ಅದೊಂದು ಇರದಿದ್ದಾಗ ತಂದೆ- ತಾಯಿಯ ಗಮನ ಮಕ್ಕಳತ್ತ ಇರುತ್ತಿತ್ತು. ಅದೊಂದು ಇರದಿದ್ದಾಗ ಅಮ್ಮ ಮಗುವಿಗೆ ಚಂದಮಾಮನನ್ನು ತೋರಿಸಿ, ಗೊಗ್ಗಯ್ಯ ಬರುತ್ತಾನೆ, ನಾಯಿ, ಹಸು, ಕಾರು ತೋರಿಸುತ್ತಾ, ಆ, ಆ ಅನ್ನು ಎಂದು ಹೇಳುತ್ತಾ ಊಟ ಮಾಡಿಸುತ್ತಿದ್ದಳು. ಅದೊಂದು ಇರದಿದ್ದಾಗ ಮಕ್ಕಳ ಗಮನ ಓದಿನ ಮೇಲೆ ಇರುತ್ತಿತ್ತು. ಅದೊಂದು ಇರದಿದ್ದಾಗ ಮಕ್ಕಳಿಗೆ ಸಂಜೆ ಸ್ತೋತ್ರ ಪಾಠ ಹೇಳುವ, ಹೇಳಿಕೊಡುವ ಅಭ್ಯಾಸ ಇರುತ್ತಿತ್ತು. ಅದೊಂದು ಇರದಿದ್ದಾಗ ಸ್ಕೌಟ್, ಬಾಲ ಗೋಕುಲ, ಮಕ್ಕಳ ಕೂಟ ಇರುತ್ತಿತ್ತು. ಅದೊಂದು ಇರದಿದ್ದಾಗ ಮಕ್ಕಳು ಚಂದಮಾಮಾ, ಟ್ವಿಂಕಲ್, ಬಾಲಮಿತ್ರ, ಟಾರ್ಗೆಟ್, ಅಮರ ಚಿತ್ರಕತೆ, ಪಂಚತಂತ್ರ ಓದುತ್ತಿದ್ದರು. ಅದೊಂದು ಇರದಿದ್ದಾಗ ಅಮ್ಮ, ಅಜ್ಜಿ ಹೇಳುವ ರಾಮನ, ಕೃಷ್ಣನ ಕತೆಗಳಲ್ಲಿ ಮಕ್ಕಳಿಗೆ ಆಸಕ್ತಿ ಇರುತ್ತಿತ್ತು.
ಅದೊಂದು ಇರದಿದ್ದಾಗ ಮಕ್ಕಳಿಗೆ ಸಂಜೆ ಹೊರಗೆ ಆಟ ಆಡುವ ಉತ್ಸಾಹ ಇರುತ್ತಿತ್ತು. ಅದೊಂದು ಇರದಿದ್ದಾಗ ಬಂಧುಗಳೊಡನೆ 3 ತಿಂಗಳಿಗೊಮ್ಮೆ ಆದರೂ ಭೇಟಿ ಆಗುವ ಸಮಯ ಇರುತ್ತಿತ್ತು. ಮುಖಾಮುಖಿ ಮಾತು ಕತೆಗಳು ಇರುತ್ತಿತ್ತು. ಅದೊಂದು ಇರದಿದ್ದಾಗ ಸ್ವಿಗ್ಗಿ, zomato ಇಲ್ಲದೆ ಅಮ್ಮ ಮಾಡಿದ ಬಜ್ಜಿ, ಬೋಂಡ, ಕೋಡುಬಳೆಯಲ್ಲಿ ಮಜಾ ಇರುತ್ತಿತ್ತು. ಅದೊಂದು ಇರದಿದ್ದಾಗ ಮಕ್ಕಳ ಬಾಲ್ಯದಲ್ಲಿ ಬಾಲಿಶ ಬುದ್ಧಿ, ನಡೆ, ಮಾತು ಇರುತ್ತಿತ್ತು. ಅದೊಂದು ಇರದಿದ್ದಾಗ ಮಕ್ಕಳಲ್ಲಿ ವಿನಯ, ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಇರುತ್ತಿತ್ತು. ಅದೊಂದು ಇರದಿದ್ದಾಗ ಮನೆಯಲ್ಲಿ ನೀರವತೆ ಇರದೆ ನಲಿವು, ಮಾತು ಇರುತ್ತಿತ್ತು. ಅದೊಂದು ಇರದಿದ್ದಾಗ ಪತಿ- ಪತ್ನಿಯ ನಡುವೆ ಮಾತನಾಡುವ ಸಮಯ ಇರುತ್ತಿತ್ತು.
ಅದೊಂದು ಇರದಿದ್ದಾಗ ಅಮ್ಮನ ಕೈ ತುತ್ತು ಇರುತ್ತಿತ್ತು. ಅಮ್ಮ ಫೋನಿನಲ್ಲಿ ಇರುತ್ತಿರಲಿಲ್ಲ. ಅದೊಂದು ಇರದಿದ್ದಾಗ ಕವಡೆ, ಗೋಲಿ, ಕುಂಟೆಬಿಲ್ಲೆ, ಲಗೋರಿ, ಗಿಲ್ಲಿ ದಾಂಡು, ಬುಗುರಿ, ಮರಕೋತಿ, ಕಣ್ಣು ಮುಚ್ಚಾಲೆ, ಜೂಟಾಟ ಮಕ್ಕಳು ಆಡುತ್ತಿದ್ದರು.
