'ಮಾನವಿ'ಯ ಮಹಾತಪಸ್ವಿ ಶ್ರೀ ನಾರಾಯಣತೀರ್ಥರ ಆರಾಧನೆ

Chandrashekhara Kulamarva
0


ಹಾ ಮುನಿಗಳು, ಜಗನ್ನಾಥದಾಸರು ನೆಲೆಸಿ, ಕಾಶಿಕ್ಷೇತ್ರಕೆ ಸಮವೆನಿಸಿದ "ಮಾನವಿ"ಯಲ್ಲಿ ನೆಲೆಸಿರುವ ಮಹಾತಪಸ್ವಿಗಳಾದ ಶ್ರೀ 108 ಶ್ರೀನಾರಾಯಣತೀರ್ಥರು.


ಆತ್ಮೀಯರೊಬ್ಬರು ದಾಸಸಾಹಿತ್ಯ, ಭಕ್ತಿಸಾಹಿತ್ಯದ ಕುರಿತಾದ ಲೇಖನ ಬರೆಯಲು ಹೇಳಿದ್ದರು. ಮಹಾನುಭಾವರ ಬಗ್ಗೆ ಈ ನಾಲ್ಕಕ್ಷರ ಬರೆಯಲು ಪ್ರೇರೇಪಿಸಿದ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ, ಈ ಲೇಖನ ನಿಮ್ಮ ಮುಂದೆ.


ಸುಮಾರು 150 ವರುಷಗಳ ಹಿಂದೆ ಶ್ರೀಚಾಮರಾಜ ಒಡೆಯರ ಕಾಲದಲ್ಲಿ ಆಸ್ಥಾನ ಪಂಡಿತರಾಗಿದ್ದ ಶ್ರೀಭೀಮಸೇನಾಚಾರ್ಯರ ಮಗನಾದ ರಾಮಚಂದ್ರಾಚಾರ್ಯರ ಎರಡನೇ ಪುತ್ರರತ್ನವೇ ಶ್ರೀನಿವಾಸ. ಶ್ರೀನಿವಾಸನ ಪರಮಾನುಗ್ರಹದ ಫಲ, ಶ್ರೀನಿವಾಸನ ಕರುಣೆಯ ವರಪ್ರಸಾದವಾದ್ದರಿಂದ ಇವರಿಗೆ ಶ್ರೀನಿವಾಸನೆಂದೇ ನಾಮಕರಣ ಮಾಡಲಾಯಿತು. 


ಮುಮ್ಮಡಿ ಕೃಷ್ಣರಾಜ ಒಡೆಯರ ದತ್ತುಸ್ವೀಕಾರದ ಸಂದರ್ಭದಲ್ಲಿ ನಂಜನಗೂಡಿನ ನಂಜುಂಡೇಶ್ವರನಿಗೆ ಮೈಸೂರು ಅರಮನೆಯಿಂದ ವೈಭವಪೂರಿತವಾದ ಪೂಜೆಗೆ ಏರ್ಪಾಡಾಗಿತ್ತು. ಈ ಉತ್ಸವಕ್ಕೆ ಆಸ್ಥಾನ ಪಂಡಿತರಾಗಿದ್ದ ಶ್ರೀಭೀಮಸೇನಾಚಾರ್ಯರೂ ಹಾಗೂ ರಾಮಚಂದ್ರಾರ್ಯ ಜಾನಕಿ ದಂಪತಿಗಳೂ ಆಗಮಿಸಿದ್ದರು. ತುಂಬು ಗರ್ಭಿಣಿಯಾದ ಜಾನಕೀಬಾಯಿ ದಂಪತಿಗಳು ಉತ್ಸವ ಮುಗಿಸಿಕೊಂಡು ಎತ್ತಿನಗಾಡಿಯಲ್ಲಿ ಮರಳಿ ಊರಿನ ಕಡೆಗೆ ಪ್ರಯಾಣಿಸುತ್ತಿದ್ದರು. 



