ಯಶೋದೀಪ – 2025 ಪೋಷಕ ಶಿಕ್ಷಕರ ಸಭೆ

Upayuktha
0

ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮತ್ತುI.Q.A.C ಸಹಯೋಗದಲ್ಲಿ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ “ಯಶೋದೀಪ – 2025 - ಪೋಷಕ ಶಿಕ್ಷಕರ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ ಹಾಗೂ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೋ. ರಾಮಚಂದ್ರ ಬಾಳಿಗ ಅವರು ಉದ್ಘಾಟಿಸಿದರು. ಈ ಸಭೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಾಗೂ ಸರ್ವತೋಮುಖ ಅಭಿವೃದ್ಧಿಯ ಪರಾಮರ್ಶೆ ಮತ್ತು ಕಾಲೇಜು-ಪೋಷಕರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿತ್ತು. 


ಇದೇ ಸಂದರ್ಭದಲ್ಲಿ ಕಾಲೇಜಿನ ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳ ಯಶಸ್ಸನ್ನು ಪ್ರತಿಬಿಂಬಿಸುವ, ವಿದ್ಯಾರ್ಥಿಗಳೇ ಸಂಪಾದಿಸುವ, “ಇ-ಚಿತ್ತಾರ” ಮ್ಯಾಗಜಿನ್ ಅನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳ ಪ್ರಗತಿಯಲ್ಲಿ ಕಾಲೇಜಿನಷ್ಟೇ ಪೋಷಕರ ಪಾತ್ರ ಅತಿ ಮುಖ್ಯವಾದುದು:…

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿಯವರು, ವಿದ್ಯಾರ್ಥಿಗಳ ಕಲಿಕೆ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಅದು ಹೆಚ್ಚು ವಿಶಾಲವಾದದ್ದು ಆಗಿರುತ್ತದೆ ಎಂದು ಹೇಳಿದರು. ಪಾಠ ಮಾಡುವ ಶಿಕ್ಷಕರ ಜವಾಬ್ದಾರಿ ಎಷ್ಟಿರುತ್ತದೆಯೋ ಅಷ್ಟೇ ಪೋಷಕರದ್ದು ಆಗಿರುತ್ತದೆ. 


ವಿದ್ಯಾರ್ಥಿಗಳನ್ನು ಒಂದು ಶಿಕ್ಷಣ ಸಂಸ್ಥೆಗೆ ಸೇರಿಸುವ ಜವಾಬ್ದಾರಿ ಮಾತ್ರವಲ್ಲ, ಪೋಷಕರು ಶಿಕ್ಷಕರು ಜೊತೆಗೂಡಿ ಅವರ ಸರ್ವತೋಮುಖವಾದ ಅಭಿವೃದ್ಧಿಗೆ ವಿದ್ಯಾಭ್ಯಾಸ ಮುಗಿಯುವವರೆಗೆ ಶ್ರಮಿಸಬೇಕಾಗುತ್ತದೆ. ನಮ್ಮ ಕಾಲೇಜಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕವಾದ ಗಮನವನ್ನು ಕೊಡುವ ಸಲುವಾಗಿ ಪ್ರತ್ಯೇಕ ಮಾರ್ಗದರ್ಶಕರು ಇರುತ್ತಾರೆ. ಈ ಮಾರ್ಗದರ್ಶಕರು ವಿದ್ಯಾರ್ಥಿಗಳು ಮುಕ್ತವಾಗಿ ಮಾತನಾಡಲು ಆಪ್ತ ಸಮಾಲೋಚನೆಯನ್ನು ಮಾಡುತ್ತಾರೆ. ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಇದು ಅತ್ಯುತ್ತಮ ಕಾಲೇಜುಗಳ ಒಂದು ಭಾಗವಾಗಿದೆ ಎಂದು ಅಭಿಪ್ರಾಯ ಪಟ್ಟರು.


