ವಿಶೇಷ ಚೇತನರ ರಾಜ್ಯಮಟ್ಟದ ಪ್ರತಿಭೆ-ಸಾಧನೆ-ಸಂಗೀತ ಕಲಾ-ನೃತ್ಯ ಉತ್ಸವ

Upayuktha
0


ಮೈಸೂರು: ರಾಜ್ಯದ ಮೂಲೆ ಮೂಲೆಗಳಿಂದ ಬಂದ, ಕಿವಿ ಕೇಳದ-ಮಾತು ಬಾರದ-ಊರುಗೋಲು ಹಿಡಿದು ಒಂದೇ ಕಾಲಿನಿಂದ  ನಡೆಯುವ-2 ಅಡಿಯ ಕುಬ್ಜ ದೇಹದ-ಶೇ.75-80ರಷ್ಟು ದೈಹಿಕ ವಿಕಲಾಂಗತೆ ಇದ್ದವರು, ಹಾಡಿ-ಕುಣಿದು-ಕುಪ್ಪಳಿಸಿ ತಾವೂ ಅತ್ಯಂತ ಸಂತೋಷ ತೃಪ್ತಿಗಳಿಂದ ಭಾಗವಹಿಸಿದಾಗ ಅಲ್ಲಿದ್ದ ಎಲ್ಲ ಪ್ರೇಕ್ಷಕರ ಕರತಾಡನ. ಅನೇಕರ ಕಣ್ಣುಗಳಲ್ಲಿ ಇಳಿದ ಆಶ್ರುಧಾರೆ, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಒಂದು ವಿಶೇಷ ಚೇತನರ ರಾಜ್ಯಮಟ್ಟದ ಪ್ರತಿಭೆ-ಸಾಧನೆ-ಸಂಗೀತ ಕಲಾ-ನೃತ್ಯ ಉತ್ಸವದಲ್ಲಿ ಸಾಕ್ಷೀಭೂತವಾಯಿತು.


ಮೈಸೂರಿನ ಕೂಗು ಚಾರಿಟೆಬಲ್ ಟ್ರಸ್ಟ್‍ನ ಡೋರಾ ವಿಶೇಷ ಶಾಲೆ ಹಾಗೂ ಅರುಣೋದಯ ವಿಶೇಷ ಮಕ್ಕಳ ಶಾಲೆಯ ಬುದ್ಧಿಮಾಂದ್ಯ ಹಾಗೂ ಶ್ರವಣ ದೋಷದ ಮಕ್ಕಳ ತಂಡಗಳು ಕನ್ನಡ ಗೀತೆಗೆ ಹೆಜ್ಜೆ ಹಾಕಿದ್ದು, ವಿಶೇಷ ಚೇತನರು ಹಾಗೂ ಈ ಮಕ್ಕಳು ಫ್ಯಾಷನ್ ಶೋ ನಡೆಸಿದ್ದು ಅಪೂರ್ವ ಕ್ಷಣಗಳು.


ಇತ್ತೀಚೆಗೆ ಮೈಸೂರಿನ ಅಭಿರುಚಿ ಬಳಗ (ರಿ.) ತನ್ನ 150ನೇ ಕಾರ್ಯಕ್ರಮ ಹೀಗೆ ಒಂದು ದಾಖಲೆ ಸೃಷ್ಟಿಸಿತು. ಜಿಲ್ಲೆ-ರಾಜ್ಯ-ರಾಷ್ಟ್ರ-ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸ್ಥಾನ-ಪದಕಗಳನ್ನು ಪಡೆದ ಕ್ರೀಡಾ ಸಾಧಕರು, ಸ್ವರಚಿತ ಕವನ ಓದಿದರು-ನೃತ್ಯ ಮಾಡಿದರು-ಹಾಡು ಹಾಡಿದರು. ಈ ವಿಶೇಷ ಚೇತನರು ಊರುಗೋಲು ಹಿಡಿದು, ಒಂದೇ ಕಾಲಿನಿಂದ, ತಮ್ಮ ಸೊಟ್ಟ ದೇಹದಿಂದ ಬ್ಯಾಲೆನ್ಸ್ ಮಾಡಿ ಕುಣಿದಾಗ, ಅವರೊಂದಿಗೆ ಅಭಿರುಚಿ ಬಳಗದ ಅಧ್ಯಕ್ಷರಾದ 75 ವರ್ಷದ ಎನ್.ವ್ಹಿ. ರಮೇಶ್ ಸಹ ಹೆಜ್ಜೆ ಹಾಕಿ ಕುಣಿದರು.