ಪ್ರಯಾಣ ಕಾಲದಲ್ಲಿಯೇ ಜಾನಕಿಬಾಯಿಗೆ ಪ್ರಸವ ವೇದನೆಯುಂಟಾಗಿ ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತಳು. ಆದರೆ ಹುಟ್ಟಿದ ಮಗುವಿನಲ್ಲಿ ಎಷ್ಟು ಹೊತ್ತಾದರೂ, ಎದೆಬಡಿತವಿಲ್ಲ, ಎಷ್ಟೇ ಪ್ರಯತ್ನಿಸಿದರೂ ಯಾವುದೇ ಚಲನವಲನವಿಲ್ಲದಿರುವುದನ್ನು ಕಂಡು ಕಂಗಾಲಾದ ಇವರು ಕೂಸು ಬದುಕಿಲ್ಲವೆಂದು ಕಣ್ಣೀರಿಡುತ್ತಲೇ ಹಸುಕಂದನನ್ನು ಕಂಬಳಿ ಯಲ್ಲಿ ಸುತ್ತಿದರು.


ನವಮಾಸ ಹೊತ್ತು ಹೆತ್ತ ತಾಯಿಯ ಜೀವ ಕೇಳೀತೇ? ಸೆರಗೊಡ್ಡಿ ಶ್ರೀನಿವಾಸದೇವರಲ್ಲಿ ಪ್ರಾರ್ಥಿಸುತ್ತಾ ದುಃಖದ ಮಡುವಿನಲ್ಲಿಯೇ ಮುಳುಗಿದ್ದ ಜಾನಕೀಬಾಯಿಗೆ ಮಗುವನ್ನು ಸುತ್ತಿದ ಕಂಬಳಿಯನ್ನು ತೆಗೆದಾಗ ಮಗು ಮುದ್ದಾಗಿ ಕಿಲಕಿಲನೆ ನಗುತ್ತಾ ಆಟವಾಡುತ್ತಿತ್ತು.


ಶ್ರೀನಿವಾಸ ಇವರ ಮೊರೆಯನ್ನು ಕೇಳಿಸಿಕೊಂಡಿದ್ದ. ಅಘಟಿತ ಘಟನಾ ಚತುರನಾದ ಭಗವಂತ ತನ್ನ ಇರುವನ್ನು ಪದೇ ಪದೇ ತೋರಿಸುತ್ತಲೇ ಇರುತ್ತಾನೆ. ನಾವೇ ಮಕ್ಕಳನ್ನು ಸಾಕುತ್ತೇವೆ, ಸಲಹುತ್ತೇವೆ, ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತೇವೆ ಎಂಬುದು ನಮ್ಮ ಭ್ರಮೆ ಅಷ್ಟೇ, ಎಲ್ಲರನ್ನು ಎಲ್ಲವನ್ನೂ ಸರ್ವಕಾಲದಲ್ಲೂ ಸಲಹುವವನು ಆ ಭಗವಂತ.


ಭಗವಂತನ ಈ ಕಾರುಣ್ಯವನ್ನು ಕಣ್ಣೆದುರು ಅನುಭವಿಸಿದ ಹೆತ್ತವರು ಭಗವಂತ ನ ಲೀಲೆಯನ್ನು ಕಂಡು ಮೂಕವಿಸ್ಮಿತರಾದರು. ಹಾಗಾಗಿ ಮಗುವಿಗೆ ಶ್ರೀನಿವಾಸನೆಂದೇ ಹೆಸರಿಟ್ಟರು. ಬಾಲ್ಯದಲ್ಲಿಯೇ ಅವರ ವರ್ಚಸ್ಸು ತುಂಬಿಕೊಂಡಿದ್ದ ಶ್ರೀನಿವಾಸನಿಗೆ ನಂಜನುಗೂಡಿನ ಸೋಮಯಾಜಿಗಳಲ್ಲಿ ವಿದ್ಯಾಭ್ಯಾಸ ನಡೆಯಿತು. ವ್ಯಾಯಾಮ, ಕ್ರೀಡೆ ಎಲ್ಲದರಲ್ಲೂ ಮುಂದಿದ್ದ. ಮೌನ ಇವರ ಸ್ವಭಾವವಾಗಿತ್ತು.


ತಂದೆಯಿಂದ ಭಾಗವತ,ಭಾರತದ ಅದ್ಯಯನ ಮಾಡಿದ ಇವರು ಮಹಾನ್ಗ್ರಂಥಗಳ ವಾಚನವನ್ನು ಬಲು ಸುಶ್ರಾವ್ಯವಾಗಿ ಮಾಡುತ್ತಿದ್ದರು. ಇವರ ವಾಗ್ಝರಿಯನ್ನು ಕೇಳಿದ ಶ್ರೀ ಕೃಷ್ಣರಾಜ ಒಡೆಯರು ಆಸ್ಥಾನವಿದ್ವಾಂಸರಾದ ಭೀಮಾಚಾರ್ಯರನ್ನು ಕರೆಸಿ ಶ್ರೀನಿವಾಸಾಚಾರ್ಯರಿಂದ ಮಹಾಭಾರತ ವಾಚನವನ್ನು ಮಾಡಿಸಿದರು.


