ಋತು ಬಂಧ- ಮನೋ ದೈಹಿಕ ಸ್ಥಿತ್ಯಂತರಗಳ ನಿರ್ವಹಣೆ

Upayuktha
0



ಹೆಣ್ಣು ತನ್ನ ಜೀವಿತಾವಧಿಯಲ್ಲಿ ಹಲವು ದೈಹಿಕ ಸ್ಥಿತ್ಯಂತರಗಳನ್ನು ಕಾಣುತ್ತಾಳೆ. ಗಂಡು ಹುಡುಗರಷ್ಟು ಬಿಡುಬೀಸಾಗಿ ಆಕೆ ಇರಲು ಸಾಧ್ಯವಾಗುವುದೇ ಇಲ್ಲ. ಒಂದೆಡೆ ದೈಹಿಕ ಸ್ಥಿತ್ಯಂತರಗಳು ಆಕೆಯನ್ನು ಕಾಡಿದರೆ ಮತ್ತೊಂದೆಡೆ ಇದುವರೆಗೂ ತನ್ನೊಂದಿಗೆ ಆಡುತ್ತಿದ್ದ ಒಡಹುಟ್ಟಿದ ಸಹೋದರರು ಮತ್ತು ಸ್ನೇಹಿತರ ಜೊತೆಗಿನ ಒಡನಾಟವನ್ನು ಕಡಿದು ಹಾಕುವ ಸಾಮಾಜಿಕವಾಗಿ ತನ್ನನ್ನು ನಿರ್ಬಂಧಿಸುವ ಈ ಸ್ಥಿತ್ಯಂತರಗಳನ್ನು ಒಂದೊಮ್ಮೆ ಆಕೆ ಖಂಡಿತವಾಗಿಯೂ ದ್ವೇಷಿಸುತ್ತಾಳೆ.


ಆದರೆ ಆಕೆಗಿದು ಅನಿವಾರ್ಯ ಕೂಡ. ಪ್ರಕೃತಿಯೇ ಆಕೆ.... ಹಾಗಾಗಿ ತನ್ನಲ್ಲಾಗುವ ಪ್ರಾಕೃತಿಕ ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕಾದ, ಹೆಣ್ತನದ ಎಲ್ಲಾ ಸಹಜ ಪ್ರಕ್ರಿಯೆಗಳನ್ನು ಅನುಭವಿಸಲೇಬೇಕಾದ ಅನಿವಾರ್ಯತೆ ಆಕೆಯದು.


ಹೆಣ್ಣು ಮಕ್ಕಳಲ್ಲಿ ಇನ್ನೂ ಬಾಲ್ಯಾವಸ್ಥೆ ಕಳೆದಿರುವುದಿಲ್ಲ... ಋತುಚಕ್ರ ಆರಂಭವಾಗುತ್ತದೆ. ಇದು ಆಕೆಯ ಬದುಕಿನ ಮೊದಲನೆಯ ಸ್ಥಿತ್ಯಂತರ. ಆಕೆಯ ದೈಹಿಕ ಅಂಗಾಂಗಗಳು ಹೆಣ್ಣಾಗುವ, ತಾಯಿಯಾಗುವ ಪ್ರಕ್ರಿಯೆಗೆ ಅನುವಾಗುವಂತೆ ವಿಕಸಿತಗೊಳ್ಳುವ ಕಾಲವಿದು. ಪ್ರತಿ ತಿಂಗಳು ಮುಟ್ಟಿನ ರೂಪದಲ್ಲಿ ಹೊರಹೊಮ್ಮುವ ರಕ್ತಸ್ರಾವ ಕಿಬ್ಬೊಟ್ಟೆ, ಸೊಂಟದ ಭಾಗ, ಕೈಕಾಲುಗಳಲ್ಲಿ ಸೆಡೆತವನ್ನು ಉಂಟುಮಾಡುತ್ತದೆ. 


