ವಿಡಂಬನೆ: 'ನಾನೇ ರಾಜಾ ಇನ್ನಾ ಹನ್ನೊಂದು ವರ್ಷ'

Upayuktha
0


'ಏ ಮಾಸ್ತರ ಗಿಡದ ಮ್ಯಾಲ ಏರಿ ನಿಂತಾನು' ಎಂದ ಕಾಳ್ಯಾ

'ಯಾಕ? ಸಾಲಿ ಸೂಟಿ ಆಗ್ಯಾವಂತ ಹೇಳಿ ಈ ದಗದಾ ಹಚ್ಚೇತೇನs ಗೋರಮೆಂಟ?' ಕೇಳಿದ ಕಾಕಾ

'ಏ ಹಂಗ ಅಲ್ಲದು ತಗಿ, ನೆಟ್ವರ್ಕ ಸಲಾಗಿ ಅಂತ' 

'ಯಾಕ? 'ವರ್ಕ ಫ್ರಾಮ್ ಟ್ರೀ' ಮಾಡ್ಯಾರೇನು?' ಕೇಳಿದ ಯಬಡೇಶಿ

'ಈಗ ಮನಿ ಮನಿ ಸಮೀಕ್ಷೆ ಮಾಡಕತಾರ, ಅದು ಮೊಬೈಲ ಆ್ಯಪ್ನಾಗೇ ಮಾಡಬೇಕು, ಅದಕ್ಕ ನೆಟ್ವರ್ಕ್ ಸಿಕ್ಕಿಲ್ಲಂತ ಗಿಡ ಏರಿ ಶುರು ಹಚಗೊಂಡಾರು' ಎಂದ ಕಾಳ್ಯಾ

'ಇಷ್ಟ ಅರ್ಜಂಟ ಯಾಕಂತs ಸಮೀಕ್ಷೆ?' ಕೇಳಿದ ಕಾಕಾ


'ನಮ್ಮಲ್ಲಿ ಎಷ್ಟು ಜಾತಿ ಅವ ಅಂತ ಕಂಡು ಹಿಡಿಬೇಕಲ್ಲಾ?'

'ಅದೇ ಯಾಕೆ?'

'ಅದು ಟಗರು ಸಿಂಬಾಲ್ 'ಟಾಪ್ ಸಿಕ್ರೇಟ್' ದೊಡ್ಡ ಬಂಡೆ ಐತಿ' ಎಂದು ನಕ್ಕ ಯಬಡೇಶಿ

'ಎಲ್ಲಾ ಗುರುಗಳು, ತಮ್ಮ ತಮ್ಮದು 'ಇದೇ ಜಾತಿ' ಬರೆಸ್ರಿ ಅಂತ, ಎಲ್ಲಾ ಕಡೆ ಅನೌನ್ಸ ಮಾಡಕುಂತಾರ' ಎಂದ ಕಾಳ್ಯಾ

'ಇನ್ನ ಮ್ಯಾಲ ಶುರು ನೋಡು ಜುಂಬು ಜಟಾರ್ ಸರ್ಕಸ್' ಎಂದು ನಕ್ಕ ಕಾಕಾ


'ಜಾತ್ಯಾತೀತ ಐತಿ ನಮ್ಮದು, ಮೋಸ್ಟ್ ಸೆಕೂಲರ್ ಅಂತಾರು, ಮತ್ತ ಮ್ಯಾಲ ಇದ್ಯಾಕ?' ಕೇಳಿದ ಯಬಡೇಶಿ

'ಮೂಗದಾಣಿ ಕೈಯಾಗ ಇದ್ರsನ, ಎಲ್ಲಾ ಗೇಮ ಸಕ್ಸೆಸ್ ಆಕ್ಕಾವು' ಎಂದು ಒಗಟಾಗಿ ಹೇಳಿದ ಕಾಳ್ಯಾ

'ಇದು ಗಣತಿ 'ಪರ್ವ'ಕಾಲದ 'ವಂಶವೃಕ್ಷ'ದ' 'ಅನ್ವೇಷಣೆ'ಗೆ 'ಸಾಕ್ಷಿ'ಯಾಗಲು 'ಆವರಣ'ದ ತಯಾರಿ ಐತಿ' ಎಂದು ಗಾಢವಾಗಿ ನಕ್ಕ ಶೌರಿ

