ತುಂಬಿದ ರಾಷ್ಟ್ರಪತಿ ಭವನ, ಸಭಿಕರಲ್ಲಿ ಪ್ರಧಾನ ಮಂತ್ರಿಗಳೇ ಮುಂತಾದ ಪ್ರಮುಖರು ಸೇರಿದ್ದಾರೆ. ಉದ್ಘೋಷಕಿ ಒಬ್ಬೊಬ್ಬರೇ ಸಾಧಕ ಮಹನೀಯರನ್ನ "ಅವರ ಸಾಧನೆಯ ವಿವರಣೆಯನ್ನು ನೀಡುತ್ತಾ" ರಾಷ್ಟ್ರಪತಿಗಳಿಂದ ಪದಕ ಪ್ರಶಸ್ತಿ ಸಂಮಾನಕ್ಕಾಗಿ ವೇದಿಕೆಗೆ ಆಹ್ವಾನವನ್ನು ನೀಡುತ್ತಿದ್ದಾರೆ.
ಹಾಗೆಯೇ ಕೃಷ್ಣಮೂರ್ತಿಗಳ ಸಾಧನೆಯ ಬಗ್ಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿವರಣೆಯನ್ನು ನೀಡುತ್ತಿದ್ದಾರೆ. ಕೃಷ್ಣಮೂರ್ತಿಗಳ ಕಣ್ಣಲ್ಲಿ ಆನಂದ ಭಾಷ್ಪ ಇಳಿಯುತ್ತಿದೆ....
ಶ್ರೀ ಕೃಷ್ಣಮೂರ್ತಿಗಳು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಶ್ರೇಷ್ಠ ಅಡಿಕೆ ಬೆಳೆಗಾರ. ಸತತ ಮಳೆ, ಎಲೆಚುಕ್ಕಿ ರೋಗ, ಅಡಿಕೆ ಕೊಳೆ ರೋಗ, ಮಂಗಗಳ ಇನ್ನಿಲ್ಲದ ಹಾವಳಿ, ಕಾಡುಕೋಣ ಹಾವಳಿ, ಆನೆಗಳ ದಾಳಿ.. ಈ ಎಲ್ಲಾ ಅನಾನುಕೂಲಗಳ ನಡುವೆ ರೈತ ಕೃಷ್ಣಮೂರ್ತಿಯವರು ಯಾವುದೇ ಸಬೂಬು ಹೇಳದೇ ಭಾರೀ ಸಾಧನೆಯನ್ನು ಮಾಡಿದ್ದಾರೆ. ಈ ವರ್ಷದ ಮುಗಿಯದ ಮಳೆಗಾಲದ ನಡುವೆ ಈ ಚಿಕ್ಕ ರೈತ ತನ್ನ ಹೆಂಡತಿಯ ತಾಳಿ ಸರ ವನ್ನೂ ಅಡುವಿಟ್ಟು ಬೇಸಿಗೆಯ ಎರಡು ಔಷಧ ಸಿಂಪಡಣೆ ಸೇರಿ ಮಳೆಗಾಲದ ಅವಧಿಯಲ್ಲಿ ಒಟ್ಟು ಏಳು ಬಾರಿ ಔಷಧ ಸಿಂಪಡಣೆ ಮಾಡಿ ಒಟ್ಟು "ಒಂಬತ್ತು ಬಾರಿ ಔಷಧ ಸಿಂಪಡಣೆ" ಮಾಡಿ "ಲಿಮ್ಕಾ ದಾಖಲೆಯನ್ನು" ಮಾಡಿ ಮಾದರಿ ರೈತರಾಗಿರುತ್ತಾರೆ.
ಶ್ರೀ ಕೃಷ್ಣಮೂರ್ತಿ ಯವರಿಗೆ ಮಾನ್ಯ ರಾಷ್ಟ್ರಪತಿ ಯವರು ಕೃಷಿ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ "ಬೋರ್ಡೋ ಭೂಷಣ" ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದಾರೆ" ಎಂದು ಘೋಷಣೆ ಮಾಡಿದರು.
