ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-8

Upayuktha
0


 


ರ್ಜುನನ ಮನಸ್ಸು ತುಂಬಾ ಚಂಚಲವಾದುದು. ಅದನ್ನು ನಿಗ್ರಹಿಸುವುದು ಕಷ್ಟವಾಗುತ್ತದೆ. ಅದನ್ನು ಹೇಗೆ ನಿಗ್ರಹಿಸಬೇಕು ಎಂದು ಕೇಳಿದಾಗ ಕೃಷ್ಣನು ಅಲ್ಲಗಳೆಯಲಿಲ್ಲ. 'ಅಸಂಶಯಂ ಮಹಾಬಾಹೋ!' ಎಂದು ಅರ್ಜುನನ ಹೇಳಿಕೆಯನ್ನು ಪೂರ್ತಿಯಾಗಿ ಒಪ್ಪಿಕೊಂಡು 'ಅಭ್ಯಾಸೇನ ತು ಕೌಂತೇಯ' ಪ್ರಯತ್ನದಿಂದ ಮನಸ್ಸನ್ನು ನಿಗ್ರಹಿಸಬಹುದು ಎಂಬ ಪರಿಹಾರ ಸೂಚಿಸಿದ. ಇದು ಅರ್ಜುನನಿಗೆ ಒಪ್ಪಿಗೆಯಾಯಿತು. ಹೀಗೆ ಗೀತೆಯು ಅತ್ಮೀಯರಲ್ಲಿ ಸಮಸ್ಯೆ ನಿವೇದನೆ ಮಾಡಿಕೊಂಡಾಗ ಪರಿಹಾರ ಒದಗುತ್ತದೆ ಎಂಬುದನ್ನು ಸೂಚಿಸುತ್ತದೆ.


ಗೀತೆಯಲ್ಲಿದೆ ಉತ್ತರ 

ಗೀತೆ ಕೇವಲ ವೇದಾಂತ ತತ್ವಗಳನ್ನು ಮಾತ್ರ ಬೋಧಿಸುತ್ತಾ ಲೋಕ ವ್ಯವಹಾರಗಳನ್ನೆಲ್ಲ ಬಿಡಿಸಿ ಮೂಲೆಯಲ್ಲಿ ಮುದುಡಿ ಕುಳಿತುಕೊಳ್ಳುವಂತೆ ಮಾಡುವುದಿಲ್ಲ. ಬದಲಿಗೆ ವ್ಯವಹಾರವನ್ನೇ ಬಿಡಬೇಕೆಂದಿದ್ದ ಅರ್ಜುನನಿಗೆ ಶ್ರೀಕೃಷ್ಣನು ಪರಮಾರ್ಥ ಬೋಧಿಸಿ ವ್ಯವಹಾರದಲ್ಲಿ ತೊಡಗುವಂತೆ ಮಾಡುತ್ತಾನೆ. ಅಂದರೆ ಗೀತೆಯನ್ನು ವ್ಯಾವಹಾರಿಕ ಪ್ರಪಂಚದ ವ್ಯಾವಹಾರಿಕ ಸಂಘರ್ಷಗಳ ನಡುವೆಯೇ ಹುಟ್ಟಿ ವ್ಯಾವಹಾರಿಕ ಸಮಸ್ಯೆಗಳನ್ನು ದೂರಮಾಡುತ್ತದೆ ಎಂದಾಯಿತು. ನಿಜ ಜೀವನದಿಂದ ತೀರಾ ದೂರವಾದ ವಿಚಾರವನ್ನು ಬೋಧಿಸದೇ ಮನುಷ್ಯರು ಕಾರ್ಯಪ್ರವೃತ್ತರಾದಾಗ ಬರಬಹುದಾದ ಸಮಸ್ಯೆಗಳಿಗೆ ಗೀತೆ ಸೂಕ್ತ ಪರಿಹಾರವನ್ನು ಒದಗಿಸುತ್ತದೆ.