ಕಾಲೇಜಿನಲ್ಲಿ ನಡೆಯುವ ಪಾಠಪ್ರವಚನಗಳ ಜೊತೆಗೆ ಅವರು ಮನೆಯಲ್ಲೂ ಅಭ್ಯಾಸ ಮಾಡಬೇಕು. ಈಗಿನ ವಿದ್ಯಾರ್ಥಿಗಳಲ್ಲಿ ಗಮನವನ್ನು ಕೇಂದ್ರಿಕರಿಸುವ ತಾಳ್ಮೆ, ಸಂಯಮ ಕಡಿಮೆಯಾಗುತ್ತಿದೆ. ಆಮೇರಿಕ ಅಂತಹ ದೇಶಗಳಲ್ಲೂ ಇದನ್ನು ನಾವು ಕಾಣುತ್ತೇವೆ. ಹಾಗಾಗಿ ಮನೆಯಲ್ಲಿ ಓದುವ ಅಭ್ಯಾಸ ಮಾಡಿಸಬೇಕು. ಕಾಲೇಜಿನ ವಿವಿಧ ವೇದಿಕೆಗಳಲ್ಲಿ ನಿರಂತರ ಭಾಗವಹಿಸುವಿಕೆ ಅವರನ್ನು ಹಲವಾರು ರೀತಿಯಲ್ಲಿ ಬೆಳೆಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಕಾಲೇಜು ಹಲವಾರು ತರಬೇತಿಯನ್ನು ನೀಡುತ್ತದೆ, ಕೌಶಲ್ಯಗಳನ್ನು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಪೋಷಕರು ಈ ಎಲ್ಲಾ ವಿಚಾರಗಳಲ್ಲಿ ತಮ್ಮ ಮಕ್ಕಳ ಅಭಿವೃದ್ಧಿಯಲ್ಲಿ ನಿರಂತರ ಸಕ್ರಿಯವಾಗಿ ಪಾಲುಗೊಳ್ಳಬೇಕು ಎಂದು ತಿಳಿಸಿದರು.


ಕಾಲೇಜಿನ ಶಿಕ್ಷಕ-ಪೋಷಕ ಸಮಿತಿಯ ಸದಸ್ಯರಾದ ಪತ್ರಕರ್ತರಾದ ನಾಗರಾಜ್ ನೇರಿಗೆಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರು ಹಲವಾರು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. “ಮೊಬೈಲ್” ಎಂಬ ಭೂತ ಪೋಷಕರು ಮತ್ತು ಮಕ್ಕಳ ಮಧ್ಯ ದೊಡ್ಡದೊಂದು ತಡೆಯನ್ನು ಒಡ್ಡಿ ಕಂದಕವನ್ನು ಸೃಷ್ಟಿಸಿದೆ. ಈ ಅಡ್ಡಿ-ಆತಂಕಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬ ದೊಡ್ಡ ಪ್ರಶ್ನೆ ಪೋಷಕರನ್ನು ಕಾಡುತ್ತಿದೆ. 


ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಹಲವಾರು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಹೇಗೆ ಮನುಷ್ಯರಾಗಬೇಕು, ಹೇಗೆ ಅವರು ಸಮಾಜಮುಖಿಯಾಗಬೇಕು ಎಂಬುದನ್ನು ಕಲಿಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳ ಕಲಿಕೆ ಪರೀಕ್ಷೆಯ ಹಿಂದಿನ ದಿನದ ತಯಾರಿಗೆ ಸೀಮಿತವಾಗದೆ. ಸರ್ವಕಾಲದಲ್ಲಿ ಅವರು ಅಧ್ಯಯನದಲ್ಲಿ ತೊಡಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಬ್ಬ ವಿದ್ಯಾರ್ಥಿಗೂ ಮತ್ತೊಬ್ಬ ವಿದ್ಯಾರ್ಥಿಗೂ ಕಲಿಕೆಯ ಮಟ್ಟ ಬೇರೆಯದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕಾಲೇಜು ಪ್ರತಿಯೊಬ್ಬ ವಿದ್ಯಾರ್ಥಿಗೂ ಒತ್ತುಕೊಟ್ಟು ಅದರಲ್ಲೂ ಮನಃಶಾಸ್ತ್ರಿಯ ವಾತಾವರಣ, ಶೈಕ್ಷಣಿಕ ವಾತಾವರಣ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.


ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ಸಭೆಯ ಮೂಲ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪ್ರಗತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ಒದಗಿಸಿದರು.