ದೇಹದಲ್ಲಾಗುವ ವಿವಿಧ ಬದಲಾವಣೆಗಳಿಗೆ ಹೊಂದಿಕೊಳ್ಳದೆ ಇದ್ದಾಗ ಮಾನಸಿಕ ಕಿರಿಕಿರಿ, ಸಿಟ್ಟು, ಕೋಪ, ಆಕ್ರೋಶ ಒಮ್ಮಿಂದೊಮ್ಮೆಲೆ ಅಳುವ, ಬೇಸರ, ದುಗುಡಗಳಿಗೆ ಈಡಾಗುವ ಸಮ್ಮಿಶ್ರ ಭಾವಗಳು ಆಕೆಯನ್ನು ಕಾಡುತ್ತವೆ. ಇದೆಲ್ಲವೂ ಸಹಜ ಸಾಮಾನ್ಯ ಎಂದು ಕೆಲವರಿಗೆ ತೋರಿದರೆ ಮತ್ತೆ ಕೆಲವರಿಗೆ ಗುಡ್ಡವೇ ಕಡಿದು ತಲೆಯ ಮೇಲೆ ಬಿದ್ದಂತಹ ಭಾವ. 


ತುಸು ವ್ಯಾಯಾಮ, ಸಹಜ ದೈನಂದಿನ ಚಟುವಟಿಕೆಗಳು, ಶಾಲೆ ಕಾಲೇಜುಗಳ ಓದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಇದರಿಂದ ಹೊರಬಂದು ವಿದ್ಯಾಭ್ಯಾಸವನ್ನು ಪೂರೈಸುತ್ತಾರೆ.


ಎರಡನೇ ಘಟ್ಟದಲ್ಲಿ ಬರುವುದು ವೈವಾಹಿಕ ಬದುಕು. ವೈವಾಹಿಕ ಬದುಕಿನ ಪರಿಣಾಮವಾಗಿ ಗರ್ಭಿಣಿಯಾಗುವ ಹೆಣ್ಣು ಮಗಳು ಮತ್ತೆ ತನ್ನ ಸೊಂಟದ ಕೆಳಭಾಗ ಪ್ರಸವಕ್ಕೆ ಅನುಕೂಲವಾಗುವಂತೆ ಅಗಲಗೊಳ್ಳುವ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನಿಂದಾಗಿ ಹೊಟ್ಟೆಯ ಭಾಗ ದೊಡ್ಡದಾಗಿ ಹೀಚಿ ಅಲ್ಲಿಯ ಚರ್ಮದಲ್ಲಿ ಬಿಗುವನ್ನು ಕಾಣುವ ಜೊತೆ ಜೊತೆಗೆ ಹತ್ತು ಹಲವಾರು ದೈಹಿಕ ಬದಲಾವಣೆಗಳನ್ನು ಕಾಣುತ್ತಾಳೆ.


ನಂತರ ಬರುವುದು ಪ್ರಸವಾ ನಂತರದ ಅವಧಿ. ಇಡೀ ದೇಹವೇ ಮುಲುಗುಟ್ಟುವಂತೆ ನೋವನ್ನು ಅನುಭವಿಸಿ ಸಾಕಷ್ಟು ರಕ್ತಸ್ರಾವವಾದ ನಂತರ ತನ್ನದೇ ಕುಡಿಯನ್ನು ಪಡೆಯುವ ಆಕೆ ತಾಯಿಯಾಗುವ ಸುಖವನ್ನು ಅನುಭವಿಸುವುದರ ಜೊತೆ ಜೊತೆಗೆ ತಿಂಗಳುಗಟ್ಟಲೆ ಉಂಟಾಗುವ ರಕ್ತಸ್ರಾವ, ಜೋಲು ಬಿದ್ದ ಹೊಟ್ಟೆ, ದೈಹಿಕ ಅಶಕ್ತತೆಯ ಜೊತೆ ಜೊತೆಗೆ ಮಾನಸಿಕವಾಗಿ ಕೂಡ ಬಲಹೀನಳಾಗುತ್ತಾಳೆ. ಈ ಸಮಯದಲ್ಲಿ ಕುಟುಂಬದ ಹಿರಿಯರು ಬಾಣಂತನದ ನೆಪದಲ್ಲಿ ಆಕೆಗೆ ಪೌಷ್ಟಿಕ ಆಹಾರ, ವಿಶ್ರಾಂತಿ, ಕೆಲಸಗಳಿಂದ ವಿನಾಯಿತಿ ನೀಡುವುದರ ಜೊತೆಗೆ ಸಾಧ್ಯವಾದಷ್ಟು ಮಗುವನ್ನು ತಾವೇ ಸಂಭಾಳಿಸಿ ಆಕೆ ಮತ್ತೆ ಮೊದಲಿನಂತಾಗಲು ಸಹಕರಿಸುತ್ತಾರೆ.