ಹೀಗೆ ಲೋಕ ವ್ಯವಹಾರವನ್ನು ಪೂರ್ತಿಯಗಿ ಬಿಟ್ಟು ಕೊಡದೇ ಪರಮಾರ್ಥವನ್ನು ಬೋಧಿಸುವುದು ಗೀತೆಯ ವೈಶಿಷ್ಟ್ಯವಾಗಿದೆ. ಪರಮಾರ್ಥ ಶಿಕ್ಷಣವೆಂದರೆ ಲೋಕವ್ಯವಹಾರವೆಂಬ ಸಮುದ್ರದಲ್ಲಿ ಸುಖ-ದುಃಖಗಳನ್ನು ಅಂಟಿಸಿಕೊಳ್ಳದೇ ಹಾಯಾಗಿ ಈಸುವುದನ್ನು ಕಲಿಸುತ್ತದೆ. ಲೋಕವ್ಯವಹಾರದಲ್ಲಿ ಬರುವ ಸುಖ-ದುಃಖಗಳಿಗೆಲ್ಲ ತಲೆಕೊಟ್ಟು ಎದೆಗುಂದದೇ ಮುನ್ನಡೆಯುವಂತೆ ಮಾಡುವುದೇ ಗೀತೆಯ ಪರಮೋದ್ದೇಶವಾಗಿದೆ. 


ಮಾರ್ಗಶಿರ ಶುದ್ಧ ಏಕಾದಶಿಯ ದಿನದಂದು ಕುರುಕ್ಷೇತ್ರದ ಯುದ್ಧಾರಂಭಕ್ಕೆ ಮೊದಲು ಅರ್ಜುನನಿಗೆ ಭಗವದ್ಗೀತೆಯ ಬೋಧನೆಯಾಯಿತು. ರಣಾರಂಗದಲ್ಲಿ ಎರಡೂ ಬದಿಗಳಲ್ಲಿ ಯುದ್ಧದ ಉತ್ಸಾಹದಿಂದ ನಿಂತಿರುವ ವೀರರೂ ವೀರಯೋಧರೂ ಈ ಗೀತಾ ಬೋಧನೆ ನಡೆಯುತ್ತಿದ್ದಾಗ ಏನು ಮಾಡುತ್ತಿದ್ದರು? ಯುದ್ಧ ಘೋಷಣೆಯನ್ನು ಶಂಖಗಳ ಮೂಲಕ ಆಗಲೇ ಮಾಡಿದ್ದರೂ ಎಲ್ಲ ಸೈನಿಕರೂ ಯುದ್ಧ ಮಾಡದೆ ಗೀತೆಯನ್ನು ಕೇಳುತ್ತಾ ನಿಂತಿದ್ದರೆ? ಹಾಗೆ ನಿಂತಿದ್ದರೆ ಗೀತಾ ಬೋಧನೆಗೆ ಎಷ್ಟು ಸಮಯ ಬೇಕಾಯಿತು? ಅಲ್ಲಿಯವರೆಗೆ ಯೋಧರು ಸುಮ್ಮನೆ ನಿಂತಿದ್ದರೆ? ಇತ್ಯಾದಿ ಪ್ರಶ್ನೆಗಳು ಮೂಡುವುದು ಸಹಜವೇ. ಇದನ್ನು ಕುತರ್ಕ ಎನ್ನುವುದಕ್ಕಿಂತ ಕೂತೂಹಲ ಎನ್ನಬಹುದು. ಮತ್ತೆ ಕೆಲವರು 'ಭಗವಂತನು ಸಂಕ್ಷಿಪ್ತವಾಗಿ ಹೇಳಿದ್ದನ್ನು ವ್ಯಾಸ ಮಹರ್ಷಿಗಳು ಏಳುನೂರ ಒಂದು ಶ್ಲೋಕಗಳ ಮೂಲಕ ವಿಸ್ತರಿಸಿ ಬರೆಸಿದ್ದಾರೆ' ಎಂದು ಸಮಾಧಾನ ಪಡಿಸಿದ್ದಾರೆ. ಇದು ಇಷ್ಟಕ್ಕೆ ನಿಲ್ಲದೆ 'ಆಗಿನ ಕಾಲದಲ್ಲಿ ಧರ್ಮವು ಕಲಿಯುಗದಷ್ಟು ಹದಗೆಟ್ಟಿರಲಿಲ್ಲ ಆದ್ದರಿಂದ ಗೀತಾ ಬೋಧನೆಗೆ ಸುಮಾರು ಒಂದು ಗಂಟೆ ಇಪ್ಪತ್ತು ನಿಮಿಷಗಳು ಹಿಡಿಯಿತು. ಅಲ್ಲಿಯವರೆಗೆ ಯುದ್ಧ ಆರಂಭವಾಗಲಿಲ್ಲ' ಎಂದು ಬರೆದ ವಿದ್ವಾಂಸರಿದ್ದಾರೆ. ಮೇಲಿನ ಪ್ರಶ್ನೆಗಳನ್ನು ಕುತೂಹಲ-ಜಿಜ್ಞಾಸೆ ಎಂದು ಭಾವಿಸಬಹುದಾಗಲಿ ವಿದ್ವಾಂಸರ ವ್ಯಾಖ್ಯಾನಗಳು ಅವರವರ ಅನಿಸಿಕೆಗಳಾಗಿವೆ. ಮತ್ತೆ ಕೆಲವರು ಗೀತಾ ಬೋಧನೆ ಆಗಲೇ ಇಲ್ಲ; ಇದು ವ್ಯಾಸ ಮಹರ್ಷಿಗಳು ಸೇರಿಸಿರುವ ಪ್ರಕ್ಷಿಪ್ತ ಭಾಗ ಎನ್ನುವ ಅನೇಕ ವಿದ್ವನ್ಮಣಿಗಳೂ ಇದ್ದಾರೆ. ಹಾಗಾದರೆ ಸತ್ಯವೇನಿರಬಹುದು? ಎಂದು ಸ್ವಲ್ಪ ನಮ್ಮ ಅಂತರಾಳದ ಆಳಕ್ಕಿಳಿದು ನೋಡಬಹುದಲ್ಲವೆ?


