ಸುಮಾರು ಆರೇಳು ತಿಂಗಳುಗಳ ಹಿಂದೆ ನಮಗೆ ಬಹಳ ಆಪ್ತರೂ, ಹಿರಿಯರೂ ಆದ ಸ್ನೇಹಿತರೊಬ್ಬರು ಮನೆಗೆ ಬಂದಿದ್ದರು. ಅವರು ಒಬ್ಬ ಹವ್ಯಾಸಿ ಬರಹಗಾರರು. ಈಗ ಅವರಿಗೆ 85 ವರ್ಷ. ಅವರು ಬರೆಯಲು ಶುರು ಮಾಡಿ 10 ವರ್ಷ ಆಗಿವೆ. ಅವರದೊಂದು ಪುಸ್ತಕ ನನಗೆ ಕೊಟ್ಟರು. ಕೆಲವು ದಿನಗಳಾದ ಮೇಲೆ, ಅವರು ನನಗೆ ಕರೆ ಮಾಡಿದರು. ಅವರು ಕೊಟ್ಟ ಪುಸ್ತಕ ಓದಿರುವೆನಾ ಎಂದು ಕೇಳಿದರು.
ಓದಿದೀನಿ ಅಂತ ಹೇಳಿದೆ. ನನ್ನ ಅಭಿಪ್ರಾಯ ಕೇಳಿದರು. ನನಗೆ ಒಂದು ಘಳಿಗೆ ಏನು ಹೇಳಲಿ ಎಂದು ಯೋಚನೆ ಆಯಿತು. ಚೆನ್ನಾಗಿದೆ ಅಂದೆ.
"ನಾನು ನಿಮಗೆ ಕೊಟ್ಟಿದ್ದು, ಶರ್ಮಾಜಿ ಮಗಳು, ನಿಷ್ಕರ್ಷವಾಗಿ ಅಭಿಪ್ರಾಯ ತಿಳಿಸುತ್ತಾರೆ ಎಂದು. ಐ ವಾಂಟ್ ಎ ಫ್ರಾಂಕ್ ಒಪೀನಿಯನ್ ಫ್ರಮ್ ಯು" ಅಂದರು.
ಅವರಿಗೆ ವಾಟ್ಸ್ ಆಪ್ ನಲ್ಲಿ ಕಳಿಸ್ತೀನಿ ಅಂದೆ. ಒಂದು ವಾರದ ನಂತರ ಅವರಿಗೆ ನನ್ನ ವಿಮರ್ಶೆ ಹಾಕಿದೆ. ಅದರ ಕೆಲವು ವಾಕ್ಯಗಳು 'ಇನ್ನೂ ವಿಸ್ತಾರವಾಗಿ ಬರೆಯಬಹುದಿತ್ತು. ಸ್ವಲ್ಪ ಅಧ್ಯಯನ ಮಾಡಿ ಬರೆದಿದ್ದರೆ ಸಾರ ಭರಿತವಾಗಿ ಇರುತ್ತಿತ್ತು. ನನ್ನ ಮಟ್ಟಿಗೆ ಪರವಾಗಿಲ್ಲ ಎಂದು ಹೇಳಬಲ್ಲೆ. ಕ್ಷಮಿಸಿ ನನ್ನ ಅಭಿಪ್ರಾಯಕ್ಕೆ" ಎಂದು ಹಾಕಿದೆ.
ಅವರು ನನಗೆ "ಇದರಲ್ಲಿ ಕ್ಷಮೆ ಏಕೆ? ಚರ್ಚೆ, ವಿಮರ್ಶೆಯಿಂದಲೇ ಅಲ್ಲವೇ ಸಾಹಿತ್ಯ ಪಕ್ವ ಆಗುವುದು. ಇದುವರೆಗೂ ಎಲ್ಲಾ ಸ್ನೇಹಿತರೂ, ನನ್ನ ಸಾಹಿತಿಗಳ ಬಳಗ ಮುಖಸ್ತುತಿ ಮಾಡಿದರೆಂದು ಗೊತ್ತಾಯಿತು. ನಾನು ಈ ಕೆಲಸ ಮೊದಲೇ ಮಾಡಬೇಕಿತ್ತು ಅಂದರು. ನಾಳೆ ಮನೆಗೆ ಬರ್ತೀನಿ" ಅಂದರು. ಮಾರನೆಯ ದಿನ ಚರ್ಚೆ ನಡೆಯಿತು. ಅವರ ಇನ್ನೊಂದು ಬರಹವನ್ನು ತಂದಿದ್ದರು.
