್ಯ ಪರಿಷತ್- ಮೋಹನ ಆಳ್ವಾ

೪೫. ಲೋಕಾಯುಕ್ತ ನ್ಯಾಯಮೂರ್ತಿ- ಸಂತೋಷ ಗಜಾನನ ಭಟ್

೪೬. ಲೋಕಾಯುಕ್ತ ಪೋಲಿಸ್- ಬಿ.ದಯಾನಂದ್

೪೭. ಕೆಎಂಎಫ್- ಬಿ.ವೈ.ರಾಘವೇಂದ್ರ

೪೮. ರಾಜ್ಯ ಪೋಲಿಸ್ ಮಹಾನಿರ್ದೇಶಕ- ಪ್ರವೀಣ ಸೂದ್

೪೯. ಬೆಂಗಳೂರು ನಗರಾಭಿವೃದ್ಧಿ-ಕೇಂದ್ರ- ತೇಜಸ್ವಿ ಸೂರ್ಯ

೫೦. ಎಮ್.ಎಸ್.ಐ.ಎಲ್- ಯದುವೀರ್ ಒಡೆಯರ್

೫೧. ಕೃಷಿ, ಗೊಬ್ಬರ, ಪಶು ಸಂಗೋಪನೆ- ಸುನಿಲ್ ಕುಮಾರ್

೫೨. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ- ಪಿ.ರಾಜೀವ್ 

೫೩. ವಸತಿ ಇಲಾಖೆ- ಅಶ್ವತ್ಥ ನಾರಾಯಣ

೫೪. ಮಹಿಳಾ ಸಬಲೀಕರಣ ಮತ್ತು ಕ್ರೀಡೆ- ಅಶ್ವಿನಿ ನಾಚಪ್ಪ

೫೫. ಕರ್ನಾಟಕ ಲೋಕಸೇವಾ ಆಯೋಗ- ಗೋವಿಂದ ಕಾರಜೋಳ

೫೬. ಸಮಗ್ರ ಬೆಂಗಳೂರು ಮಹಾನಗರ ಪಾಲಿಕೆ ಪ್ರಾಧಿಕಾರ- ಕಿರಣ್ ಮಜುಂದಾರ್ ಷಾ

೫೭. ಬೆಂಗಳೂರು ನಗರಾಭಿವೃದ್ಧಿ- ಉತ್ತರ- ಪಿ.ಸಿ.ಮೋಹನ್

೫೮. ಬೆಂಗಳೂರು ನಗರಾಭಿವೃದ್ಧಿ- ಪೂರ್ವ- ಎನ್.ಆರ್.ರಮೇಶ

೫೯. ಬೆಂಗಳೂರು ನಗರಾಭಿವೃದ್ಧಿ- ಪಶ್ಚಿಮ- ಟಿ.ಬಿ.ಜಯಚಂದ್ರ

೬೦. ಬೆಂಗಳೂರು ನಗರ ರಿಯಲ್ ಎಸ್ಟೇಟ್ ಅಭಿವೃದ್ಧಿ ಪ್ರಾಧಿಕಾರ-  ರಂಜನ್ ಪೈ, ಇರ್ಫಾನ್ ರಜಾಕ್, 

೬೧. AI TECHNOLOGY- ಕ್ರಿಸ್ ಗೋಪಾಲಕೃಷ್ಣನ್

೬೨. ಉಕ್ಕು, ಕಬ್ಬಿಣ, ಬೃಹತ್ ಕೈಗಾರಿಕೆ- ಸಜ್ಜನ್ ಜಿಂದಾಲ್ 