ಪ್ರತಿ ತಿಂಗಳ ಋತುಚಕ್ರದ ರಕ್ತಸ್ರಾವ, ಬಸಿರು ಬಾಣಂತನಗಳ ಸಮಯದಲ್ಲಿ ಹೆಣ್ಣು ಮಕ್ಕಳು ದೈಹಿಕವಾಗಿ ಸಾಕಷ್ಟು ಚೇತರಿಸಿಕೊಳ್ಳಲು ಕಾರಣ ಅವರ ವಯಸ್ಸು. ಎಲ್ಲವನ್ನು ತಾಳಿಕೊಳ್ಳಬಹುದಾದ ಮನೋ ದೈಹಿಕಸ್ಥಿತಿಗಳು ಆಕೆಯದಾಗಿರುತ್ತದೆ.


ಮುಂದಿನ ಇಡೀ ಬದುಕಿನಲ್ಲಿ ಆಕೆ ತನ್ನ ಕೌಟುಂಬಿಕ ಸಾಮಾಜಿಕ ಮತ್ತು ಕಾರ್ಯಕ್ಷೇತ್ರದ ನಿರ್ವಹಣೆಗಳಲ್ಲಿ ಇನ್ನಿಲ್ಲದಂತೆ ತೊಡಗಿಸಿಕೊಂಡು ಬದುಕಿನಲ್ಲಿ ಮುಂದುವರೆದು ತನ್ನ ಬದುಕಿನ ನಾಲ್ಕು ದಶಕಗಳನ್ನು ಪೂರೈಸುವ ಹೊತ್ತಿಗೆ ಯಾವ ಸಮಯದಲ್ಲಾದರೂ ಧುತ್ತೆಂದು ಕಣ್ಣ ಮುಂದೆ ಅಲ್ಲಲ್ಲ ದೈಹಿಕವಾಗಿ ಕಾಣಿಸಿಕೊಳ್ಳುವ ಪೆಡಂಭೂತದಂತೆ ಭಾಸವಾಗುವುದು ಋತುಬಂಧ.


ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ತೋರುವ ದೈಹಿಕವಾಗಿ ಮಾನಸಿಕವಾಗಿ ಹೈರಾಣಗಳಿಸುವ ಕೆಲ ದೈಹಿಕ ಪ್ರಕ್ರಿಯೆಗಳು ಋತುಬಂಧವನ್ನು ಸೂಚಿಸುತ್ತವೆ. ಅದುವರೆಗೂ ಬಳಸುತ್ತಿದ್ದ ಉಡುಪುಗಳು ಒಮ್ಮಿಂದೊಮ್ಮೆ ಬಿಗಿಯಾದಂತೆ ಭಾಸವಾಗುತ್ತದೆ. ಎಲ್ಲರಿಗೂ ಚಳಿ ಎಂದೆನಿಸುತ್ತಿದ್ದರೆ ಇವರ ದೇಹದಿಂದ ಒಂದೇ ಸಮನೆ ಬೆವರು ಸುರಿಯುತ್ತದೆ. ಕಾಲು ಕಿತ್ತಿಡಲಾರದಷ್ಟು ನೋವಿನಿಂದ ಬಳಲುತ್ತದೆ. ಇದುವರೆಗೂ ಲೀಲಾಜಾಲವಾಗಿ ಮಾಡಿ ಪೂರೈಸುತ್ತಿದ್ದ ಕೆಲವೇ ನಿಮಿಷಗಳ ದೈಹಿಕ ಶ್ರಮದ ಕೆಲಸದಿಂದ ವಿಪರೀತ ದಣಿವಾಗಿ ಏದುಸಿರು ಬಿಡುವಂತೆ ಆಗುತ್ತದೆ.


