ಈಗ ಮೊಬೈಲ್ ರಿಂಗ್‌ಟ್ಯೂನ್ ಮತ್ತು ಕಾಲರ್ ಟ್ಯೂನ್‌ಗಳಿಗೆ 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ' ಲಭ್ಯವಿದೆ.
ತುಂಬ ದಿನ ಒಂದೇ ರಿಂಗ್‌ಟ್ಯೂನ್ ಬೇಜಾರಾಗಿದೆ, ಒಳ್ಳಯ ಒಂದು ರಿಂಗ್‌ಟ್ಯೂನ್ ಸಜೆಸ್ಟ್ ಮಾಡಿ ಅಂತ ಒಬ್ರು ಪರಿಚಿತರು ಇತ್ತೀಚೆಗೆ ಕೇಳಿದ್ದರು. ಸಾಂದರ್ಭಿಕವಾಗಿ ಅವತ್ತಿಗೆ ಮೂರ್ನಾಲ್ಕು ದಿನಗಳ ಮೊದಲು ಯಕ್ಷಗಾನ ಶೈಲಿಯಲ್ಲಿ ಹಾಡಲ್ಪಟ್ಟ 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ...' ಪ್ರಾರ್ಥನಾ ಗೀತೆಯನ್ನು ನನ್ನ ಇನ್‌ಕಮಿಂಗ್ ಕಾಲ್‌ನ ರಿಂಗ್‌ಟ್ಯೂನ್ ಮಾಡಿ ಹಾಕಿ ಕೊಂಡಿದ್ದೆ. ಅವರಿಗೆ ಯಕ್ಷಗಾನ ಶೈಲಿಯ ಪ್ರಾರ್ಥನಾ ಗೀತೆಯ ಮೂಲ ಯೂಟೂಬ್ ಲಿಂಕ್ ಫಾರ್ವರ್ಡ್ ಮಾಡಿದೆ. ಅದನ್ನೇ ಆ್ಯಪ್ ಬಳಸಿ, ರಿಂಗ್ ಟೋನ್ ಮಾಡಿಕೊಳ್ಳಬಹುದು ಎಂದೆ. ಬಹಳ ಖುಷಿಯಿಂದ ಧನ್ಯವಾದ ಕಳಿಸಿದರು.
ಇದು ರಿಂಗ್‌ಟ್ಯೂನ್ ಕತೆ.
ಕಾಲರ್‌ಟ್ಯೂನ್ ಕತೆ ಬೇರೆ ಇದೆ. ನನ್ನ ಫೋನ್‌ನಲ್ಲಿ ಕಾಲರ್ ಟ್ಯೂನ್ ಈಗಲೂ "ಸಂತನೆಂದರೆ ಯಾರು? ದಿವ್ಯತೆಯ ಅರಿತವನು.." ಇದೆ. ಕವಿ ಕೆ ಸಿ ಶಿವಪ್ಪರವರು ಬರೆದ ಈ ಚೌಪದಿ, ಸಿದ್ದೇಶ್ವರ ಶ್ರೀಗಳನ್ನು ಕುರಿತು ಬರೆದಿದ್ದು ಎಂದು ಹೇಳಿಕೊಂಡಿದ್ದಾರೆ. ಈ ಕಾಲರ್ ಟ್ಯೂನ್ ಜಿಯೋ ಗ್ರಾಹಕರಿಗೆ ಲಭ್ಯವಿದೆ. ತುಂಬ ಇಂಪಾದ ಮತ್ತು ಅರ್ಥವತ್ತಾದ ಪದ್ಯದ ಕಾಲರ್ ಟ್ಯೂನ್ ಇದು. ಕೆಲವರು ಫೋನ್ ಮಾಡಿದಾಗ "ಈ ಕಾಲರ್ ಟ್ಯೂನ್ ಕೇಳ್ತಾ ಇರೋಣ ಅನಿಸುತ್ತೆ, ಮುಂದಿನ ಬಾರಿ ಕರೆ ಮಾಡಿದಾಗ, ತಕ್ಷಣ ಫೋನ್ ಎತ್ತಿಕೊಳ್ಳಬೇಡಿ, ಸ್ವಲ್ಪ ಹೊತ್ತು ಆದ ಮೇಲೆ ಎತ್ತಿಕೊಳ್ಳಿ. ಅಲ್ಲಿಯವರೆಗೆ ನಾಲ್ಕು ಸಾಲನ್ನು ಕೇಳಿ ಬಿಡ್ತಿನಿ" ಅಂದವರಿದಾರೆ!!.
ಒಂದು ಇಂಪಾದ ಹಾಡು ಮನಸ್ಸನ್ನು ಮಧುರಭಾವದ ಕಡೆಗೆ ಕೊಂಡು ಹೋಗುತ್ತದೆ.
**
ನಿನ್ನೆ ಇನ್ನೊಂದು ಗಮ್ಮತ್ ಆಯ್ತು. ಮೂಲತಃ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರೊಬ್ಬರು ಸಿಕ್ಕಿದ್ದರು. ಅದೇ ಸಮಯದಲ್ಲಿ ಯಾರೋ ಒಬ್ಬರು ಫೋನ್ ಮಾಡಿದ್ರು. 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ....' ಅಂತ ಯಕ್ಷಗಾನದ ಚಂಡೆಯ ಮಾಧುರ್ಯದೊಂದಿಗೆ ರಿಂಗಾಯ್ತು. ಎದುರು ಸಿಕ್ಕಿದವರ ಕಣ್ಣು ಅಗಲವಾಯ್ತು. "ಏ, ಬಹಳ ಚನಾಗಿದೇರಿ, ನನಗೂ ಕಳಿಸಿ ಇದನ್ನ" ಅಂದ್ರು. ಆಗ ನನ್ನ ಕಣ್ಣು ಅಗಲವಾಯ್ತು!!! "ನೀವು ಕಾಂಗ್ರೆಸ್ ಪಕ್ಷ ಬಿಟ್ರಾ?" ಅಂದೆ. "ನೀವು ಯಾಕೆ ಕೇಳಿದ್ದು ಅಂತ ಗೊತ್ತಾಯ್ತು. ನಾನು ಕಾಂಗ್ರೆಸ್‌ನಲ್ಲಿದ್ರೂ ನನ್ನ ಒಳಗಡೆ ಆರ್‌ಎಸ್‌ಎಸ್ ರಕ್ತ ಇದೆ. ನೀವು ಬೇಕಾದ್ರೆ ನನ್ನನ್ನು ಡಿಕೆ ಶಿವಕುಮಾರ್ ಬಣ ಅಂತ ಅಂದುಕೊಳ್ಳಬಹುದು" ಅಂದ್ರು!!!. ಯೂಟೂಬ್‌ನಲ್ಲಿ ಇರುವುದನ್ನು ಡೌನ್‌ಲೋಡ್ ಮಾಡಿ ಇನ್ನೊಬ್ಬರಿಗೆ ಕಳಿಸಬಾರದು, ಕಾನೂನಿನ ತೊಡಕಿದೆಯಂತೆ. ಯೂಟೂಬ್‌ನಿಂದ ಆಡಿಯೋ ತಗೊಂಡು, ಅದರಲ್ಲಿನ ಮೊದಲ ಕೆಲವು ಸೆಕೆಂಡುಗಳನ್ನು ಬಿಟ್ಟು, ಚಂಡೆ ವಾದನದೊಂದಿಗೆ ಪ್ರಾರಂಭವಾಗುವ ಯಕ್ಷಗಾನದ 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ' ಗೀತೆಯನ್ನು ರಿಂಗ್‌ಟ್ಯೂನ್ ಮಾಡಿಕೊಳ್ಳಬಹುದು. ಖಾಸಗಿ ಬಳಕೆಗೆ ಆದ್ರಿಂದ ಸಮಸ್ಯೆ ಇಲ್ಲ ಅಂದೆ. ತಕ್ಷಣ ಹಾಗೇ ಮಾಡಿಕೊಂಡರು. ನಾನೇ ಮೊದಲ ಕರೆ ಮಾಡಿದೆ. ಅವರದ್ದು ಹೊಸಾ ಫೋನಂತೆ, ಸ್ಪೀಕರ್ ಸೌಂಡ್ ನನ್ನ ಫೋನಿಗಿಂತ ಚೆನ್ನಾಗಿತ್ತು.
ಅವರು ಹೊರಡುವಾಗ, ರಾಜ್ಯ ಪಿತ್ತ ಸಚಿವರ ಬಳಿ ಹೋಗುವಾಗ ಮೊಬೈಲ್ ಇನ್‌ಕಮಿಂಗ್ ಕಾಲ್ ಮ್ಯೂಟ್ ಮಾಡಿಕೊಂಡು ಹೋಗಿ, ಇಲ್ಲಾಂದ್ರೆ ನಿಮ್ಮನ್ನ ಡಿಕೆಶಿ ಬಣದಿಂದಲೂ ಬ್ಯಾನ್ ಮಾಡ್ತಾರೆ" ಅಂದೆ ತಮಾಷೆಯಾಗಿ. "ಯಾರನ್ನ ಯಾರು ಬ್ಯಾನ್ ಮಾಡ್ತಾರೆ ಅಂತ ಡಿಸಂಬರ್‌ನಲ್ಲಿ ಗೊತ್ತಾಗುತ್ತೆ. ಅಷ್ಟಕ್ಕೂ RSS ಮೂಲದ ಕಾಂಗ್ರೆಸ್‌ನವರು, ಕಾಂಗ್ರೆಸ್ ಬಿಡುವ ದಿನಗಳು ಬರಬಹುದು" ಅಂತ ಹೇಳಿ ಹೊರಟರು. ಯಾಕೆ ಹಾಗೆ ಹೇಳಿದರು ಅಂತ ನಾನು ಕೇಳಬೇಕು ಅನ್ನುವಷ್ಟರಲ್ಲಿ ನನ್ನ ಫೋನ್ ರಿಂಗ್ ಆಯ್ತು, 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ....' ಕರೆ ಸ್ವೀಕರಿಸುವಷ್ಟರಲ್ಲಿ, ಎದರಿದ್ದವರು ಟಾಟಾ ಮಾಡಿ ಹೋಗ್ಯಾಯ್ತು.
**
ಯಕ್ಷಗಾನ ಶೈಲಿಯಲ್ಲಿ ಇರುವ 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ...' RSS ಪ್ರಾರ್ಥನಾ ಗೀತೆಯನ್ನು ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನ ಶೈಲಿಯಲ್ಲಿ ಹಾಡಿದ್ದಾರೆ ಶ್ರೀ ರವಿ ಮುರೂರ್. ಹಾಡಿಗೆ ಹಿಮ್ಮೇಳ ಶ್ರೀ ಅನಿರುಧ್ ಹೆಗ್ಡೆ ಮತ್ತು ಶ್ರೀ ಪ್ರಸನ್ನ ಹೆಗ್ಗಾರ್.
**
ಯಕ್ಷಗಾನ ಶೈಲಿ ಹೊರೆತಾಗಿ, ನಮಸ್ತೇ ಸದಾ ವತ್ಸಲೇ ಮಾತೃಭೂಮೇ... ಗೀತೆಯು ಬೇರೆ ಶೈಲಿಯಲ್ಲಿ ಹಾಡಿದ ಗೀತೆಗಳು ಜಾಲತಾಣದಲ್ಲಿ ಸಿಗುತ್ತವೆ. ಹಾಕಿಕೊಳ್ಳಬಹುದು. ಸದ್ಯಕ್ಕೆ ದೇಶ ಭಕ್ತಿ ಗೀತೆಗಳನ್ನು ರಿಂಗ್ ಟೋನ್ ಆಗಿ ಹಾಕಿಕೊಳ್ಳದಂತೆ ಯಾರೂ ಬ್ಯಾನ್ ಮಾಡಿಲ್ಲ, ಮತ್ತು "ಬ್ಯಾನ್ ಮಾಡಿ" ಅಂತ ಯಾರೂ ಪತ್ರವನ್ನೂ ಬರೆದಿಲ್ಲ.!!! ಆಸಕ್ತರು ರಿಂಗ್‌ಟ್ಯೂನ್, ಕಾಲರ್ ಟ್ಯೂನ್ ಮಾಡಿಕೊಳ್ಳಬಹುದು.
ಅದೇ ರೀತಿ, ಶಂಕರ್ ಮಹಾದೇವನ್ ಹಾಡಿರುವ 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ...' ಕೂಡ ಕಾಲರ್‌ಟ್ಯೂನ್ ಆಗಿ ಜಿಯೋ ಗ್ರಾಹಕರಿಗೆ ಲಭ್ಯವಿದೆಯಂತೆ. ಆಸಕ್ತರು ಹಾಕಿಸಿಕೊಳ್ಳಬಹುದು.
- ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