ಈ ಕಾಲ್ಪನಿಕ ಸರ್ಕಾರ ಅತೀ ಮುಖ್ಯವಾಗಿ ಸಮಗ್ರವಾದ ಶಿಕ್ಷಣ ನೀತಿಯನ್ನು ಬಲಪಡಿಸಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಜ್ಯ ಶಿಕ್ಷಣ ನೀತಿಯಲ್ಲಿ ಸಮನ್ವಯವನ್ನು ಸಾರ್ವಕಾಲಿಕವಾದ ನೆಲೆಯಲ್ಲಿ ಸಾಧಿಸಬೇಕಿದೆ. ಸರ್ಕಾರಗಳು ಬದಲಾದಂತೆ ಇತಿಹಾಸವೂ ಬದಲಾಗುವ ಸನ್ನಿವೇಶದಲ್ಲಿ ರಾಗದ್ವೇಷವಿಲ್ಲದೆ ಮಕ್ಕಳಿಗೆ ಯಾವ ದೃಷ್ಟಿಕೋನದಿಂದಲೂ ಅನ್ಯಾಯವಾಗಬಾರದು ಎಂಬ ಎಚ್ಚರದಲ್ಲಿ ಒಂದು ಶಿಕ್ಷಣ ಸಮಿತಿಯನ್ನು ರಚಿಸಿದ್ದೇನೆ.. ಆ ಸಮಿತಿಯಲ್ಲಿ ಸುಧಾಮೂರ್ತಿ, ಆರ್.ಗಣೇಶ್, ಗುರುರಾಜ್ ಕರ್ಜಗಿ, ಎಸ್.ಆರ್.ಲೀಲಾ, ಮಹಾಬಲೇಶ್ವರರಾವ್, ಬರಗೂರು ರಾಮಚಂದ್ರಪ್ಪ, ಮಂಜುನಾಥ ಅಜ್ಜಂಪುರ, ಪ್ರೊ.ಕೃಷ್ಣೇಗೌಡ, ಜಿ.ಬಿ. ಹರೀಶ್, ಅಜಕ್ಕಳ ಗಿರೀಶ ಭಟ್, ನಾಗೇಶ ಹೆಗಡೆ, ಐಶ್ವರ್ಯ ಡಿ.ಕೆ.ಶಿವಕುಮಾರ್, ಶಿವಾನಂದ ಕಳವೆ, ಬಿ.ಎಂ.ಹೆಗ್ಡೆ, ವಿಕ್ರಮ್ ಸಂಪತ್, ಬಿ.ವಿ.ಆರತಿ, ಎಂ.ಪ್ರಭಾಕರ ಜೋಷಿ, ಬಾಬು ಕೃಷ್ಣಮೂರ್ತಿ, ಚೇತನ್ ರಾಮ್, ನರೇಂದ್ರ ರೈ ದೇರ್ಲ. 

ಈ ಕಾಲ್ಪನಿಕ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾಗಿರುವವರನ್ನು ಹೊರತುಪಡಿಸಿ ಇತರ ಪ್ರತಿಭಾವಂತರು ಮತ್ತು ಅರ್ಹತೆಯುಳ್ಳವರು, ನಿಸ್ವಾರ್ಥ ಮನೋಭಾವದವರು ರಾಜ್ಯದಲ್ಲಿ ಸಾಕಷ್ಟಿದ್ದಾರೆ. ಅವರನ್ನು ಸಾಂದರ್ಭಿಕವಾಗಿ ಸರ್ಕಾರದ ಭಾಗವಾಗಿಸಿಕೊಳ್ಳಲು ಸರ್ಕಾರಕ್ಕೆ ಅವಕಾಶವಿದ್ದೇ ಇದೆ. ಅದು ಕೂಡ ಸರ್ಕಾರದ ಮರ್ಜಿಗೆ ಸಂಬಂಧಿಸಿದ್ದು.