ಈ ಸಂದರ್ಭದಲ್ಲಿ ನಿವೃತ್ತ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಹೆಚ್.ಎಸ್. ರುದ್ರೇಶ್, ಮಂಡ್ಯದ ಜೈ ಕರ್ನಾಟಕ ಪರಿಷತ್ ಅಧ್ಯಕ್ಷರಾದ ಡಾ. ನಾರಾಯಣ ಮನೋವೈದ್ಯರಾದ ಡಾ. ವಸುಧಾ ರಾವ್, ಆಪ್ತ ಸಮಾಲೋಚಕಿ ಎಸ್.ಜೆ. ರತ್ನಪ್ರಭಾ, ಅಭಿರುಚಿ ಬಳಗದ  ಅಧ್ಯಕ್ಷರಾದ ಎನ್.ವ್ಹಿ. ರಮೇಶ್ 31 ವಿಶೇಷ ಚೇತನರೊಂದಿಗೆ ಅಪ್ತ-ಉತ್ತೇಜಕ ಮಾತುಗಳನ್ನಾಡಿ, ವಿಶೇಷ ಚೇತನರನ್ನು ಅಭಿನಂದಿಸಿ, ಅಭಿರುಚಿ ಅಶ್ವಿನ್ ಚೈತನ್ಯ ಚಿಲುಮೆ ಪ್ರಶಸ್ತಿ ಸ್ಮರಣಿಕೆ, ಸನ್ಮಾನ ಪತ್ರ, ಪ್ರಮಾಣ ಪತ್ರ, ಅಶ್ವಿನ್ ಛಾಯಾ ಚಿತ್ರಗಳಿದ್ದ ಕ್ಯಾಲೆಂಡರ್ ಹಾಗೂ ಮಿನುಮಿನುಗುವ ನಕ್ಷತ್ರ ಪುಸ್ತಕ ಕೊಟ್ಟು ಅವರನ್ನು ಸನ್ಮಾನಿಸಿ ಅಭಿನಂದಿಸಿದರು. 8 ವರ್ಷಗಳ ಕೆಳಗೆ ನಮ್ಮನ್ನಗಲಿರುವ ರಾಷ್ಟ್ರಮಟ್ಟದ ವಾಲೀಬಾಲ್ ಹಾಗೂ ಕ್ರಿಕೆಟ್ ಕ್ರೀಡಾಪಟುವಾಗಿದ್ದ ವಿಶೇಷ ಚೇತನ ದಿ. ಎನ್.ಆರ್. ಅಶ್ವಿನ್‍ನ 44ನೇ ಜನ್ಮದಿನದಂದು ಅಭಿರುಚಿ ಬಳಗ(ರಿ) ಈ ರಾಜ್ಯಮಟ್ಟದ ಈ ಮಹಾ ವಿಶೇಷ ಕಾರ್ಯಕ್ರಮವನ್ನು ಎನ್.ವ್ಹಿ. ರಮೇಶ್ ಏಕಾಂಗಿಯಾಗಿ ತಮ್ಮ ಪಿಂಚಣಿ ಹಣದಲ್ಲಿ  ಆಯೋಜಿಸಿದ್ದು ವಿಶೇಷ.


ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈ ಉತ್ಸವ ಉದ್ಘಾಟಿಸಿ ಮಾತನಾಡುತ್ತಾ, ಸರಕಾರ -ಸಮಾಜ ಏನೇ ಬೆಂಬಲ ಕೊಟ್ಟರೂ, ಪ್ರತೀ ಕುಟುಂಬ ಹಾಗೂ ಪ್ರತೀ ವ್ಯಕ್ತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸದಾ ಪ್ರಯತ್ನಿಸಬೇಕು ಎಂದು ಕರೆಯಿತ್ತರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಡ್ಯದ ಜೈಕರ್ನಾಟಕ ರಾಜ್ಯ ಪರಿಷತ್ತಿನ ಡಾ.ನಾರಾಯಣ ತಮ್ಮ ಮಾತುಗಳಲ್ಲಿ ಇಂಥ ಮನ ಮಿಡಿಯುವ ವಿಶೇಷ ಚೇತನರ ರಾಜ್ಯ ಮಟ್ಟದ ಉತ್ಸವವನ್ನು ತಮ್ಮ ಅಭಿರುಚಿ ಬಳಗದ ಮೂಲಕ ತಮ್ಮ ಪಿಂಚಣಿ ಹಣದಿಂದ ಏರ್ಪಡಿಸಿರುವ ಎನ್.ವ್ಹಿ ರಮೇಶ್ ಅವರಿಗೆ ಕನ್ನಡಾಭೀಮಾನ, ಸಾಹಿತ್ಯ ಹಾಗೂ ಸಮಾಜ ಸೇವಾ ಆಸಕ್ತಿಯಿರುವ ಸಂಘ ಸಂಸ್ಥೆಗಳು, ಗಣ್ಯ ವ್ಯಕ್ತಿಗಳು ಸಂಪೂರ್ಣ ಬೆಂಬಲ ಕೊಡಬೇಕು. ತಾವೂ ಈ ರೀತಿಯ ವಿಶೇಷ ಚೇತನರ ಕಲಾ-ಕ್ರಿಡಾ ಉತ್ಸವವನ್ನು ಮಂಡ್ಯದಲ್ಲಿ ಸಂಘಟಿಸುವುದಾಗಿ ಆಶ್ವಾಸನೆಯಿತ್ತರು. 


ಎನ್.ವ್ಹಿ ರಮೇಶ್ ತಮ್ಮ ಅಗಲಿದ ರಾಷ್ಟ್ರಮಟ್ಟದ ವಾಲೀಬಾಲ್ ಹಾಗೂ ಕ್ರಿಕೆಟ್ ಆಟಗಾರ ಸಾಧಕ ಎನ್.ಆರ್ ಅಶ್ವಿನ್‍ನ 44ನೇ ಜನ್ಮದಿನದಂದು ಆತನ ಸ್ಮರಣೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಿರುವ ಬಗ್ಗೆ ಹೇಳುತ್ತಾ, ಪ್ರತೀ ಕುಟುಂಬ-ವ್ಯಕಿ ತಮ್ಮ ಜೀವನದ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಹಿರಿಯರ ಮರಣ ದಿನದಂದು ಧಾರ್ಮಿಕವಾಗಿ –ಕೌಟುಂಬಿಕವಾಗಿ ಆಚರಿಸಿಕೊಳ್ಳದೇ, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ಆಚರಿಸಿಕೊಳ್ಳಬೇಕು ಎಂದು ಕರೆಯಿತ್ತರು. ನಿವೃತ್ತ ತಹಶೀಲ್ದಾರ್ ಡಾ. ವಿ ರಂಗನಾಥ್ ರಮೇಶ್ ಅವರ ‘ಟ್ವಿಂಕಲ್ ಟ್ವಿಂಕಲ್ ಅಶ್ವಿನ್ ಸ್ಟಾರ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ತಮ್ಮ ಮಗ ಹುಟ್ಟುವಾಗ ಶ್ರವಣಶಕ್ತಿ, ವಾಕ್‍ಶಕ್ತಿ ಇಲ್ಲದ ವಿಶೇಷ ಚೇತನನಾಗಿ ಹುಟ್ಟಿದಾಗ ಅವನ 9 ತಿಂಗಳಿಗೆ ಈ ಮಗುವಿನಲ್ಲಿದ್ದ ಆರೋಗ್ಯ ಸಮಸ್ಯೆ ಗಮನಿಸಿ, ಅಂದಿನಿಂದಲೇ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಮಗು – ಯುವಕನಾಗುವವರೆಗೆ ಕಲಬುರ್ಗಿಯಿಂದ ಬಂದು ಕಲಿಕೆ ತರಬೇತಿ ಕೊಡಿಸಿ ಆತ ರಾಷ್ಡ್ರಮಟ್ಟದ ಕ್ರೀಡಾಪಟುವಾಗುವಂತೆ ಹಗಲು-ರಾತ್ರಿ ಶ್ರಮಿಸಿದ ಪಾಲಕರಾದ ರಮೇಶ್ –ಉಮಾ ದಂಪತಿಗಳ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.