'ಏ ಹಂಗಲ್ಲಾ, 'ಮತದಾನ' ಮಾಡಲು ಹೋಗಿ, 'ಮತಚೋರಿ' ಮಾಡಕೊಂಡು, 'ತಬ್ಬಲಿಯು ನೀನಾದೆ ಮಗನೆ' ಎಂದು 'ಸಾಕ್ಷಿ' ಸಮೇತ 'ಗ್ರಹಣ' ಹಿಡಿಸುವ 'ಕವಲು'ದಾರಿ ಪ್ಲ್ಯಾನ ಇರಬಹುದು' ಎಂದ ಕಾಳ್ಯಾ


'ಹಿಂಗ್ಯಾಕ ಮಾತಾಡಕತ್ತಿರಲೇ 'ನಾಯಿ ನೆರಳ' ಬಿದ್ದೈತೇನ ನಿಮ್ಯಾಗೋ .... ಹ್ಯಾಂಗ?' ಕೇಳಿದ ಕಾಕಾ

'ಇಲ್ಲಪಾ ಯಪ್ಪಾ, ಈ ನೆಟ್ವರ್ಕ್ ಸಿಗಲಾರದ್ದಕ್ಕs ಗಿಡಾ ಏರಿದ್ದು ನೋಡಿ ಹಿಂಗೇಲ್ಲಾ ಆಗೇತಿ' ಎಂದು ನಕ್ಕ ಶೌರಿ

'ಟಗರು ಬಂಡೆ ಕಾಳಗದ ಯಕ್ಷಗಾನದಲ್ಲಿ 'ಹಿಂಹುಲಿ' ನಾನೇ ನೆಕ್ಸ್ಟ್ ಸಿಎಂ ಅಂದೈತಿ' ಎಂದ ಕಾಳ್ಯಾ

'ಈಗ ಕಾಂತಾರ chapter 1 ರಿಲೀಸ ಆಗೇತಲಾ, ಅದರಾಗಿನ ದೈವ ಏನಂತ ಹೇಳೇತಿ?' ಕೇಳಿದ ರೌಂಡ್ಯಾ

'ಯಾರು ಏನರೇ ಹೇಳ್ಲಿ, 'ಐ ಡೊಂಟ್ ಕೇರ್.....ಮುಂದಿನ ಹನ್ನೊಂದು ವರ್ಷ ನಾನೇ ರಾಜಾಧಿರಾಜಾ ರಾಜ ಮಾರ್ಥಾಂಡ' ಅಂತ ಟಗರು ಅನೌನ್ಸ್ ಮಾಡೇತಿ' ಎಂದ ಧಡಂಧುಡಕಿ


'ಮತ್ತs... ಬಂಡೆ ಏನೂ ಮಾಡಬೇಕು? ಉದ್ದ ಹುರಿಬೇಕೇನು?' ಕೇಳಿದಳು ರಾಶಿ

'ಬಂಡೆ... 'ನಮಸ್ತೆ ಸದಾ ವತ್ಸಲೇ ಮಾತೃಭೂಮೆ... ಅಂತ ಹಾಡಿಕೆಂತs... 'ಶ್ಯಾಣ್ಯಾ'ನ್ನ ಸುತ್ತ ಸುತ್ತಬೇಕು!' ಅಂತ ವ್ಯಂಗವಾಗಿ ನಕ್ಕ ಶೌರಿ


'ಆದ್ರೂs..... ರಾಜಣ್ಣನ್ನ ಹಾರಿಸಿದಂಗ..... ಟಗರ ಎಗರಿಸಿದದ್ನಂದ್ರ ಯುವರಾಜ?' ಕೇಳಿದ ಕಾಳ್ಯಾ ಸಹಸ್ರ ಡಾಲರನ ಪ್ರಶ್ನೆಯನ್ನು