ಈ ಸರ್ಕಾರವು ಪ್ರಜಾಪ್ರಭುತ್ವದ ಮಾದರಿಯಲ್ಲೇ ನಡೆಯುವುದಾದರೂ ಕಾರ್ಯಾಂಗದ ಮೂಲಕವೇ ಆಡಳಿತವನ್ನು ಮಾಡುತ್ತದೆ. ಕಾರ್ಯಾಂಗದ ಮೂಲಕ ಜನರ ಸಮಸ್ಯೆಗಳನ್ನು ನೇರವಾಗಿ ಸ್ವೀಕರಿಸುತ್ತದೆ. ಹಾಗಂತ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನೇ ಸಶಕ್ತವಾಗಿ ಬಳಸಿಕೊಳ್ಳುತ್ತದೆ. ನಿರ್ದಿಷ್ಟವಾಗಿ ನಗರದ ನಿರ್ವಹಣೆಗೆ ಮಾತ್ರ ತಾಲೂಕು ಪಂಚಾಯತ್ ಇದ್ದೇ ಇರುತ್ತದೆ. ಎಸಿ ಹಾಗೂ ಡಿಸಿ ಯವರ ಮೂಲಕ ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಸರ್ಕಾರದ ಆಡಳಿತ ನಿರ್ವಹಣೆಯೇ ಇಲ್ಲಿ ಮುಖ್ಯವಾಗುತ್ತದೆ. ಜನರು ತಮ್ಮ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ ಗೆ ಸಲ್ಲಿಸಬೇಕು. ಸ್ಪಂದನೆ ಮತ್ತು ಪರಿಹಾರ ದೊರಕದೇ ಇದ್ದಲ್ಲಿ ನೇರವಾಗಿ ಎಸಿಯವರಿಗೆ ಸಲ್ಲಿಸಬೇಕು. ಸಮಸ್ಯೆಗಳನ್ನು ದೂರುಗಳನ್ನು ಸ್ವೀಕರಿಸಲು ಗ್ರಾಮ ಮತ್ತು ತಾಲೂಕು ಪಂಚಾಯತ್ ಮಟ್ಟದಲ್ಲಿ (ಈ ಕಾಲ್ಪನಿಕ ಸರ್ಕಾರದಲ್ಲಿ ಜಿಲ್ಲಾ ಪಂಚಾಯತ್ ಇರುವುದಿಲ್ಲ. ಆಯಾ ತಾಲೂಕಿನ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತ್ ಗಳು ಎಸಿಯವರ ಅಧೀನದಲ್ಲಿಯೂ, ಎಲ್ಲ ತಾಲೂಕುಗಳು ಡಿಸಿಯವರಾಧೀನದಲ್ಲೂ ಕಾರ್ಯನಿರ್ವಹಿಸುತ್ತದೆ) ಆಡಳಿತದಲ್ಲಿ ಪಾರದರ್ಶಕವಾದ ವ್ಯವಸ್ಥೆಯನ್ನು ಮಾಡುವುದರ ಮುಖೇನ ಎಲ್ಲ ವ್ಯವಹಾರಗಳು ಒನ್ ಲೈನ್ ದಾಖಲಾತಿ ಇರತಕ್ಕದ್ದು.


ಪಂಚಾಯತ್ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗುವ ಎಲ್ಲ ಸಮಸ್ಯೆಗಳಿಗೆ ಒಂದು ವಾರ ಅಥವಾ ಹದಿನೈದು ದಿನಗಳ ಅವಧಿಯಿರುತ್ತದೆ. ಆ ಅವಧಿಯಲ್ಲಿ ಪರಿಹಾರ ಕ್ರಮವನ್ನು ಕೈಗೊಳ್ಳುವುದು. ಪಂಚಾಯತ್ ಮಟ್ಟದಲ್ಲಿ ಸಮಸ್ಯೆಗೆ ಸರಿಯಾದ ಸ್ಪಂದನೆ ಸಿಗದಿದ್ದರೆ ಅಥವಾ ಪರಿಹಾರ ಕ್ರಮ ಸಾಧ್ಯವಾಗದಿದ್ದರೆ ಎಸಿಯವರಿಗೂ, ಮುಂದಿನ ಹಂತದಲ್ಲಿ ಡಿಸಿ ಅವರಿಗೂ ಜನರು ನೇರವಾಗಿ ಒನ್ ಲೈನ್ ಅಥವಾ ನೇರ ಭೇಟಿಯ ಮೂಲಕ ಸಮಸ್ಯೆ ಅಥವಾ ದೂರುಗಳನ್ನು ಸಲ್ಲಿಸಲು ಈ ಸರ್ಕಾರದಲ್ಲಿ ನೇರ ಅವಕಾಶವಿದೆ. ಯಾವುದೇ ಬಗೆಯ ದೂರುಗಳನ್ನು ನೀಡುವ ಸಂದರ್ಭದಲ್ಲಿ ಜನರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಭಯವಿಲ್ಲದೆ ನೀಡಬಹುದು. ವ್ಯವಸ್ಥೆಯ ಮುಖ್ಯ ಉದ್ದೇಶವೇ ಜನರ ಸಮಸ್ಯೆಗಳನ್ನು ಪರಿಹರಿಸುವುದು. ಜನರೇ ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪರಿಹರಿಸಿಕೊಳ್ಳಲು ನೇರವಾದ ವ್ಯವಸ್ಥೆಯನ್ನು ಈ ಸರ್ಕಾರ ಕಲ್ಪಿಸಿಕೊಡುತ್ತದೆ. ಎಲ್ಲ ವ್ಯವಹಾರಕ್ಕೂ ದಾಖಲೆಗಳನ್ನು ಇಟ್ಟುಕೊಳ್ಳುವ ಹೊಣೆ ಜನರದ್ದೂ ಆಗಿರುತ್ತದೆ, ಸರ್ಕಾರದ್ದೂ ಆಗಿರುತ್ತದೆ.


