ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕೇಂದ್ರ ಕಛೇರಿ ಆವರಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಸ್ಥಾಪಿಸಲಾದ ನೂತನ ಎ.ಟಿ.ಎಂನ ಉದ್ಘಾಟನಾ ಸಮಾರಂಭ ಗುರುವಾರದಂದು ಜರುಗಿತು.
ಕೆನರಾ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಭವೇಂದ್ರ ಕುಮಾರ್ ರವರು ನೂತನ ಎ.ಟಿ.ಎಂ ಕೇಂದ್ರವನ್ನು ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿದ ಅವರು ಜನಸಾಮಾನ್ಯರಿಗೆ ತಮ್ಮೆಲ್ಲಾ ಕೆಲಸಕಾರ್ಯಗಳನ್ನು ಬಿಟ್ಟು ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಕಾದು ಸಮಯ ವ್ಯರ್ಥವಾಗುವುದನ್ನು ತಪ್ಪಿಸಿ, ಸುಲಭವಾಗಿ ಮತ್ತು ಸುಸೂತ್ರವಾಗಿ ನಗದು ವ್ಯವಹಾರಗಳನ್ನು ನಡೆಸುವ ನಿಟ್ಟಿನಲ್ಲಿ ಈ ಎ.ಟಿ.ಎಂ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜೊತೆಗೆ ಕೆನರಾ ಬ್ಯಾಂಕ್ ವಿವಿಧ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗ್ರಾಹಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಎಲ್ಲರೂ ಈ ಯೋಜನೆಗಳನ್ನು ಸದ್ಬಳಕೆ ಮಾಡುವಂತೆ ಮನವಿ ಮಾಡಿದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿರಿಯ ಅಧ್ಯಕ್ಷರಾದ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಆಶಯದಂತೆ ಸಿರಿ ಸಂಸ್ಥೆಯಲ್ಲಿ ದುಡಿಯುವ ಸಾವಿರಾರು ಸಿಬ್ಬಂದಿಗಳಿಗೆ ಹಾಗೂ ಬೆಳ್ತಂಗಡಿ–ರೆಂಕೆದಗುತ್ತು-ಗೇರುಕಟ್ಟೆ-ಉಪ್ಪಿನಂಗಡಿ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ, ಸ್ಥಳೀಯ ನಿವಾಸಿಗಳಿಗೆ ನಗದು ವ್ಯವಹಾರವನ್ನು ನಡೆಸಲು ಸಹಕಾರಿಯಾಗುವ ಹಿತದೃಷ್ಠಿಯಿಂದ, ಸಿರಿ ಕೇಂದ್ರ ಕಛೇರಿ ಆವರಣದಲ್ಲಿಯೇ ಒಂದು ಎ.ಟಿ.ಎಂ ಕೇಂದ್ರವನ್ನು ಸ್ಥಾಪಿಸುವಂತೆ ಕೆನರಾ ಬ್ಯಾಂಕ್ ಮುಖ್ಯಸ್ಥರುಗಳಲ್ಲಿ ವಿನಂತಿ ಮಾಡಿಕೊಂಡಾಗ, ಅವರು ಇದಕ್ಕೆ ಒಪ್ಪಿ ಅತೀ ಕಡಿಮೆ ಸಮಯದಲ್ಲಿಯೇ ಸುಂದರವಾದ ಎ.ಟಿ.ಎಂ ಕೇಂದ್ರವನ್ನು ನಿರ್ಮಿಸಿ ಕೊಟ್ಟಿರುತ್ತಾರೆ. ಎಲ್ಲರೂ ಈ ಎ.ಟಿ.ಎಂ ಸೇವೆಯನ್ನು ಉಪಯೋಗಿಸುವುದರ ಜೊತೆಗೆ, ಕೆನರಾ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಒದಗಿಸಿರುವ ಆರ್ಥಿಕ ಭದ್ರತೆ, ಆರೋಗ್ಯ ಭದ್ರತೆ ಹಾಗೂ ಜನಸಾಮಾನ್ಯರ ಸಮಗ್ರ ಬೆಳವಣಿಗೆಗೆ ಆಯೋಜಿಸಿರುವ ಹಲವು ಯೋಜನೆಗಳನ್ನು ಸದುಪಯೋಗಿಸಿಕೊಂಡು ಉತ್ತಮ ರೀತಿಯಲ್ಲಿ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿ, ಕಾರ್ಯಕ್ರಮಕ್ಕೆ ಆಗಮಿಸಿರುವ ಗಣ್ಯಮಾನ್ಯರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಗೌರವಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಮಂಗಳೂರು ಸರ್ಕಲ್ ಆಪೀಸ್ ಜನರಲ್ ಮ್ಯಾನೇಜರ್ ಮಂಜುನಾಥ್ ಸಿಂಗೈ, ಬೆಂಗಳೂರು ಬ್ರಾಂಚ್ ನ ಚೀಫ್ ಜನರಲ್ ಮ್ಯಾನೇಜರ್ ಶಂಭುಲಾಲ್, ಪುತ್ತೂರು ಬ್ರಾಂಚ್ ರಿಜೀನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಂಜನ್ ಕುಮಾರ್, ಬೆಳ್ತಂಗಡಿ ಬ್ರಾಂಚ್ ಸೀನಿಯರ್ ಮ್ಯಾನೇಜರ್ ಪ್ರತಾಪ್, ಮಂಗಳೂರು ಬ್ರಾಂಚ್ ಸರ್ಕಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನರೇಶ್, ಪುತ್ತೂರು ಡಿವಿಜಿನಲ್ ಮ್ಯಾನೇಜರ್ ಅಜಿತ್ ಕುಮಾರ್, ರುಡ್ ಸೆಟ್ ಎಕ್ಸಿಕ್ಯುಟಿವ್ ಡೈರೆಕ್ಟರ್ ವಿಜಯ್ ಕುಮಾರ್, ರುಡ್ ಸೆಟ್ ನಿರ್ದೇಶಕರಾದ ಅಜಯ್, ಪುತ್ತೂರು ರೀಜನಲ್ ಆಫೀಸ್ ಮಾರ್ಕೆಟಿಂಗ್ ಮ್ಯಾನೇಜರ್ ಹರೀಶ್ ನಾಯ್ಕ್, ಸಿರಿ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ, ರಾಜೇಶ್ ಪೈ ಮೊದಲಾದ ಗಣ್ಯರು, ಸಿರಿ ಸಂಸ್ಥೆಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