ಅದೊಂದು ಇರದಿದ್ದಾಗ ವ್ಯವಹಾರ ಎಲ್ಲಾ ಪೆನ್ ಮತ್ತು ಪುಸ್ತಕದಲ್ಲಿ ಇರುತ್ತಿತ್ತು. ಅದೊಂದು ಇರದಿದ್ದಾಗ ಜೀವನಶೈಲಿ ಸರಳವಾಗಿ ಇತ್ತು.
ಅದೊಂದು ಇರುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ, ಸಂಬಂಧಿಸಿದ ಮಾಹಿತಿ, ಮಾರ್ಗದರ್ಶನ ಲಭ್ಯವಾಗಿದೆ. ಜ್ಞಾನಾರ್ಜನೆಗೆ ಸಹಾಯಕವಾಗಿದೆ. (ಕಲಿಕೆಯಲ್ಲಿ ಆಸ್ಥೆ ಇರುವವರಿಗೆ). ಅದೊಂದು ಇರುವುದರಿಂದ ಪರದೇಶದಲ್ಲಿ ಇರುವ ಮಕ್ಕಳ ಮುಖ ದರ್ಶನ ಆಗೊಮ್ಮೆ ಈಗೊಮ್ಮೆ ಆಗುವುದು. ಪ್ರತಿಯೊಂದನ್ನೂ ವೀಡಿಯೋದಲ್ಲಿ ಸೆರೆ ಹಿಡಿಯಬಹುದು. ಅದೊಂದು ಇರುವುದರಿಂದ ಪರದೇಶದ ಹಾಗೂ ದೇಶದ ಯಾವ ಮೂಲೆಗೆ ಆದರೂ ಖರ್ಚಿಲ್ಲದೆ ಕರೆ ಮಾಡಬಹುದು. ಅದೊಂದು ಇರುವುದರಿಂದ ಹಳೆಯ ಸ್ನೇಹಿತರ, ಬಂಧುಗಳ ಸಂಪರ್ಕ ಮತ್ತೆ ಚಿಗುರಿದೆ.
ಅದೊಂದು ಇರುವುದರಿಂದ ಇಂದು ಬಹಳಷ್ಟು ಮಾಹಿತಿ ನಮಗೆ ಲಭ್ಯವಿದೆ. ಅದೊಂದು ಇರುವುದರಿಂದ ಅಂದಿನ ಸಾಹಿತ್ಯ ಮತ್ತು ಸಾಹಿತಿಗಳ ಮಾಹಿತಿ, ಬರಹ ಓದಲು ಆಗುತ್ತಿದೆ. ಅದೊಂದು ಇರುವುದರಿಂದ ತೆರೆ ಮರೆಯಲ್ಲಿ ಇದ್ದ ಧೀರರ, ವೀರರ, ಶ್ರದ್ಧಾಳುಗಳ ಮಾಹಿತಿ ತಿಳಿಯುತ್ತಿದೆ. ಅದೊಂದು ಇರುವುದರಿಂದ ಬರಹಗಾರರ ಗುಂಪು ಎಲ್ಲ ಭಾಷೆಗಳಲ್ಲೂ ಹಬ್ಬಿಕೊಂಡಿದೆ. ಮಹಿಳೆಯರ ಮನದ ಭಾವನೆಗಳು ಬರಹಗಳಲ್ಲಿ ಮೂಡಿ ಬರುತ್ತಿದೆ.
ಅದೊಂದು ಇರದಿದ್ದರೆ ನಿಮಿಷ ಕಾಣದಿದ್ದರೆ ಪ್ರಪಂಚ ತಲೆಕೆಳಗಾದಂತೆ ಆಗುವುದು. ಎಲ್ಲಾ ಬಾಂಧವ್ಯಗಳಿಗಿಂತಲೂ ಅತಿ ಹೆಚ್ಚಿನದು ಇದು. ಬಿಡಿಸಲಾದ, ಕಳಚಿಕೊಳ್ಳಲಾಗದ ಬಂಧನ. ಬ್ರಹ್ಮಗಂಟು ಇದು ಇಂದು ನಮ್ಮೆಲ್ಲರ ಜೀವನದಲ್ಲಿ ಅಗ್ರಸ್ಥಾನ ಪಡೆದಿರುವ ನಮ್ಮ ಮೊಬೈಲ್.
-ಸಂಧ್ಯಾ ಸಿದ್ದವನಹಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

 
 
 
 
 
 
 
 
 
 
 

 