ಈ ಕಾಲ್ಪನಿಕ ಸರ್ಕಾರದಲ್ಲಿ ವಿಪಕ್ಷಗಳು ಇರುವುದಿಲ್ಲ. ಆದ್ದರಿಂದ ಯಾವುದೇ ಜನಪ್ರತಿನಿಧಿಗಳು ಇರುವುದಿಲ್ಲ. ಪಂಚಾಯತ್ ಮಟ್ಟದ ಎಲ್ಲ ಅಭಿವೃದ್ಧಿ ಕಾರ್ಯಗಳು ಸರ್ಕಾರದ ಮುತುವರ್ಜಿಯಲ್ಲೇ ನಡೆಯುತ್ತವೆ. ಇದಕ್ಕೆ ಡಿಸಿ ಮತ್ತು ಎಸಿಗಳು ಸಂಪೂರ್ಣ ಜವಾಬ್ದಾರರಾಗಿರುವುದರಿಂದ ಜನಪ್ರತಿನಿಧಿಗಳ ಅಗತ್ಯವಾಗಲೀ ಆವಶ್ಯಕತೆಯಾಗಲೀ ಇಲ್ಲ. (ಯಾಕೆಂದರೆ, ಜನಪ್ರತಿನಿಧಿಗ:ಳ ಅಧಿಕಾರದ ದರ್ಪ, ಜಾತಿ, ಪಕ್ಷ, ಗುಂಪು ರಾಜಕೀಯವನ್ನು ನೋಡಿ ನೋಡಿ ರೋಸಿದ್ದರಿಂದ ಅಭಿವೃದ್ಧಿಯ ಹಿನ್ನೆಲೆಯಿಂದ) ಸರ್ಕಾರದ ಎಲ್ಲ ಹಂತಗಳಲ್ಲೂ ಕಾಮಗಾರಿಗಳಿಗೆ ಟೆಂಡರ್ ಅಗತ್ವವಿದ್ದಲ್ಲಿ ಮಾತ್ರ ಟಂಡರ್ ಕರೆಯುವುದು. ಇಲ್ಲವಾದಲ್ಲಿ ಸರ್ಕಾರದ ಇಲಾಖೆಗಳೇ ಕಾಮಗಾರಿಗಳನ್ನು ನಿರ್ವಹಿಸುತ್ತದೆ. ಆಯಾ ಇಲಾಖೆಗಳಿಗೆ ಅಗತ್ಯವಿದ್ದ ಕಾಮಗಾರಿಗಳನ್ನು ಇಲಾಖೆಯ ಸಿಬ್ಬಂದಿಗಳೇ ನಿರ್ವಹಿಸುವುದು. ಯಾವುದೇ ಹಂತದಲ್ಲಿ ಯಾವುದೇ ಕಾಮಗಾರಿಗಳನ್ನು ಗುತ್ತಿಗೆ ಕೊಡುವಾಗ ಪಾರದರ್ಶಕತೆ ಅತೀ ಮುಖ್ಯ. ಯಾವ ಕಾರಣಕ್ಕೂ ಜಾತೀಯತೆ, ಸ್ವಜನ, ಗುಂಪುಗಾರಿಕೆ, ಲಂಚ, ಭ್ರಷ್ಟಾಚಾರ ಇಲ್ಲಿ ನುಸುಳಲಾರದು ಎಂಬ ಅಚಲ ನಂಬಿಕೆ ಇರುವುದರಿಂದ ಜನರ ಹಣವನ್ನು ಜನರಿಗೇ ವಿನಿಯೋಗವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪಂಚಾಯತ್ ಮಟ್ಟದಿಂದ ಮುಖ್ಯಮಂತ್ರಿಯವರೆಗೆ ಇದ್ದೇ ಇರುತ್ತದೆ. ಈ ದಿಸೆಯಲ್ಲಿ ಈ ನನ್ನ ಕಾಲ್ಪನಿಕ ಸರ್ಕಾರ ದಕ್ಷತೆಯನ್ನು, ಪಾರದರ್ಶಕತೆಯನ್ನು, ಪ್ರಾಮಾಣಿಕತೆಯನ್ನು ಎಲ್ಲ ಬಗೆಯಲ್ಲೂ ಕಾಯ್ದುಕೊಳ್ಳುತ್ತದೆ ಎಂಬ ಭರವಸೆ ಮತ್ತು ನಂಬಿಕೆಯಿದೆ. ನೇರವಾಗಿ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಜನರಿಗೆ ಇದ್ದೇ ಇದೆ. ಸರ್ಕಾರ ಅದಕ್ಕೆ ಉತ್ತರವನ್ನು ಕೊಡಲೇಬೇಕು ಎಂಬುದು ಇಲ್ಲಿ ಷರತ್ತಾಗಿರುತ್ತದೆ.