ದೇಹದ ಸಂದು ಕೀಲುಗಳಲ್ಲಿ ನೋವು, ಅದರಿಂದ ಉಂಟಾಗುವ ಆಯಾಸಗಳು ಸಾಕಪ್ಪ ಈ ಬದುಕು ! ಎನ್ನುವಂತೆ ಮಾಡುತ್ತವೆ. ದೈಹಿಕವಾಗಿ ಸಶಕ್ತವಾಗಿ ಮುಂಚಿನಿಂದಲೂ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುವ ಕೆಲ ಹೆಣ್ಣು ಮಕ್ಕಳು ಅತ್ಯಂತ ಸಹಜವಾಗಿ ಈ ಎಲ್ಲ ಪ್ರಕ್ರಿಯೆಗಳನ್ನು ನಿಭಾಯಿಸಿದರೆ ಮತ್ತೆ ಕೆಲವರು ದೈಹಿಕವಾಗಿ, ಮಾನಸಿಕವಾಗಿ ಹೈರಾಣಾಗುತ್ತಾರೆ.


ಒಮ್ಮಿಂದೊಮ್ಮೆಲೆ ಸುರಿಯುವ ಬೆವರು ಅವರಲ್ಲಿ ರೇಜಿಗೆಯನ್ನು ಉಂಟು ಮಾಡಿದರೆ ಅದಕ್ಕೆ ಕಾರಣ ದೇಹದಲ್ಲಿ ಉಂಟಾಗುವ ಈಸ್ಟ್ರೋಜನ್ ಚೋದಕಗಳ ಕೊರತೆಯಿಂದ ಒಂದು ಕ್ಷಣ ಜೋರಾಗಿ ಬೆವೆತರೆ ಮರುಕ್ಷಣವೇ ತಣ್ಣಗಿನ ಅನುಭವವಾಗಿ ಚಳಿಯಿಂದ ನಡುಗುತ್ತಾರೆ... ಇದಕ್ಕೆ ಕಾರಣ ಇಷ್ಟು ಈಸ್ಟ್ರೋಜನ್ ಸ್ರವಿಕೆಯಲ್ಲಿ ಉಂಟಾಗುವ ಏರಿಳಿತಗಳು ಮೆದುಳನ್ನು ಗಲಿಬಿಲಿಗೊಳಿಸುತ್ತವೆ.


ಕಾಲುಗಳ ಸೋಲುವಿಕೆ, ಮೊಳಕಾಲಿನಲ್ಲಿ ನೋವು, ದೈಹಿಕ ನಿತ್ರಾಣವು ದೇಹದಲ್ಲಿರುವ ಕ್ಯಾಲ್ಸಿಯಂನ ಕೊರತೆಯಿಂದ ಆಗುತ್ತದೆ. ದೈಹಿಕ ನಿತ್ರಾಣಕ್ಕೆ ಕಾರಣ ಅತ್ಯಂತ ಶೀಘ್ರವಾಗಿ ದೇಹವು ಜಿಂಕನ ಕೊರತೆಯನ್ನು ಅನುಭವಿಸುವುದು. 