ಅದನ್ನು ಓದಿ ನನ್ನ ಅನಿಸಿಕೆ ಹೇಳಲು ಕೇಳಿದರು. "ನಾನು ಜಸ್ಟ್ ಎ ಬಿಗಿನರ್" ಅಂತ ಹೇಳಿದೆ. "ಮುಖಸ್ತುತಿಗಿಂತಲೂ ನಿಷ್ಕರ್ಷವಾಗಿ ಹೇಳುವುದು ಮುಖ್ಯ. ನೋ ಬಡಿ ಈಸ್ ಪರ್ ಫೆಕ್ಟ್" ಅಂದರು. ನನಗೆ ಅವರ ಮನೋವೈಶಾಲ್ಯಕ್ಕೆ ಏನು ಹೇಳಬೇಕು ಎಂದು ಗೊತ್ತಾಗಲಿಲ್ಲ. ನನಗೆ ನಮ್ಮ ತಂದೆ ಬರೆದಿದ್ದ ಲೇಖನ ನೆನಪಿಗೆ ಬಂತು.
"ಜನಪ್ರಿಯವಾದುದೆಲ್ಲವೂ ಪೂಜ್ಯವಲ್ಲ. ಹಿತಕರವೂ ಅಲ್ಲ. ಜನಪೂಜ್ಯವಾದದ್ದು ಪ್ರಿಯವಲ್ಲದಿದ್ದರೂ ಅಹಿತವಲ್ಲ. ಜನಪ್ರಿಯತೆ, ಜನಪೂಜ್ಯತೆ ಎರಡೂ ಬೇಕಾದ ಗುಣಗಳೇ. ಸಾಹಿತ್ಯದಲ್ಲೇ ಅಲ್ಲ. ಜೀವನದಲ್ಲೂ ಎಲ್ಲದರಲ್ಲೂ. ಆದರೆ ಇವೆರಡರಲ್ಲಿ ಒಂದೇ ಸಿಗುವಾಗ ಪೂಜ್ಯವಾದುದು ಇರಲಿ, ಕೇವಲ ಪ್ರಿಯವಾದದ್ದು ಎಂಬ ಅರ್ಥ ಅದು.
ಹಿಂದೆ ಇಂಥ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಮ್ಮ ಹಿರಿಯರು ಉತ್ತರ ಕೊಟ್ಟಿದ್ದರು. ಸತ್ಯ ಋತುಗಳು ಬೇಕೋ, ಪ್ರಿಯ ಬೇಕೋ? ಸತ್ಯವೂ ಬೇಕು, ಪ್ರಿಯವೂ ಬೇಕು. ಪ್ರಿಯವಾಗಿರಬೇಕು ಸತ್ಯ.
'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್' ಪ್ರಿಯವಾಗಿರಬೇಕು ಎಂದು ಅನೃತವನ್ನು ಬಯಸಬಾರದು. ನೃತವೋ, ಅನೃತವೋ, ಸುಳ್ಳೋ, ನಿಜವೋ, ಹಿತವೋ, ಅಹಿತವೋ, ಪ್ರಿಯವಾಗಿದ್ದರೆ ಸಾಕು ಎನ್ನಬಾರದು. ಪ್ರಿಯವಾದದ್ದು ಯಾವಾಗಲೂ ಒಳ್ಳೆಯದೇ ಎಂದು ಹೇಳುವಂತಿಲ್ಲ'. 'ಅಧರಕ್ಕೆ ಸಿಹಿ ಉದರಕ್ಕೆ ಕಹಿ' ಎಂದಿದ್ದಾರಲ್ಲ ವಚನಕಾರರು. ಹಾಗೆ ಎಷ್ಟೋ ಸಲ ನಾಲಿಗೆಗೆ ರುಚಿಯಾದದ್ದು ದೇಹಕ್ಕೆ ಹಿತವಲ್ಲ. ನಮಗೆ ಸಾಧಕವಾಗದ ಎಲ್ಲಾ ಮಾತು ನಮಗೆ ಅರುಚಿ ಆಗುತ್ತದೆ. ಅರುಚಿ ಆದದ್ದು ಕಹಿ. ಸಾಹಿತ್ಯದಲ್ಲಿ ಪೂಜ್ಯ ವಸ್ತು ಇಲ್ಲದೆ ಬರೀ ಪ್ರಿಯವಸ್ತು ಇದ್ದರೆ ಅದು ಸಾಹಿತ್ಯವಲ್ಲ. ಪೂಜ್ಯವಸ್ತು ಇದ್ದರೂ ಅದು ಅಪ್ರಿಯವಾದುದಾದರೆ (ಸಾಹಿತ್ಯ) ಅದು ಸಾಹಿತ್ಯವಲ್ಲ. ಪತ್ರಿಕೋದ್ಯಮಿ ಬರೆಯುವಾಗ ಸಿಹಿ ಯಾವುದು, ಕಹಿ ಯಾವುದು?