'ರಾಜಣ್ಣನೇ ಬ್ಯಾರೇ....... ಟಗರೇ ಬ್ಯಾರೇ..... ಹಂಗ ಅಷ್ಟ ಸರಳ ಹಾರ್ಸಾಕ ನಹಿ ಆತಾ ಹೈ' ಎಂದ ಬಾಶಾ

'ಟಗರ ಹಾರ್ಸಿದ್ರs....... ಎಲ್ಲಾನೂ ಹಾರಿ ಹೋಗಿ ಗುಡಿಸಿ ಗುಂಡಾರ ಆಕೈತಿ' ಎಂದಳು ರಾಶಿ

'ಮತ್ತ ಆ ಕಡೆ ಅದನೂ ಇಲ್ಲಾ..... ಈ ಕಡೆ ಇದನೂ ಇಲ್ಲಾ ಅಂದ್ರs ...... ನಮ್ಮ ಬಂಡೆ ಗತಿ?' ಕೇಳಿದ ಗುಡುಮ್ಯಾ

'ಅಧೋಗತಿ!........'ಎಂದ ಟುಮ್ಯಾ


'ನಮ್ಮ ಬಂಡೆ ಸುಮ್ನ ಕೂಡು ಪೈಕಿ ಅಲ್ಲ ತಗಿ.......' ಎಂದ ಕಾಕಾ

'ಹೌಂದು..... ಮತ್ತ ಗುಡಿ ಗುಂಡಾರ ಸುತ್ತಬಹುದು' ಎಂದು ನಕ್ಕ ಡುಮ್ಯಾ

'ಮತ್ತs ಅಲ್ಲಿ ಆ ಕಡೆ 'ಹಿಂಹುಲಿ'ದು ದಿಗ್ವಿಜಯ ಯಾತ್ರೆ ಸಾಗೇತಲಾ?' ಎಂದಳು ರಾಶಿ

'ಹೌದು...... ಮದ್ದೂರ ತುಮಕೂರ ದಾವಣಗೇರೆ ಹುಬ್ಬಳ್ಳಿ ಶಿವಮೊಗ್ಗ.... ಎಲ್ಲಾ ಕಡೆ ಭಗವಾ ಧ್ವಜ ಹಾರ್ಯಾಡಕತ್ತಾವು' ಎಂದ ಧಡಂಧುಡಕಿ

'ಸಿಟ್ಟೂರಿ..... ಮರಿಸಿಟ್ಟೂರಿ ಗಪ್ಪ ಗಡದ್ದ ಆಗ್ಯಾವು' ಎಂದು ನಕ್ಕ ಕಾಕಾ


'ಇವನ್ನ.... ಯಾಕರೇ ಹೊರಗ ಹಾಕಸೇವಿ ಅಂತ ಅವು ಒದ್ಯಾತಕತ್ತಾವು' ಎಂದ ಡುಮ್ಯಾ

'ಹೌಂದು ಮತ್ತs ...... ಒಳಗ ಇದ್ರs ಥ್ವಾಡೆರೇ ಅಂಜಿಕೆ ಇರತಿತ್ತು..... ಈಗ ಮುಗದಾಣಿ ಬಿಚ್ಚಿದ ಹೋರಿ ಆಗೇತಿ' ಅಂತ ಕೈ ಕೈ ಹಿಸಕೊಳಿಕತ್ತಾವು' ಎಂದ ರಬಡ್ಯಾ

'ಮರಿ'ನ್ನ ಮಾತ್ರ ಎಂದೂ ಸಿಎಂ ಆಗ್ಲಿಕ್ಕಿ ಬಿಡಂಗಿಲ್ಲ ನೋಡು ಈ 'ಹಿಂಹುಲಿ' ಎಂದ ಕಾಕಾ


'ಈಗ ಟಗರು,ಹಿಂಹುಲಿ, ಕತ್ತಿ....... ಎಲ್ಲಾ ಒಂದ ಆದ್ರs ಆತು..... ಎಲ್ಲಾ ಗಂಟು ಕಟಗೊಂಡು ಹೊಂಡೂದs' ಎಂದು ನಕ್ಕ ಧಡಂಧುಡಕಿ