ಪೋಷಕ ಶಿಕ್ಷಕರ ಸಭೆ ಕೇವಲ ಹೈಸ್ಕೂಲ್ ಮತ್ತು ಪಿಯುಸಿ ಕಾಲೇಜುಗಳಿಗೆ ಸೀಮಿತವಾಗದೆ, ಪದವಿ ಕಾಲೇಜಿನಲ್ಲಿ ಹೆಚ್ಚಿನ ಪೋಷಕರು ಆಸಕ್ತಿವಹಿಸಿ ಸಭೆಗೆ ಹಾಜರಿರುವುದು ಸಂತೋಷದಯಕವಾಗಿದೆ ಎಂದು ಹೇಳಿದರು. 2017ರಲ್ಲಿ ಕಾಲೇಜು ಪ್ರಾರಂಭವಾದಗಿನಿಂದ “ಯಶೋದೀಪ” ಎಂಬ ಶೀರ್ಷಿತೆಯಡಿಯಲ್ಲಿ ವರ್ಷಕ್ಕೆ ಎರಡು ಬಾರಿ ಪೋಷಕ-ಶಿಕ್ಷಕ ಸಭೆ ನಡೆಯುತ್ತದೆ. ಕಾಲೇಜು ಕುವೆಂಪು ವಿಶ್ವವಿದ್ಯಾನಿಲಯದ ಅತ್ಯುತ್ತಮವಾದ ಕಾಲೇಜು ಎಂದು ಪೋಷಕರು ಆಯ್ಕೆ ಮಾಡಿಕೊಂದು ಅವರ ಮಕ್ಕಳನ್ನು ನಮ್ಮಂತಹ ಖಾಸಗಿ ಕಾಲೇಜಿಗೆ ಸೇರಿಸಿರುವುದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. 


ಈ ಸಭೆಯು ಪೋಷಕರೊಂದಿಗೆ ಉಪನ್ಯಾಸಕರು ಅತ್ಯುತ್ತಮವಾದ ಸಂಬಂಧ ಹೊಂದಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಕಾಲೇಜಿನಲ್ಲಿ ಪದವಿ ಮಟ್ಟದಲ್ಲಿ ಬಿ.ಕಾಂ., ಬಿ.ಎಸ್ಸಿ., ಬಿಸಿಎ, ಬಿಎಸ್‌ಡಬ್ಲ್ಯೂ, ಬಿಎ ಕೋರ್ಸ್ ಗಳನ್ನು ಹೊಂದಿದ್ದು. ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ ಮನಃಶಾಸ್ತ್ರ ಹಾಗೂ ಪಿಎಚ್.ಡಿ ಸಂಶೋಧನಾ ಕೇಂದ್ರವನ್ನು ಹೊಂದಿದೆ. ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿದೆ. 


ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಎಂ.ಎಸ್ಸಿ ಕ್ಲಿನಿಕಲ್ ಸೈಕಾಲಜಿ, ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಗಳು ಲಭ್ಯವಿದೆ ಎಂಬ ಮಾಹಿತಿ ನೀಡಿದರು. ಕಾಲೇಜು ಪ್ರತಿ ವರ್ಷ ಶೇಕಡ ನೂರಕ್ಕೆ ನೂರು ಫಲಿತಾಂಶ ನೀಡುತ್ತಾ ಬರುತ್ತಿದೆ. ಹಲವಾರು ಚಟುವಟಿಕೆಗಳು, ಹಲವಾರು ವಿದ್ಯಾರ್ಥಿಗಳ ವೇದಿಕೆಗಳು ಅವರ ಕ್ರೀಯಾಶೀಲತೆಗೆ ಹೆಚ್ಚಿನ ಒತ್ತು ನೀಡುತ್ತದೆ. ಸುಮಾರು 40 ಅತ್ಯುತ್ತಮ ಉಪನ್ಯಾಕರನ್ನು ಹೊಂದಿರುವ ಕಾಲೇಜು 10ಕ್ಕೂ ಹೆಚ್ಚು NET, SLET ಮಾಡಿರುವ 8ಕ್ಕೂ ಹೆಚ್ಚು ಡಾಕ್ಟರೇಟ್ ಹೊಂದಿರುವ ಉಪನ್ಯಾಕರಿದ್ದಾರೆ.