ಹಾರ್ಮೋನುಗಳ ಸ್ರವಿಸುವಿಕೆಯ ಅಸಮರ್ಪಕತೆಯಿಂದಾಗಿ ಮಾನಸಿಕವಾಗಿ ಉದ್ವಿಗ್ನತೆ ಕಿರಿಕಿರಿ ಉಂಟಾಗುತ್ತದೆ, ನಾಲಿಗೆಯ ರುಚಿ ಬದಲಾಗುತ್ತದೆ ಎಲ್ಲದರಲ್ಲಿಯೂ ಹುಳುಕನ್ನು ಹುಡುಕುವ ಮನೋಭಾವ ಅವರದಾಗುತ್ತದೆ. ಇದಕ್ಕೆ ಕಾರಣ ಕಾರ್ಟಿಸೋಲ್‌ಗಳ ಕ್ಷೀಣಿಸುವಿಕೆಯಿಂದಾಗಿ ದೇಹದಲ್ಲಿ ಉಂಟಾಗುವ ಮೆಗ್ನೀಷಿಯಂನ ಕೊರತೆ.


ಋತುಸ್ರಾವ ತಿಂಗಳಲ್ಲಿ ಒಂದು ಬಾರಿ ಬಂದರೆ ಋತುಬಂಧದ ಅವಧಿಗೆ ಮಿತಿಯೇ ಇಲ್ಲ. ಋತುಬಂಧಕ್ಕೂ ಮುನ್ನವೇ ಪೆರಿಮೆನೋಪಾಸ್ ಎಂಬ ಒಂದು ಹಂತವಿದ್ದು ಅಲ್ಲಿಂದ ಆರಂಭವಾಗಿ ಸಂಪೂರ್ಣ ಋತುಬಂಧವಾದ ನಂತರದ ಒಂದೆರಡು ವರ್ಷ ಎಂದರೆ ಸುಮಾರು 6 ರಿಂದ 8 ವರ್ಷಗಳ ಕಾಲ ಋತುಬಂಧದ ಸಮಯ. 40ರ ವಯಸ್ಸಿನ ನಂತರ ಯಾವ ಸಮಯದಲ್ಲಿ ಬೇಕಾದರೂ ಋತುಬಂಧದ ಪೂರ್ವ ಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ.


ಕೆಲವರಿಗೆ ಯಾವುದೇ ಮನೋದೈಹಿಕ ತೊಂದರೆಗಳು ಇಲ್ಲದೆ ಋತುಚಕ್ರ ನಿಂತು ಹೋಗಿ ಅವರು ಆರಾಮದಾಯಕ ಜೀವನ ಶೈಲಿಯನ್ನು ಹೊಂದುತ್ತಾರೆ. ಆದರೆ ಮತ್ತೆ ಕೆಲವರಿಗೆ ಬದುಕೇ ಬೇಸರ ಎನಿಸುವಷ್ಟು ದೈಹಿಕ, ಮಾನಸಿಕ ತೊಂದರೆಗಳು ಕಾಡುತ್ತವೆ.


ಕೆಲವರಿಗೆ ವಿಪರೀತ ರಕ್ತಸ್ರಾವ ಆರಂಭವಾಗಿ ಪರೀಕ್ಷಿಸಿದಾಗ ಗರ್ಭಕೋಶದಲ್ಲಿ ಫೈಬ್ರಾಯ್ಡ್ ಮಾದರಿಯ ಗಡ್ಡೆಗಳು ಉಂಟಾಗಿ ಗರ್ಭಕೋಶವನ್ನು ತೆಗೆಸಿ ಹಾಕಲು ಹೇಳಬಹುದು. ಮತ್ತೆ ಕೆಲವರಿಗೆ ಅನಿಯಮಿತ ಋತುಸ್ರಾವ ಆರಂಭವಾಗಬಹುದು. ಕೆಲವರಿಗೆ ವಿಪರೀತ ಬೆವರುವಿಕೆ (ಹಾಟ್ ಫ್ಲಶಸ್ ), ಆಯಾಸ, ದಣಿವು, ಸೊಂಟ, ಮೊಣಕಾಲು, ಪೃಷ್ಟ ಮತ್ತು ಮಣಿಗಂಟುಗಳಲ್ಲಿ ತೊಂದರೆಗಳು ಉಂಟಾಗುತ್ತವೆ. ನೋವು ಕಾಣಿಸಿಕೊಳ್ಳುತ್ತದೆ. ಸರಾಗ ಚಲನೆಗೆ ಅಡ್ಡಿಯಾಗುತ್ತದೆ.