ಇವರ ವಾಚನಕ್ಕೆ ಮಾರುಹೋದ ಮಹಾರಾಜರು ಭೀಮಾಚಾರ್ಯರನ್ನು ಕರೆಸಿ ನಿಮ್ಮ ಮೊಮ್ಮಗನಿಗೆ ನಮ್ಮ ಸೇನೆಯ ಜಮೇದಾರರನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಸೈನ್ಯದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಿದ ಇವರು ಎಲ್ಲರಿಗೂ ಪ್ರೀತಿಪಾತ್ರರಾದರು.


ಹೆತ್ತವರೊಂದಿಗೆ ಶಿವಮೊಗ್ಗದಲ್ಲಿ ಇರುತ್ತಿದ್ದ ಇವರು ಪ್ರಾಪ್ತವಯಸ್ಕರಾದಾಗ ಚಿತ್ರದುರ್ಗದ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದ ರಾಘವೇಂದ್ರ ಅವರ ದ್ವಿತೀಯ ಪುತ್ರಿ ದ್ವಾರಕಾಬಾಯಿ ಎಂಬ ಕನ್ಯೆಯೊಂದಿಗೆ ವಿವಾಹವಾಯಿತು. 


ಧಾರ್ಮಿಕ ವಿಷಯದಲ್ಲಿ, ಶಾಸ್ತ್ರದಲ್ಲಿ ಆಸಕ್ತಿ ದಿನೇ ದಿನೇ ಹೆಚ್ಚಾಯಿತು. ರಾಜಕಾರ್ಯ ಇದಕ್ಕೆ ಅಡ್ಡಿಯಾದ್ದರಿಂದ ರಾಜೀನಾಮೆ ಕೊಟ್ಟದ್ದೂ ಆಯಿತು.


ಎರಡುಮಕ್ಕಳಾದ ನಂತರ ಮೈಸೂರಿನಲ್ಲಿ ವಾಸ. ಇವರ ಧರ್ಮ ನಿಷ್ಠೆಯನ್ನು ನೋಡಿದ ಸಾಗರಕಟ್ಟಿ ಮಠಾಧೀಶರಾದ ಶ್ರೀ108 ಶ್ರೀ ಪ್ರದ್ಯುಮ್ನತೀರ್ಥರು ಇವರನ್ನು ಕರೆಸಿ ಆಶ್ರಮ ಸ್ವೀಕರಿಸುವಂತೆ ಹೇಳಿದಾಗ ಆ ಕ್ಷಣಕ್ಕೆ ಇವರು ಒಪ್ಪಲಿಲ್ಲ. 


ಮುಂದೆ ತಿರುಮಕೂಡಲಿಗೆ ಬಂದು ಶ್ರೀ ಶೇಷಚಂದ್ರಿಕಾಚಾರ್ಯರ ಸೇವೆಯನ್ನು ಮಾಡಿದರು. ಮತ್ತೆ ಮೈಸೂರು ಮಹಾರಾಜಲ್ಲಿ ಒಪ್ಪಂದ ಪೂರ್ವಕ ಐದುವರುಷಗಳ ಕಾಲ ಕಾರ್ಯನಿರ್ವಹಿಸಿದರು. ಅಷ್ಟರಲ್ಲಿ ಐದುಮಕ್ಕಳ ತಂದೆಯಾಗಿದ್ದರು. ಹೆಂಡತಿ ದ್ವಾರಕಾಬಾಯಿ ಹಾಗೂ ತಾಯಿಯವರ ವಿಯೋಗದ ನಂತರ,ವಿರಕ್ತಜೀವನಕ್ಕೆ ಕಾಲಿಟ್ಟ ಇವರಿಗೆ ಪುತ್ರವಿಯೋಗ ಮತ್ತಷ್ಟೂ ವೈರಾಗ್ಯದ ಕಡೆ ಸೆಳೆಯಿತು. 