ಕಳೆದ ಎರಡು ವರ್ಷಗಳ ಹಿಂದೆ ಕಾಲೇಜು ಮಲ್ಲಿಗೇನಹಳ್ಳಿಯ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಅತ್ಯುತ್ತಮವಾದ ಪ್ರಯೋಗಶಾಲೆ, ಗ್ರಂಥಾಲಯವನ್ನು ಹೊಂದಿದೆ. ಹಲವಾರು ಸ್ವಯಂ ಕೋರ್ಸ್ಗಳ ತರಬೇತಿ ನೀಡಲಾಗುತ್ತದೆ. ಹಿರಿಯ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ, ಪ್ರೋ. ರಾಮಚಂದ್ರ ಬಾಳಿಗ ಅವರ ಮಾರ್ಗದರ್ಶನದಲ್ಲಿ ಕಾಲೇಜು ಮುನ್ನಡೆಯುತ್ತಿದೆ. ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಮಣಿಪಾಲ್ ಆಕಾಡೆಮಿಯ ಒಡಬಂಡಿಕೆಯೊಂದಿಗೆ ಸಾಪ್ಟವೇರ್ ಹಾಗೂ ಟ್ಯಾಲಿ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಹಾಗೆಯೇ ಹಲವಾರು ಪ್ರತಿಪ್ಠಿತ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಇಂಟರ್ನ್ಶಿಪ್ ಮಾಡುತ್ತಿದ್ದಾರೆ. ಪಠ್ಯಕ್ಕೆ ಶಿಕ್ಷಣ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ.


ಕಾಲೇಜಿನ ವೇದಿಕೆಗಳಾದ, ಅನ್ವೇಷಣಾ, ಬೆಳ್ಳಿಸಾಕ್ಷಿ,Bio-Spectrum, ಕಲ್ಪನಾ ಮೂಲಕ ಅವರ ಕ್ರೀಯಾಶೀಲತೆಗೆ, ಹಲವಾರು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಇವೆಲ್ಲದರ ಜೊತೆಗೆ ಪ್ರತಿಷ್ಠಿತ ಸಂಸ್ಥೆಗಳಾದ “ನೀನಾಸಂ”, ಡಾ. ಎಚ್.ಎಸ್.ಅನೂಪಮ ಅವರ ಕವಲಕ್ಕಿಯ ಕರ‍್ಯಗಾರಗಳಿಗೆ ವಿದ್ಯಾರ್ಥಿಗಳನ್ನು ಕಳಿಸಿಕೊಡಲಾಗುತ್ತದೆ.


ಈ ಎಲ್ಲದರ ಸಾಕಾರಕ್ಕಾಗಿ ವರ್ಷದ ಪೋಷಕರ ಪಾತ್ರ ಅತಿಮುಖ್ಯವಾಗಿ ಇರಬೇಕಾಗುತ್ತದೆ ಎಂದು ಹೇಳಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಿರ್ದೇಶಕರಾದ ಡಾ|| ರಜನಿ ಎ ಪೈ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು. ಹಾಗೂ ಪೋಷಕರಿಗೆ ಧನ್ಯವಾದಗಳನ್ನು ತಿಳಿಸಿದರು. 


ಕಾಲೇಜಿನ ಆಡಳಿತಾ ಮಂಡಳಿಯ ನಿರ್ದೇಶಕರಾದ ಡಾ|| ರಜನಿ ಎ ಪೈ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು. ಸ್ಪೂರ್ತಿ ಮತು ಕು. ಪ್ರಗತಿ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಕಾರ್ಯಕ್ರಮದ ಸಂಚಾಲಕರಾದ ಡಾ. ಗಣೇಶ್ ಪ್ರಸಾದ್ ಇಂಗ್ಲೀಷ್ ಇವರು ಸ್ವಾಗತಿಸಿದರು. ನ್ಯಾನ್ಸಿ ಲೇವಿನ ಪಿಂಟೋ ಸಮಾಜಕಾರ್ಯ ವಿಭಾಗ ಇವರು ವಂದಿಸಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಪ್ರಗತಿ ಅವರು ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಹಾಜರಿದ್ದರು. 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top