ದೇಹದಲ್ಲಿ ಬೊಜ್ಜು ಅಲ್ಲಲ್ಲಿ ಶೇಖರವಾಗಿ ದೈಹಿಕ ಆಕಾರ ಅಂದಗೆಡುತ್ತದೆ. ದೈಹಿಕ ನೋವುಗಳು ನಿಮ್ಮ ಚಲನಶೀಲತೆಯನ್ನು ಕಡಿಮೆ ಮಾಡುವ ಕಾರಣ ಹೆಚ್ಚಾಗಿ ಕುಳಿತೇ ಇರಲು ಇಚ್ಚಿಸುತ್ತಾರೆ. ಹಾಗೆ ಬಹಳ ಹೊತ್ತು ಕುಳಿತು ಏಳುವಾಗ, ನಡೆಯುವಾಗ ತೊಂದರೆಯನ್ನು ಅನುಭವಿಸುತ್ತಾರೆ.


ದೇಹದ ಎಲುಬುಗಳಲ್ಲಿನ ಸಾಂದ್ರತೆ (ಬೋನ್ ಡೆನ್ಸಿಟಿ ) ಕಡಿಮೆಯಾಗುತ್ತದೆ. ಇದು ಆಸ್ತಿಯೋ ಪೊರೋಸಿಸ್ ಗೆ ಕಾರಣವಾಗುವುದು. ಎಲುಬುಗಳಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುವ ಕಾರಣ ಸವಕಳಿ ಉಂಟಾಗಿ ಸಣ್ಣಪುಟ್ಟ ಪೆಟ್ಟುಗಳಿಗೆ ಕೂಡ ಕೈಕಾಲುಗಳು ಕೆಲವೊಮ್ಮೆ ಮುರಿಯುವ ಸಾಧ್ಯತೆಗಳು ಕೂಡ ಉಂಟು. ಎಲುಬುಗಳ ಸವಕಳಿಯಿಂದಾಗಿ ದೇಹದಲ್ಲಿ ಈಸ್ಟ್ರೋಜನ್ ನ ಕೊರತೆ ಕೂಡ ಉಂಟಾಗುತ್ತದೆ.


ಮಾನಸಿಕ ಕಿರಿಕಿರಿ, ಸಿಡಿಮಿಡಿಗೊಳ್ಳುವಿಕೆ, ಸಣ್ಣ ಪುಟ್ಟ ವಿಷಯಗಳಿಗೂ ಇರಿಸು ಮುರಿಸಾಗುವುದು ಮುಂತಾದ ತೊಂದರೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಬದುಕಿನಲ್ಲಿ ಒಂದು ಹಂತದ ನಿಲುಗಡೆಯನ್ನು ಕಂಡಿದ್ದು ಮಕ್ಕಳು ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳಿಗೆ ತಾಯಿಯನ್ನು ಅವಲಂಬಿಸದೆ ಹೋಗುವ ಮತ್ತು ಗಂಡ ಆಕೆಯ ತೊಂದರೆಯನ್ನು ಅದೇನು ಮಹಾ ಎಂದು ಅಲಕ್ಷಿಸುವ ಇಲ್ಲವೇ ಆಕೆಗೆ ನಿಜವಾಗಿಯೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತನ್ನ ಕೆಲಸಗಳನ್ನು ತಾನೇ ಮಾಡಿಕೊಂಡರೂ ಕೂಡ ಆಕೆ ತಾನು ಎಲ್ಲರಿಗೂ ಬೇಡವಾದವಳು ಎಂಬ ಭಾವವನ್ನು ಹೊಂದಿದ್ದರೆ ಅದು ಆಕೆಯ ತಪ್ಪಲ್ಲ ಬದಲಾಗಿ ಆಕೆಯ ನಕಾರಾತ್ಮಕ ಮನಸ್ಥಿತಿ ಇದಕ್ಕೆ ಕಾರಣವಾಗಿದ್ದು ಆಕೆಗೆ ಈ ರೀತಿ ತಪ್ಪು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಕ್ಷಣ ಪಿತ್ತ ಕ್ಷಣ ಚಿತ್ತ ಎಂಬಂತಹ ಸ್ವಭಾವ ಆಕೆಯದಾಗುತ್ತದೆ.