ಸೂಕ್ಷ್ಮತೆಯ ಅರಿವು 


ಸೀರೆಯ ತುತ್ತ ತುದಿಯ ಭಾಗವನ್ನು ಹಿಡಿದುಕೊಳ್ಳಲಾಗದೆ 'ಕೃಷ್ಣಾ' ಎಂದು ಆರ್ತತೆಯಿಂದ ಕೂಗಿಕೊಂಡ ಕೂಡಲೇ ಸೀರೆ ಬಂದೋಗಲಿಲ್ಲವೇನು? ಸ್ಥೂಲ ವ್ಯವಹಾರದಿಂದಲೇ ಆಲೋಚಿಸುವವರಿಗೆ 'ಹಸ್ತಿನಾವತಿಗೂ ದ್ವಾರಕೆಗೂ ಕೂಗಳತೆಯೇನು?' ಎಂದು ದಾಸರು ಪ್ರಶ್ನಿಸುತ್ತಾರೆ. ಇಲ್ಲಿ ಆರ್ತ ಭಕ್ತಿ ಮತ್ತು ದೈವ ಪ್ರಸಾದ ಸಂಬಂಧದ ಗಾಢತೆಯ ಫಲಿತಾಂಶವನ್ನು ಕಾಣಬಹುದಾಗಲಿ ಕೇವಲ ವ್ಯಾವಹಾರಿಕ ಸ್ಥೂಲವನ್ನಲ್ಲ, ಸಾಧನೆ, ಧ್ಯಾನ, ತಪಸ್ಸಿನ ಮೂಲಕ ತಮ್ಮೊಳಗೆ ತಾಳಿದವರಿಗೆ ಮಾತ್ರ ಇದರ ಸೂಕ್ಷ್ಮತೆಯ ಅರಿವಾಗುತ್ತದೆ. ಆರ್ತ ಭಕ್ತಿ ಮತ್ತು ದೈವ ಕೃಪೆಯ ಗಾಢತೆಯ ಆಧಾರದ ಮೇಲೆ ಹೇಳುವುದಾದರೆ ಅರ್ಜುನನಿಗೆ ಗೀತೆಯ ಬೋಧನೆ ಕೇವಲ ಕಣ್ಣಿನ ರೆಪ್ಪೆ ಬಡಿಯುವಷ್ಟು ಚಿಕ್ಕ ಕ್ಷಣದಲ್ಲಿ ಆಯಿತೆನ್ನುವುದನ್ನು ಸುಲಭವಾಗಿ ಅರಿಯಬಹುದು. ಭಕ್ತ-ಭಗವಂತನ ಸಂಬಂಧದ ಗಾಢತೆಗೆ ಮನಸ್ಸು ಬಹಳ ಪ್ರಧಾನವಾದುದು. ಆದ್ದರಿಂದ ಇದೊಂದು ಮನೋವೈಜ್ಞಾನಿಕ ವಿಶ್ಲೇಷಣೆಯೂ ಹೌದು.