ಎಷ್ಟೇ ಸೌಮ್ಯವಾಗಿ ಬರೆದರೂ, ವ್ಯಕ್ತಿಯನ್ನು ಬಿಟ್ಟು ವೃತ್ತಿಯನ್ನೋ, ಲೇಖನವನ್ನೋ, ಕೆಲಸವನ್ನೋ, ಸಮಸ್ಯೆಯನ್ನೋ, ಸಾಮಾಜಿಕ ನೀತಿಯನ್ನೋ ವಿಮರ್ಶಿಸಿ ವಸ್ತುನಿಷ್ಠವಾಗಿ ಬರೆದರೂ, ಕೆಲವರಿ ಇದು ಕಹಿ ಆಗುತ್ತದೆ. ಸತ್ಯದ ಹಾಗೆ ನಿರ್ವಿಕಾರ ವಸ್ತು ಅಲ್ಲ. ಅಸತ್ಯ ವಿಕೃತ ವಸ್ತು. ಪತ್ರಿಕೋದ್ಯಮದಲ್ಲಿ ವಿಮರ್ಶೆ ಟೀಕೆ ಸಹಜ.
"ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್" ಇದು ಸುಭಾಷಿತ. ಇದಕ್ಕೆ ಮುಂದಿನ ಮಾತನ್ನೂ ಜೋಡಿಸಿದರು- "ನ ಬ್ರೂಯಾತ್ ಸತ್ಯಂ ಸತ್ಯಂ ಅಪ್ರಿಯಂ". ಸತ್ಯ ಅಪ್ರಿಯ ಆಗಿದ್ದರೆ ಅದನ್ನು ಹೇಳಬೇಡ. ಹಾಗಾದರೆ ಸತ್ಯಕ್ಕಿಂತ ಪ್ರಿಯವೇ ಹೆಚ್ಚೆ? ಬರೀ ಹೊಗಳುಭಟ್ಟರು ಆದೇವಲ್ಲ ಈ ಮಾತಿನಂತೆ ನಡೆದರೆ? ನೀತಿಗೇಡಿಗಳಾದೆವಲ್ಲ.
ಕವಿ- ಸಾಹಿತಿ- ಪ್ರತ್ರಿಕೋದ್ಯಮಿ ಸಮಾಜದ ಹಿತವನ್ನೇ ಆರಾಧಿಸಬೇಕು. ವ್ಯಕ್ತಿಪ್ರೀತಿಯನ್ನಲ್ಲ. ಸಮಾಜಹಿತ ವ್ಯಕ್ತಿಗೂ ಪ್ರಿಯ ಆಗಬೇಕು. ಸಮಾಜ ಹಿತಕ್ಕೆ ವಿರುದ್ಧವಾದುದೇ ವ್ಯಕ್ತಿಗೆ ಪ್ರಿಯ ಆದಾಗ, ಸಮಾಜ ಹಿತದ ಕಲ್ಪನೆಯಾದರೂ ಸುಳ್ಳು ಆಗಿರಬೇಕು. ಅಥವಾ ವ್ಯಕ್ತಿಯ ರುಚಿಯೇ ಕೆಟ್ಟಿರಬೇಕು. ಜೀವನದ ಸತ್ಯಶೋಧನೆ. ಅದರಲ್ಲೂ ಸಾಮಾಜಿಕ ಜೀವನ ಸಾರ್ವಜನಿಕ ಜೀವನ ನಿರಂತರ ನಿಷ್ಠುರ ಸತ್ಯಶೋಧನೆ. ಇದರಲ್ಲಿ ಕಹಿ-ಸಿಹಿ ಧ್ರುವವಲ್ಲ. ಸತ್ಯವೇ ಧ್ರುವ".
- ಸಂಧ್ಯಾ ಸಿದ್ದವನಹಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