ಲೌಕಿಕ, ಲೋಕಾಂತ ರುಚಿಸದೆ ಶ್ರೀಹರಿಯ ಚಿಂತನೆಯಲ್ಲಿ ಏಕಾಂತಪ್ರಿಯರಾದರು.


ಭಗವತ್ಸಂಕಲ್ಪದಂತೆ ಸನ್ಯಾಸಾಶ್ರಮದ ಕಡೆ ವಾಲಿದ ಧೃಡ ಮನಸಿನಿಂದ ಹಿರಿಯರಿಗೆ, ಮನೆಯ ಎಲ್ಲರಿಗೂ ವಿಷಯ ತಿಳಿಸಿ, ಮಹಾತಪಸ್ವಿಗಳಾದ ಶ್ರೀ೧೦೮ ಶ್ರೀ ರಘುವೀರತೀರ್ಥರ ಹತ್ತಿರ ಬಂದಾಗ, ಇವರ ವೈರಾಗ್ಯ, ಪ್ರಾಮಾಣಿಕತೆಯನ್ನು ನಿಶ್ಚಲ ಭಕ್ತಿಯನ್ನು ನೋಡಿ ಸಂತುಷ್ಟರಾಗಿ ಇವರಿಗೆ ಸನ್ಯಾಸಾಶ್ರಮ ನೀಡಿ "ಶ್ರೀ ನಾರಾಯಣತೀರ್ಥರು" ಎಂದು ನಾಮಕರಣ ಮಾಡಿದರು.


ಶ್ರೀಹರಿಯಲ್ಲಿ ಭಕ್ತಿ ಸಾಧನೆಯ ತುಡಿತದಿಂದ ಸನ್ಯಾಸ ಸ್ವೀಕರಿಸಿದ ಇವರು ತಮಗಾಗಿ ನೆಲೆಯನ್ನು ಬಯಸಲಿಲ್ಲ. ತೀರ್ಥಯಾತ್ರೆ ಮಾಡಿದರು. ಮಧ್ವಶಾಸ್ತ್ರದ ತಿಳುವಳಿಕೆ ನೀಡಿದರು. 


ಭಿಕ್ಷೆಗಾಗಿ ಸಜ್ಜನರ ಮನೆಗೆ ಹೋಗುತ್ತಿದ್ದ ಇವರ ಕಂಡು ಧನ್ಯರಾದ ಅದೆಷ್ಟೋ ಜನ ಪುನೀತರಾಗಿದ್ದಾರೆ. ಯತ್ಯಾಶ್ರಮದ ಸುಮಾರು ಇಪ್ಪತ್ತು ವರುಷಗಳ ಕಾಲ ಕೊಪ್ಪರ ನರಸಿಂಸದೇವರ ಸನ್ನಿಧಿಯಲ್ಲೇ ಕಳೆದರು. 


ಭಕ್ತರು ನೀಡುತ್ತಿದ್ದ ಗುರುಕಾಣಿಕೆಯನ್ನು ಬ್ರಾಹ್ಮಣರಿಗೆ ಮೃಷ್ಟಾನ್ನ ಭೋಜನ ಹಾಕಿಸಿ ಸಂತೋಷ ಪಡುತ್ತಿದ್ದರು. ವಿದ್ವಾಂಸರಿಗೆ ಭರಪೂರ ದಾನಧರ್ಮಗಳನ್ನು ಮಾಡುತ್ತಿದ್ದರು.


ಯಾರಾದರೂ ಭರಪೂರ ಅನ್ನ ದಾನ ಮಾಡಿದರೆ ನಾರಾಯಣ ತೀರ್ಥರಂತೆ ಮಾಡಿದರೆಂದು ಇಂದಿಗೂ ಜನ ಹೇಳುವುದುಂಟು. 

ಇವರು ಮಾತ್ರ ಅರಳಿಟ್ಟನ್ನೇ ದೇವರಿಗೆ ಸಮರ್ಪಿಸಿ ಅಷ್ಟನ್ನು ಮಾತ್ರ ಸ್ವೀಕರಿಸುತ್ತಿದ್ದರು.


ಒಬ್ಬ ಸಾಮಾನ್ಯನು ಸೇನೆಯಲ್ಲಿ ದುಡಿದು, ಸೇವೆಯನ್ನು ಮಾಡಿ, ಸನ್ಯಾಸಕುಲದೀಪಕರಾಗಿ ಬೆಳಗಿದ ಇವರು ಎಲ್ಲ ಸಜ್ಜನರನ್ನುದ್ಧರಿಸಿದರು. 