ಈ ಕಾಲ್ಪನಿಕ ಸರ್ಕಾರದಲ್ಲಿ ಮುಜರಾಯಿ ಇಲಾಖೆ ಇರುವುದಿಲ್ಲ. ಎಲ್ಲ ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು, ವಿಹಾರಗಳು, ಬಸದಿಗಳು ಸರ್ಕಾರದ ಹಿಡಿತದಿಂದ ಮುಕ್ತವಾಗಿರುತ್ತದೆ. ಅವುಗಳ ಆದಾಯ ಅವುಗಳ ಅಭಿವೃದ್ಧಿಗೆ ಮತ್ತು ವಿನಿಯೋಗಕ್ಕೆ ಮೀಸಲು. ಸರ್ಕಾರದ ಬೆಂಬಲ ಬೇಕಾದಲ್ಲಿ ಮಾತ್ರ ಸರ್ಕಾರ ಮಧ್ಯ ಪ್ರವೇಶ ಮಾಡುತ್ತದೆ. ಹಾಗಂತ ಅವುಗಳ ಮೇಲೆ ಸರ್ಕಾರದ ಅಧಿಕಾರ ಕಾನೂನಾತ್ಮಕವಾಗಿ ಇದ್ದೇ ಇರುತ್ತದೆ. ಮುಖ್ಯವಾಗಿ, ಈ ಸರ್ಕಾರದಲ್ಲಿ ವಿಧಾನ ಪರಿಷತ್ತು ಇರುವುದಿಲ್ಲ. ಸರ್ಕಾರದ ನೀತಿಗಳು, ಕಾನೂನುಗಳು, ಯೋಜನೆಗಳು, ಠರಾವುಗಳು, ಟೆಂಡರ್ ಪ್ರಕಟಣೆ, ಟೆಂಡರ್ ಮಂಜೂರು, ಅನುದಾನ- ಎಲ್ಲವೂ ಸಚಿವ ಸಂಪುಟದಲ್ಲಿ ಪಾರದರ್ಶಕವಾಗಿ ನಡೆಯುತ್ತದೆ. ಈ ಪ್ರಕ್ರಿಯೆ ಕರ್ನಾಟಕದ ಜನತೆಗೆ ಮಾಧ್ಯಮದ ಮೂಲಕ ಗೊತ್ತಾಗಬೇಕು. ಯೋಜನೆಗೆ ನಿಗದಿಪಡಿಸಿದ ಹಣದ ಮೊತ್ತದಲ್ಲಿಯೇ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಯೋಜನೆಯ ಅನುದಾನ ಮತ್ತು ಅನುಷ್ಠಾನದ ನಡುವೆ ಲಂಚ, ಕಮಿಷನ್ ತಿನ್ನುವುದಕ್ಕೆ ಅವಕಾಶವಿರದಂತೆ ಸರ್ಕಾರ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುತ್ತದೆಂಬ ಭರವಸೆ ಈ ಸರ್ಕಾರದ ಮೇಲಿದೆ. ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಕಂಡುಬಂದಾಗ ಜನರೇ ನೇರವಾಗಿ ಪಂಚಾಯತ್ ಮಟ್ಟದಿಂದ ಮೊದಲ್ಗೊಂಡು ಎಸಿ, ಡಿಸಿ ಕೊನೆಗೆ ಸರ್ಕಾರದವರೆಗೆ ಅಧಿಕೃತ ದಾಖಲೆಯೊಂದಿಗೆ ಮಾಹಿತಿಯ ಸಹಿತ ದೂರನ್ನು ಕೊಡಬಹುದು. ಸರ್ಕಾರವೇ ನ್ಯಾಯವನ್ನು ಸಮಾನವಾಗಿ ತ್ವರಿತವಾಗಿ ವಿಕ್ರಯಿಸುತ್ತದೆ ಎಂಬ ನಂಬಿಕೆಯಿದೆ.