ಮೇಲಿನ ಎಲ್ಲ ಕಾರಣಗಳಿಂದ ಋತುಬಂಧ ನಮ್ಮ ಬದುಕಿನ ಎಲ್ಲಾ ಸುಖ ಸಂತೋಷ ಮತ್ತು ನೆಮ್ಮದಿಗಳನ್ನು ಕಸಿದಿದೆ ಎಂಬ ಭಾವ ಮೂಡುತ್ತದೆ. ಋತುಬಂಧದ ಸಮಯವನ್ನು ಸಂತೋಷದಾಯಕವಾಗಿಸಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆ ನಮ್ಮ ಮುಂದೆ ಇಟ್ಟರೆ ಇಲ್ಲಿಯವರೆಗೂ ಮನೆಯ ಎಲ್ಲಾ ಸದಸ್ಯರಿಗಾಗಿ ಮೀಸಲಿಟ್ಟ ಹೆಣ್ಣು ಮಕ್ಕಳು ತಮ್ಮ ವೈಯುಕ್ತಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ


*  ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಮತ್ತು ಮಾಹಿತಿಯನ್ನು ಪಡೆಯಬೇಕು.


* ಯೋಗ ಮತ್ತು ವ್ಯಾಯಾಮಗಳನ್ನು ಮಾಡುವ ಮೂಲಕ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. 


* ಚಟುವಟಿಕೆಯ ಬದುಕಿನ ಜೊತೆ ವಿಶ್ರಾಂತಿಯನ್ನು ಕೂಡ ಪಡೆಯಬೇಕು. 

 

* ಧ್ಯಾನ ಭಜನೆಗಳನ್ನು ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು, ಸಕಾರಾತ್ಮಕ ಯೋಚನೆಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು.


* ಎಲ್ಲರನ್ನೂ ಎಲ್ಲಾ ಕಾಲದಲ್ಲಿಯೂ ಸಂತೋಷ ಪಡಿಸಲು ಆಗುವುದಿಲ್ಲ. ಬದುಕನ್ನು ಕೇವಲ ಇತರರಿಗಾಗಿ ಮೀಸಲಿಡುವುದಷ್ಟೇ ಬದುಕಿನ ಉದ್ದೇಶವಲ್ಲ ನಮ್ಮ ಬದುಕು ನಮ್ಮದು ಕೂಡ ಎಂಬುದನ್ನು ಅರಿತು ನಮಗೆ ಸಂತಸವನ್ನು ನೀಡುವ ನೆಮ್ಮದಿಯನ್ನು ಕೊಡುವ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.


ಮುಖ್ಯವಾಗಿ ಋತುಬಂಧದ ಅವಧಿ ದೀರ್ಘಕಾಲೀನವಾಗಿರುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸಶಕ್ತರಾಗುವ ನಿಟ್ಟಿನಲ್ಲಿ ಕುಟುಂಬದ ಸದಸ್ಯರ ಜೊತೆ ಈ ಕುರಿತು ಮುಕ್ತವಾಗಿ ಮಾತನಾಡಿ ನಿಮ್ಮ ವೈಯುಕ್ತಿಕ ಆದ್ಯತೆಗಳನ್ನು ಬದಲಿಸಿಕೊಂಡು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿ. ನಿಮ್ಮ ಆರೋಗ್ಯದಲ್ಲಿಯೇ ನಿಮ್ಮ ಕುಟುಂಬದ ಒಳಿತಿದೆ ಎಂಬುದನ್ನು ಮರೆಯದಿರಿ.


 -ವೀಣಾ ಹೇಮಂತಗೌಡ ಪಾಟೀಲ್ 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top