ಕಾರ್ಪರ ಕ್ಷೇತ್ರ ಹಾಗೂ ಮಾನವಿ ಕ್ಷೇತ್ರ ಇವರ ನೆಚ್ಚಿನ ತಾಣ ಹಾಗೂ ಕಾರ್ಯ್ರಕ್ಷೇತ್ರಗಳಾಗಿದ್ದವು. ಭಕ್ತರ ಕಷ್ಟಗಳನ್ನು ತೊಲಗಿಸುತ್ತಾ, ಭಗವದ್ಭಕ್ತಿಯ ಬೀಜವನ್ನು ಬಿತ್ತಿದರು.


 ಕಾರ್ಪರಕ್ಷೇತ್ರದಲ್ಲಿ ಕೃಷ್ಣವೇಣಿಯ ಸ್ನಾನಕ್ಕೆ ಅನುಕೂಲವಾಗುವಂತೆ ಭಕ್ತರಿಗಾಗಿ ಸೋಪಾನಗಳನ್ನು ಕಟ್ಟಿಸಿದರು. ಹಾಸುಗಲ್ಲುಗಳನ್ನು ಹಾಕಿಸಿದರು.ನರಸಿಂಹ ದೇವರ ಕಟ್ಟೆಯನ್ನು ಅಚ್ಚುಕಟ್ಟಾಗಿ ಕಟ್ಟಿಸಿದರು . 


ಕೆಂಚನಗುಡ್ಡದ ವಸುಧೇಂದ್ರತೀರ್ಥರ ಸೇವೆ ಮಾಡಲು ಬಯಸಿದಾಗ ಅಲ್ಲಿನ ಜನರು ಇಲ್ಲಿಯವರೆಗೂ ರಾತ್ರಿಯ ಸಮಯ ಅಲ್ಲಿ ಕಾಲಕಳೆದ  ಇಲ್ಲ. ಹಾಗಾಗಿ ನೀವೂ ಕೂಡ ಅಲ್ಲಿ ತಂಗಬೇಡಿ ಎಂದಾಗ ಜನರ ಕಾಳಜಿಯನ್ನು ಅರಿತ ನಾರಾಯಣತೀರ್ಥರು ಅಂತಹ ತಪಸ್ವಿಗಳ ಸನ್ನಿಧಾನದಲ್ಲಿ ವೃಂದಾವನಸ್ಥರಾಗುವ ಭಾಗ್ಯ ಸಿಕ್ಕರೆ ಜನ್ಮಾಂತರದ ಪುಣ್ಯ ಒದಗಿ ಬಂದಿದೆಯೆಂದು ಭಾವಿಸತ್ತೇನೆ ಎಂದು ನಗು ಮುಖದಿಂದ ಹೇಳಿ, ಏಳುದಿನ ಹಗಲುರಾತ್ರಿ ವಸುಧೇಂದ್ರ ರ ಸೇವೆ ಮಾಡಿ ಸ್ವಪ್ನದ್ವಾರಾ ದರುಶನ ನೀಡಿ ಅನುಗ್ರಹಿಸಿದರು.


ಚಿಂತರವೇಲಿಯಲ್ಲಿ ಮಧ್ವನವಮಿ ಮಾಡುವಾಗ ನೆರೆದಿದ್ದ ಭಕ್ತಸ್ತೋಮದ ನಡುವೆ ಭೋಜನದ ಒಂದು ಸಾಲಿನಲ್ಲಿ ಒಂದು ಮುದ್ದಾದ ಮಂಗವೊಂದು ಬಂದು ಕುಳಿತಿತ್ತು. ಆಗ ನಾರಾಯಣತೀರ್ಥರು ಅದಕ್ಕೂ ಒಂದು ಎಲೆ ತರಿಸಿ ಎಲ್ಲ ಪದಾರ್ಥಗಳನ್ನು ಬಡಿಸಲು ಹೇಳಿದರು. ಎಲ್ಲರೊಂದಿಗೆ ಮಂಗರಾಯನೂ ಭೋಜನ ಸ್ವೀಕರಿಸಿ ಕೇಕೆ ಹಾಕುತ್ತಾ ಹೊರಟ ಅದ್ಭುತವನ್ನು ಎಲ್ಲರೂ ನೋಡಿ ಅವಾಕ್ಕಾಗಿದ್ದರು.