ಮಗನ ಕಾಮಾಲೆ ರೋಗ-ಲಿವರ್ ಸಮಸ್ಯೆ ಬಗ್ಗೆ ತಿಳಿಸುತ್ತಾ ಸಾರ್ವಜನಿಕರಿಗೆ ತಮ್ಮ ಪುಸ್ತಕದ ಮೂಲಕ ಲಿವರ್ ರಕ್ಷಣೆ ಹಾಗೂ ಕಸಿ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದ್ದಾರೆ ಎಂದು ಪ್ರಶಂಸಿದರು. ತುಮಕೂರಿನ ಮಳೆಬಿಲ್ಲು ಜಿ.ಲೀಲಾ ಅವರು ಇನ್ನೊಂದು ಪುಸ್ತಕ ಚೈತನ್ಯದ ಚಿಲುಮೆ ಲೋಕಾರ್ಪಣೆ ಮಾಡಿ ಮಾತನಾಡುತ್ತಾ ಮಗ -ಪತ್ನಿ ಕಳೆದುಕೊಂಡಿದ್ದರೂ ಸಾಮಾಜಿಕ ತುಡಿತದಿಂದ ತಮ್ಮ ದುಃಖ ಶಮನ ಮಾಡಿಕೊಂಡು ರಾಜ್ಯದ 31 ವಿಶೇಷ ಚೇತನರಿಗೆ ಸನ್ಮಾನ ಮಾಡಿ ಅವರ ಜೀವನ - ಪ್ರಯತ್ನ,- ಸಾಧನೆ ಬಗ್ಗೆ ಜನರಿಗೆ ಮಾಧ್ಯಮಕ್ಕೆ ತನ್ಮೂಲಕ ಸಮಾಜ -ಸರಕಾರಕ್ಕೆ  ಒಂದು ಮಾದರಿ ಕೊಟ್ಟಿರುವ ರಮೇಶ್ ಅವರು ಇಂಥ ಕಾರ್ಯಕ್ರಮ ಮಾಡಲು ನಾವೆಲ್ಲ ಸ್ಪಂದಿಸೋಣ ಎಂದರು.


ಸುಮಾ ಪಂಚವಳ್ಳಿ ಅಧ್ಯಕ್ಷ ಸ್ಥಾನದಿಂದ ವಿಶೇಷ ಚೇತನರ ಜೀವನ ಹೋರಾಟ, ಮುಂದೆ ಬರಲು ಅವರು ಮಾಡುವ ಪ್ರಯತ್ನ ಹಗೂ ಸಾಧನೆಗಳನ್ನು ಸಮಾಜ-ಸರಕಾತರ-ಜನ ಎಲ್ಲ ಗುರುತಿಸಿ ಬೆಂಬಲಿಸಬೇಕು ಎಂದು ಕರೆಯಿತ್ತರು.   


ಮುಖ್ಯ ಅತಿಥಿಗಳಾಗಿ ಬಂದಿದ್ದ ಮನೋವೈದ್ಯರಾದ ಡಾ. ವಸುಧಾ ರಾವ್ ಅವರು ಬಸುರಿಯಾಗಿದ್ದಾಗಿನಿಂದ ಹೆರಿಗೆಯಾಗುವವರೆಗೆ, ನಂತರ ಹುಟ್ಟಿದ ಮಗುವಿನ ಉತ್ತಮ ಪೋಷಣೆಗಾಗಿ ತಾಯಿ-ತಂದೆ-ಕುಟುಂಬ ಸದಾ ಜಾಗೃತರಾಗಿರಬೇಕು. ಪ್ರತಿ ತಾಯಿ ಮಗು, ಅವರ ಕುಟುಂಬದವರು ಶಾರೀರಿಕ ಆರೋಗ್ಯದೊಂದಿಗೆ ತಮ್ಮ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. 


ನಿಮ್ಹಾನ್ಸ್‌ನ ಆಪ್ತ ಸಮಾಲೋಚಕಿ ಎಸ್. ಜೆ.ರತ್ನಪ್ರಭಾ, ಒತ್ತಡದ ಜೀವನದಲ್ಲಿ, ಮಾನಸಿಕ ಹಾಗೂ ಶಾರೀರಿಕ ದೌರ್ಬಲ್ಯ ಇರುವವರಿಗೆ ವೈದ್ಯರು, ಆಪ್ತಸಮಾಲೋಚಕರು ಯೋಗ್ಯ ಮಾರ್ಗದರ್ಶನ ನೀಡಬೇಕು ಎಂದರು.  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top