'ಆಗ ಈ  'ಶ್ಯಾಣ್ಯಾ_ಪಾಣ್ಯಾ'...... 'ಪಪ್ಪು' ಎಲ್ಲಾರಿಗೂ ಗಂಧದಗುಡಿ ಬಾಗಿಲು ಬಂದ!' ಎಂದ ಟುಮ್ಯಾ

'ಒಂದ ಸಲ ಈ ತಮಿಳು ರಾಜ್ಯದಾಗ ಆದಂಗ ಆಗ್ಬೇಕು ನೋಡು, ಆಗ ಗೊತ್ತಾಕೈತೆ ಈ ಸುಮ್ಸುಮ್ನೆ ಹಾರ್ಯಾಡುವ್ಕ .....' ಎಂದು ತಂಬಾಕು ತಿಕ್ಕಿ ಬಾಯಾಗ ಹಾಕ್ಕೊಂಡ ಕಾಕಾ


'ಏನಾದ್ರೂ ಕುಂತಿ ಮಕ್ಕಳಿಗಿ ರಾಜ್ಯ ಇಲ್ಲಂತ! ಹಂಗಾಗೇತಿ ಇಲ್ಲಿಯ ಸಾಮಾನ್ಯ ಜನರ ಪರಿಸ್ಥಿತಿ' ಎಂದ ಡುಮ್ಯಾ

' ಎಲ್ಲಾರೂ ಬಂದು ತಮ್ಮತಮ್ಮದು ಹೊಡ್ಕೊಂಡು ಪಡ್ಕೊಂಡು ಹೋಗವ್ರೆ' ಎಂದಳು ರಾಶಿ

'ಬಹುಶಃ ಆ ದೇವ್ರೇ ಭೂಮಿಗಿ ಬಂದ್ರನೂ ಇವರು ಕ್ಯಾರೇ ಅನಂಗಿಲ್ಲ ಅನಸ್ತೈತಿ' ಎಂದ ಶೌರಿ

' ಅದಕ್ಕೆ... ಖರೇ ಶ್ಯಾಣ್ಯಾ ಆ ದೇವರು..... ಅಂವಾ ಬರಲಿಕ್ಕೆ ಒಲ್ಲೆ ಅಂತಾನು' ಎಂದು ನಕ್ಕ ಡುಮ್ಯಾ

'ಅಲ್ಲಲೇ.... ನಿನಗ ಭೆಟ್ಟಿ ಆಗಿ ಹೇಳ್ಯಾನೇನು ಹೀಂಗಂತ?' ಎಂದು ಕೇಳಿದ ಟಕಳ್ಯಾ


'ನಿನ್ನ ತಾಮ್ರ ತಲಿ ಮ್ಯಾಲೇ ಬರೆದು ಕಳಿಸ್ಯಾನಲಾ ನೋಡಿಲ್ಲೇನ ನೀ?' ಎಂದ ನಕ್ಕೊಂತ ಡುಮ್ಯಾ

'ಚಲೋ ಚಲೋ..... ನಡ್ರಿ ಎಲ್ಲಾರೂ ಕಾಂತಾರಾ 1  ನೋಡಕೊಂಡು ಬರಾಮು' ಎಂದ ಟುಮ್ಯಾ

'ಆಹಾ! ಏನ ಮಾತು ಅಂತ ಹೇಳಿದೆಲೇ... ಬಂಗಾರದಂಥ ಮಾತು' ಎಂದ ಕಾಳ್ಯಾ

'ಹಂಗಾರ ಶುರು ಆಗಲಿ.... 'ಚಾ ಚೂಡಾ ಪಾರ್ಟಿ' ಎಂದ ರಬಡ್ಯಾ ಜೋರಾಗಿ ಲಗಾಟಿ ಹೊಡೆದ! 


-ಶ್ರೀನಿವಾಸ ಜಾಲವಾದಿ, ಸುರಪುರ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top