ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನಗರದ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ|| ಜೋಗಿಲ ಸಿದ್ದರಾಜುರವರು ಯಾವುದೇ ಕಲೆ ಮತ್ತು ಸಂಸ್ಕೃತಿ ಉಳಿಯುವುದು ಕಲಾವಿದರಿಂದ ಮಾತ್ರ ಎಂದು ಅಭಿಪ್ರಾಯ ಪಟ್ಟರು.
ಶಾಸ್ತ್ರೀಯ ನೃತ್ಯದ ಗುರುಗಳು, ನೃತ್ಯಗಾರರು, ಸುಗಮ ಸಂಗೀತ ಗಾಯಕ ಗಾಯಕಿಯರು, ನೃತ್ಯ ಶಾಲೆಯ ಮುಖ್ಯಸ್ಥರು, ಮತ್ತು ಸುಗಮ ಸಂಗೀತ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಸುಮಾರು 235 ಪ್ರತಿನಿಧಿಗಳು ಭಾಗವಹಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು ಕೇಂದ್ರ ಸರ್ಕಾರದ ಅಡಿ ಬರುವ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಮುಖ್ಯ ಉದ್ದೇಶ ನಾಡಿನ ಮತ್ತು ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೇ ಆಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕಲಾವಿದರಿಗೆ ಯಾವುದೇ ಯೋಜನೆಗಳಿಂದ ಪ್ರಯೋಜನವಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಕಲಾವಿದರು ಇಲಾಖೆಗಳ ಜೊತೆ ಮತ್ತು ಅಕಾಡೆಮಿ ಜೊತೆ ನಿಕಟ ಸಂಪರ್ಕವನ್ನು ಹೊಂದದೇ ಇರುವುದು.
ಗುರು-ಶಿಷ್ಯ ಪರಂಪರೆಯ ಅಡಿಯಲ್ಲಿ ವಿವಿಧ ನೃತ್ಯಗಳನ್ನು ಸಂಗೀತಗಳನ್ನು ಕಲಿಸಿಕೊಡುತ್ತಿರುವ ಗುರುಗಳು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಈಗ ಆನ್ಲೈನ್ ಮೂಲಕ ಯಾವುದೇ ಮಾಹಿತಿಯನ್ನು ಪಡೆದುಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸುತ್ತಾ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಅಡಿ ಬರುವ ಅನೇಕ ಯೋಜನೆಗಳ ಬಗ್ಗೆ ಸ್ವವಿವರವಾಗಿ ತಿಳಿಸಿಕೊಟ್ಟರು.
ಈ ಸಮಾವೇಶದ ಉದ್ಘಾಟನೆಯನ್ನು ನಾಡೋಜ ಪ್ರೊ|| ಬರಗೂರು ರಾಮಚಂದ್ರಪ್ಪನವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ 'ಕರ್ನಾಟಕ ಕಲಾಶ್ರೀ' ಡಾ|| ಶ್ರೀಧರ್ ಅವರು ಭಾಗವಹಿಸಿದ್ದರು. ಈ ಸಮಾವೇಶದ ಅಧ್ಯಕ್ಷತೆಯನ್ನು ಕರ್ನಾಟಕ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ವಿದುಷಿ ಶುಭ ಧನಂಜಯರವರು ವಹಿಸಿದ್ದರು. ಸದಸ್ಯ ಸಂಚಾಲಕರಾದ ವಿದುಷಿ ಉಷಾ ಬಸಪ್ಪ ರವರು ಸ್ವಾಗತಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಆದ ನರೇಂದ್ರಬಾಬುರವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಈ ಸಮಾವೇಶದಲ್ಲಿ ಭಾಗವಹಿಸಿದ ಪ್ರತಿನಿಧಿಗಳು ನೀಡಿದ ಮಾಹಿತಿಯು ಬಹಳ ಉಪಯುಕ್ತವಾಗಿತ್ತು ಎಂದು ಅಭಿಪ್ರಾಯ ಪಟ್ಟರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ





