ಸ್ಪಟಿಕ ಫೋರಂ- ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ

Upayuktha
0



ಮೂಡುಬಿದಿರೆ: ನದಿ ಹಾಗೂ ಸಮುದ್ರ ತೀರಗಳಲ್ಲಿ  ಜನರ ಸೆಲ್ಫಿಯ ಹುಚ್ಚಿನಿಂದಾಗಿ   ಹೆಚ್ಚಿನ ಅವಘಡಗಳು ಸಂಭವಿಸುತ್ತಿವೆ. ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು ಎಂದು ಸಮಾಜ ಸೇವಕ ಹಾಗೂ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ  ನುಡಿದರು.

 

ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸಮಾಜಕಾರ್ಯ  ವಿಭಾಗದ ವಿದ್ಯಾರ್ಥಿ  ವೇದಿಕೆ ಸ್ಪಟಿಕ ಫೋರಂನ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು  ಉದ್ಘಾಟಿಸಿ ಅವರು ಮಾತನಾಡಿದರು. ಈ ಬಾರಿಯ ಮಳೆಗಾಲದಲ್ಲಿ ಒಟ್ಟು  50ಕ್ಕೂ ಹೆಚ್ಚು  ಜನರು  ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಸಂದರ್ಭಗಳಲ್ಲಿ ಕೇವಲ ಐವರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. 


ತನ್ನ ಬದುಕಿನ ವೃತ್ತಾಂತವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ತಾನು ಬಾಲ್ಯದಲ್ಲಿ ಸೇನೆಗೆ ಸೇರಬೇಕೆಂದು ಕನಸು ಕಂಡಿದ್ದೆ, ಆದರೆ ಬಡತನದಿಂದಾಗಿ ವಿದ್ಯಾಭ್ಯಾಸ ಪಡೆಯಲಾಗಲಿಲ್ಲ.  ಆದರೆ ಇಂದು  ತನ್ನಿಷ್ಟದ ಈಜು ಕಲೆಯನ್ನು ಕರಗತ ಮಾಡಿಗೊಂಡು  ಕೈಲಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ.  ನದಿ ಹಾಗೂ ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋಗುವವರನ್ನು ರಕ್ಷಿಸುವುದು ನನ್ನ ಕಾಯಕವಾಗಿದೆ. ಅದರಲ್ಲೆ  ಆತ್ಮ ತೃಪ್ತಿ  ಕಾಣುತ್ತಿದ್ದೇನೆ. 


ನಾನು ಪ್ರಶಸ್ತಿ ಸಮಾರಂಭಗಳಿಗೆ ಆಹ್ವಾನಿತನಾಗುವಾಗ ಪಡೆದ ಗೌರವಧನವನ್ನು ಸಂಪೂರ್ಣವಾಗಿ ಸಮಾಜದ ಸೇವೆಗೆ ಮೀಸಲಿಟ್ಟಿದ್ದೇನೆ. ನನ್ನ ಮಗನ ಸ್ಮರಣಾರ್ಥವಾಗಿ ಪ್ರತಿವರ್ಷ ಒಂದು ಅಂಬ್ಯುಲೆನ್ಸ್ ನ್ನು ಸಮಾಜಕ್ಕೆ  ಕೊಡುಗೆ ನೀಡುತ್ತಿದ್ದೇನೆ. ಸಮಾಜಸೇವೆ ದೊಡ್ಡ ಕಾರ್ಯಗಳಿಂದಲೇ ಆಗಬೇಕೆಂದೇನಿಲ್ಲ.  ನಿಸ್ವಾರ್ಥ ಸೇವೆಯಿಂದಲೂ ವ್ಯತ್ಯಾಸವನ್ನು  ಕಾಣಬಹುದು ಎಂದು ಹೇಳಿದರು.


ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಾಜಕರ‍್ಯ ವಿಭಾಗದ ಮೂಲಕ ಸಮಾಜ ಸೇವೆಗೆ ಹೆಚ್ಚಿನ ಅವಕಾಶವಿದೆ.  ವಿದ್ಯಾರ್ಥಿಗಳು ಈ ವೇದಿಕೆಯನ್ನು ಬಳಸಿಕೊಂಡು ಸಮಾಜಕ್ಕೆ ನೆರವು ನೀಡುವ ಕಾರ್ಯದಲ್ಲಿ  ತೊಡಗಿಕೊಳ್ಳಬೇಕು ಎಂದರು.  


ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ,   ಸಮಸ್ಯೆಯ ಮೂಲವನ್ನು ಅರಿತು ಕರ‍್ಯಪ್ರವೃತ್ತರಾಗುವುದು ಈ ಕ್ಷೇತ್ರದ ಅಗತ್ಯ.  ನಿಜವಾದ ಪರಿಣಾಮ ಕೇವಲ ಪ್ರಯತ್ನವನ್ನು  ಮಾತ್ರ ಅವಲಂಬಿಸಿಲ್ಲ, ಕೈಗೊಂಡ ಕ್ರಿಯೆಗಳು ಅಗತ್ಯವಿರುವ ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು. 


 ಸರಕಾರಿ  ಪ್ರೌಢಶಾಲೆ ನಿರ್ಕರೆ ಹಾಗೂ  ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ, ಆಳ್ವಾಸ್ ಸಮಾಜಕರ‍್ಯ ವಿಭಾಗದ ಹಿರಿಯ ವಿದ್ಯಾರ್ಥಿ ಪ್ರಸ್ತುತ ಜಪಾನನಲ್ಲಿ  ಉದ್ಯೋಗದಲ್ಲಿರುವ ಪುನೀತ  ಕೊಡುಗೆ ನೀಡಿದ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.  


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಮಾಜಕರ‍್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲಾ ಕೆ., ಸ್ಪಟಿಕ ಫೋರಂ ಸಂಯೋಜಕ ಸುಧೀಂದ್ರ ಜೆ. ಶಾಂತಿ, ಸಂಯೋಜಕಿ ನಯೋಮಿ ರಿಯೋನಾ ಮೋರಾಸ್,  ವೇದಿಕೆಯ ಸಂಯೋಜಕ ಅಬ್ದುಲ್ ರಹ್ಮಾನ್ ಮತ್ತು ಇನ್ಷಾ ಇದ್ದರು.  ಸುರಕ್ಷಾ ಹಾಗೂ ಅರ್ಪಿತಾ ನಿರೂಪಿಸಿ, ಗಗನ ಶರ್ಮ ಸ್ವಾಗತಿಸಿ, ಅನನ್ಯ ಅತಿಥಿಯನ್ನು ಪರಿಚಯಿಸಿ, ಇನ್ಷಾ ವಂದಿಸಿದರು. 




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top