ಜೀವನದುದ್ದಕ್ಕೂ ಭಕ್ತರನ್ನುದ್ದರಿಸುತ್ತಾ ಬಂದ ಇವರು ಪೂರ್ವಾಶ್ರಮದ ಮಗಳಾದ ಪದ್ಮಾವತಿಬಾಯಿಯವರಿಗೆ ಪುತ್ರಾದಿ ವ್ಯಾಮೋಹಗಳನ್ನು ಬಿಟ್ಟು ಸಾಧನೆಯನ್ನು ಮಾಡಿಕೊಳ್ಳಲು ಉಪದೇಶಿಸಿ, ಕಾರ್ತಿಕ ಕೃಷ್ಣ ಸಪ್ತಮಿ ತಿಥಿಯಂದು ಹರಿಪುರಕ್ಕೆ ತೆರಳಿದರು.


ಮುಂದೆ ಭಾದ್ರಪದ ಶುದ್ಧ ದಶಮಿಯಂದು ಕಲಾಕರ್ಷಣೆ ನಡೆಸಲಾಯಿತು.


ಪೂರ್ವಾಶ್ರಮದ ಮಗಳಾದ ಪದ್ಮಾವತಿ ಬಾಯಿಯವರ ಕನಸಲ್ಲಿ ಸೂಚಿತವಾದಂತೆ, ಶ್ರೀಗಳವರು ಕುಳಿತ ಸ್ಥಳವು ಪೂರ್ತಿ ನೀರಿನಿಂದ ತುಂಬಿಕೊಂಡಿತ್ತು. ಅಷ್ಟೇ ಅಲ್ಲದೆ ನೀರು ಸುವಾಸನೆಯಿಂದ ಕೂಡಿತ್ತು. ನೀರಿನಿಂದ ತುಂಬಿದ ದೇಹಕ್ಕೆ ಯಾವುದೇ ಕುಂದುಕೊರತೆಯಾಗಿದ್ದಿಲ್ಲ. ಮೊದಲಿನಂತೆಯೇ ಇತ್ತು.ಇದು ಇವರ ತಪಸ್ಸಿದ್ಧಿಗೆ ಜ್ವಲಂತ ಸಾಕ್ಷಿ. 


ದ್ವಾದಶ ಪುಂಢ್ರಗಳನ್ನು ತಿದ್ದಿಹಚ್ಚಿ, ಶಾಟಿ ಹೊದಿಸಿ ಭಕ್ತರ ದರುಶನಕ್ಕೆ ಇಡಲಾಗಿತ್ತು. ಅಂದಿನ ಶ್ರೀಗಳವರ ನಗುಮುಖದ ತೇಜಸ್ಸು ಭಕ್ತರ ಮನದಲ್ಲಿ ಭಕ್ತಿಪರಾಕಾಷ್ಟೆ ತಲುಪುವುದರೊಂದಿಗೆ ಪುಳಕವುಂಟುಮಾಡಿತ್ತು.


ಇಂದಿಗೂ ಮಾನವಿ ಕ್ಷೇತ್ರದಲ್ಲಿ ಇವರ ವೃಂದಾವನವಿರುವ ಸನ್ನಿಧಿ ಶ್ರೀನಾರಾಯಣತೀರ್ಥರ ಆಶ್ರಮವೆಂದೇ ಜಗತ್ಪಸಿದ್ಧಿಯಾಗಿದೆ.


ಶ್ರೀನಾರಾಯಣತೀರ್ಥರ  ಪೂರ್ವಾಶ್ರಮದ ಪುತ್ರರಾದ ಕೃಷ್ಣಮೂರ್ತಿಯವರೊಂದಿಗೆ  ಕೆಲ ಹೊತ್ತು ಶ್ರೀಗಳವರ ಮಹಿಮೆಯ ಬಗ್ಗೆ ಮಾತಾನಾಡುತ್ತಾ ಅವರೊಂದಿಗೆ ಕಾಲ ಕಳೆದ ಸಂಜೆ ಸಾರ್ಥಕವೆನಿಸಿತು.


- ವಿದ್ಯಾಶ್ರೀ ಕುಲಕರ್ಣಿ, ಮಾನವಿ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top