 

ಸಂಪೂರ್ಣ ಶರಣಾಗತಿ:

ನಿಜ ಭಕ್ತನಾದವನಿಗೆ ಸಂಕಟ ಹೆಚ್ಚಾದಂತೆ ಆರ್ತತೆಯೂ ಅತಿ ಗಾಢವಾಗುತ್ತದೆ. ಈಗ ಅರ್ಜುನನಿಗೆ ದಿಢೀರನೆ ಒದಗಿ ಬಂದ ಧರ್ಮಸಂಕಟವೊಂದು ಅವನನ್ನು ವರ್ಣಿಸಲಾಗದಷ್ಟು ವಿಷಾದಕ್ಕೆ ತಳ್ಳಿದೆ. ಅದೂ ಎರಡು ವಿರುದ್ಧ ಮನಸ್ಥಿತಿಗಳ ಸಂಘರ್ಷದಿಂದ. ಮೊದಲನೆಯದಾಗಿ ತಾನು ಕ್ಷತ್ರಿಯ ಹಾಗೂ ಕೃಷ್ಣನ ಸಹಾಯವಿದೆ ಎಂಬ ಯುದ್ಧೋತ್ಸಾಹದ ಮನಸ್ಥಿತಿ. 'ಸೇನೆಯೋರುಭಯೋರ್ಮಧ್ಯೆ ರಥಸ್ಥಾಪಯಮೇ ಅಚ್ಯುತ' ಎಂದು ಉತ್ಸಾಹದಿಂದ ಹಾಗೂ ತನ್ನ ಕ್ಷತ್ರಿಯ ಸಾಮರ್ಥ್ಯ ಮೇಲಿನ ಆತ್ಮ ವಿಶ್ವಾಸದಿಂದ ಶ್ರೀಕೃಷ್ಣನಿಗೆ ಆದೇಶವಿತ್ತಂತೆ ವರ್ತಿಸುತ್ತಾನೆ. ಇದೊಂದು ಮನಸ್ಥಿತಿಯಾದರೆ, ಯುದ್ಧರಂಗದ ಮಧ್ಯೆ ಬಂದು ನಿಂತಾಗ ತನ್ನ ಬಂಧು ಬಾಂಧವರು ಮತ್ತು ನಿರಪರಾಧಿಗಳಾದ ವೀರಯೋಧರ ಸಾವಿನಿಂದ ದೊರೆಯಬಹುದಾದ ಧರ್ಮರಹಿತ ಸಾಮ್ರಾಜ್ಯವು ತನಗೆ ಬೇಡವೆನ್ನುವ ವೈರಾಗ್ಯ ಭಾವ ಬೆಳೆಯುತ್ತದೆ. ಉತ್ಸಾಹ ಮತ್ತು ವೈರಾಗ್ಯದಂತಹ ಎರಡು ಭಿನ್ನ ಮನಸ್ಥಿತಿಯಲ್ಲಿ ತೊಳಲಾಡುತ್ತಿರುವ ಅರ್ಜುನನಲ್ಲಿ ಆರ್ತತೆ ಅತಿ ಹೆಚ್ಚಾಗಿ ಮುಂದಿನ ದಾರಿ ಕಾಣದಂತಾಗಿ 'ಶಿಷ್ಯಸ್ತೇ$ಹಂ ಯಛ್ರೇಯಃ ಸಾನ್ನಿಶ್ಚಿತ್ಯಂ ಬ್ರೂ'- ನಾನು ನಿನ್ನ ಶಿಷ್ಯನಾಗಿದ್ದೇನೆ ನನಗೆ ಯಾವುದು ಶ್ರೇಯಸ್ಕರವೋ ಅದನ್ನು ನಿಶ್ಚಯವಾಗಿ ಹೇಳು' ಎನ್ನುವಲ್ಲಿ ಅವನ ಸಂಪೂರ್ಣ ಶರಣಾಗತಿ ಕಂಡುಬರುತ್ತದೆ. ಹಾಗೆ ಶರಣಾದವನಿಗೆ ದೈವ ತನ್ನ ಕೃಪೆಯನ್ನು ತೋರುವುದಕ್ಕೆ ದೇಶ-ಕಾಲ-ನಿಯಮಗಳ ಬಂದವಿರುವುದಿಲ್ಲ, ಅರ್ಜುನನಿಗೆ ಜ್ಞಾನ ಬೋಧನೆಯ ಅವಶ್ಯಕತೆಯಿತ್ತು; ಏಳುನೂರ ಒಂದು ಶ್ಲೋಕಗಳು ಒಂದೇ ಕ್ಷಣದಲ್ಲಿ ಬೋಧಿತವಾಯ್ತು. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎಲ್ಲರಿಗೂ ಸಹಜವೇ.


Post a Comment

0 Comments
Post a Comment (0)
Advt Slider:
To Top