ಶ್ರೀ ಕೃಷ್ಣಮೂರ್ತಿಯವರು ತಮ್ಮ ನಡುಗುವ ಕೈಯಿಂದ ರಾಷ್ಟ್ರಪತಿಯವರಿಗೆ ನಮಸ್ಕರಿಸಿ ರಾಷ್ಟ್ರಪತಿಗಳಿಂದ "ಪ್ರಶಸ್ತಿ ಫಲಕ" ಸ್ವೀಕರಿಸಿದರು.
ಆ ನಂತರ ಸನ್ಮಾನ್ಯ ಪ್ರಧಾನ ಮಂತ್ರಿಯವರೂ ಕೃಷ್ಣಮೂರ್ತಿಗಳ ಅಭಿನಂದಿಸಿದರು... ಪತ್ರಿಕಾಗೋಷ್ಠಿಯೂ ನಡೆಯಿತು.
ಶ್ರೀ ಕೃಷ್ಣಮೂರ್ತಿ ಕೊಳೆತೋಟ ರವರು ನನ್ನ ಈ ಮಹತ್ ಸಾಧನೆಗೆ ನನ್ನ ಹೆಂಡತಿ ಶ್ರೀಮತಿ ಕಮಲಳೇ ಕಾರಣ. ನಾನು ಈ ಬೋರ್ಡೊ ಸಿಂಪಡಣೆ ಯನ್ನು ಇಲ್ಲಿಗೆ ನಿಲ್ಲಿಸೆನು. ಇನ್ನೂ ಮಳೆಗಾಲ ಮುಂದುವರಿದರೆ ಮತ್ತೂ ಎರಡು ಬಾರಿ ನಮ್ಮ ತೋಟಕ್ಕೆ ಔಷಧ ಸಿಂಪಡಣೆ ಮಾಡಿಸಲಿದ್ದೇನೆ. ನಮ್ಮ ಮನೆಯಲ್ಲಿ ನಮ್ಮ ಮದುವೆಗೆ ನನ್ನ ಹೆಣ್ಣು ಕೊಟ್ಟ ಮಾವ ನೀಡಿದ ಬೆಳ್ಳಿ ಸಾಮಾನುಗಳಿವೆ.. ಅದನ್ನು ಮಾರಿಯಾದರೂ ನಾನು ನನ್ನ ತೋಟಕ್ಕೆ ಔಷಧ ಸಿಂಪಡಣೆ ಮಾಡಿಯೇ ತೀರುತ್ತೇನೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಔಷಧ ಸಾಮಾನ್. ಜೈ ಕಮಲ ಕೃಷ್ಣಮೂರ್ತಿ ಜೀ. ನಾನು ಇನ್ನೊಂದು ದಪ ಔಷಧ ಹೊಡಿಸೇ ತೀರ್ತೀನಿ. ಇದು ಮಳೆಗೆ ನನ್ನ ಸವಾಲು. ನಾನು ಔಷಧ ಹೊಡಿಸ್ತೀನಿ" ಎಂದು ಜೋರಾಗಿ ಹೇಳುತ್ತಾ ಭಾವೋದ್ರೇಕವಾಗಿ ಕೈ ಎತ್ತಿದರು.
.
.
.
.