ಯಾವುದೇ ಜಾತಿಯನ್ನು ಬೆಂಬಲಿಸುವ ನಿಗಮಗಳು, ಮಂಡಳಿಗಳು ಈ ಸರ್ಕಾರದಲ್ಲಿ ಇರುವುದಿಲ್ಲ. ಎಲ್ಲ ವರ್ಗಗಳು, ಜಾತಿ ಸಮುದಾಯಗಳು ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಮತ್ತು ಸೌಲಭ್ಯವನ್ನು ಪಡೆಯುವಲ್ಲಿ ಸಮಾನವಾಗಿರುತ್ತವೆ. ಇವೆಲ್ಲದರ ಹೊಣೆಯನ್ನು ಸರ್ಕಾರವೇ ಹೊತ್ತಿರುವುದರಿಂದ ಆಡಳಿತವು ಯಾವ ಹಂತದಲ್ಲೂ ಅನೀತಿಯ ಅನ್ಯಾಯದ ಮಾರ್ಗವನ್ನು ಹಿಡಿಯಲಾರದು ಎಂಬ ಭರವಸೆಯಿದೆ. ಆದರೆ, ಕೇವಲ ಆರ್ಥಿಕವಾಗಿ ಹಿಂದುಳಿದವರು ಮಾತ್ರ ಸರ್ಕಾರದ ಸೌಲಭ್ಯವನ್ನು ಪಡೆಯುವಲ್ಲಿ ಅರ್ಹತೆಯನ್ನು ಪಡೆಯುತ್ತಾರೆ. ಸರಿಹೊತ್ತಿನ ಬಡತನದ ರೇಖೆಯನ್ನು ಸರ್ಕಾರವು ಹೊಸದಾಗಿ ಮರು ಪರಿಶೀಲನೆ ಮಾಡಿ ಅರ್ಹರನ್ನು ಗುರುತಿಸಬೇಕಾದ ಜವಾಬ್ದಾರಿಯನ್ನು ಈ ಸರ್ಕಾರ ನಿಭಾಯಿಸಬೇಕಿದೆ. 


ಈ ಸರ್ಕಾರದ ಅವಧಿ ಕೇವಲ ಐದು ವರ್ಷ ಮಾತ್ರ. ರಾಜ್ಯವನ್ನು ಸಾಲಮುಕ್ತವಾಗಿಸುವ ಬಹುದೊಡ್ಡ ಹೊಣೆಯೊಂದಿಗೆ ಜನತೆಯಲ್ಲಿ ನೈತಿಕ ಪ್ರಜಾಪ್ರಭುತ್ವದ ಅರಿವನ್ನು ಬೆಳೆಸುವಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಬಗೆಯಲ್ಲಿ ಪ್ರಯತ್ನಿಸುತ್ತದೆ ಎಂಬ ನಿರೀಕ್ಷೆಯೊಂದಿಗೆ ಈ ಕಾಲ್ಪನಿಕ ಸರ್ಕಾರ ನನ್ನಲ್ಲಿ ಹುಟ್ಟಿಕೊಂಡಿದೆ. ಇನ್ನು ಉಳಿದದ್ದು ಈ ಕಾಲ್ಪನಿಕ ಸರ್ಕಾರಕ್ಕೆ ಬಿಟ್ಟದ್ದು!



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top