ಮಂಗಳೂರು: ಕಲ್ಕತ್ತಾದ ಪ್ರಸಿದ್ಧ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯ ಸಹಯೋಗದಲ್ಲಿ, ಸುರತ್ಕಲ್‌ನ ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ಸಪ್ತಕ ಬೆಂಗಳೂರು ಹಾಗೂ ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಜೊತೆಯಾಗಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಸಮ್ಮೇಳನವನ್ನು ಹಮ್ಮಿಕೊಂಡಿರುತ್ತವೆ.
ಅ.19ರಂದು ಭಾನುವಾರ ಅಪರಾಹ್ನ 3.30 ರಿಂದ ರಾತ್ರಿ 8 ರ ತನಕ ಜಗತ್ಪ್ರಸಿದ್ಧ ಕಲಾವಿದರುಗಳಿಂದ 3 ವೈವಿಧ್ಯಮಯ ಶಾಸ್ತ್ರೀಯ ಸಂಗೀತ ಕಚೇರಿಗಳು ಮಂಗಳಾದೇವಿಯ ರಾಮಕೃಷ್ಣ ಮಠದ ಶ್ರೀ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿವೆ.
ಚಿರಂತನ ಚ್ಯಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಜ್ಯೂನಿಯರ್ ಶಂಕರ್ ತೇಜಸ್ವಿ ಅವರು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಪುಣೆಯ ಶ್ರೀ ಅಭಿಷೇಕ್ ಬೋರ್ಕರ್ ಅವರಿಂದ ಸರೋದ್ ವಾದನ ನಂತರ ಕಲ್ಕತ್ತಾದ ಶ್ರೀ ಪರಮಾನಂದ ರೋಯ್ ಇವರಿಂದ ಬಾನ್ಸುರಿ ವಾದನ ಕಚೇರಿ ನಡೆಯಲಿದ್ದು, ಇವೆರಡೂ ಕಚೇರಿಗಳಿಗೆ ಶ್ರೀ ಯಶವಂತ್ ವೈಷ್ಣವ್ ತಬಲಾ ಸಂಗತ್ ನೀಡಲಿರುವರು.
ಕೊನೆಯಲ್ಲಿ ಗ್ವಾಲಿಯರ್ ಘರಾಣೆಯ ಮೇರು ಕಲಾವಿದರಾದ ಪಂಡಿತ್ ಉಲ್ಲಾಸ್ ಕಶಾಲ್ಕರ್ ಅವರಿಂದ ಗಾಯನ ಕಚೇರಿ ನಡೆಯಲಿದೆ. ಅವರಿಗೆ ತಾಳ ಯೋಗಿ ಪಂಡಿತ್ ಸುರೇಶ್ ತಲ್ವಾಲ್ಕರ್ ತಬಲಾ ಸಾಥ್ ನೀಡಲಿದ್ದಾರೆ. ಶ್ರೀ ಗುರುಪ್ರಸಾದ್ ಹೆಗಡೆ ಗಿಳಿಗುಂಡಿ ಸಂವಾದಿನಿ ಸಂಗತ್ ನೀಡಲಿದ್ದಾರೆ.
ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂಗೀತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ವಿನಂತಿಸಿರುತ್ತಾರೆ.
ಪಂಡಿತ್ ಯಶವಂತ ಆಚಾರ್ಯ ಗೌರವ ಸಮ್ಮಾನ್
ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ನಡೆಸುವ ವೃದ್ಧಾಶ್ರಮದಲ್ಲಿ ಕಳೆದ ಸುಮಾರು 6 ವರ್ಷಗಳ ಕಾಲ ನೆಲೆಸಿ ಇತ್ತೀಚೆಗೆ ದಿವಂಗತರಾದ, ಉಸ್ತಾದ್ ಶಂಶುದ್ದೀನ್ ಖಾನ್ ಸಾಹೇಬರ ಶಿಷ್ಯರಾದ ಹಾಗೂ ಹಲವಾರು ವರ್ಷ ಮುಂಬೈಯಲ್ಲಿ ಸಂಗೀತ ಸೇವೆ ಮಾಡಿದ ಅತ್ಯುತ್ತಮ ಚಿತ್ರ ಕಲಾವಿದರೂ ಆಗಿದ್ದ ಪಂಡಿತ್ ಯಶವಂತ ಜೆ ಆಚಾರ್ಯ ಅವರ ನೆನಪಿನಲ್ಲಿ ಈ ಸಂಗೀತ ಸಮ್ಮೇಳನದಲ್ಲಿ ತಬಲಾ ಮಾಂತ್ರಿಕ ಶ್ರೀ ಯಶವಂತ್ ವೈಷ್ಣವ್‌ರನ್ನು ಪಂಡಿತ್ ಯಶವಂತ ಆಚಾರ್ಯ ಗೌರವ ಸಮ್ಮಾನ್ ನೊಂದಿಗೆ ಪುರಸ್ಕರಿಸಲಾಗುವುದು.