ಪಕ್ಕದಲ್ಲೇ ಮಲಗಿದ್ದ ಕಮಲಮ್ಮನಿಗೆ ಈ ಗೌಜಿಂದ ಎಚ್ಚರಿಕೆಯಾಗಿ ಗಂಡನ ಕೈ ಹಿಡಿದು ಮಡಚಿ "ಇನ್ನೊಂದು ಸತಿ ಔಷಧ ಹೊಡಸದಂತೆ. ನಿಮಗೆ ತ್ವಾಟಕ್ಕೆ ಔಷಧ ಹೊಡಸದು ರಾವಾ...? ನಿಮಗೆ ಮಳಗಾಲಿಡಿ ಔಷಧ ಹೊಡಸದೇ ಗಿರ ಆಗಿದೆ. ಅಷ್ಟು ಸತಿ ಔಷಧ ಹೊಡಿಸಿದರೂ ಕೊನೆಯಲ್ಲಿ ನಾಕು ನಾಕು ಕಾಯಿಯೂ ಉಳಿಲ...!! ಇನ್ನ ಔಷಧ ಹೊಡಸದ ಅಲ್ಲ ಕುಡಿಯದು... !! ನಾಡಿದು ದೀಪಾವಳಿ ಹಬ್ಬದ ಬೆಳಿಗ್ಗೆ ಇರೋ ನಾಕು ಕಾಯಿಗಳ ಅಡಿಕೆ ಕೊನೆಯನ್ನು ತೆಗೆಸಿ ಬೇಸಿ ಮಡಿ ಮೂಲೆ ಮಾಡಿಸಿ ಎಷ್ಟಿದೆಯೋ ಅಷ್ಟು ಬೆಲೆಗೆ ನಮ್ಮ ಉತ್ಪತ್ತಿ ಮಾರಿ ಮೊದಲು ನನ್ನ ತಾಳಿ ಸರ ಬಿಡಸಕಂಡ ಬರುಕು. ಡಿಸೆಂಬರ್ ಲ್ಲಿ ಅಣ್ಣನ ಮಗಳ ಮದುವೆ. ಬೋಳು ಕುತೆಗೆಲಿ ಮದುವೆ ಮನೇಲಿ ನಾನು ಓಡಾಡಕ್ಕೆ ನಾನೇನು ಗಂಡ ಸತ್ತೋಳಾ..?
ಔಷಧ ಮತ್ತೊಂದು ಸತಿ ಹೊಡಸದಂತೆ.!
ಸುಮ್ಮನೆ ಕನವರಸೋದು ಬಿಟ್ಟು ಮನಗಿ... ಇನ್ನೂ ಬೆಳಕು ಹರೀಲ... " ಅಂತ ನಿದ್ದೆಗಣ್ಣಲ್ಲೇ ಗಂಡನಿಗೆ ಬೈದು ಕಮಲಮ್ಮ ಮಗ್ಗಲು ಬದಲಾವಣೆ ಮಾಡಿದರು.
ಬವಣೆಗೋ ಕನಸಿನ ಕನವರಿಕೆಗೋ ಕೊಳೆತೋಟ ಕೃಷ್ಣಮೂರ್ತಿಯವರ ಕಣ್ಣಿನಲ್ಲಿ ನೀರು ಇಳಿದಿದ್ದಂತೂ ಸತ್ಯ. ಕನಸಲ್ಲೇ ರಾಷ್ಟ್ರಪತಿಗಳಿಂದ "ಬೋರ್ಡೋ ಭೂಷಣ" ಪ್ರಶಸ್ತಿ ಪಡೆದ ಖುಷಿ ಕೃಷ್ಣಮೂರ್ತಿಗಳದ್ದಾಯಿತು...
ಅಭ್ಬ ಪ್ರಧಾನ ಮಂತ್ರಿ ಗಳಿಂದ ಅಭಿನಂದನೆ ಪಡೆದ ಖುಷಿ ಕನಸಲ್ಲಾದರೂ ಎಂತಹ ಅದ್ಭುತ ಅನುಭವ ತಮ್ಮದೆಂದು ಒಂಥರ ಖುಷಿ ಪಟ್ಟರು...!!!
ಮತ್ತೆ ಹೊದಿಕೆ ಸರಿಪಡಿಸಿ ಹೊದ್ದು ಇನ್ನೊಂದು ಕನಸು ಕಾಣಲು ಸಿದ್ದರಾದರು. "ಮಲೆನಾಡು ಕೊಳೆ ರತ್ನ, ಬೋರ್ಡೋ ಭೂಷಣ ಶ್ರೀ ಕೊಳೆತೋಟ ಕೃಷ್ಣಮೂರ್ತಿಯವರು..."
ಸದ್ಯ ಕನಸು ಕಾಣಲಂತೂ ಯಾವುದೇ ಅಡ್ಡಿಯಿಲ್ಲ ಅಲ್ವಾ...?
- ಪ್ರಬಂಧ ಅಂಬುತೀರ್ಥ
9481801869
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